Advertisement

ಇಳಕಲ್‌ ಸೀರೆ

05:52 PM Oct 17, 2019 | mahesh |

ನಮ್ಮ ಹೆಮ್ಮೆಯ ಕನ್ನಡ ನಾಡಿನ ಮಹಿಳೆಯರ ಸಾಂಪ್ರದಾಯಿಕ ಉಡುಗೆಯು ಬಹು ವೈವಿಧ್ಯಪೂರ್ಣವಾಗಿದೆ. ಕನ್ನಡ ನಾಡಿನ ಮಹಿಳೆಯರ ಸಾಂಪ್ರದಾಯಿಕ ಉಡುಗೆ “ಸೀರೆ’. ಈ ಸೀರೆಗಳಲ್ಲಿಯೂ ಅನೂಹ್ಯ ಸೊಬಗಿನ ವಿವಿಧತೆ ಇದೆ.

Advertisement

ಬಾಲೆಯರಿಗೆ ಲಂಗದಾವಣಿ ಪ್ರಾಚೀನ ಸಾಂಪ್ರದಾಯಿಕ ತೊಡುಗೆ. ಜರಿಯಂಚಿನ, ರೇಶಿಮೆಯ ಲಂಗದಾವಣಿ ಇಂದಿಗೂ ಹಬ್ಬಹರಿದಿನಗಳಲ್ಲಿ ಹೆಣ್ಣುಮಕ್ಕಳು ಧರಿಸಿ ಸಂಭ್ರಮಿಸುತ್ತಾರೆ. “ಇಳಕಲ್‌ ಸೀರೆ’ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಕೈಮಗ್ಗಗಳಿಂದ ತಯಾರಾಗುವ ಸೀರೆ. ಇದರ ಸೊಬಗು ಎಂದರೆ ಸೀರೆಯ ಮೈ ಹತ್ತಿಯ ಹೊದಿಕೆಯಿಂದ ಉಂಟಾಗಿದ್ದರೆ, ಅಂಚಿನ ಸೊಬಗು ಹೆಚ್ಚಿಸಲು ಹಾಗೂ ಸೆರಗಿನ ಅಂದ ಹೆಚ್ಚಿಸಲು ಕಲಾತ್ಮಕ ರೇಶಿಮೆಯ ನೂಲಿನ ವೈಭವವಿರುತ್ತದೆ.

8ನೆಯ ಶತಮಾನದಿಂದ ಆರಂಭವಾದ ಇಳಕಲ್‌ ಸೀರೆಯ ತಯಾರಿ ಆರಂಭವಾಗಿದ್ದು, ಅಲ್ಲಿಯೇ ದೊರೆಯುವ ಕಚ್ಚಾ ಸಾಮಗ್ರಿಗಳು ಈ ಸೀರೆಯ ಸಿರಿವಂತಿಕೆಯನ್ನು ಸೊಬಗನ್ನು ಅಂದಿನಿಂದ ಇಂದಿನವರೆಗೆ ಜತನದಿಂದ ಕಾಯ್ದುಕೊಂಡು ಬರಲು ಸಹಕಾರಿಯಾಗಿವೆ. ಇಳಕಲ್‌ ಸೀರೆಗಳು 6 ಯಾರ್ಡ್‌, 8 ಯಾರ್ಡ್‌ ಹಾಗೂ 9 ಯಾರ್ಡ್‌ನಲ್ಲಿ ತಯಾರಾಗುತ್ತದೆ. ಇದಕ್ಕೆ ಕೊಂಡಿ ಅಂದರೆ 3 ಲಾಳಿಗಳಿಂದ ನೇಯುವ ಪ್ರಾಚೀನ ಕ್ರಮ.

ಸೆರಗಿನ ವಿಶಿಷ್ಟತೆಯೆಂದರೆ ಮುಖ್ಯವಾಗಿ 3 ಭಾಗ. ಕೆಂಪು ಬಣ್ಣದ ಸೆರಗಿನ ರಂಗು ಗಾಢವಾಗಿದ್ದರೆ, ಅದರೊಂದಿಗೆ ತಿಳಿ ಬಣ್ಣದ 2 ಭಾಗದ ಬಿಳಿಯ ರಂಗು ಅದಕ್ಕೆ ಹೊಂದಿಕೊಂಡು ಇಳಕಲ್‌ ಸೀರೆಯ ಸೆರಗಿಗೆ ವಿಶಿಷ್ಟತೆಯನ್ನು ಪಡಿಮೂಡಿಸಿದೆ.

ಸೀರೆಯ ಸಾಂಪ್ರದಾಯಿಕ ಅಂಚೂ ಸಹ ವೈವಿಧ್ಯಮಯವಾಗಿದೆ. ಸೀರೆಯ ಅಂಚಿಗೆ ಚಿಕ್ಕಿ, ಗೋಮಿ ಜರಿ, ಗಡಿದಡಿ ಬಂದು ಹೆಸರು ಹಾಗೂ ಆಧುನಿಕ ಗಾಯತ್ರಿ ಹೆಸರಿನ ಅಂಚುಗಳು ಇಂದು ಜನಪ್ರಿಯ. ಸಾಮಾನ್ಯವಾಗಿ ಸೀರೆಯ ಅಂಚಿನ ಬಣ್ಣ ಕೆಂಪು ಅಥವಾ ಕುಂಕುಮದ ರಂಗನ್ನು ಹೊಂದಿರುವುದೇ ಹೆಚ್ಚು. ಇಳಕಲ್‌ ಸೀರೆಯ “ಕಸೂತಿ’ ಬಲು ವಿಶಿಷ್ಟ. ಈ ಕಸೂತಿಯ ರಚನೆಯಲ್ಲಿ ಸಾಂಪ್ರದಾಯಿಕ ರಚನೆಗಳು ಮುಖ್ಯ. ಆನೆಯ ಚಿತ್ತಾರ ಹಾಗೂ ಕಮಲದ ಚಿತ್ತಾರದ ಕಸೂತಿ ಈ ಸೀರೆಯ ಸೊಬಗಿಗೆ ಕಿರೀಟ ಇದ್ದಂತೆ.

