Advertisement

ತಾ.ಪಂ. ಸದಸ್ಯರನ್ನು  ಹುಡುಕಿಕೊಡಿ: ಗ್ರಾಮಸ್ಥರ ಆಗ್ರಹ

12:33 PM Jan 05, 2018 | Team Udayavani |

ಅಳಿಕೆ: ಅಳಿಕೆ-ಪೆರುವಾಯಿ ಗ್ರಾಮಕ್ಕೆ ಸಂಬಂಧಪಟ್ಟ ಬಂಟ್ವಾಳ ತಾ.ಪಂ. ಸದಸ್ಯರು ನಾಪತ್ತೆಯಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಯಾವುದೇ ಕಾರ್ಯಕ್ರಮ, ಗ್ರಾಮಸಭೆಗಳಿಗೆ ಹಾಜರಾಗುತ್ತಿಲ್ಲ. ಅವರನ್ನು ಹುಡುಕಿಕೊಡಿ ಎಂದು ಅಳಿಕೆ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ ಘಟನೆ ಸಂಭವಿಸಿದೆ.

Advertisement

ಅಳಿಕೆ ಗ್ರಾ.ಪಂ. ಸಭಾಭವನದಲ್ಲಿ ಗುರುವಾರ ದ್ವಿತೀಯ ಸುತ್ತಿನ ಗ್ರಾಮಸಭೆ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.  ಗ್ರಾಮಸ್ಥರಾದ ಬಾಲಕೃಷ್ಣ ಪೂಜಾರಿ ಮತ್ತು ಜಗತ್‌ ಶಾಂತಪಾಲ ಚಂದಾಡಿ ಮಾತನಾಡಿ, ತಾ.ಪಂ. ಸದಸ್ಯರು ನಾಪತ್ತೆಯಾಗಿದ್ದರೆ ಪತ್ತೆ ಮಾಡಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸುವುದು ಉತ್ತಮ ಎಂದರು. ಅಧ್ಯಕ್ಷ ಪದ್ಮನಾಭ ಪೂಜಾರಿ ಪ್ರತಿಕ್ರಿಯಿಸಿ, ತಾ.ಪಂ. ಸದಸ್ಯರ ಮನೆಗೆ ಸಿಬಂದಿ ತೆರಳಿ ಆಮಂತ್ರಣವನ್ನು ನೀಡಿದ್ದಾರೆ. ಆದರೆ ಸಹಿ ಪಡೆದುಕೊಳ್ಳಲು ಕೂಡಾ ಅವರು ಸಿಗುತ್ತಿಲ್ಲ. ಹೆಚ್ಚಿನ ಮಾಹಿತಿ ನಮಗಿಲ್ಲ ಎಂದು ಹೇಳಿದರು.

ಕೃಷಿಕರು ಅಲೆದಾಡುತ್ತಿದ್ದಾರೆ
ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಎಸ್‌. ಕೆ. ಸರಿಕಾರ್‌ ಮಾಹಿತಿ ನೀಡಿದರು. ಆಗ ಅಧ್ಯಕ್ಷರು ಮಾತನಾಡಿ, ಕೃಷಿಕರ ಬೇಡಿಕೆಗಳಿಗೆ ಕೃಷಿ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಗ್ರಾಮಸ್ಥರನ್ನು ತಾಲೂಕು ಕೇಂದ್ರಿ ಕರೆಸಿ ಅಲೆದಾಡಿಸುತ್ತಿದ್ದೀರಿ ಎಂಬ ಆರೋಪವಿದೆ ಎಂದರು. ಅಧಿಕಾರಿ ಉತ್ತರಿಸಿ, ಕೃಷಿಕರ ಬಗ್ಗೆ ಹೆಚ್ಚು ಜಾಗರೂಕನಾಗಿ ವ್ಯವಹರಿಸುತ್ತೇನೆ ಎಂದರು.

