Advertisement
ಜೀವನದ ವಿವಿಧ ಹಂತಗಳಲ್ಲಿ ಆಗುವ ಬೆಳವಣಿಗೆ ಮತ್ತು ಬದಲಾವಣೆಗಳಿಗೆ ಈ ಆಹಾರ ಪದ್ಧತಿ ತುಂಬಾ ಅಗತ್ಯವಾಗಿದೆ. ಪ್ರಮುಖವಾಗಿ ಆಹಾರದ ಔಷಧೀಯ ಗುಣಗಳು ದೇಹದ ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಬಹಳ ಉಪಯುಕ್ತವಾಗಿವೆ. ಇದಕ್ಕಾಗಿಯೇ ನಮ್ಮ ಪೂರ್ವಜರು ಬೆಳವಣಿಗೆಯ ವಿವಿಧ ಹಂತಗಳಿಗುಣವಾಗಿ ಆರೋಗ್ಯಕರ ಮತ್ತು ಪೌಷ್ಠಿಕಾಂಶಗಳನ್ನು ಒನ್ನೊಳಗೊಂಡ ವಿಭಿನ್ನ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸುತ್ತಿದ್ದರು. ಉದಾಹರಣೆಗೆ, ಔಷಧೀಯ ಗುಣಗಳಿರುವ ಸಸ್ಯಗಳಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಮಾಡುವ ತಿಂಡಿ ತಿನಿಸುಗಳು, ಖಾದ್ಯ, ರಸಾಯನ, ಪಲ್ಯ, ಅಂಬಲಿ, ಕಷಾಯ, ಪಾನೀಯಗಳು ಇತ್ಯಾದಿ. ಪುರಾತನ ಕಾಲದಿಂದಲೂ ಭಾರತದಲ್ಲಿ ವಾಸಿಸುತ್ತಿದ್ದ ಪ್ರತಿಯೊಂದು ಸಮುದಾಯಕ್ಕೂ ಈ ಆಹಾರ ವ್ಯವಸ್ಥೆಯ ಮೇಲೆ ಸ್ಪಷ್ಟ ಮತ್ತು ಪ್ರತ್ಯೇಕ ನಂಬಿಕೆಯಿತ್ತು. ಆದರೆ ಈಗಿನ ಪೀಳಿಗೆ ಆಧುನಿಕತೆ ಮತ್ತು ಪಾಶ್ಚಾತ್ಯ ಜೀವನ ಶೈಲಿಯ ಪ್ರಭಾವದಿಂದಾಗಿ ನಾಲಗೆಯ ರುಚಿಗಷ್ಟೇ ಬೆಲೆಕೊಟ್ಟು, ಸಾಂಪ್ರದಾಯಿಕ ಆಹಾರದ ಉಪಯುಕ್ತತೆಯನ್ನು ಅರಿಯದೆ ಪಾಶ್ಚಾತ್ಯ ಶೈಲಿಯ ಆಹಾರವನ್ನು ತಿಂದು, ಅದೆಷ್ಟೋ ರೀತಿಯ ಕಾಯಿಲೆಗಳನ್ನು ಆಹ್ವಾನಿಸುತ್ತಿದ್ದೇವೆ.
Related Articles
Advertisement
ನಮ್ಮ ಸಹಜೀವಿಗಳಾದ ಉಪಯೋಗಿ ಸೂಕ್ಷ್ಮಾಣುಜೀವಿಗಳು ಮತ್ತು ನಮ್ಮ ನಡುವಣ ಪರಸ್ಪರ ಪ್ರಯೋಜನಕಾರಿ ಸಂಬಂಧ ಹೃದಯದ ಸಮಸ್ಯೆ, ಮಾನಸಿಕ ಸಮಸ್ಯೆಗಳು, ಗರ್ಭ ಕೋಶದ ಸಮಸ್ಯೆ, ಕ್ಯಾನ್ಸರ್, ಸಾಂಕ್ರಾಮಿಕ ರೋಗಗಳು, ರೋಗನಿರೋಧಕ ಶಕ್ತಿಯ ಕೊರತೆಯಿಂದ ಬರುವ ಅನಾರೋಗ್ಯಗಳು, ಕರುಳು, ಮೂತ್ರಜನಕಾಂಗ ಅಥವಾ ದೇಹದ ಯಾವುದೇ ಭಾಗದಲ್ಲಿ ಉಲ್ಬಣಿಸುವ ಯಾವುದೇ ಕಾಯಿಲೆಗಳು ಇತ್ಯಾದಿ ರೋಗಗಳನ್ನು ಬಾರದಂತೆ ತಡೆಯುವಲ್ಲಿ ತುಂಬಾ ಅನುಕೂಲಕರವಾಗಿವೆ. ಸೂಕ್ಷ್ಮಾಣುಜೀವಿಗಳಲ್ಲಿ ಮುಖ್ಯವಾಗಿ ಬ್ಯಾಕ್ಟೀರಿಯಾಗಳು ಸುಲಭವಾಗಿ ಜೀರ್ಣವಾಗದ ನಾರಿನಂಶ ಇರುವ ಆಹಾರ ಪದಾರ್ಥಗಳ ಚಯಾಪಚಯ ಕ್ರಿಯೆಯಲ್ಲಿ ಭಾಗವಹಿಸಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪೂರೈಸುತ್ತವೆ. ಅಲ್ಲದೆ, ಯಾವುದೇ ರೋಗಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ದೇಹವನ್ನು ರಕ್ಷಿಸಲು ಕರುಳಿನ ರಚನೆಯನ್ನು ಭದ್ರಗೊಳಿಸುತ್ತವೆ. ಉದಾಹರಣೆಗೆ, ಬ್ಯಾಕ್ಟೀರಾಯ್ಡ್ಸ್ ಎಂಬ ಜಾತಿಯ ಬ್ಯಾಕ್ಟೀರಿಯಾಗಳು ಜಠರ ಮತ್ತು ಸಣ್ಣ ಕರುಳಿನಲ್ಲಿ ಜೀರ್ಣವಾಗದೇ ಉಳಿಯುವ ಆಹಾರವಾದ ತರಕಾರಿಗಳ ನಾರು ಪದಾರ್ಥ (ಕ್ಸೆ„ಲೋಗುÉಕನ್ಸ್)ಗಳನ್ನು ಜೀರ್ಣಿಸಲು ಸಹಾಯ ಮಾಡುವುದಲ್ಲದೆ ದೇಹದಲ್ಲಿ ಶಕ್ತಿಯ ಸಂತುಲತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವಲ್ಲದೆ ಲ್ಯಾಕ್ಟೋಬ್ಯಾಸಿಲಸ್ ಮತ್ತು ಬೈಫಿಡೊ ಬ್ಯಾಕ್ಟೀರಿಯಾಗಳು ಕೂಡ ಸುಲಭವಾಗಿ ಜೀರ್ಣವಾಗದ ಆಹಾರವನ್ನು ಜೀರ್ಣವಾಗಿಸಲು ಸಹಾಯ ಮಾಡುತ್ತವೆ. ಚಯಾಪಚಯ ಕ್ರಿಯೆ ಮಾತ್ರವಲ್ಲದೆ, ಈ ಬ್ಯಾಕ್ಟೀರಿಯಾಗಳು ದೇಹದಲ್ಲಿ ಮೇದಸ್ಸು (ಲಿಪಿಡ್) ಮತ್ತು ಪ್ರೋಟೀನ್ ಇವುಗಳ ಸಮತೋಲನವನ್ನು ಕಾಪಾಡುತ್ತವೆ. ಜತೆಗೆ, ದೇಹಕ್ಕೆ ಬೇಕಾದ ಅಗತ್ಯ ವಿಟಮಿನ್ ಪೋಷಕಾಂಶಗಳನ್ನು ಮತ್ತು ಕರುಳಿನ ಜೀವಕೋಶಗಳಿಗೆ ಶಕ್ತಿಯನ್ನು ಪೂರೈಸುವ ಶಾರ್ಟ್ ಚೈನ್ ಫ್ಯಾಟಿ ಆಸಿಡ್‌ಳನ್ನು ಉತ್ಪಾದಿಸುತ್ತವೆ. ಒಟ್ಟಿನಲ್ಲಿ ಸೂಕ್ಷ್ಮಾಣುಜೀವಿಗಳು ಶರೀರದ ರೋಗನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಕರುಳಿನಲ್ಲಿರುವ ಎಲ್ಲ ಸೂಕ್ಷ್ಮಾಣು ಜೀವಿಗಳೂ ಮಾನವನ ಆರೋಗ್ಯ ಕಾಪಾಡುವಲ್ಲಿ ಪ್ರಯೋಜನಕಾರಿಯಾಗಿರುವುದಿಲ್ಲ. ಉಪಯೋಗಿ ಸೂಕ್ಷ್ಮಾಣುಜೀವಿಗಳ ಸಂಖ್ಯೆ ಹಾಗೂ ವಿಧಗಳಲ್ಲಿ ಏರುಪೇರಾದರೆ ರೋಗಕಾರಿ ಸೂಕ್ಷ್ಮಾಣುಜೀವಿಗಳು ಕರುಳಿನ ಲೋಳೆಪೊರೆಯ ಮೇಲಿನ ಉಪ ಯೋಗಿ ಸೂಕ್ಷ್ಮಾಣುಜೀವಿಗಳನ್ನು ನಾಶ ಮಾಡಿ ಕರುಳಿನಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ.
(ಮುಂದಿನ ವಾರಕ್ಕೆ)
ಡಾ| ಕುಸುಮಾಕ್ಷಿ ನಾಯಕ್
ಅಸೋಸಿಯೇಟ್ ಪ್ರೊಫೆಸರ್
ರೇಷ್ಮಾ ಡಿ’ಸೋಜಾ
ಅಸಿಸ್ಟೆಂಟ್ ಪ್ರೊಫೆಸರ್ (ಸೀನಿಯರ್ ಸ್ಕೇಲ್)
ವೈದ್ಯಕೀಯ ಪ್ರಯೋಗಾಲಯ ವಿಭಾಗ
ಎಂಸಿಎಚ್‌ಪಿ, ಮಾಹೆ, ಮಣಿಪಾಲ