Advertisement

ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್‌ಗೆ ಭಾರೀ ದಂಡ !

05:09 AM Mar 02, 2019 | Team Udayavani |

ಮಹಾನಗರ : ಇನ್ನು ಮುಂದೆ ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆ ಮಾಡಿದರೆ ಜೋಕೆ! ರಸ್ತೆ ಬದಿ ನೋ ಪಾರ್ಕಿಂಗ್‌ ಸ್ಥಳದಲ್ಲಿ ಮತ್ತು ಪಾರ್ಕಿಂಗ್‌ ಜಾಗದಲ್ಲಿಯೂ ಅನಧಿಕೃತವಾಗಿ ನಿಲ್ಲಿಸುವ ವಾಹನಗಳನ್ನು ಎತ್ತಿ ಕೊಂಡೊಯ್ಯುವ ಟೋಯಿಂಗ್‌ ವಾಹನ ಮಂಗಳೂರಿನ ಟ್ರಾಫಿಕ್‌ ಪೊಲೀಸರ ಕೈಸೇರಿದ್ದು, ಮಾ. 2ರಿಂದ ಅದು ಕಾರ್ಯಾಚರಣೆ ಮಾಡಲಿದೆ.

Advertisement

ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ನಾಲ್ಕು ಟ್ರಾಫಿಕ್‌ ಪೊಲೀಸ್‌ ಠಾಣೆಗಳಿಗೆ (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ) ತಲಾ ಒಂದು ಟೋಯಿಂಗ್‌ ವಾಹನ ಹೊಂದುವ ಬಗ್ಗೆ ಒಟ್ಟು 4 ಟೋಯಿಂಗ್‌ ವಾಹನಗಳಿಗೆ ಟೆಂಡರ್‌ ಆಹ್ವಾನಿಸಲಾಗಿತ್ತು. ಇದೀಗ ಒಂದು ಟೋಯಿಂಗ್‌ ವಾಹನ ಬಂದಿದೆ. ಹೊರ ಗುತ್ತಿಗೆ ಆಧಾರದಲ್ಲಿ ಇದು ಕಾರ್ಯ ನಿರ್ವಹಿಸಲಿದೆ.

ರಸ್ತೆ ಬದಿ ಎಲ್ಲೆಂದರಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡುವ ವಾಹನಗಳನ್ನು ಈ ಟೋಯಿಂಗ್‌ ವಾಹನದಲ್ಲಿ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ಕೊಂಡೊಯ್ಯಲಾಗುವುದು. ವಾಹನ ಮಾಲಕ/ ಚಾಲಕರು ನಿಗದಿತ ದಂಡ ಶುಲ್ಕ ಪಾವತಿಸಿ ವಾಹನವನ್ನು ಬಿಡಿಸಿಕೊಂಡು ಬರಬೇಕಾಗುತ್ತದೆ. ಮಂಗಳೂರು ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಅವರು ಶುಕ್ರವಾರ ಫೋನ್‌ ಇನ್‌ ಕಾರ್ಯಕ್ರಮದ ಬಳಿಕ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದರು. 

ದಂಡ ಶುಲ್ಕ 
ಭಾರೀ ವಾಹನಗಳಿಗೆ 1,600 ರೂ
ಮಧ್ಯಮ ವಾಹನಗಳಿಗೆ 1,350 ರೂ. 
ಲಘು ವಾಹನಗಳಿಗೆ 1,100 ರೂ
ದ್ವಿಚಕ್ರ ವಾಹನಗಳಿಗೆ 750 ರೂ

ಜಿಪಿಎಸ್‌ ವ್ಯವಸ್ಥೆ 
ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ‘ಸಾಗರ್‌’ ವಾಹನಗಳ ಚಲವನವಲನವನ್ನು ಪೊಲೀಸ್‌ ಕಮಿಷನರ್‌ ಅವರು ತಮ್ಮ ಚೇಂಬರ್‌ನಲ್ಲಿಯೇ ಕುಳಿತು ಟ್ರ್ಯಾಕ್‌ ಮಾಡಲು ಅನುಕೂಲವಾಗುವಂತೆ ಜಿಪಿಎಸ್‌ ನ್ನು ಕಮಿಷನರ್‌ ಚೇಂಬರ್‌ನಲ್ಲಿ ಅಳವಡಿಸಲಾಗಿದೆ. ಕಮಿಷನರೆಟ್‌ ವ್ಯಾಪ್ತಿಯಲ್ಲಿ 25 ‘ಸಾಗರ್‌’ ವಾಹನಗಳಿದ್ದು, ಅವುಗಳು ಎಲ್ಲೆಲ್ಲಿ ಕಾರ್ಯ ನಿರ್ವಹಿಸುತ್ತವೆ ಎನ್ನುವುದರ ಮಾಹಿತಿ ಈ ಜಿಪಿಎಸ್‌ನಲ್ಲಿ ಲಭ್ಯವಿದೆ. ತುರ್ತು ಸಂದರ್ಭಗಳಲ್ಲಿ ವಾಹನ ಚಾಲಕರಿಗೆ ಸೂಕ್ತ ನಿರ್ದೇಶನವನ್ನು ನೀಡಲು ಕೂಡ ಈ ವ್ಯವಸ್ಥೆಯಿಂದ ಸುಲಭ ಸಾಧ್ಯವಾಗಲಿದೆ ಎಂದು ಕಮಿಷನರ್‌ ಸಂದೀಪ್‌ ಪಾಟೀಲ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next