Advertisement
ಕರ್ನಾಟಕದ ಬಳ್ಳಾರಿಯ ಸಂಡೂರಿನಲ್ಲಿ ವಾಸಿಸುವ ಲಂಬಾಣಿ ಮಹಿಳೆಯರು ಉಡುಗೆಯ ಮೇಲೆ ತಯಾರಿಸುವ ಕಸೂತಿಗೆ “ಸಂಡೂರು’ ಕಸೂತಿ ಎಂದೇ ಹೆಸರು. ಅಲ್ಲಿ ಹಲವು ವರ್ಷಗಳವರೆಗೆ ಅಲ್ಲಲ್ಲಿ ಹಂಚಿಹೋಗಿದ್ದ ಈ ಕಲೆ, ಇಂದು ಸಂಡೂರು ಕಸೂತಿ ಕೇಂದ್ರದ ಹೆಸರಿನಲ್ಲಿ 400 ಲಂಮಾಣಿ ಮಹಿಳೆಯರ ಸಾಂಪ್ರದಾಯಿಕ ತೊಡುಗೆ ಹಾಗೂ ಕಸೂತಿಗೆ ಪ್ರೋತ್ಸಾಹ ನೀಡುತ್ತಿದೆ. 15 ಹಳ್ಳಿಗಳಲ್ಲಿ ಸಂಡೂರು ಕಸೂತಿ ತಯಾರಿಸುವ ಜನರಿದ್ದಾರೆ.
Related Articles
Advertisement
ಗೌರಿಬಾಯಿ ಎಂಬ ಲಂಬಾಣಿ ಹಿರಿ ಮಹಿಳೆಯ ಸಾಧನೆಯೆಂದರೆ ಲಂಡನ್ ಫ್ಯಾಶನ್ ವೀಕ್‌ನಲ್ಲಿ ರ್‍ಯಾಂಪ್ ಮೇಲೆ ವಾಕ್ (ಕ್ಯಾಂಪ್‌ವಾಕ್) ಮಾಡಿದ್ದು ! ಆಕರ್ಷಕ ಕಸೂತಿಯ ವೈಭವಯುತ ದಿರಿಸಿನಂತೆ ಕಾಣುವ ಸಾಂಪ್ರದಾಯಿಕ ತೊಡುಗೆ ತೊಟ್ಟಾಗ ವೀಕ್ಷಕರಿಂದ ಕರತಾಡನದ ಸ್ವಾಗತವಾಯಿತು. ಕೆಲವರು ಕೇಳಿದ ಪ್ರಶ್ನೆಯೆಂದರೆ ಇಂತಹ ಅಂದದ ಕಸೂತಿಯ ದಿರಿಸನ್ನು ನಿತ್ಯ ಉಡುವುದಾದರೆ ಲಂಬಾಣಿ ಮಹಿಳೆಯರು ಎಷ್ಟು ಸಿರಿವಂತರು! ಅವರ ಸಾಂಪ್ರದಾಯಿಕ ಅಲೆಮಾರಿ ಜೀವನದಲ್ಲಿ ಎಲ್ಲಿದ್ದರೂ ತಮ್ಮ ಉಡುಗೆ-ತೊಡುಗೆಯ ಕಸೂತಿಯ ಅಂದವನ್ನು ಬದಲಿಸದೇ ಇರುವುದು ವಿಶೇಷ ದಾಖಲೆ ಎನ್ನಬಹುದು. ಈ ಕಸೂತಿಯ ವಿವಿಧ ದಿರಿಸಿಗೆ 400ರಿಂದ 4000 ರೂಪಾಯಿಗಳವರೆಗೆ ಮೌಲ್ಯವಿದೆ. ರಾಜಸ್ಥಾನ ಗುಜರಾತಿನಲ್ಲಿ ಮಧ್ಯಪ್ರದೇಶ ಸಿಂಧ್ ಪ್ರಾಂತ್ಯಗಳಲ್ಲಿ ಅಧಿಕವಾಗಿ ಹರಡಿರುವ ಈ ಬಂಜಾರ ಮಹಿಳೆಯರು ಭಾರತದ ಜಿಪ್ಸಿ ಮಹಿಳೆಯರು ಎಂಬ ಹೆಸರು ಪಡೆದುಕೊಂಡಿದ್ದಾರೆ.
