Advertisement

ಮೈಸೂರು ಸಿಲ್ಕ್ ಸೀರೆ

07:06 PM Oct 24, 2019 | mahesh |

ಮೈಸೂರು ಸಿಲ್ಕ್ ಸೀರೆ ಕರ್ನಾಟಕದ ಮಹಿಳೆಯರ ಸಾಂಪ್ರದಾಯಿಕ ತೊಡುಗೆಯಾಗಿ ಮಹತ್ವದ ಸ್ಥಾನ ಪಡೆದಿದೆ. ಇಂದು ಮೈಸೂರು ಸಿಲ್ಕ್ ಸೀರೆ ಕರ್ನಾಟಕದ ಗಡಿಯನ್ನು ದಾಟಿ ಭಾರತದ ಎಲ್ಲೆಡೆ ಪಸರಿಸಿರುವುದು ಮಾತ್ರವಲ್ಲ, ವಿಶ್ವಾದ್ಯಂತ ಬೇಡಿಕೆ ಹಾಗೂ ಜನಪ್ರಿಯತೆ ಪಡೆದಿದೆ.

Advertisement

ರೇಷ್ಮೆಯ ಬೆಡಗು
ಮೈಸೂರು ಸಿಲ್ಕ್ ಸೀರೆಯ ಉಗಮದ ಕುರಿತು ಚರಿತ್ರೆಯನ್ನು ಅವಲೋಕಿಸಿದರೆ ಮೊತ್ತಮೊದಲು ಕ್ರಿಸ್ತಶಕ 1780-1790ರ ಸಮಯದಲ್ಲಿ ಟಿಪ್ಪು ಸುಲ್ತಾನನ ಕಾಲದಲ್ಲಿ ಇದರ ಆರಂಭವಾಯಿತು. ಆದರೆ ತದನಂತರ ವಿದೇಶಗಳಿಂದ ಆಮದಾಗುವ ವಿವಿಧ ರೇಶ್ಮೆ ಹಾಗೂ ರೆಯಾನ್‌ ಬಟ್ಟೆಗಳೇ ಆದ್ಯತೆ ಹಾಗೂ ಜನಪ್ರಿಯತೆ ಪಡೆದುದರಿಂದ, ಮೈಸೂರು ಸಿಲ್ಕ್ನ ತಯಾರಿ ಹಾಗೂ ಜನಪ್ರಿಯತೆ ಅತೀವವಾಗಿ ಕುಗ್ಗಿತು. ತದನಂತರದ ಕಾಲದಲ್ಲಿ ಮೈಸೂರು ಅರಸರ ಆಳ್ವಿಕೆಯ ಕಾಲದಲ್ಲಿ ಪುನಃ ಜನಪ್ರಿಯತೆಯ ಉತ್ತುಂಗ ತಲುಪಿದ ಈ ಸೀರೆಗಳು ಇಂದಿಗೂ ಅದೇ ರೀತಿಯ ಬೇಡಿಕೆಯನ್ನು ಪಡೆದಿದೆ.

ಮೈಸೂರು ಸಿಲ್ಕ್ ಸೀರೆಯ ವೈಶಿಷ್ಟ್ಯವೆಂದರೆ ದೂರದಿಂದಲೂ ಕಾಣುವ ಅದರ ಹೊಳಪು. ಹಾಗೂ ಶುದ್ಧ ರೇಶಿಮೆಯ ಮೃದುತ್ವ ಹಾಗೂ ದೀರ್ಘ‌ಕಾಲೀನ ಬಾಳಿಕೆ. ಹೌದು! ಅಜ್ಜಿಯ ಕಾಲದ ಹಾಗೂ ಅಮ್ಮನ ಕಾಲದ ಮೈಸೂರು ಸೀರೆಯ ಹೊಳಪು ಹಾಗೂ ಅಂದ, ಮಗಳ ಕಾಲದ ಮೈಸೂರು ಸೀರೆಯ ಸೊಬಗಿಗೆ ಸರಿಸಮವಾಗಿದೆ!

