Advertisement

ತಿಂಗಳೊಳಗೆ ಆರು ಲಕ್ಷ  ರೂ. ದಂಡ ವಸೂಲಿ !

11:39 AM Mar 27, 2019 | Naveen |
ಮಹಾನಗರ : ನಗರದಲ್ಲಿ ಸಂಚಾರ ಪೊಲೀಸರು, ನೋ ಪಾರ್ಕಿಂಗ್‌ ಜಾಗದಲ್ಲಿ ವಾಹನ ನಿಲ್ಲಿಸುತ್ತಿರುವುದರ ವಿರುದ್ಧ ಟೋಯಿಂಗ್‌ ಮೂಲಕ ದಂಡ ವಿಧಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಮೂರು ವಾರ ಕಳೆದಿದ್ದು, ಇಷ್ಟು ಅವಧಿಯಲ್ಲಿ ಬರೋಬ್ಬರಿ ಆರು ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ನಗರದಲ್ಲಿ ನೋ ಪಾರ್ಕಿಂಗ್‌ ಸಮಸ್ಯೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಉದ್ದೇಶದಿಂದ ಮಂಗಳೂರು ಟ್ರಾಫಿಕ್‌ ಪೊಲೀಸರು ರಸ್ತೆ ಬದಿ, ನೋ ಪಾರ್ಕಿಂಗ್‌ ಸ್ಥಳದಲ್ಲಿ ಮತ್ತು ಪಾರ್ಕಿಂಗ್‌ ಜಾಗದಲ್ಲಿಯೂ ಅನಧಿಕೃತವಾಗಿ ನಿಲ್ಲಿಸುವ ವಾಹನಗಳನ್ನು ಎತ್ತಿ ಕೊಂಡೊಯ್ಯುವ ಟೋಯಿಂಗ್‌ ವಾಹನ ವ್ಯವಸ್ಥೆ ಜಾರಿಗೊಳಿಸಿದ್ದರು. ಇದು ಮಾ. 2ರಿಂದ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದ್ದು, ಕಳೆದ ಮೂರು ವಾರದಲ್ಲಿ ಒಟ್ಟು 5,99600 ಲಕ್ಷ ರೂ. ದಂಡ ವಸೂಲಿ ಮಾಡಿರುವುದು ಗಮನಾರ್ಹ.
ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ನಾಲ್ಕು ಟ್ರಾಫಿಕ್‌ ಪೊಲೀಸ್‌ ಠಾಣೆಗಳಿಗೆ (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ) ತಲಾ ಒಂದು ಟೋಯಿಂಗ್‌ ವಾಹನ ಹೊಂದುವ ಬಗ್ಗೆ ಒಟ್ಟು 4 ಟೋಯಿಂಗ್‌ ವಾಹನಗಳಿಗೆ ಟೆಂಡರ್‌ ಆಹ್ವಾನಿಸಲಾಗಿತ್ತು. ಈಗ, ಒಂದು ಟೋಯಿಂಗ್‌ ವಾಹನ ನಗರದಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ.
ಕಾರ್ಯಾಚರಣೆ ಹೇಗೆ?
ದಿನದಿಂದ ದಿನಕ್ಕೆ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಟ್ರಾಫಿಕ್‌ ಹಾಗೂ ಪಾರ್ಕಿಂಗ್‌ ಸಮಸ್ಯೆ ಉದ್ಭವಿಸುತ್ತಿದೆ. ಇದನ್ನು ಹತೋಟಿಗೆ ತರಲು ಟ್ರಾಫಿಕ್‌ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪ್ರತಿ ಬಾರಿಯೂ ವಾಹನ ಸವಾರರಿಗೆ ದಂಡ ಹಾಕಿದರೂ ದಂಡ ಪಾವತಿಸಿ ಸುಮ್ಮನಾಗುತ್ತಿದ್ದರು. ಇದರಿಂದ ಮತ್ತೆ ಅದೇ ಸಮಸ್ಯೆ ತಲೆದೋರಿತ್ತು. ಇದಕ್ಕಾಗಿ ಪೊಲೀಸರು ಟೋಯಿಂಗ್‌ ವಾಹನಗಳನ್ನು ಖರೀದಿಸುವ ಯೋಜನೆ ರೂಪಿಸಿದರು.
ರಸ್ತೆ ಬದಿ ಎಲ್ಲೆಂದರಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡುವ ವಾಹನಗಳನ್ನು ಈ ಟೋಯಿಂಗ್‌ ವಾಹನದ ಸಹಾಯದಿಂದ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ಕೊಂಡೊಯ್ಯಲಾಗುವುದು. ವಾಹನ ಮಾಲಕ/ ಚಾಲಕರು ನಿಗದಿತ ದಂಡ ಶುಲ್ಕ ಪಾವತಿಸಿ ವಾಹನವನ್ನು ಬಿಡಿಸಿಕೊಂಡು ಬರಬೇಕಾಗುತ್ತದೆ. ವಾಹನವನ್ನು ಕೊಂಡೊಯ್ಯುವುದರಿಂದ ವಾಹನ ಸವಾರರಿಗೆ ಸಮಸ್ಯೆಯ  ಗಂಭೀರತೆ ಅರ್ಥವಾಗಬಹುದು ಎಂಬ ಕಾರಣಕ್ಕೆ ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ.
