Advertisement
ಮಹಾನಗರ: ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ, ಅತ್ಯಂತ ದೊಡ್ಡ, ಹೆಚ್ಚು ಜನಸಂದಣಿ ಹೊಂದಿರುವ ನಗರವಾಗಿ ಬೆಳೆಯುತ್ತಿರುವ ಮಹಾನಗರಗಳ ಪೈಕಿ ಮಂಗಳೂರು ಕೂಡ ಒಂದು. ಇಲ್ಲಿನ ವ್ಯಾಪಾರ-ವಹಿವಾಟು, ದೈನಂದಿನ ಕಾರ್ಯ-ಚಟುವಟಿಕೆ, ಜನರು, ಸರಕುಗಳ ಸಾಗಾಟದ ಹಿನ್ನೆಲೆಯಲ್ಲಿ ನೋಡಿದಾಗ, ಈ ನಗರದಲ್ಲಿ ವಾಹನಗಳ ಸಂಖ್ಯೆಯೂ ದಿನೇದಿನೇ ಜಾಸ್ತಿಯಾಗುತ್ತಿದೆ. ಆದರೆ ಇದಕ್ಕನುಗುಣವಾಗಿ ಇಲ್ಲಿನ ರಸ್ತೆಗಳಾಗಲಿ ಅಥವಾ ಅವುಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಕಾಡುತ್ತಿದೆ.
ನಗರವು ಯೋಜಿತವಾಗಿ ಬೆಳವಣಿಗೆ ಹೊಂದದಿರುವುದು ಇದಕ್ಕೆ ಮುಖ್ಯ ಕಾರಣ. ಒಂದೊಮ್ಮೆ ಅಗಲ ಕಿರಿದಾಗಿದ್ದು, ಕಿಷ್ಕಿಂಧೆಯಂತಿದ್ದ ನಗರದ ಪ್ರಮುಖ ರಸ್ತೆಗಳು ಈಗ ವಿಸ್ತರಣೆಯಾದರೂ ಸಂಚಾರ ಸಮಸ್ಯೆ ಬಗೆಹರಿದಿಲ್ಲ. ವಾಹನಗಳ ಸಂಖ್ಯೆ ಹೆಚ್ಚಳ ಆಗಿರುವುದು ಒಂದು ಮುಖ್ಯ ಕಾರಣ ಆಗಿದ್ದರೂ ರಸ್ತೆ ಅಗಲ ಮಾಡಲು ಭೂಸ್ವಾಧೀನ ಮಾಡಿಕೊಂಡ ಜಾಗದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿರುವುದು. ಬಹು ಮಹಡಿ ಕಟ್ಟಡಗಳಲ್ಲಿ ನಿಯಮಗಳ ಪ್ರಕಾರ ವಾಹನ ಪಾರ್ಕಿಂಗ್‌ಗೆ ಮೀಸಲಾದ ಜಾಗದಲ್ಲಿ ವ್ಯಾಪಾರ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಿರುವುದು, ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇತ್ಯಾದಿ.
Related Articles
Advertisement
ನಿಯಮ ಉಲ್ಲಂಘನೆ ಮಾಡಿದ ಕಟ್ಟಡಗಳಿಗೆ ಅಧಿಕಾರಿಗಳು ದಾಳಿ ಕಾರ್ಯಾಚರಣೆ ನಡೆಸಿ ನೋಟೀಸು ನೀಡಿದ ಅನೇಕ ಘಟನೆಗಳು ಪಾಲಿಕೆಯ ಇತಿಹಾಸದಲ್ಲಿ ನಡೆದಿವೆ.