Advertisement

ಸೆರಗಿನ ಕೊನೆಯ ವಿನ್ಯಾಸಕ್ಕೆ ಹೆಣಿಗೆಯ ವಿನ್ಯಾಸ, ಕೋಟಿ ಕಮ್ಮಲಿ ವಿನ್ಯಾಸ, ತೆನೆಯ ವಿನ್ಯಾಸ, ಪರ್ವತಗಳ ವಿನ್ಯಾಸ- ಇವು ಅಧಿಕ. ಸೀರೆಯ ಮುಖ್ಯ ಬಣ್ಣ ಸಾಂಪ್ರದಾಯಿಕ ಇಳಕಲ್‌ ಸೀರೆಗಳಲ್ಲಿ ದಾಳಿಂಬೆಯ ಕೆಂಪು, ನವಿಲಿನ ಗರಿಯ ಹಸಿರುಮಿಶ್ರಿತ ಬಣ್ಣ, ಗಿಳಿಯ ಹಸಿರು ರಂಗು ಇತ್ಯಾದಿ ಮುಖ್ಯ. ಹತ್ತಿಯ, ಹತ್ತಿಮಿಶ್ರಿತ ರೇಷ್ಮೆಯ ಹಾಗೂ ರೇಷ್ಮೆಯ ಸೀರೆಗಳು ಪ್ರಾಚೀನ ಸಾಂಪ್ರದಾಯಿಕ ಸೀರೆಗಳು ಹಿಂದಿನಂತೆ ಇಂದಿಗೂ ಆದ್ಯತೆ, ಜನಪ್ರಿಯತೆ ಕಾಯ್ದುಕೊಂಡಿವೆ. ವಧುಗಳಿಗೆಂದೇ ತಯಾರಿಸಲಾಗುವ ಇಳಕಲ್‌ ಸೀರೆಗಳಿಗೆ “ಗಿರಿ ಕುಂಕುಮ’ ಎಂದು ಕರೆಯಲಾಗುವ ಸಿಂಧೂರದ ಬಣ್ಣವನ್ನೇ ಪ್ರಮುಖವಾಗಿ ಆರಿಸಲಾಗುತ್ತದೆ.

ಸೀರೆಯ ಮೈಯಲ್ಲಿ ಇರುವ ಮುಖ್ಯ ವಿನ್ಯಾಸವೆಂದರೆ ಚೌಕಗಳು, ಆಯತಗಳು ಹಾಗೂ ನೇರ ಗೆರೆಗಳು. ಉತ್ತರ ಕರ್ನಾಟಕದ ಜನತೆಯಲ್ಲಿ ಇಂದೂ ಇಳಕಲ್‌ ಸೀರೆಯನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವಿದೆ. ಈ ಸೀರೆ ತೊಡುವುದು ಹಾಗೂ ಉಡುಗೊರೆಯಾಗಿ ನೀಡುವುದು ಮಂಗಳಕರ ಎಂಬ ನಂಬಿಕೆಯಿದೆ. ಭಾರತೀಯ ನಾರಿಗೆ ಸೀರೆ ಎಂಬುದು ಕೇವಲ ಒಂದು ಉಡುವ ವಸ್ತ್ರ ಹಾಗೂ ತೊಡುಗೆ ಮಾತ್ರವಲ್ಲ, ಈ ಸಾಂಪ್ರದಾಯಿಕ ಸೀರೆಗಳು ತಾಯಿಯಿಂದ ಮಗಳಿಗೆ, ಅತ್ತೆಯಿಂದ ಸೊಸೆಗೆ- ಈ ರೀತಿಯಲ್ಲಿ ಪಾರಂಪರಿಕವಾಗಿ ಕೊಡುಗೆಯ ರೂಪದಲ್ಲಿ ಬರುತ್ತದೆ. ಅಂತೆಯೇ ಈ ಸೀರೆಗಳು ವಿಶಿಷ್ಟ ಭಾವನಾತ್ಮಕ ಹಾಗೂ ಪ್ರೀತಿಯ ಬೆಸುಗೆಯನ್ನು ಹೊಂದಿವೆ.

ಕೈಮಗ್ಗದ ಗೋಮಿ ಅಂಚು ಹಾಗೂ ಇಳಕಲ್‌ ಸೀರೆಯ ವಿನ್ಯಾಸ ಕರ್ನಾಟಕದ ಅಮೀನ್‌ಗಡ ಪ್ರಾಂತ್ಯದ ವೈಶಿಷ್ಟ್ಯ. ತಿಳಿ ಕಂದು ಬಣ್ಣದ ಈ ಸೀರೆ ಎರಡು ವಿಶಿಷ್ಟ ರಂಗಿನ ನೂಲಿನಿಂದ ತಯಾರಿಸಲಾಗುತ್ತದೆ.

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next