Advertisement

ಮಲ್ಲಿಕಟ್ಟೆ ಸರ್ಕಲ್‌ಗೆ ಸಾಂಪ್ರದಾಯಿಕ ಸ್ಪರ್ಶ

01:52 PM Nov 09, 2017 | Team Udayavani |

ಮಹಾನಗರ: ಮಲ್ಲಿಕಟ್ಟೆಯಲ್ಲಿರುವ ವೃತ್ತ ಕರಾವಳಿಯ ಗುತ್ತಿನ ಮನೆಯ ಸ್ವರೂಪದಂತೆ ಸಾಂಪ್ರದಾಯಿಕ ಶೈಲಿಯಲ್ಲಿ ಪುನಃರೂಪಿತವಾಗಲಿದೆ.

Advertisement

ಶೀಘ್ರವೇ ಕಾಮಗಾರಿ ಆರಂಭವಾಗಲಿದ್ದು, ನಗರದ ಭಂಡಾರಿ ಬಿಲ್ಡರ್ ಪ್ರಾಯೋಜಕತ್ವ ನೀಡಿದೆ. ಸುಮಾರು 15 ಲಕ್ಷ ರೂ. ವೆಚ್ಚದ ನಿರೀಕ್ಷೆ ಇದೆ. ವೃತ್ತದ ನಿರ್ಮಾಣ ಹಾಗೂ ನಿರ್ವಹಣೆಯನ್ನು ಸಂಸ್ಥೆ ಕೈಗೊಂಡು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಿದೆ.

ವೃತ್ತದ ಸುತ್ತಲೂ ಗಾರ್ಡನ್‌ ಹಾಗೂ ಕಾರಂಜಿ, ಲ್ಯಾಂಡ್‌ಸ್ಕೇಪ್‌ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ. ಜತೆಗೆ ತುಳುನಾಡಿನ ಸಾಂಪ್ರದಾಯಿಕ ಶೈಲಿಯನ್ನು ನೆನಪಿಸುವ ಮಾದರಿಯ ಗುತ್ತಿನ ಮನೆಯ ಕಲ್ಲಿನ ವಿನ್ಯಾಸದಲ್ಲಿ ಪಕ್ಕಾಸು ಜೋಡಿಸುವ ರೀತಿಯ ಕಮಾನು ರಚನೆಯಾಗಲಿದೆ. ಎಲ್‌ಇಡಿ ಲೈಟ್‌ನ ವ್ಯವಸ್ಥೆ ಹಾಗೂ ರಾಜ್ಯದ ಸಂಸ್ಕೃತಿ ಬಿಂಬಿಸುವ ಚಿತ್ರಗಳೂ ಇರಲಿವೆ.

ಜನವರಿ ವೇಳೆಗೆ ನಡೆಯುವ ಶ್ರೀ ಕ್ಷೇತ್ರ ಕದ್ರಿ ಜಾತ್ರಾ ಮಹೋತ್ಸವಕ್ಕಿಂತ ಮೊದಲು ಈ ವೃತ್ತದ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ಈ ಮಧ್ಯೆ, ಪಿವಿಎಸ್‌ ವೃತ್ತವನ್ನು ಆಕರ್ಷಕವಾಗಿ ಪುನಃರೂಪಿಸುವುದಾಗಿ ಪಿವಿಎಸ್‌ ಸಮೂಹ ಈಗಾಗಲೇ ಪಾಲಿಕೆಗೆ ಮನವಿ ಸಲ್ಲಿಸಿದೆ. ಉಳಿದಂತೆ ಪಾಲಿಕೆ ವ್ಯಾಪ್ತಿಯ ಕೆಲವು ವೃತ್ತಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ.

Advertisement

ಎ.ಬಿ.ಶೆಟ್ಟಿ ಸರ್ಕಲ್‌, ಲೇಡಿಹಿಲ್‌ ಸರ್ಕಲ್‌, ನಂದಿಗುಡ್ಡ ಸರ್ಕಲ್‌, ಬಂಟ್ಸ್‌ಹಾಸ್ಟಲ್‌ ವೃತ್ತ, ಬಲ್ಲಾಳ್‌ಬಾಗ್‌ ಸರ್ಕಲ್‌ ಸಹಿತ ಕೆಲವೇ ವೃತ್ತಗಳು ಮಾತ್ರ ಇಂದು ನಗರದ ಶೋಭೆ ಹೆಚ್ಚಿಸುತ್ತಿವೆ. ಆದರೆ, ಮಾರ್ನಮಿಕಟ್ಟೆ, ಸ್ಟೇಟ್‌ಬ್ಯಾಂಕ್‌ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌, ನಂತೂರು ಸರ್ಕಲ್‌, ಕ್ಲಾಕ್‌ ಟವರ್‌ ಸರ್ಕಲ್‌, ಕೆಪಿಟಿ ಸರ್ಕಲ್‌ ಸಹಿತ ಇನ್ನೂ ಹಲವು ಸರ್ಕಲ್‌ಗಳು ಸುಂದರವಾಗಿ ಪುನಃರೂಪಗೊಳ್ಳಬೇಕಿದೆ. 