ಡಾ| ವಿಜಯ ಪ್ರಕಾಶ್ ಪಾಲಿಕೆಯ ಆಯುಕ್ತರಾಗಿದ್ದಾಗ ಮತ್ತು ಆ ಬಳಿಕ ವಿಪುಲ್ ಕುಮಾರ್ ಅವರು ಮಂಗಳೂರು ಪೊಲೀಸ್ ಕಮಿಷನರೆಟ್‌ನ ಆಯುಕ್ತರಾಗಿದ್ದ ಸಂದರ್ಭದಲ್ಲಿ ರಸ್ತೆ ಬದಿಯ ಬಹು ಮಹಡಿ ಕಟ್ಟಡಗಳಿಗೆ ದಾಳಿ ನಡೆಸಿ ತಳ ಅಂತಸ್ತಿನಲ್ಲಿ ಪಾರ್ಕಿಂಗ್ ಜಾಗದಲ್ಲಿದ್ದ ಅಂಗಡಿಗಳನ್ನು ತೆರವು ಮಾಡುವಂತೆ ನೋಟೀಸು ಜಾರಿ ಮಾಡಿದ್ದರು.
ಪಾಲಿಕೆಯ ಮೂಲಗಳ ಪ್ರಕಾರ 2011ರ ಬಳಿಕ ನಿರ್ಮಾಣವಾದ ಬಹು ಮಹಡಿ ಕಟ್ಟಡಗಳ ತಳ ಅಂತಸ್ತು ಕಡ್ಡಾಯವಾಗಿ ಪಾರ್ಕಿಂಗ್‌ಗೆ ಮೀಸಲಿರಿಸಲಾಗಿದೆ. ಆದರೆ 2011ಕ್ಕಿಂತ ಹಿಂದೆ ನಿರ್ಮಾಣಗೊಂಡ ಕೆಲವು ಬಹು ಮಹಡಿ ಕಟ್ಟಡಗಳಲ್ಲಿನ ತಳ ಅಂತಸ್ತಿನಲ್ಲಿ ವ್ಯಾಪಾರ ಮಳಿಗೆಗಳಿದ್ದು, ಅವುಗಳನ್ನು ತೆರವು ಮಾಡಲು ಕ್ರಮ ಜರಗಿಸಿದಾಗ ಕೆಲವರು ನ್ಯಾಯಾಲಯದ ಮೆಟ್ಟಲೇರಿದ್ದಾರೆ.
ನ್ಯಾಯಾಲಯದಲ್ಲಿರುವ ಇಂತಹ ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ. ಇವೆಲ್ಲದರ ಪರಿಣಾಮವಾಗಿ ಈಗ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಪಾರ್ಕಿಂಗ್ ಸೌಲಭ್ಯದ ಕೊರತೆಯಿಂದಾಗಿ ಹಾಗೂ ನೋ ಪಾರ್ಕಿಂಗ್ ತಾಣದಲ್ಲಿ ನಿಲ್ಲಿಸಿದ ವಾಹನಗಳ ಎತ್ತಂಗಡಿಗೆ ಟೋಯಿಂಗ್ ವ್ಯವಸ್ಥೆಯೂ ಜಾರಿಯಾದ ಕಾರಣ ಹಾಗೂ ಅಧಿಕ ದಂಡ ವಸೂಲಿಯ ಹೊಸ ಮೋಟಾರು ವಾಹನ ಕಾಯ್ದೆ ಅನುಷ್ಠಾನದ ಹಿನ್ನೆಲೆಯಲ್ಲಿ ಈಗೀಗ ಜನರು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಅಂಗಡಿ, ಮಳಿಗೆಗಳಿಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ಇದು ವ್ಯಾಪಾರದ ಮೇಲೆಯೂ ಪರಿಣಾಮ ಬೀರುತ್ತಿದೆ. ಏಕ ಮುಖ ರಸ್ತೆಗಳ ಮಗ್ಗುಲಲ್ಲಿದ್ದ ಮತ್ತು ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಹಲವಾರು ವ್ಯಾಪಾರ ಮಳಿಗೆಗಳು ಮುಚ್ಚಿವೆ.