ಬಂಜಾರಾ ಮಹಿಳೆಯರ ಕಸೂತಿಯ ದಿರಿಸಿನ ವೈಶಿಷ್ಟ್ಯವು ಉದಾಹರಣೀಯ. ಇವರು ಅಫಘಾನಿಸ್ಥಾನದಿಂದ ಬಂದು ರಾಜಸ್ಥಾನದಲ್ಲಿ (ಮಿರವರ್) ಪ್ರದೇಶದಲ್ಲಿ ನೆಲೆನಿಂತರು ಎಂಬ ಐತಿಹ್ಯವಿದೆ. ಇವರು ಧರಿಸುವ ಸಾಂಪ್ರದಾಯಿಕ ತೊಡುಗೆಯ ಮೇಲೆ “ಲೆಪೊ’ ಎಂಬ ವಿಶಿಷ್ಟ ವಿಧಾನದ ಕಸೂತಿ ಕಲೆಯನ್ನು ಪಡಿಮೂಡಿಸುತ್ತಾರೆ. ಗಾಢ ರಂಗಿನ ವರ್ಣಮಯ ತಿಪೋ ಕಸೂತಿಯ ಜೊತೆಗೆ ಮಿರರ್ ವರ್ಕ್ (ಪುಟ್ಟ ಕನ್ನಡಿಗಳನ್ನು) ಬಳಸುತ್ತಾರೆ. ಈ ದಿರಿಸಿನೊಂದಿಗೆ ವಿಶಿಷ್ಟ ರೀತಿಯ ನತ್ತು, ಕಿವಿಯ ಓಲೆ, ತಲೆಯ ಮೇಲೆ ಧರಿಸುವ ವಸ್ತ್ರವನ್ನು ಧರಿಸುತ್ತಾರೆ. ಅಸ್ಥಿಯಂತಹ ಬಿಳಿ ಬಣ್ಣದ ಹಲವು ಬಳೆಗಳನ್ನು ಧಾರಣೆ ಮಾಡುತ್ತಾರೆ. ಇವರು ಕಸೂತಿಯ ಜೊತೆಗೆ ಬಣ್ಣ ಹಚ್ಚಲು (ಪೇಂಟಿಂಗ್), ಹಚ್ಚೆ ಹಾಕುವುದು (ಟ್ಯಾಟೂ) ಹಾಗೂ ವಿಶೇಷ ರಂಗೋಲಿಗಳನ್ನು ರಚಿಸುವಲ್ಲಿಯೂ ಬಹಳ ಪ್ರವೀಣರು.
ಶ್ರಾವಣ ಮಾಸದಲ್ಲಿ ಬಂಜಾರಾ ಮಹಿಳೆಯರು “ತೀಜ್’ ಎಂಬ ಹಬ್ಬವನ್ನು ಆಚರಿಸುತ್ತಾರೆ. ಆ ಸಮಯದಲ್ಲಿ ಆಕರ್ಷಕ ಸಾಂಪ್ರದಾಯಿಕ ಉಡುಗೆ ತೊಡುಗೆಯ ಜೊತೆಗೆ ನೃತ್ಯ, ಸಂಗೀತಗಳು ಮಹತ್ವ ಪಡೆದುಕೊಂಡಿವೆ.
ಹಂಪಿಯಲ್ಲೂ ವಾಸಿಸುವ ಲಂಬಾಣಿ ಮಹಿಳೆಯರು ಲೆಪೋ ವಿಧದ ಕಸೂತಿಯ ಪೆಥಿಯಾ ಎಂಬ ಸ್ಕರ್ಟ್‌ನಂತಹ ಲಂಗ, ಕಂಚಲಿ ಎಂಮ ಕುಪ್ಪಸ, ಜೊತೆಗೆ ಶಿರೋವಸ್ತ್ರವನ್ನು ಧರಿಸುತ್ತಾರೆ. ಲೆಪೋ ಬಗೆಯ ಲಂಬಾಣಿ ಮಹಿಳೆಯರು ತಮ್ಮ ಉಡುಗೆಯಲ್ಲಿ ಮಣಿಗಳನ್ನು ಸಮುದ್ರದ ಪುಟ್ಟ ಶಂಖ ಹಾಗೂ ನಾಣ್ಯ (ಕಾಯಿನ್) ಬಳಸುವುದು ವಿಶಿಷ್ಟ.
ಅನುರಾಧಾ ಕಾಮತ್