Advertisement

ಪಲ್ಸ್‌ ಪೋಲಿಯೋ ಮಾದರಿಯಲ್ಲಿ ನಿಗಾ

05:27 PM Apr 01, 2020 | Suhan S |

ವಿಜಯಪುರ: ಕೋವಿಡ್ 19 ನಿಯಂತ್ರಣಕ್ಕಾಗಿ ವಿದೇಶದಿಂದ ಮಾತ್ರವಲ್ಲ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬರುವವರ ಮೇಲೂ ತೀವ್ರ ನಿಗಾ ಇರಿಸಿದ್ದು, ಅಪಾಯಕಾರಿ ಪರಿಸರದಲ್ಲಿ ಪಲ್ಸ್‌ ಪೋಲಿಯೋ ಮಾದರಿಯಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಕೃಷಿ ಚಟುವಟಿಕೆಗೆ ಹಾಗೂ ತೋಟಗಾರಿಕೆ ಉತ್ಪನ್ನ ಮಾರಾಟಕ್ಕೆ ಲಾಕ್‌ ಡೌನ್‌ ನಿರ್ಬಂಧ ಇಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಹೇಳಿದರು.

Advertisement

ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೋಂ ಕ್ವಾರಂಟೈನ್‌ ಅವಧಿ ಮುಗಿದರೂ ಲಾಕ್‌ಡೌನ್‌ ಇರುವ ಕಾರಣ ಯಾರೂ ಮನೆಯಿಂದ ಹೊರಗೆ ಬರುವಂತಿಲ್ಲ. ಜಿಲ್ಲೆಗೆ ಈ ವರೆಗೆ ವಿದೇಶದಿಂದ ಬಂದಿದ್ದ 332 ಜನರಲ್ಲಿ 28 ಜನರು ಹೋಂ ಕ್ವಾರಂಟೈನ್‌ ಅವಧಿ ಮುಗಿಸಿದ್ದು, 241 ಜನರು ರಿಪೋರ್ಟಿಂಗ್‌ ಅವಧಿಯಲ್ಲಿದ್ದಾರೆ. ವಿದೇಶದಿಂದ ಬಂದಿರುವ 34 ಜನರು ಮಾತ್ರ ಇದೀಗ ಹೋಂ ಕ್ವಾರಂಟೈನ್‌ ನಿಗಾದಲ್ಲಿದ್ದಾರೆ. ಇದರ ಹೊರತಾಗಿ ಹೊರ ರಾಜ್ಯ-ಜಿಲ್ಲೆಗಳಿಂದ ಬಂದವರಿಗೂ ಹೋಂ ಕ್ವಾರಂಟೈನ್‌ ನಿಗಾ ಇರಿಸಲಾಗುತ್ತಿದೆ ಎಂದರು.

ಪರಿಣಾಮ ನಗರ-ಪಟ್ಟಣಗಳಲ್ಲಿ ಸಂಭಾವ್ಯ ಅಪಾಯಕಾರಿ ವಲಯಗಳನ್ನು ಗುರುತಿಸಿ ಪಲ್ಸ್‌ ಪೋಲಿಯೋ ಮಾದರಿಯಲ್ಲಿ ತೀವ್ರ ಎಚ್ಚರಿಕೆ ವಹಿಸುವ ಜತೆಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.ಲಾಕ್‌ಡೌನ್‌ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವ ಉದ್ದೇಶದಿಂದ ಯಾರೂ ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

ಜಿಲ್ಲೆಯ ರೈತರು ಕೃಷಿ ಚಟುವಟಿಕೆ ಮಾಡಲು, ತಾವು ಬೆಳೆದ ತರಕಾರಿ, ಹಣ್ಣು, ಹಾಲು ಮಾರಾಟಕ್ಕಾಗಲಿ, ಜನರು ಇಂತ ಅಗತ್ಯ ವಸ್ತುಗಳನ್ನು ಕೊಳ್ಳುವುದಕ್ಕಾಗಲಿ ನಿರ್ಬಂಧವಿಲ್ಲ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆ ಕಡ್ಡಾಯ. ಇದನ್ನು ಮಾರಾಟಗಾರರು, ಖರೀದಿಸುವವರು, ಗ್ರಾಹಕರು ಉಲ್ಲಂಘನೆ ಮಾಡುವಂತಿಲ್ಲ ಎಂದರು.

