Advertisement
ಹೌದು, ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲಾಡಳಿ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ತಾಲೂಕಿನ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ಆಯೋಜಿಸಿರುವ ಮಾವು ಪ್ರದರ್ಶನ ಹಾಗೂ ಮಾರಾಟದ ವೇಳೆ ಬೆಟ್ಟಕ್ಕೆ ಹೆಜ್ಜೆ ಹಾಕಿದ್ದ ಪ್ರವಾಸಿಗರಿಗೆ ಜಿಲ್ಲೆಯಲ್ಲಿ ಬೆಳೆಯುವ ಹಣ್ಣುಗಳ ರಾಜ ಮಾವಿನ ತರಹೇವಾರಿ ಘಮಲು ಘಮಘಮಿಸಿ ಮೂಗಿಗೆ ಬಡಿಯುತ್ತಿತ್ತು.
Related Articles
Advertisement
ವಿಶೇಷ ಎಂದರೆ ಯಾವುದೇ ರಸಾಯನಿಕಗಳನ್ನು ಬಳಸಿ ಕೃತಕವಾಗಿ ಮಾಗಿಸಿದ ಹಣ್ಣುಗಳ ಮಾರಾಟಕ್ಕೆ ಇಲ್ಲಿ ಪ್ರವೇಶ ಇಲ್ಲ. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳನ್ನು ಮತ್ರ ತಂದು ಜಿಲ್ಲೆಯ ಮಾವು ಬೆಳೆಗಾರರು ಮಾರಾಟ ಮಾಡುತ್ತಿದ್ದಾರೆ.
ನೇರವಾಗಿ ಮಾರಾಟ ವ್ಯವಸ್ಥೆ: ಮಾವು ಮೇಳದಲ್ಲಿ ಇಷ್ಟೇ ಮಾವು ಮಾರಾಟ ಮಾಡಬೇಕೆಂಬ ಗುರಿ ಹೊಂದಿಲ್ಲ. ರೈತರಿಗೆ ನೇರವಾಗಿ ಮಾರಾಟ ವ್ಯವಸ್ಥೆ ಕಲ್ಪಿಸಬೇಕು. ಉತ್ತಮ ಬೆಲೆಯು ಕೈಗೆಟುಕಬೇಕೆಂಬ ಉದ್ದೇಶದಿಂದ ಈ ಮೇಳ ಪ್ರಾಯೋಗಿಕವಾಗಿ ಆಯೋಜಿಸಲಾಗಿದೆ. ಗ್ರಾಹಕರ ಸ್ಪಂದನೆ ನೋಡಿ ಪ್ರತಿ ವರ್ಷ ಆಯೋಜಿಸುವ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ ಮಾವು ಮೇಳದಲ್ಲಿ ಉದಯವಾಣಿಗೆ ತಿಳಿಸಿದರು.
ಮಾವು ಸಸಿಗಳ ವಿತರಣೆ, ಬೇಸಾಯ ಬಗ್ಗೆ ಪಾಠ: ಮಾವು ಮೇಳ ಕೇವಲ ಮಾವು ಮಾರಾಟಕ್ಕೆ ಸೀಮಿತವಾಗಿಲ್ಲ. ಮಾವು ಬೇಸಾಯದ ಬಗ್ಗೆ ಕುತೂಹಲ ಇರುವವರಿಗೆ ಅಥವಾ ಮಾವು ಬೆಳೆಯುವ ಆಸಕ್ತ ರೈತರಿಗೂ ಹಾಗೂ ಸಾರ್ವಜನಿಕರಿಗೆ ಇಲ್ಲಿ ಮಾಹಿತಿ ನೀಡಲಾಗುತ್ತಿದೆ.
ಮಾವಿನ ಸಸಿಗಳ ಖರೀದಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದ್ದು, ತೊಟಗಾರಿಕಾ ಇಲಾಖೆ ಅದಕ್ಕಾಗಿಯೇ ಮಳಿಗೆಯೊಂದನ್ನು ಸ್ಥಾಪಿಸಿ ಗ್ರಾಹಕರಿಗೆ ಬೇಕಾದ ತರಹೇವಾರಿ ಮಾವಿನ ಸಸಿಗಳ ಮಾರಾಟಕ್ಕೂ ಅವಕಾಶ ಕಲ್ಪಿಸಿದ್ದು, ಮೇಳದಲ್ಲಿ ಮಾವು ಬೆಳೆಯುವುದು ಹೇಗೆ, ಅದರ ಕೊಯ್ಲು, ಮಾರುಕಟ್ಟೆ ವ್ಯವಸ್ಥೆ ಮತ್ತಿತರ ಸಮಗ್ರ ವಿಷಯಗಳ ಬಗ್ಗೆ ತಜ್ಞರಿಂದ ಅರಿವು ಮೂಡಿಸಲಾಗುತ್ತಿದೆ.
