Advertisement

ಪ್ರವಾಸಿಗರ ನೆಚ್ಚಿನ ತಾಣ ಮಣ್ಣಪಳ್ಳ ಅವ್ಯವಸ್ಥೆಯ ಆಗರ !

10:33 PM Oct 29, 2020 | mahesh |

ಉಡುಪಿ: ಮಣಿಪಾಲದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾದ ಮಣ್ಣಪಳ್ಳ ಕೆರೆ ಸೂಕ್ತ ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ.  ರಜಾ ದಿನಗಳಲ್ಲಿ ಮಕ್ಕಳ ಜತೆಗೆ ಸಂತಸದ ಕ್ಷಣ ಕಳೆಯಲು, ನಿತ್ಯ ವಾಯು ವಿಹಾರಕ್ಕೆ ಹೋಗುವವರಿಗೆ ಮಣ್ಣಪಳ್ಳ
ನಿರಾಶೆ ತರುವುದು ಖಚಿತ. ಕಾರಣ ವೇನೆಂದರೆ ದೂರದಿಂದ ಮಾತ್ರ ಇದು ಅಂದವಾಗಿ ಕಾಣುತ್ತದೆ. ಒಳಗೆ ಪ್ರವೇಶಿಸಿ ದರೆ ಸಮಸ್ಯೆಗಳ ಸರಮಾಲೆಗಳು ಬಿಚ್ಚಿಕೊಳ್ಳುತ್ತವೆ.

Advertisement

ಸುತ್ತಲೂ ಕಳೆ ಗಿಡಗಳು
ಲಕ್ಷಾಂತರ ರೂ. ವೆಚ್ಚದಲ್ಲಿ ಸಿಮೆಂಟಿ ನಿಂದ ರಚಿತವಾದ ಸುಂದರ ಕಲಾಕೃತಿಗಳು ಕಳೆ ಗಿಡಗಳ ನಡುವೆ ಮರೆಯಾಗಿವೆ. ಕೆರೆ ಸುತ್ತಲೂ ನೆಡಲಾದ ಔಷಧ ಸಸ್ಯಗಳು ಹಾಗೂ ಬಲು ಅಪರೂಪದ ಸಸ್ಯ ವರ್ಗಗಳಲ್ಲಿ ಕೆಲವು ಸಸಿಗಳು ಕಣ್ಮರೆಯಾಗಿವೆ.

ಬೆಳಗದ ವಿದ್ಯುತ್‌ ದೀಪ
ಸಂಜೆ ವಾಯು ವಿಹಾರಕ್ಕಾಗಿ ನೂರಾರು ಜನರು ಬರುತ್ತಾರೆ. ಅವರಿಗೆ ಅನುಕೂಲ ವಾಗಲೆಂದು ಅಳವಡಿಸಲಾದ ವಿದ್ಯುತ್‌ ದೀಪಗಳು ಬೆಳಗುತ್ತಿಲ್ಲ. ಇದರಿಂದಾಗಿ ಕತ್ತಲೆಯಲ್ಲಿ ಹಿರಿಯರು, ಮಹಿಳೆಯರು ಕೆರೆ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಶೌಚಾಲಯ ಅವ್ಯವಸ್ಥೆ
ಮಣ್ಣಪಳ್ಳಕ್ಕೆ ಬರುವವರಿಗೆ ಅನುಕೂಲವಾಗುವಂತೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಪ್ರಸ್ತುತ ಇದರ ನಿರ್ವಹಣೆಯ ಕೊರತೆಯಿಂದ ಸ್ವತ್ಛತೆ ದೂರವಾಗಿದೆ. ಸಮರ್ಪಕ ನೀರು ಪೂರೈಕೆ ಇಲ್ಲದ ಹಿನ್ನೆಲೆಯಲ್ಲಿ ಗಬ್ಬು ನಾರುತ್ತಿದೆ.

ಪ್ರೇಮಿಗಳ ಅಸಭ್ಯ ವರ್ತನೆ!
ಆಯಕಟ್ಟಿನ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯಲು ಕಲ್ಲು ಬೆಂಚುಗಳನ್ನು ಇಡಲಾಗಿದೆ. ಈ ಪ್ರದೇಶದಲ್ಲಿ ಪ್ರೇಮಿಗಳು ಅಸಭ್ಯವಾಗಿ ವ‌ರ್ತಿಸುತ್ತಾರೆ. ಈ ರೀತಿಯ ವರ್ತನೆಯಿಂದ ಇಲ್ಲಿಗೆ ಆಗಮಿಸುವವರು ಮುಜುಗರಕ್ಕೀಡಾಗುತ್ತಿದ್ದಾರೆ ಎಂದು ವಾಯು ವಿಹಾರಕ್ಕಾಗಿ ಆಗಮಿಸಿದ ಸುಮತಿ ಅವರು ಹೇಳುತ್ತಾರೆ.

Advertisement

ನಿರ್ಮಿತಿ ಕೇಂದ್ರಕ್ಕೆ ನೀಡುವ ಚಿಂತನೆ
ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಇದರ ನಿರ್ವಹಣೆ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡುವ ಚಿಂತನೆ ಮಾಡಲಾಗಿದೆ. ಮುಂದಿನ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 1 ಕೋ.ರೂ. ವೆಚ್ಚದಲ್ಲಿ ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಚಿಂತನೆ ಇದೆ. -ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಉಡುಪಿ.

ವಿದ್ಯುತ್‌ ದೀಪ ಕೆಟ್ಟಿವೆ
ಮಣಿಪಾಲದಲ್ಲಿ ಹಸುರು ಹಾಗೂ ಹಕ್ಕಿಗಳಿರುವ ಪ್ರದೇಶವೆಂದರೆ ಅದು ಮಣ್ಣಪಳ್ಳ. ಇದರ ಸುತ್ತಮುತ್ತ ವಿದ್ಯುತ್‌ ದೀಪಗಳು ಉರಿಯುತ್ತಿಲ್ಲ. ಅದರ ದುರಸ್ತಿ ಕೆಲಸ ನಡೆಯುತ್ತಿಲ್ಲ. ಸಂಜೆ ಕತ್ತಲಾಗುತ್ತಿದ್ದಂತೆ ಇಲ್ಲಿ ವಾಕ್‌ ಮಾಡಲು ಭಯವಾಗುತ್ತಿದೆ.
-ಚಿತ್ರಾ ಶೇಖರ್‌, ಮಣಿಪಾಲ

ಬೇಡಿಕೆಗಳೇನು?
 ವಿದ್ಯುತ್‌ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದು.
 ಭದ್ರತೆ ದೃಷ್ಟಿಯಿಂದ ಸಿಸಿ ಕೆಮರಾ ಆಳವಡಿಕೆ.
 ಶೌಚಾಲಯಗಳ ಸ್ವತ್ಛತೆ ಕಾಪಾಡುವುದು.
 ಕೆರೆ ಸುತ್ತಲೂ ಬೆಳೆದು ನಿಂತ ಕಳೆ ಗಿಡಗಳನ್ನು ತೆಗೆಯುವುದು.
 ಅಂದಗೆಟ್ಟ ಶಿಲ್ಪಗಳಿಗೆ ಬಣ್ಣ ಬಳಿಯುವುದು

Advertisement

Udayavani is now on Telegram. Click here to join our channel and stay updated with the latest news.

Next