Advertisement

ಮಿನಿ ಸೌಧ’ಕ್ಕೆ ಪ್ರವಾಸಿ ಮಂದಿರ ಸ್ಥಳವೇ ಸೂಕ್ತ

12:00 PM Dec 31, 2019 | Suhan S |

ಕಮಲನಗರ: ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಿಸು ಸ್ಥಳ ಕುರಿತು ಡಾ| ಚನ್ನಬಸವ ಪಟ್ಟದ್ದೇವರ ಸಾರ್ವಜನಿಕ ಗ್ರಂಥಾಲಯದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

Advertisement

ಸಮಾಜ ಸೇವಕ ಗುರುನಾಥ ವಡ್ಡೆ ಮಾತನಾಡಿ, ಈ ಮೊದಲು ಮೂರ್‍ನಾಲ್ಕು ಸಲ ಪ್ರವಾಸಿ ಮಂದಿರದಲ್ಲಿ ಗ್ರಾಮದ ಸುತ್ತ-ಮುತ್ತಲಿನ ಜನರು ಸಭೆ ನಡೆಸಿ ಮಿನಿ ವಿಧಾನ ಸೌಧ ಕಟ್ಟಡಕ್ಕೆ ಪ್ರವಾಸಿ ಮಂದಿರದ ಸ್ಥಳವೇ ಸೂಕ್ತ ಎಂದು ತಿಳಿಸಿದ್ದಾರೆ. ಆದರೆ ಕೆಲ ಕಾಣದ ಕೈಗಳ ಒತ್ತಡಕ್ಕೆ ಮಣಿದು ಹೋರಂಡಿ ಗ್ರಾಮದ ಗೋಮಾಳದಲ್ಲಿ ನಿರ್ಮಿಸಲು ಜಿಲ್ಲಾಧಿಕಾರಿಗಳು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ಆ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಲು ಬಿಡುವುದಿಲ್ಲ. ಪ್ರಸಂಗ ಬಂದರೆ ಕಾನೂನು ಸಮರಕ್ಕೆ ಸಿದ್ಧ ಎಂದು ಗುಡುಗಿದರು.

ರೈತ ಮುಖಂಡ ವೈಜನಾಥ ವಡ್ಡೆ ಮಾತನಾಡಿ, ಪ್ರಭು ಚವ್ಹಾಣ ಅವರು ಪಶು ಸಂಗೋಪನಾ ಸಚಿವರಾದ ಮೇಲೆ, ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅಪಾರ ಕಾರ್ಯಕರ್ತರು, ಸಾರ್ವಜನಿಕರು, ಮಿನಿ ವಿಧಾನಸೌಧವನ್ನು ಪ್ರವಾಸಿ ಮಂದಿರದಲ್ಲೇ ನಿರ್ಮಿಸಬೇಕೆಂದು ಒತ್ತಾಯಿಸಿದಾಗ ಸಚಿವರು ಒಪ್ಪಿಗೆ ಸೂಚಿಸಿದ್ದರು. ಜೊತೆಗೆ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮುಖಾಂತರ ಮೌಖೀಕ ಆದೇಶ ಕೂಡ ನೀಡಿದ್ದರು. ಇದಕ್ಕೆ ಜಿಲ್ಲಾಧಿಕಾರಿಗಳು ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ ಎರಡು ತಿಂಗಳಾದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.