ಮೇಳದಲ್ಲಿ ಜಿಪಂ ಸಿಇಒ ಗುರುದತ್ ಹೆಗಡೆ, ಎಸ್ಪಿ ಕೆ.ಸಂತೋಷ್ ಬಾಬು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ, ಸಹಾಯಕ ನಿರ್ದೇಶಕರಾದ ಅಂಜನ್, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಆನಂದ್, ಜೆ.ಎನ್ ರವಿಕುಮಾರ್, ಬಾಲಾಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಾವು ಬೆಳೆಗಾರರಿಗೆ ಕೈ ತುಂಬ ಕಾಸು: ಮಾವು ಮೇಳದಲ್ಲಿ ಮಾವು ಮಾರಾಟಕ್ಕೆ ಆಗಮಿಸಿರುವ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ರಸಪೂರಿ, ಮಲ್ಲಿಕಾ ಮಾವು ಕೆಜಿ 65 ರಿಂದ 70 ರೂ. ವರೆಗೂ ಮಾರಾಟಗೊಳ್ಳುತ್ತಿದ್ದರೆ ಮಲಗೋವಾ, ಬಾದಾಮಿ 70 ತಿಂದ 80 ರೂ.ಗೆ ಕೆಜಿ ಮಾರಾಟಗೊಳ್ಳುತ್ತಿವೆ. ಮಾವು ಮೇಳಕ್ಕೆ ಜಿಲ್ಲೆಯಿಂದ ರೈತರು ಆಗಮಿಸಿ ಮಾವು ಮಾರಾಟ ಮಾಡುತ್ತಿದ್ದಾರೆ.
ಇನ್ನೂ ಮಾವುನ್ನು ಬಳಸಿ ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ತಯಾರಿಸಿರುವ ವಿವಿಧ ಉತ್ಪನ್ನಗಳ ಮಾರಾಟಕ್ಕೂ ಕೂಡ ಇಲ್ಲಿ ವಿಶೇಷವಾಗಿ ಮಳಿಗೆ ಸ್ಥಾಪಿಸಲಾಗಿದೆ. ಮಾವು ಮೇಳಕ್ಕೆ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ವೀರಗಾಸೆ ನೃತ್ಯ ಆಯೋಜಿಸಲಾಗಿದೆ. ಮೊದಲ ದಿನ ಮಾವು ತಿನ್ನುವ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಮಾವು ಹಣ್ಣುಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ರಾಸಾಯನಿಕ ಮುಕ್ತ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ರೈತರಿಗೆ ನ್ಯಾಯ ಬೆಲೆ ದೊರಕಿಸಿ ಕೊಡುವ ಉದ್ದೇಶದಿಂದ ಮಾವಿನ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದರು.
ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಂದಿಬೆಟ್ಟಕ್ಕೆ ಪ್ರವಾಸಿಗರು ಹೆಚ್ಚಾಗಿ ಬರುವುದರಿಂದ ಮಾವು ಮಾರಾಟಕ್ಕೆ ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿ ಬೆಳೆಯಲಾಗುವ ಮಾವಿನ ಹಣ್ಣಿನ ರುಚಿಯನ್ನು ಗ್ರಾಹಕರಿಗೆ ಪರಿಚಯಿಸಿದಂತಾಗುತ್ತದೆ ಎಂದರು.
ಜಿಲ್ಲಾಡಳಿತ ಮಾವು ಮಾರಾಟ ಮೇಳ ಆಯೋಜಿಸಿರುವುದು ಸಂತಸ ತಂದಿದೆ. ಮೊದಲ ದಿನ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಮೇಳದಲ್ಲಿ ರೈತರೇ ನೇರವಾಗಿ ಗ್ರಾಹಕರಿಗೆ ಮಾವು ಮಾರಾಟ ಮಾಡುವುದರಿಂದ ಮಧ್ಯವರ್ತಿಗಳ ಹಾವಳಿ ಇಲ್ಲದೇ ಉತ್ತಮ ಬೆಲೆ ಕೈಗೆ ಸಿಗುತ್ತದೆ. -ಮುನೀಂದ್ರರೆಡ್ಡಿ, ಮಂಡಿಕಲ್ಲು, ಮಾವು ಬೆಳೆಗಾರ * ಕಾಗತಿ ನಾಗರಾಜಪ್ಪ