Advertisement

ಪಟ್ಟಣ ಪಂಚಾಯತ್‌ ಪೌರ ಕಾರ್ಮಿಕರ ಗೋಳು ಕೇಳ್ಳೋರಿಲ್ಲ

05:24 PM Apr 09, 2018 | Team Udayavani |

ಮೊಳಕಾಲ್ಮೂರು: ಪಟ್ಟಣದ ಸ್ವತ್ಛತಾ ಕಾರ್ಯದಲ್ಲಿ ಕಳೆದ 15-20 ವರ್ಷಗಳಿಂದ ತೊಡಗಿಸಿಕೊಂಡಿರುವ ಪಟ್ಟಣ ಪಂಚಾಯತ್‌ನ 15ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಕಳೆದ ಹತ್ತು ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಪೌರ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗಿದೆ.

Advertisement

ಈ ಹಿಂದೆ ಪಪಂ ಕಾಯಂ ಪೌರ ಕಾರ್ಮಿಕರು ನಿವೃತ್ತಿ ಹೊಂದಿದ್ದರಿಂದ ಜನಸಂಖ್ಯೆಗನುಗುಣವಾಗಿ ಖಾಲಿ ಹುದ್ದೆಗಳಿಗೆ ಪಪಂನ ಅಂದಿನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಬಡ ಕೂಲಿ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರು,
ಚಾಲಕರು ಮತ್ತು ನೀರಗಂಟಿಗಳ ಹುದ್ದೆಗೆ ನೇಮಕ ಮಾಡಿಕೊಂಡಿದ್ದರು. ಈ ಎಲ್ಲಾ ನೌಕರರಿಗೂ ಪಪಂ ಅನುಮೋದನೆ ಪಡೆದು
ಪಪಂ ಮತ್ತು ಬೇರೆ ಅನುದಾನದಲ್ಲಿ ವೇತನ ನೀಡಲಾಗುತ್ತಿತ್ತು. ಆದರೆ ಈಗಿನ ಆಡಳಿತ ಮಂಡಳಿ ವೇತನ ನೀಡದೇ ಇರುವುದರಿಂದ
ಪಪಂ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಪಂನಲ್ಲಿ ಕೇವಲ ನಾಲ್ಕು ಪೌರ ಕಾರ್ಮಿಕರು ಮಾತ್ರ ಕಾಯಂಗೊಂಡವರಾಗಿದ್ದಾರೆ.

ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರು ಸ್ವತ್ಛತೆ ಮತ್ತು ನೀರು ಸರಬರಾಜು ಕಾರ್ಯ ಮಾಡುತ್ತಿದ್ದಾರೆ. ಪಪಂನಲ್ಲಿ ಆದಾಯವಿಲ್ಲದ
ಕಾರಣ ಕಂದಾಯ ಬಾಕಿ ವಸೂಲಾತಿ ಆದಲ್ಲಿ ವೇತನ ನೀಡಲಾಗುವುದೆಂದು ಸಬೂಬು ಹೇಳಿ ಕೆಲಸ ಮಾಡಿಸಲಾಗುತ್ತಿದೆ. ಒತ್ತಡ ಹೆಚ್ಚಾದಾಗ ಎಸ್‌.ಎಫ್‌.ಸಿ ಯೋಜನೆಯ ಅನುದಾನದ ಬಡ್ಡಿ ಹಣದಲ್ಲಿ ವೇತನ ನೀಡಲಾಗುವುದೆಂದು ಸಬೂಬು ಹೇಳಲಾಯಿತು. ಪಪಂ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳ ಸಮನ್ವಯದ ಕೊರತೆಯಿಂದ ಇದುವರೆಗೂ ವೇತನ ನೀಡದೆ ಸತಾಯಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