ಸಾರ್ವಜನಿಕರು ಎಚ್ಚರ ವಹಿಸಿ
ನಗರದಲ್ಲಿ ಈಗ ಟೋಯಿಂಗ್‌ ಮೂಲಕ ನೋ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿ ಹೋಗುವ ವಾಹನಗಳನ್ನು ಕೊಂಡೊಯ್ದು, ಜತೆಗೆ ದಂಡವನ್ನು ಕೂಡ ಹಾಕಲಾಗುತ್ತಿದೆ.
ನಗರದಲ್ಲಿ ಟೋಯಿಂಗ್‌ ವ್ಯವಸ್ಥೆ ಜಾರಿಗೆ ಬಂದಿರುವುದು ಬಹಳಷ್ಟು ಮಂದಿಗೆ ಗೊತ್ತಾಗಿಲ್ಲ. ಈ ಕಾರಣಕ್ಕೆ, ತುರ್ತಾಗಿ ಅಂಗಡಿಗೆ ಅಥವಾ ಇನ್ಯಾವುದೋ ತುರ್ತು ಕಾರ್ಯಕ್ಕೆ ತಮ್ಮ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಕ್ಷಣ ಮಾತ್ರದಲ್ಲಿ ವಾಪಸ್‌ ಬಂದು ಬಿಡುತ್ತೇವೆ ಅಂದುಕೊಂಡು ಹೋಗಿ ಬರುವವರು ಈಗ ನೂರಾರು ರೂಪಾಯಿ ದಂಡ ಪಾವತಿಸಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಹೀಗಿರುವಾಗ, ನಗರವಾಸಿಗಳು ಇನ್ನು ಮುಂದೆಯಾದರೂ ಈ ಬಗ್ಗೆ ಎಚ್ಚರ ವಹಿಸಿ ನೋ ಪಾರ್ಕಿಂಗ್‌ ನಲ್ಲಿ ವಾಹನ ನಿಲ್ಲಿಸುವುದನ್ನು ತಪ್ಪಿಸುವುದು ಉತ್ತಮ. ಇಲ್ಲದೆ ಹೋದರೆ, ವಿನಾಕಾರಣ ಹೆಚ್ಚಿನ ಮೊತ್ತದ ದಂಡ ಪಾವತಿಸುವ ಮೂಲಕ ಹಲವು ಕಿರಿಕಿರಿ ಅನುಭವಿಸಬೇಕಾಗುತ್ತದೆ.
771 ಕೇಸ್‌ ದಾಖಲು
ಮಾ. 2ರಿಂದ ಮಾ. 24ರವರೆಗೆ ಒಟ್ಟು 5,99,600 ಲಕ್ಷ ರೂ. ದಂಡ ಹಾಕಲಾಗಿದ್ದು, ಅದರಲ್ಲಿ 710 ದ್ವಿಚಕ್ರ ವಾಹನ, 61 ಫೋರ್‌ ವೀಲ್ಹರ್‌ ಸಹಿತ ಒಟ್ಟು 771 ಕೇಸ್‌ ದಾಖಲಾಗಿದೆ. ಟೋಯಿಂಗ್‌ ವಾಹನ ಗುತ್ತಿಗೆ ಆಧಾರದಲ್ಲಿ ಕಾರ್ಯಾಚರಿಸುವುದರಿಂದ ಒಟ್ಟು ವಸೂಲಾದ ದಂಡದಲ್ಲಿ ಸರಕಾರಿ ಶುಲ್ಕ 3,38,350, ಖಾಸಗಿ ಶುಲ್ಕ 2,61,250 ಲಕ್ಷ ರೂ. ಸೇರಿ ಒಟ್ಟು 5,99,600 ರೂ. ದಂಡ ಹಾಕಲಾಗಿದೆ.
ದಂಡ ಶುಲ್ಕ 
ಭಾರೀ ವಾಹನಗಳಿಗೆ 1,600 ರೂ., ಮಧ್ಯಮ ವಾಹನ 1,350 ರೂ., ಲಘು ವಾಹನ 1,100 ರೂ. , ದ್ವಿಚಕ್ರ ವಾಹನ 750 ರೂ.
ನೋ ಪಾರ್ಕಿಂಗ್‌ ಹತೋಟಿಗೆ
ನಗರದ ವಿವಿಧ ಭಾಗಗಳಲ್ಲಿ ಅನಧಿಕೃತವಾಗಿ ಪಾರ್ಕಿಂಗ್‌ ಮಾಡುತ್ತಿದ್ದ ವಾಹನಗಳನ್ನು ಕೊಂಡೊಯ್ಯಲು ಟೋಯಿಂಗ್‌ ವಾಹನಗಳನ್ನು ಬಳಸಲಾಗುತ್ತಿದೆ. ಕೆಲವು ಭಾಗಗಳಲ್ಲಿ ಅನಧಿಕೃತ ಪಾರ್ಕಿಂಗ್‌ ಕಡಿಮೆಯಾಗಿದ್ದು, ಹತೋಟಿಗೆ ಬರಬಹುದು.
– ಉಮಾ ಪ್ರಶಾಂತ್‌, ಡಿಸಿಪಿ 
Advertisement

Udayavani is now on Telegram. Click here to join our channel and stay updated with the latest news.

Next