ಭದ್ರಾವತಿ: ಭದ್ರಾ ಜಲಾಶಯದಿಂದ ಸುಮಾರು 60 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರನ್ನು ನೀರನ್ನು ಭದ್ರಾನದಿಗೆ ಗುರುವಾರ ಬಿಟ್ಟ ಕಾರಣ ಗುರುವಾರ ಬೆಳಗ್ಗೆಯಿಂದಲೇ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಏರತೊಡಗಿತು.
ಹೊಸ ಸೇತುವೆ ಮೇಲೆ ಸಂಚಾರ ಸ್ಥಗಿತ: ನಗರದ ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಹೊಸ ಸೇತುವೆಯ ಮೇಲ್ಭಾಗಕ್ಕೆ ನೀರು ಹರಿದುಬರುವ ಲಕ್ಷಣ ಕಂಡ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯವರು ಸೇತುವೆಯ ಮೇಲೆ ಜನಸಂಚಾರ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದರು.
ಹಳೇ ಸೇತುವೆ ಮೇಲೆ ಸಂಚಾರ ಹೆಚ್ಚಳ: ಹೊಸ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸದ ಕೂಡಲೇ ಹಳೇಸೇತುವೆ ಮೇಲೆ ಒಮ್ಮೆಗೆ ಜನ,ವಾಹನ ಸಂಚಾರ ಹೆಚ್ಚಿದ ಕಾರಣ ಬಿಎಚ್ ರಸ್ತೆ, ಮಾಧವಾಚಾರ್ ವೃತ್ತ, ರಂಗಪ್ಪ ವೃತ್ತದವರೆಗೆ ಹಳೆ ಸೇತುವೆಯ ಇಕ್ಕೆಲಗಳಲ್ಲಿ ಟ್ರಾಫಿಕ್ ಜಾಮ್ ಆಗಿದ್ದ ಕಾರಣ ಪೊಲೀಸರು ಸುಗಮ ಸಂಚಾರಕ್ಕೆ ಹೆಚ್ಚಿನ ಪರಿಶ್ರಮ ಹಾಕುವಂತಾಯಿತು.
ಮುಳುಗಿದ ಮಂಟಪ: ಹಳೇ ಸೇತುವೆ ಸಮೀಪದ ಭದ್ರಾನದಿ ಮಧ್ಯದಲ್ಲಿರುವ ಸಂಗಮೇಶ್ವರ ಮಂಟಪ ಗುರುವಾರ 4 ಮದ್ಯಾಹ್ನದ ವೇಳೆಗೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿತು. ನದಿಪಾತ್ರದ ಬಳಿ ಇರುವ ಮನೆಗಳ ಹಿತ್ತಲ
ಕಟ್ಟಡಗಳಿಗೆ ನೀರು ನುಗ್ಗಿದ ಪರಿಣಾಮ ಆ ಮನೆಯ ಜನರು ಅಲ್ಲಿದ್ದ ವಸ್ತುಗಳನ್ನು ಬೇರೆಡೆ ಸಾಗಿಸಿದರು.
ಜನಜಾತ್ರೆ: ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿರುವುದನ್ನು ನೋಡಲು ನೂರಾರು ಜನರು ನದಿಯ ಪಾರ್ಶ್ವಗಳ ಇಕ್ಕೆಲಗಳಲ್ಲಿ ವಿಶೇಷವಾಗಿ ಸೇತುವೆ ಉಭಯ ಬದಿಗಳಲ್ಲಿ ಜಮಾಯಿಸಿದ್ದರು. ಪೊಲೀಸರು, ಗೃಹ ರಕ್ಷಕ ದಳದವರು ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಹಾಕಿ ಜನರನ್ನು ನಿಯಂತ್ರಿಸುತ್ತಿದ್ದುದು ಕಂಡುಬಂದಿತು.