 15-20 ವರ್ಷಗಳಿಂದಲೂ ಕೆಲಸ ಮಾಡಿದ ಪೌರ ಕಾರ್ಮಿಕರನ್ನು ನೀವ್ಯಾರೂ ನಮಗೆ ಸಂಬಂಧವೇ ಇಲ್ಲ, ನಿಮ್ಮನ್ನು ಯಾರು ಕೆಲಸಕ್ಕೆ ತೆಗೆದುಕೊಂಡಿದ್ದಾರೆಯೋ ಅವರನ್ನೇ ಕೇಳಿ. ಇಲ್ಲವೇ ಜಿಲ್ಲಾಧಿಕಾರಿಯವರಿಂದ ಅನುಮೋದನೆ ದೊರೆತರೆ ನಿಯಮಾನುಸಾರ
ವೇತನ ನೀಡಲಾಗುವುದೆಂದು ಹೇಳುತ್ತಾ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಕೆಲವು ಪೌರ
ಕಾರ್ಮಿಕರನ್ನು ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಇನ್ನುಳಿದ ಪೌರ ಕಾರ್ಮಿಕರು ಮತ್ತು ನೀರಗಂಟಿಗಳಿಗೆ
ವೇತನವೂ ಇಲ್ಲ, ಉದ್ಯೋಗವೂ ಇಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಜಿಲ್ಲಾ ಧಿಕಾರಿಗಳಿಂದ ಅನುಮೋದನೆ ಪಡೆಯದೇ ಇರುವುದು ಸಮಸ್ಯೆಗೆ ಮೂಲ ಕಾರಣ. ವೇತನ ನೀಡದ ಕಾರಣ ಪೌರ ಕಾರ್ಮಿಕರ ಮಕ್ಕಳ ಶಿಕ್ಷಣ ಮತ್ತು ಜೀವನ ನಿರ್ವಹಣೆಗೆ ತೊಂದರೆಯಾಗಿದೆ.

Advertisement

ಆದ್ದರಿಂದ ಪಪಂ ಅಧ್ಯಕ್ಷರು, ಉಪಾಧ್ಯಕ್ಷರು ,ಸದಸ್ಯರು ಮತ್ತು ಮುಖ್ಯಾಧಿಕಾರಿಗಳು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡುಬಾಕಿ ವೇತನ ಬಿಡುಗಡೆ ಮಾಡಿಸಬೇಕಿದೆ. ಜಿಲ್ಲಾಧಿಕಾರಿಯವರ ಬಳಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಮುಂದಾಗಬೇಕಿದೆ.

ಪೌರ ಕಾರ್ಮಿಕರು ಮತ್ತು ನೀರಗಂಟಿಗಳ ನೇಮಕದ ಪ್ರಕ್ರಿಯೆ ರಾಜ್ಯ ಮಟ್ಟದ  ಸಮಸ್ಯೆಯಾಗಿದೆ. ಪೌರಾಡಳಿತ ಇಲಾಖೆ ನಿಯಮದ ಅನ್ವಯ ಇದುವರೆಗೆ ಕೆಲಸ ಮಾಡುತ್ತಿರುವ  ಎಲ್ಲರಿಗೂ ನ್ಯಾಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪಪಂ ಸದಸ್ಯರೊಂದಿಗೆ  ಚರ್ಚಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ.
ಜಿ. ಪ್ರಕಾಶ್‌, ಅಧ್ಯಕ್ಷರು, ಪಪಂ ಅಧ್ಯಕ್ಷರು.

ಕಾಯಂ ನೌಕರರನ್ನು ಹೊರತುಪಡಿಸಿ ಹೊರಗುತ್ತಿಗೆ, ದಿನಗೂಲಿ ಆಧಾರದ ಮೇಲೆ ನೇಮಕಗೊಂಡಿರುವ ಪೌರ ಕಾರ್ಮಿಕರನ್ನು ಸರ್ಕಾರದ ಮಟ್ಟದಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಜಿಲ್ಲಾಧಿಕಾರಿಯವರೇ ನೇಮಕಾತಿ ಪ್ರಕ್ರಿಯೆ ನಡೆಸಲಿದ್ದಾರೆ. 
ಎಸ್‌. ರುಕ್ಮಿಣಿ,ಪಪಂ ಮುಖ್ಯಾಧಿಕಾರಿ.

ಎಸ್‌. ರಾಜಶೇಖರ

Advertisement

Udayavani is now on Telegram. Click here to join our channel and stay updated with the latest news.

Next