ರೈತರು ಕೂಡ ಉತ್ಪಾದಕರ ಗುಂಪು ಮಾಡಿಕೊಂಡು ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆ ಮುಂದಾದಲ್ಲಿ ಜಿಲ್ಲಾಡಳಿತ ಪರವಾನಿಗೆ ನೀಡಲಿದೆ. ತರಕಾರಿ ಖರೀದಿಗಾಗಿ ಗಲ್ಲಿಗಳಲ್ಲಿ 550 ತಳ್ಳುವ ಗಾಡಿಗಳ ಮೂಲಕ ಹಾಗೂ ಹಾಪ್‌ಕಾಮ್ಸ್‌ನ 9 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಕಾರಣ ಜನರು ದ್ವಿಚಕ್ರ ವಾಹನ ಬಳಸಿ ರಸ್ತೆಗಳಲ್ಲಿ ತಿರುಗುವುದು ಬೇಡ. ಇದನ್ನು ಮೀರಿಯೂ ಪೊಲೀಸ್‌ ಇಲಾಖೆಯಿಂದ ದ್ವಿಚಕ್ರ ವಾಹನ ವಶಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.

Advertisement

ಲಾಕ್‌ಡೌನ್‌ ಇದ್ದರೂ ಔಷಧ ಹಾಗೂ ಆರೋಗ್ಯ ಸಂಬಂಧಿ ವಸ್ತುಗಳ ಸರಬರಾಜಿಗೆ ಯಾವುದೇ ಸಮಸ್ಯೆ ಇಲ್ಲ. ಈ ವಿಷಯದಲ್ಲಿ ಕೆಲವರಲ್ಲಿ ಗೊಂದಲ ಉಂಟಾಗಿ ಸಾರಿಗೆ ಸೇವೆ ಪಡೆಯುವಲ್ಲಿ ಔಷಧಿ ವ್ಯಾಪಾರಿಗಳಿಗೆ ಸಮಸ್ಯೆಯಾಗಿದ್ದು, ಇದನ್ನು ಪರಿಹರಿಸಲಾಗುವುದು ಎಂದರು.

ದೇಶದಾದ್ಯಂತ ಲಾಕ್‌ಡೌನ್‌ ಮಾಡಿರುವ ಕಾರಣ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಮಸ್ಯೆಗೆ ಸಿಲುಕಿರುವ ಕಾರ್ಮಿಕರು, ಅಲೆಮಾರಿಗಳಿಗೆ ಜಿಲ್ಲಾಡಳಿತ ನಿರ್ಬಂಧ ಅವಧಿ ಮುಗಿಯುವ ವರೆಗೆ ಊಟ ಸಹಿತ ಪುನರ್ವಸತಿ ಕಲ್ಪಿಸಲಾಗುತ್ತಿದೆ.

ಮಂಗಳವಾರ ಸಂಜೆಯೊಳಗೆ ಜಿಲ್ಲೆಯ ಅಲೆಮಾರಿಗಳು, ಬೇರೆ ರಾಜ್ಯ-ಜಿಲ್ಲೆಗಳಿಂದ ಬಂದು ನೆಲೆಸಿರುವ ಹಾಗೂ ನಿರ್ಗತಿಕರನ್ನು ಗುರುತಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಲಾಕ್‌ಡೌನ್‌ ನಿರ್ಬಂಧದಿಂದ ಒಬ್ಬರೂ ಹಸಿವಿನಿಂದ ಬಳದಂತೆ ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಹೊರತಾಗಿಯೂ ಸಮಸ್ಯೆಯಲ್ಲಿ ಸಿಕ್ಕಿಕೊಂಡವರು ಕಂಡು ಬಂದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next