ಅಧಿಕೃತ ಪಾರ್ಕಿಂಗ್ 8 ಕಡೆ ಮಾತ್ರನಗರದಲ್ಲಿ ವಾಹನಗಳ ನಿಲುಗಡೆಗಾಗಿ ಇರುವ ಅಧಿಕೃತ ಪಾರ್ಕಿಂಗ್ ಸ್ಥಳಗಳು ಕೇವಲ 8 ಮಾತ್ರ. ಅವು ಕೆಲವು ವರ್ಷಗಳ ಹಿಂದೆ ಗುರುತಿಸಿದ ತಾಣಗಳು. ಫುಟ್‌ಬಾಲ್ ಮೈದಾನ್ ಬಳಿ (ಲೇಡಿಗೋಶನ್ ಆಸ್ಪತ್ರೆ ಎದುರು), ಹ್ಯಾಮಿಲ್ಟನ್ ವೃತ್ತದ ಬಳಿ, ಹಂಪನಕಟ್ಟೆ ಹಳೆ ಬಸ್ ನಿಲ್ದಾಣ, ಜ್ಯೋತಿ ಜಂಕ್ಷನ್- ಬಲ್ಮಠ ರಸ್ತೆಯ ಎರಡೂ ಬದಿ, ಲಾಲ್‌ಬಾಗ್‌ನ ಪಬ್ಟಾಸ್ ಎದುರು, ಕರಾವಳಿ ಉತ್ಸವ ಮೈದಾನ್ ಎದುರು, ಮಂಗಳಾ ಕ್ರೀಡಾಂಗಣದ ಎಡಬದಿ, ಕಾರ್‌ಸ್ಟ್ರೀಟ್‌ನಿಂದ ನ್ಯೂಚಿತ್ರಾ ಜಂಕ್ಷನ್ ವರೆಗಿನ ರಸ್ತೆಯ ಒಂದು ಬದಿ (ಪರ್ಯಾಯವಾಗಿ ಒಂದೊಂದು ದಿನ ಒಂದೊಂದು ಬದಿ)- ಇವು ಈಗಿರುವ ಪಾರ್ಕಿಂಗ್ ಜಾಗಗಳು. ಈ 8 ಸ್ಥಳಗಳನ್ನು ಹೊರತು ಪಡಿಸಿದರೆ ನಗರದಲ್ಲಿ ಬೇರೆ ಎಲ್ಲಿಯೂ ಅಧಿಕೃತ ಪಾರ್ಕಿಂಗ್ ಎಂಬುದಿಲ್ಲ. 5 ವರ್ಷಗಳಲ್ಲಿ 4 ಪಟ್ಟು ಹೆಚ್ಚಳ
ನಗರದಲ್ಲಿ ವಾಹನಗಳ ಸಂಖ್ಯೆ 5 ವರ್ಷಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 5 ವರ್ಷಗಳ ಹಿಂದೆ (2014) ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಗೊಂಡಿದ್ದ ವಾಹನಗಳ ಸಂಖ್ಯೆ 1,72,000. ಈಗ (2019) ಮಂಗಳೂರಿನಲ್ಲಿ ವಾಹನಗಳ ಸಂಖ್ಯೆ 5,65,000ಕ್ಕೇರಿದೆ. ಅಂದರೆ ಸುಮಾರು 4 ಪಟ್ಟು ಜಾಸ್ತಿಯಾಗಿವೆ. ಇಷ್ಟು ವಾಹನಗಳ ಹೊರತಾಗಿ ಗಡಿ ಭಾಗವಾದ್ದರಿಂದ, 3 ರಾಷ್ಟ್ರೀಯ ಹೆದ್ದಾರಿಗಳ ಸಂಗಮವೂ ನಗರದಲ್ಲಿ ಆಗುವುದರಿಂದ ದಿನಂಪ್ರತಿ ಸುಮಾರು 50,000 ವಾಹನಗಳು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ನಗರದ ರಸ್ತೆಗಳಲ್ಲಿ ಹಾದು ಹೋಗುತ್ತವೆ. - ಹಿಲರಿ ಕ್ರಾಸ್ತಾ