ನವ ದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿ ಮಾತ್ರವಲ್ಲದೇ ನೀರೂ ಮಲೀನವಾಗುತ್ತಿದ್ದು, ಯಮುನಾ ನದಿಯ ಮೇಲ್ಮೈಯಲ್ಲಿ ವಿಷಕಾರಿ ನೊರೆ ತೇಲುತ್ತಿದೆ.
ಶನಿವಾರ ದೆಹಲಿಯ ಕಾಳಿಂದಿ ಕುಂಜ್ ಪ್ರದೇಶದಲ್ಲಿ ಯಮುನಾ ನದಿಯಲ್ಲಿ ಮಾಲಿನ್ಯಕಾರಕಗಳ ದಪ್ಪ ಪದರದಿಂದ ಆವೃತವಾದ ವಿಷಕಾರಿ ನೊರೆ ಕಂಡು ಬಂದಿದೆ. ನೊರೆ ಕೈಗಾರಿಕಾ ತ್ಯಾಜ್ಯಗಳಿಂದಾಗಿ ಉಂಟಾಗಿದೆ.
ಡಿಟರ್ಜೆಂಟ್‌ಗಳು, ಸಾಬೂನುಗಳು ಸೇರಿದಂತೆ ಕೈಗಾರಿಕಾ ಮಾಲಿನ್ಯಕಾರಕಗಳು ನೊರೆಗೆ ಕಾರಣವಾಗಿದ್ದು, ನೊರೆಯಲ್ಲಿ ಹೆಚ್ಚಿನ ಪ್ರಮಾಣದ ಫಾಸ್ಫೇಟ್ ಅಂಶ ಅಡಕವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ದುರಂತವೆಂದರೆ ಯಮುನಾ ನದಿಯು ವಿಶ್ವದ ಅತ್ಯಂತ ಕಲುಷಿತ ನದಿಗಳಲ್ಲಿ ಒಂದಾಗಿದೆ, ಕೈಗಾರಿಕಾ ತ್ಯಾಜ್ಯಗಳನ್ನು ಎಸೆಯುವುದು ಮತ್ತು ಹೆಚ್ಚಿನ ಸಾಂದ್ರತೆಯ ಜನಸಂಖ್ಯೆ ಇದಕ್ಕೆ ಕಾರಣವಾಗಿದೆ. ನದಿಯ ಅತಿ ಹೆಚ್ಚು ಕಲುಷಿತ ಪ್ರದೇಶವು ದೆಹಲಿಯ ವಜೀರಾಬಾದ್ ಮತ್ತು ಓಖ್ಲಾ ನಡುವೆ ಇದೆ, ಇದು ನದಿಯ ಉದ್ದದ ಕೇವಲ 2% ನಷ್ಟು, ಒಟ್ಟು ಮಾಲಿನ್ಯದ ತೂಕದ 76% ಇದೇ ಪ್ರದೇಶದಲ್ಲಿ ಆಗುತ್ತಿದೆ.