Advertisement

ಒಂದು ರೂ.ಗೆ ಒಂದು ಕಿ.ಮೀ ಓಡುವ ಟ್ರ್ಯಾಕ್ಟರ್‌!

12:43 PM Nov 17, 2018 | |

ಬೆಂಗಳೂರು: ಪೆಟ್ರೋಲ್‌, ಡಿಸೇಲ್‌ ಬೆಲೆ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ “ಹೈಬ್ರಿಡ್‌’ ವಿದ್ಯುತ್‌ ಚಾಲಿತ ಟ್ರ್ಯಾಕ್ಟರ್‌ ಅಭಿವೃದ್ಧಿಪಡಿಸಿದ್ದು, ಈ ಟ್ರ್ಯಾಕ್ಟರ್‌ ಕೇವಲ 1 ರೂಪಾಯಿಗೆ ಒಂದು ಕಿ.ಮೀ. ದೂರ ಕ್ರಮಿಸಲಿದೆ.

Advertisement

ನಗರದ ಆರ್‌.ವಿ.ಇಂಜಿನಿಯರಿಂಗ್‌ ಕಾಲೇಜಿನ “ಕೃಷಿ ತಂಡ’ದ ವಿದ್ಯಾರ್ಥಿಗಳು ರೈತರಿಗೆ ಕಡಿಮೆ ದರದಲ್ಲಿ ಟ್ರ್ಯಾಕ್ಟರ್‌ಗಳು ದೊರೆಯಬೇಕು ಎಂಬ ಉದ್ದೇಶದಿಂದ ಈ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಅದರಂತೆ ಒಮ್ಮೆ ಬ್ಯಾಟರಿ ಚಾರ್ಜ್‌ ಮಾಡಿದರೆ ಸಾಕು ಬರೋಬ್ಬರಿ 60 ಕಿ.ಮೀ. ದೂರ ಚಲಿಸಬಹುದಾಗಿದ್ದು, 2 ಟನ್‌ವರೆಗೆ ಭಾರವನ್ನು ಟ್ರ್ಯಾಕ್ಟರ್‌ ವಿದ್ಯುತ್‌ ಶಕ್ತಿಯಿಂದಲೇ ಹೊರಲಿದೆ. 

ಬ್ಯಾಟರಿಗೆ ಚಾರ್ಜ್‌ ಮಾಡುವ ವಿದ್ಯುತ್‌ಗೆ ತಗಲುವ ವೆಚ್ಚದ ಆಧಾರದ ಮೇಲೆ ಪ್ರತಿ ಕಿ.ಮೀ.ಗೆ 1 ರೂ. ವೆಚ್ಚವಾಗಲಿದ್ದು, ಇದೇ ವಾಹನವನ್ನು ಡಿಸೇಲ್‌ನಿಂದ ಚಲಾಯಿಸಿದರೆ ಪ್ರತಿ ಕಿ.ಮೀ.ಗೆ 9.5 ರೂ. ವೆಚ್ಚವಾಗುತ್ತದೆ. ಅದರಂತೆ ವಿದ್ಯುತ್‌ನಿಂದ ಕೇವಲ 60 ರೂ.ಗಳಲ್ಲಿ 60 ಕಿ.ಮೀ. ಚಲಾಯಿಸಿದರೆ, ಡಿಸೇಲ್‌ನಲ್ಲಿ ಅಷ್ಟೇ ದೂರ ಕ್ರಮಿಸಲು ಒಂಬತ್ತು ಪಟ್ಟು ಅಂದರೆ 570 ರೂ. ವೆಚ್ಚ ಮಾಡಬೇಕಾಗುತ್ತದೆ. 

ಮಾರುಕಟ್ಟೆಗೆ ಸದ್ಯ ಟ್ರ್ಯಾಕ್ಟರ್‌ ಹಾಗೂ ಟಿಲ್ಲರ್‌ಗಳನ್ನು ಪೂರೈಕೆ ಮಾಡುತ್ತಿರುವ ಯಾವುದೇ ಸಂಸ್ಥೆಯೂ ವಿದ್ಯುತ್‌ ಚಾಲಿತ ಟ್ರ್ಯಾಕ್ಟರ್‌ಗಳನ್ನು ಬಿಡುಗಡೆ ಮಾಡಿಲ್ಲ. ಆ ಹಿನ್ನೆಲೆಯಲ್ಲಿ ತಾವು ತಯಾರಿಸಿರುವ ವಿದ್ಯುತ್‌ ಚಾಲಿತ ಟ್ರ್ಯಾಕ್ಟರ್‌ ತಂತ್ರಜ್ಞಾನದ ಪೇಟೆಂಟ್‌ (ಹಕ್ಕುಸ್ವಾಮ್ಯ) ಪಡೆಯಲು ವಿದ್ಯಾರ್ಥಿಗಳು ಮುಂದಾಗಿದ್ದು, ಕೃಷಿ ಮೇಳದಲ್ಲಿ ಹೈಬ್ರಿಡ್‌ ಟ್ರ್ಯಾಕ್ಟರ್‌, ಪ್ರಮುಖ ಟ್ರ್ಯಾಕ್ಟರ್‌ ತಯಾರಿಕಾ ಸಂಸ್ಥೆಗಳ ಹುಬ್ಬೇರುವಂತೆ ಮಾಡಿದೆ. 