ಮೈಸೂರು ಸೀರೆಯ ಇನ್ನೊಂದು ವಿಶೇಷತೆ ಎಂದರೆ ಸೀರೆಯ ಮೈಯ ಬಣ್ಣ ಒಂದೇ ಬಣ್ಣದ್ದಾಗಿದ್ದು, ಬಂಗಾರದ ಬಣ್ಣದ ಜರಿಯ ಅಂದದ ಅಂಚನ್ನು ಹೊಂದಿದೆ. ಸಾಮಾನ್ಯವಾಗಿ ಸಾಂಪ್ರದಾಯಿಕ ಸೀರೆಯ ಬಣ್ಣ ಹಸಿರು, ಕೆಂಪು ಹಾಗೂ ಕಿತ್ತಳೆ ಬಣ್ಣದ್ದಾಗಿದೆ. ಇಂದಿಗೆ ಹಲವು ಬಣ್ಣಗಳಲ್ಲಿ ಮೈಸೂರು ಸಿಲ್ಕ್ ಸೀರೆ ಲಭ್ಯವಾಗುತ್ತಿದ್ದು, ಲಿಲಿಯಾಕ್‌, ಕಾಫಿಬ್ರೌನ್‌ (ಕಂದು) ಹಾಗೂ ಎಲಿಫೆಂಟ್‌ ಗ್ರೇ ಬಣ್ಣದ ಸೀರೆಗಳು ಅತೀ ಬೇಡಿಕೆ ಹೊಂದಿವೆ.

ಆಧುನಿಕ ಮೈಸೂರು ಸಿಲ್ಕ್ ಸೀರೆ ಸಾಂಪ್ರದಾಯಿಕ ಸೊಬಗಿನೊಂದಿಗೆ, ಮಾವಿನ ಆಕಾರದ ಬುಟ್ಟಿ (ಬುಟ್ಟಾ) ಹಾಗೂ ಕಸೂತಿಯ ಚಿತ್ತಾರ ಹಾಗೂ ಬಾಂಧನಿ ವಿನ್ಯಾಸದೊಂದಿಗೆ ಆಧುನಿಕತೆಯ ಹೊಸತನ್ನೂ ಅಳವಡಿಸಿಕೊಂಡಿದೆ.

Advertisement

ಮೈಸೂರು ಸಿಲ್ಕ್ ಸೀರೆಯನ್ನು ಗುರುತಿಸಲೂ ವಿಶೇಷ ವೈಶಿಷ್ಟ್ಯಗಳಿವೆ.
ಪ್ರತಿ ಸೀರೆಯ ಅಂಚಿನಲ್ಲಿ ಕಸೂತಿಯಿಂದ ನಮೂದಿಸಲಾದ ಸೀರೆಯ ಕುರಿತಾದ ವಿವರಗಳಿರುತ್ತವೆ. ಇದರಲ್ಲಿ ಸೀರೆ ತಯಾರಾದ ಕಾಲ, ಸೀರೆ ನೇಯಲು ತೆಗೆದುಕೊಂಡ ಸಮಯ (ಗಂಟೆ) ಹಾಗೂ ಇನ್ನಿತರ ಮಾಹಿತಿ ಉಪಲಬ್ಧವಿರುತ್ತದೆ. ಇದು ಶುದ್ಧ ಮೈಸೂರು ರೇಶ್ಮೆ ಸೀರೆಯ ಹಾಗೂ ಕೃತಕ ಸೀರೆಗಳ ವ್ಯತ್ಯಾಸವನ್ನು ಕಂಡುಹಿಡಿಯಲು ಸಹಕಾರಿ.

ಇನ್ನೊಂದು ಶುದ್ಧ ಮೈಸೂರು ರೇಶಿಮೆ ಸೀರೆಯ ಪರೀಕ್ಷೆಯನ್ನು ಮಾಡುವ ವಿಧಾನವೆಂದರೆ, ಮೈಸೂರು ಸಿಲ್ಕ್ ಸೀರೆಯನ್ನು ಕೈಗಳ ನಡುವೆ ಉಜ್ಜಿದಾಗ, ಅದರಿಂದ ಬಿಸಿ ಉತ್ಪತ್ತಿಯಾದ (ಶಾಖದ) ಅನುಭವವಾಗುತ್ತದೆ. ಆದರೆ ಯಾವುದೇ ಕೃತಕ ಸಿಲ್ಕ್ ಸೀರೆ ಹಾಗೂ ಸಿಂಥೆಟಿಕ್‌ ಸೀರೆಗಳಲ್ಲಿ ಈ ಗುಣ ಕಂಡುಬರುವುದಿಲ್ಲ.