ಬಸ್‌ ನೆಕ್ಕಿತ್ತಪುಣಿಗೆ ಬರಲಿ
ಕೆಎಸ್‌ಆರ್‌ಟಿಸಿ ಬಸ್‌ ಅಳಿಕೆಯಿಂದ ಮುಂದುವರಿದು ನೆಕ್ಕಿತ್ತಪುಣಿಗೆ ಬರಲಿ ಮತ್ತು ಈ ಪರಿಸರದಲ್ಲಿ ಸರ್ವೆ ನಡೆಸಲಾದ ಬಸ್‌ ಟ್ರಿಪ್‌ಗ್ಳನ್ನು ಆರಂಭಿಸಬೇಕು. ಇದಕ್ಕೆ ಗ್ರಾಮಸಭೆ ನಿರ್ಣಯವನ್ನೂ ಕಳುಹಿಸಲಾಗಿದೆ. ಆದರೆ ಕ್ರಮ ಕೈಗೊಂಡಿಲ್ಲ. ಕೂಡಲೇ ಬಸ್‌ ಬರಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಿ
ಕೇರಳಕ್ಕೆ ಕೋಳಿ ಸಾಗಾಟ ಮಾಡುವ ಲಾರಿಗಳಲ್ಲಿರುವ ತ್ಯಾಜ್ಯವನ್ನು ದಾರಿ ಮಧ್ಯೆ ಅಲ್ಲಲ್ಲಿ ಎಸೆದು ತೆರಳುತ್ತಿದ್ದಾರೆ. ಪರಿಣಾಮವಾಗಿ ಊರು ಗಬ್ಬುನಾತ ಬೀರುತ್ತಿದೆ ಎಂದು ಪೊಲೀಸರಲ್ಲಿ ದೂರಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜನಸ್ನೇಹಿ ಪೊಲೀಸ್‌ ಎಂಬ ಯೋಜನೆಯಲ್ಲಿ ಬೀಟ್‌ ಸಭೆ ಆಯೋಜಿಸಲಾಗಿದ್ದು, ಕಳೆದ ನಾಲ್ಕು ತಿಂಗಳಿಂದ ಇಲ್ಲಿ ಏನೂ ನಡೆಯುತ್ತಿಲ್ಲ. ಗ್ರಾಮದಲ್ಲಿ ಕಳ್ಳತನ ಪ್ರಕರಣಗಳೂ ಹೆಚ್ಚಾಗಿವೆ ಎಂದು ಗ್ರಾಮಸ್ಥರು ಹಾಗೂ ಅಧ್ಯಕ್ಷರು ಆಗ್ರಹಿಸಿದರು.

Advertisement

ಅಂಗನವಾಡಿ ದುರಸ್ತಿ ಪೂರ್ತಿಯಾಗಲಿ
ಎರುಂಬು ಅಂಗನವಾಡಿ ಕಟ್ಟಡದ ಮಾಡು ಸರಿಯಿಲ್ಲ. ಮಕ್ಕಳು, ಕಾರ್ಯಕರ್ತೆಯರು ಅಪಾಯದ ಸನ್ನಿವೇಶವನ್ನು
ಎದುರಿಸುತ್ತಿದ್ದಾರೆ. ಕಾಮಗಾರಿ ಸರಿಯಿಲ್ಲ. ಅದನ್ನು ಸರಿಪಡಿಸ ಬೇಕು ಎಂದು ಬಾಲಕೃಷ್ಣ ಪೂಜಾರಿ ಆಗ್ರಹಿಸಿದರು.
ಅದನ್ನು ಸರಿಪಡಿಸುತ್ತೇವೆ ಎಂದು ಜಿ.ಪಂ. ಎಂಜಿನಿಯರ್‌ ಅಜಿತ್‌ ಭರವಸೆ ನೀಡಿದರು.

ಮೆಸ್ಕಾಂ ಉಕ್ಕುಡ ಶಾಖಾಧಿಕಾರಿ ಆನಂದ್‌ ಅವರು ಮಾತನಾಡಲು ಆರಂಭಿಸಿದಾಗ ಗ್ರಾಮಸ್ಥರು ತಂತಿ
ಬದಲಾಯಿಸಲು ಕಳೆದ ಗ್ರಾಮ ಸಭೆಯಲ್ಲಿ ಆಗ್ರಹಿಸಿದ್ದೇವೆ. ಇನ್ನೂ ಸರಿಯಾಗಲಿಲ್ಲ. ಗ್ರಾಮದಲ್ಲಿ ಪ್ರತಿದಿನವೂ ವಿದ್ಯುತ್‌ ಕಣ್ಣಾಮುಚ್ಚಾಲೆಯಾಡುತ್ತಿದೆ ಎಂದು ದೂರಿದರು.