ಟ್ರ್ಯಾಕ್ಟರ್‌ನ ಕಾರ್ಯಕ್ಷಮತೆಯೊಂದಿಗೆ ಇಂಧನ ಉಳಿಸುವ ಉದ್ದೇಶದಿಂದ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಈ ಟ್ರ್ಯಾಕ್ಟರ್‌ ವಿದ್ಯುತ್‌ ಹಾಗೂ ಡಿಸೇಲ್‌ ಚಾಲಿತವಾಗಿದ್ದು, ಎರಡು ಟನ್‌ಗಿಂತಲೂ ಹೆಚ್ಚಿನ ಭಾರದ ವಸ್ತುಗಳನ್ನು ಸಾಗಾಣಿ ಮಾಡುವ ವೇಳೆಯಲ್ಲಿ ಡಿಸೇಲ್‌ ಬಳಕೆ ಮಾಡಲಾಗುತ್ತದೆ. ಇನ್ನು ಡಿಸೇಲ್‌ ಬಳಕೆಯಾಗುವ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಬ್ಯಾಟರಿ ಚಾರ್ಜ್‌ ಆಗುತ್ತಿರುತ್ತದೆ. 

Advertisement

ಅತ್ಯಂತ ಕಡಿಮೆ ಬೆಲೆಯ ಟ್ರ್ಯಾಕ್ಟರ್‌!: ಸದ್ಯ ಕೃಷಿ ತಂಡದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಹೈಬ್ರಿಡ್‌ ಟ್ರ್ಯಾಕ್ಟರ್‌ಗೆ ಕೇವಲ 1.50 ಲಕ್ಷ ರೂ. ವೆಚ್ಚವಾಗಿದೆ. ಕೇವಲ ಒಂದು ಟ್ರ್ಯಾಕ್ಟರ್‌ ಮಾತ್ರ ತಯಾರಿಕೆ ಮಾಡಿದರಿಂದಾಗಿ ಹೆಚ್ಚಿನ ಮೊತ್ತವಾಗಿದ್ದು, ಹೆಚ್ಚಿನ ಬೇಡಿಕೆಗೆ ಬಂದರೆ ಟ್ರ್ಯಾಕ್ಟರ್‌ ಬೆಲೆ ಇನ್ನು ಕಡಿಮೆಯಾಗಲಿದೆ. ಅದರಂತೆ ಸಣ್ಣ ರೈತರಿಗೆ ಇದು ಹೆಚ್ಚು ಅನುಕೂಲವಾಗಲಿದ್ದು, ಅತ್ಯಂತ ಕಡಿಮೆ ದರದಲ್ಲಿ ರೈತರಿಗೆ ಟ್ರ್ಯಾಕ್ಟರ್‌ ದೊರೆಯಲಿದೆ ಎಂದು ತಂಡದ ವಿದ್ಯಾರ್ಥಿಗಳು ಮಾಹಿತಿ ನೀಡಿದರು. 

ಈವರೆಗೆ ಯಾವುದೇ ಸಂಸ್ಥೆಯಿಂದ ವಿದ್ಯುತ್‌ ಚಾಲಿತ ಟ್ರ್ಯಾಕ್ಟರ್‌ ಮಾರುಕಟ್ಟೆಗೆ ಬಂದಿಲ್ಲ. ನಮ್ಮ ತಂಡ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು, ಹಕ್ಕುಸ್ವಾಮ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಈ ಟ್ರ್ಯಾಕ್ಟರ್‌ ಪರಿಸರ ಸ್ನೇಹಿಯಾಗಿರುವುದರಿಂದ ಹೊಗೆ ಹಾಗೂ ಇಂಗಾಲದ ಡೈ ಆಕ್ಸೆ„ಡ್‌ ಸಮಸ್ಯೆಯಿರುವುದಿಲ್ಲ.
-ಶಂಶಾಂಕ್‌, ಕೃಷಿ ತಂಡದ ವಿದ್ಯಾರ್ಥಿ

ಬಹೋಪಯೋಗಿ ಕಲ್ವಿವೇಟರ್‌: ನೆಲಮಂಗಲದ ಮಾರುತಿ ಕೃಷಿ ಉದ್ಯೋಗ್‌ ಸಂಸ್ಥೆಯು ಟ್ರ್ಯಾಕ್ಟರ್‌, ಟಿಲ್ಲರ್‌ ಹಾಗೂ ಎತ್ತುಗಳ ಉಪಯೋಗವಿಲ್ಲದೆ ಹೊಲ ಉಳುವೆ ಮಾಡುವ ಬಹೋಪಯೋಗಿ ಕಲ್ವಿವೇಟರ್‌ನ್ನು ಕೃಷಿಮೇಳಕ್ಕೆ ತಂದಿದ್ದಾರೆ.

ಸಾವಯವ ಕೃಷಿ ಈ ಯಂತ್ರವು ಅತ್ಯಂತ ಉಪಯುಕ್ತವಾಗಿದ್ದು, ರೈತರು ಉಳುವೆ, ಕಳೆ ಕೀಳಲು, ಮಣ್ಣನ್ನು ಹುಸಿ ಮಾಡುವಿಕೆ, ರಾಸಾಯನಿಕ ಸಿಂಪಡನೆ, ಬಡು ಮಾಡುವುದು, ಬೀಜ ಬಿತ್ತನೆ, ಕೊಳವೆಬಾವಿ ಚಾಲನೆ ಸೇರಿದಂತೆ ಹತ್ತಾರು ರೀತಿಯಲ್ಲಿ ಬಳಸಬಹುದಾಗಿದೆ. ಈ ಯಂತ್ರದ ಬೆಲೆ 86 ಸಾವಿರ ರೂ. ಆಗಿದ್ದು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಯಂತ್ರ ಖರೀದಿಗೆ ಸಾಮಾನ್ಯರಿಗೆ ಶೇ.30ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶೇ.60ರಷ್ಟು ಸಬ್ಸಿಡಿ ದೊರೆಯಲಿದೆ.

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next