ರೈತ ಮುಖಂಡ ವಿಠಲರಾವ್‌ ಪಾಟೀಲ ಮಾತನಾಡಿ, ಈ ವಿಷಯದಲ್ಲಿ ಹಿಂದಿನಂತೆ ಕಾಣದ ಕೈಗಳ ಕೈವಾಡ ಇದೆ ಎಂಬ ಶಂಕೆ ಕಾಡುತ್ತಿದೆ. ಜ. 26ರ ವರೆಗೆ ಕೊಟ್ಟ ಮಾತು ಈಡೇರಿಸದಿದ್ದಲ್ಲಿ ಜ. 27ರಂದು ಔರಾದ ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ ಅವರ ಮುಂದಾಳತ್ವದಲ್ಲಿ ತಹಶೀಲ್ದಾರ್‌ ಕಚೇರಿಯ ಆವರಣದಲ್ಲಿ ಬೇಡಿಕೆ ಈಡೇರಿಸುವವರೆಗೆ ನಿರಂತರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರವಾಸಿ ಮಂದಿರದ ಸ್ಥಳ ಸುಮಾರು 3 ಎಕರೆ ಇದ್ದು, ಅದರ ಸುತ್ತ-ಮುತ್ತ ಅನಧಿ ಕೃತವಾಗಿ ಜಾಗ ಕಬಳಿಕೆ ಮಾಡಿಕೊಂಡಿದ್ದಾರೆ. ಆ ಸ್ಥಳ ತೆರವುಗೊಳಿಸಿದರೆ ಮಿನಿ ವಿಧಾನ ಸೌಧಕ್ಕೆ ಸಾಕಾಗುವಷ್ಟು ಸ್ಥಳಾವಕಾಶವಾಗುತ್ತದೆ ಎಂದು ಕಮಲನಗರ ರೈತ ಸಂಘದ ಅಧ್ಯಕ್ಷ ಪ್ರವೀಣ ಕುಲಕರ್ಣಿ ತಿಳಿಸಿದರು.

Advertisement

ಸುಶೀಲಕುಮಾರ ಘಾಗರೆ ಮಾತನಾಡಿ, ಪ್ರವಾಸಿ ಮಂದಿರದ ಸ್ಥಳ 54 ಗ್ರಾಮಸ್ಥರಿಗೆ ಅನುಕೂಲಕರ ಸ್ಥಳವಾಗಿದ್ದು, ಪಟ್ಟಣದ ಮಧ್ಯ ಭಾಗದಲ್ಲಿದೆ. ಈ ಸ್ಥಳದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣವಾದರೆ ಎಲ್ಲರಿಗೂ ಅನೂಕೂಲವಾಗುತ್ತದೆ ಎಂದು ಹೇಳಿದರು. ಬಳಿಕ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಪಟ್ಟಣದ ಪ್ರವಾಸಿ ಮಂದಿರವೇ ಸೂಕ್ತ ಎಂದು ಸಭೆಯಲ್ಲಿ ಎಲ್ಲರೂ ಒಮ್ಮತ ಸೂಚಿಸಿದರು.

ರೈತ ಸಂಘದ ಕಾರ್ಯದರ್ಶಿ ಪ್ರಕಾಶ ಬಾವಗೆ, ಉತ್ತಮರಾವ ಮಾನೆ, ವಿಠಲ ಪಾಟೀಲ, ಸಂಗಶೇಟ್ಟಿ ದಾನಾ, ನಾಗಶೆಟ್ಟಿ ನಂಜವಾಡ, ವಿಠಲರಾವ್‌ ಮೇತ್ರೆ, ರಮೇಶ ಮೇತ್ರೆ, ವೀರಭದ್ರ ಹಲಮಂಡಗೆ, ಮೋಹನರಾವ್‌ ಕಾಂಬಳೆ, ಪರಮೇಶ್ವರ ಪಾಂಚಾಲ, ಹಣಮಂತರಾವ್‌ ಪಾಟೀಲ, ಅಜಮೋದ್ದಿನ, ಶಿವರಾಜ ಪಾಟೀಲ, ಮನ್ಸೂರ, ಭೀಮರಾವ್‌ ಕಣಜೆ, ಶಿವಕುಮಾರ ಬಿರಾದಾರ, ಎಂ.ಕೆ.ಗಾಯಕವಾಡ, ಸುಶೀಲ ಘಾಗರೆ, ದೀಲೀಪ ಮುಧಾಳೆ, ಜ್ಞಾನೋಬಾ, ರಾಜಶೇಖರ ಅಜ್ಜಾ, ಅಂತೇಶ್ವರ ಪಾಟೀಲ, ದಯಾನಂದ ವಡ್ಡೆ, ಬಾ.ನಾ. ಸೊಲ್ಲಾಪೂರೆ, ವಿರೇಶ ತೋರಣೇಕರ್‌, ಸಂತೋಷ ಬಿರಾದಾರ, ಸಂಗಮನಾಥ ಡಿಗ್ಗಿ, ಸಂತೋಷ ಹಾಗೂ ಜನಪರ ಹೋರಾಟಗಾರರು, ಪ್ರಜಾಪ್ರಭುತ್ವ ಉಳಿಸಿ ಜನಾಂದೋಲನ ಸಮಿತಿಯ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next