ಖಾಸಗಿ ಸಂಘ ಸಂಸ್ಥೆಗಳಿಗೆ ಆಹ್ವಾನ
ನಗರದಲ್ಲಿನ ಖಾಲಿ ಸ್ಥಳದಲ್ಲಿ ಲ್ಯಾಂಡ್‌ಸ್ಕೇಪ್‌ ಮಾಡಲು ಹಾಗೂ ಪ್ರಮುಖ ವೃತ್ತಗಳನ್ನು ಸುಂದರಗೊಳಿಸಲು ಮುಂದೆ ಬರುವ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಲು ಪಾಲಿಕೆ ತೀರ್ಮಾನಿಸಿದೆ. ರಸ್ತೆಗೆ ಅಡೆ ತಡೆಯಾಗದಂತೆ ವೃತ್ತದ ಉದ್ದ, ಅಗಲ ಇತ್ಯಾದಿ ಲೆಕ್ಕಾಚಾರ ನಡೆಸಿ, ಮೂಲ ವಿನ್ಯಾಸವನ್ನು ಪಾಲಿಕೆ ತಯಾರಿಸಿ ಖಾಸಗಿಯವರಿಗೆ ಹಸ್ತಾಂತರಿಸಲಿದೆ.

ವೃತ್ತವನ್ನು ಸುಂದರಗೊಳಿಸಲು ಬೇಕಾದ ವಿನ್ಯಾಸವನ್ನು ಖಾಸಗಿಯವರು ಮಾಡಿಕೊಂಡು,ಅಭಿವೃದ್ಧಿ ಹಾಗೂ ನಿರ್ವಹಣೆ ಹೊಣೆಯನ್ನು ವಹಿಸಿಕೊಳ್ಳಬೇಕಿದೆ. ಬಳಿಕ ಪಾಲಿಕೆಗೆ ಹಸ್ತಾಂತರಿಸಬೇಕಿದೆ.

ತುಳುನಾಡಿನ ಶೈಲಿ
ಕದ್ರಿ ದೇವಸ್ಥಾನ ದ್ವಾರದ ಮುಂಭಾಗದಲ್ಲಿರುವ ಮಲ್ಲಿಕಟ್ಟೆ ಸರ್ಕಲ್‌ ಅಭಿವೃದ್ದಿಗೆ ಭಂಡಾರಿ ಸಂಸ್ಥೆಯವರು ಮುಂದೆ ಬಂದಿದ್ದಾರೆ. ಈಗಾಗಲೇ ಎರಡು ಸರ್ಕಲ್‌ ಅಭಿವೃದ್ಧಿಗೊಳಿಸಿರುವ ಈ ಸಂಸ್ಥೆಯು ಮಲ್ಲಿಕಟ್ಟೆ ಸರ್ಕಲ್‌ ಅನ್ನು ತುಳುನಾಡಿನ ಸಾಂಪ್ರದಾಯಿಕ ಶೈಲಿ ಮತ್ತು ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸಲಿದೆ.
ಡಿ.ಕೆ.ಅಶೋಕ್‌, ಮನಪಾ ಸದಸ್ಯರು

ಮನಪಾ; 6 ವೃತ್ತಗಳ ಅಭಿವೃದ್ಧಿ 
ದೇಶದ ಸ್ವತ್ಛ ನಗರಗಳ ಪೈಕಿ 3 ನೇ ಸ್ಥಾನದಿಂದ 63ನೇ ಸ್ಥಾನಕ್ಕೆ ಇಳಿದ ಮಂಗಳೂರಿನ ಸುಂದರಗೊಳಿಸಲು ಮಹಾನಗರ ಪಾಲಿಕೆಯು ಮುಂದಾಗಿದೆ. ಪ್ರಮುಖ 6 ವೃತ್ತಗಳ ಅಭಿವೃದ್ಧಿಗೆ ಚಾಲನೆ ದೊರಕಿದೆ. ಪ್ರಾರಂಭಿಕವಾಗಿ ಸೈಂಟ್‌ ಆ್ಯಗ್ನೆಸ್‌ ವೃತ್ತ, ಸಿಟಿ ಆಸ್ಪತ್ರೆ ವೃತ್ತ, ಕರಾವಳಿ ವೃತ್ತ, ಪದವಿನಂಗಡಿ ವೃತ್ತ, ಕದ್ರಿ ವೃತ್ತ, ಮಲ್ಲಿಕಟ್ಟೆ ವೃತ್ತಗಳ ಅಭಿವೃದ್ಧಿಗೆ 3.50 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಿಟಿ ಆಸ್ಪತ್ರೆ ಮುಂಭಾಗದಲ್ಲಿ ಕಾಮಗಾರಿ ಆರಂಭವಾಗಿದೆ. ಇದು ಪೂರ್ಣಗೊಂಡರೆ, ಇಲ್ಲಿ ವಾಹನ ಸವಾರರಿಗೆ ಫ್ರೀ ಲೆಫ್ಟ್ ಸೌಕರ್ಯ ಸಿಗಲಿದೆ. ವಾಹನದ ಒತ್ತಡ ಹಾಗೂ ತಿರುವಿನಲ್ಲಿ ಆತಂಕ ಪಡುವ ವಾತಾವರಣ ಇರದು ಎಂಬುದು ಮನಪಾ ಅಧಿಕಾರಿಗಳ ಅಭಿಪ್ರಾಯ. 

Advertisement

Udayavani is now on Telegram. Click here to join our channel and stay updated with the latest news.

Next