ಜಿ.ಪಂ. ಸದಸ್ಯೆ ಜಯಶ್ರೀ ಕೋಡಂದೂರು, ಅಳಿಕೆ ಗ್ರಾ.ಪಂ. ಉಪಾಧ್ಯಕ್ಷೆ ಸೆಲ್ವಿನ್‌ ಡಿ’ಸೋಜಾ, ಹಿರಿಯ ಪಶುವೈದ್ಯ ಪರೀಕ್ಷಕ ಕಾಶಿಮಠ ಈಶ್ವರ ಭಟ್‌, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಜಯಪ್ರಕಾಶ್‌ ಕೆ.ಕೆ.,
ಕಂದಾಯ ಇಲಾಖೆಯ ಗ್ರಾಮಕರಣಿಕ ಪ್ರಕಾಶ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲೋಲಾಕ್ಷಿ
ಮಾಹಿತಿ ನೀಡಿದರು. ಮಾರ್ಗದರ್ಶಿ ಅಧಿಕಾರಿಯಾಗಿ ಬಂಟ್ವಾಳ ಶಿಕ್ಷಣ ಇಲಾಖೆಯ ಶ್ರೀಕಾಂತ್‌ ಭಾಗವಹಿಸಿದ್ದರು.

ಗ್ರಾ.ಪಂ. ಸದಸ್ಯರಾದ ಮೋನಪ್ಪ ಎರುಂಬು, ಜಯಂತಿ, ಸರೋಜಿನಿ, ಮುಕಾಂಬಿಕಾ ಜಿ. ಭಟ್‌, ಸುಧಾಕರ ಮಡಿಯಾಲ, ಗಿರಿಜಾ, ಸರಸ್ವತಿ, ರವೀಶ, ಸದಾಶಿವ ಶೆಟ್ಟಿ ಮಡಿಯಾಲ, ಅಬ್ದುಲ್‌ ರಹಿಮಾನ್‌ ಮತ್ತು ಪಿಡಿಒ ಜಿನ್ನಪ್ಪ ಗೌಡ ಜಿ. ಉಪಸ್ಥಿತರಿದ್ದರು.

ಪಡಿತರ ಚೀಟಿ ಸಿಕ್ಕಿಲ್ಲ: ಗ್ರಾಮಸ್ಥರ ಅಳಲು
ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ 1 ವರ್ಷ ಕಳೆದರೂ ಪಡಿತರ ಚೀಟಿ ಮನೆಗೆ ಬರಲಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಆಗ ಉತ್ತರಿಸಲು ಆಹಾರ ಇಲಾಖೆ ಅಧಿಕಾರಿ ಹಾಜರಿರಲಿಲ್ಲ. ಅಧಿಕಾರಿ ಬರಬೇಕೆಂದು ಸ್ಥಳೀಯರು ಆಗ್ರಹಿಸಿದರು. ಬಳಿಕ ಆಗಮಿಸಿದ ಅಧಿಕಾರಿ ವಾಸು ಶೆಟ್ಟಿ, 2017ರ ಫೆಬ್ರವರಿ ಬಳಿಕದ ಜೂನ್‌ ವರೆಗಿನ ಪಡಿತರ ಚೀಟಿಯನ್ನು ತನಿಖೆ
ಮಾಡಿ ವಿತರಿಸಲಾಗಿದೆ. ಜುಲೈ ಬಳಿಕದ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ಸರ್ವರ್‌ ಸಮಸ್ಯೆಯಿದೆ. ಪಡಿತರ ಚೀಟಿ ಸಿಗದವರಿಗೆ ಇನ್ನೊಂದು ವಾರದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಪಡಿತರ ಚೀಟಿದಾರರಿಗೆ ಅಕ್ಕಿ, ತೊಗರಿಬೇಳೆ ನೀಡಲಾಗುತ್ತಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಗ್ಯಾಸ್‌ ಇದ್ದವರಿಗೂ 1 ಲೀ. ಸೀಮೆಎಣ್ಣೆ ಸಿಗಲಿದೆ. ಅಂತ್ಯೋದಯ ಕಾರ್ಡ್‌ ವ್ಯವಸ್ಥೆಯನ್ನೂ ಸರಿಪಡಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next