ಸೀರೆ ತಯಾರಿ
ಆರಂಭದಲ್ಲಿ “ಮೈಸೂರು ಸಿಲ್ಕ್ ಫ್ಯಾಕ್ಟರಿ’ಯಲ್ಲಿ 1912ರಲ್ಲಿ ಮೈಸೂರು ಮಹಾರಾಜರ ಆಸಕ್ತಿ ಹಾಗೂ ಒಲುಮೆಯಿಂದ ಆರಂಭವಾಗಿ (1932)ರಲ್ಲಿ ಅಧಿಕ ತಯಾರಿ ಶುರುವಾ ಯಿತು. ಮಹಾರಾಜರು 32 ಹ್ಯಾಂಡ್‌ಲೂಮ್‌ಗಳನ್ನು ಸ್ವಿಜರ್‌ಲ್ಯಾಂಡ್‌ನಿಂದ ಆಮದು ಮಾಡಿಸಿದ್ದರು. ಆ ಕಾಲದಲ್ಲಿ ಇದು ಇಡೀ ಭಾರತದಲ್ಲಿಯೇ ಪ್ರಥಮ ವಿಶೇಷತೆಯಾಗಿತ್ತು.

ಆರಂಭದಲ್ಲಿ ಮೈಸೂರು ಸಿಲ್ಕ್ ಸೀರೆಯ ತಯಾರಿ ಕೇವಲ ರಾಜಮನೆತನದ ಬಳಕೆಗಾಗಿ ಮೀಸಲಾಗಿತ್ತು. ತದನಂತರ ರಾಜ್ಯಾಡಳಿತದ ಪ್ರಧಾನರ ಬಳಕೆಗಾಗಿ ಮೈಸೂರು ಸಿಲ್ಕ್ ಸೀರೆಗಳ ತಯಾರಿ ಅಧಿಕವಾಗಿ ತಯಾರಾಗಲು ಪ್ರಾರಂಭವಾಯಿತು. ಸ್ವಾತಂತ್ರ್ಯಾನಂತರ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್‌ ಕಾರ್ಪೊರೇಶನ್‌ (ಓಖಐಇ) ಹೆಸರಿನಲ್ಲಿ 1980ರಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ, ವಿಶ್ವಬ್ಯಾಂಕ್‌ನ ಸಹಯೋಗಿತ್ವದೊಂದಿಗೆ ಬಹು ಜನಪ್ರಿಯವಾಯಿತು.

ಇಂದು ‘ಎಐ’ ಅಂದರೆ “ಜಿಯೊಗ್ರಾಫಿಕಲ್‌ ಇಂಡೆಕ್ಸ್‌’ನ ಗರಿಮೆಯನ್ನೂ ಹೊಂದಿದೆ. 5.5 ಮೀಟರ್‌ಗಳಷ್ಟು ಉದ್ದವಿರುತ್ತದೆ. ಸೀರೆಯ ಕೊನೆಯ ಭಾಗ ಅಂದರೆ ಸೆರಗಿನ ಭಾಗದಲ್ಲಿ ಮೈಸೂರು ರೇಶ್ಮೆ ಸೀರೆಗಳಿಗೆಂದೇ ಮೀಸಲಾಗಿರುವ ವಿಶಿಷ್ಟ ವಿನ್ಯಾಸಗಳಿರುತ್ತವೆ. ಭಾರತದ ಇತರ ರಾಜ್ಯಗಳಲ್ಲಿ ತಯಾರಾಗುವ ರೇಶ್ಮೆ ಸೀರೆಗಳಿಗೆ ಸೀರೆಯ ಮೈಯ ಭಾಗದಲ್ಲಿ ವಿವಿಧ ವಿನ್ಯಾಸಗಳಿರುತ್ತವೆ. ಆದರೆ ಮೈಸೂರು ಸಿಲ್ಕ್ ಸೀರೆಯ ವಿಶೇಷತೆ ಹಾಗೂ ಆಕರ್ಷಣೆ ಎಂದರೆ ಹೊಳೆವ ಸೀರೆಯು ಒಂದೇ ರಂಗಿನ ಅಂದದಿಂದ ಕೂಡಿರುವುದು.

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next