ಬೆಂಗಳೂರು/ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ದೇವಾಲಯಗಳಲ್ಲಿಯೂ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಜಲವೈಭವ ಇಲ್ಲದಿದ್ದರೂ ವಾರಾಂತ್ಯ ಹಾಗೂ ಉಳಿದ ದಿನಗಳಲ್ಲಿ ಕಳೆದ ತಿಂಗಳವರೆಗೂ ವಾರಕ್ಕೆ ಲಕ್ಷಾಂತರ ಜನ ಜಲಪಾತ ವೀಕ್ಷಣೆಗೆ ಆಗಮಿಸುತ್ತಿದ್ದರು.
ಆದರೆ, ಕೊರೊನಾ ವೈರಸ್ ಆತಂಕ ಶುರುವಾದ ಬಳಿಕ ಕೆಲ ದಿನಗಳಿಂದ ಜೋಗದಲ್ಲಿ ಪ್ರತಿದಿನ ನೂರಾರು ಪ್ರವಾಸಿಗರೂ ಕಾಣುತ್ತಿಲ್ಲ. ಇನ್ನು, ಶೃಂಗೇರಿ ಶ್ರೀ ಶಾರದಾಂಬೆಯ ದರ್ಶನಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆಯ ಲ್ಲಿಯೂ ಇಳಿಮುಖವಾಗಿದೆ. ಎಲ್ಲ ಸಾರ್ವಜನಿಕ ಸಮಾ ರಂಭ ಗಳನ್ನು ಮುಂದೂಡುವಂತೆ ರಾಜ್ಯ ಸರಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ಕೋಟಾ ಸಮೀಪದ ಶಿರಿಯಾರ ಗ್ರಾಮದ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ಜಾತ್ರೆಯನ್ನು ಮುಂದೂಡಲು ನಿರ್ಧರಿಸಲಾಗಿದೆ.
ಕೆಆರ್‌ಎಸ್, ಗಗನಚುಕ್ಕಿ, ರಂಗನತಿಟ್ಟಿಗೆ ಪ್ರವಾಸಿಗರ ನಿರ್ಬಂಧ: ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳಾದ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಬೃಂದಾವನ, ಗಗನಚುಕ್ಕಿ ಜಲಪಾತ ಹಾಗೂ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ, ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಆದೇಶ ಹೊರ ಡಿಸಿದ್ದಾರೆ. ಫೆ.13ರ ಶುಕ್ರವಾರ ಸಂಜೆಯಿಂದ ಒಂದು ವಾರದ ವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಲಾಗಿದೆ. ಅಲ್ಲದೆ, ಕೆಆರ್‌ಎಸ್ ಟಿಕೆಟ್ ಕೌಂಟರ್ ಬಳಿ ಭಿತ್ತಿಪತ್ರ ಪ್ರದರ್ಶಿಸಿ, ಪ್ರವಾಸಿಗರಿಗೆ ಕರಪತ್ರ ವಿತರಿಸಿ ಅಧಿಕಾರಿಗಳು ಪ್ರವಾಸಿಗರಿಗೆ ಜಾಗೃತಿ ಮೂಡಿಸಿದರು.
ಕಳೆಗುಂದಿದ ರಂಗಪಂಚಮಿ: ಕೊರೊನಾ ಭೀತಿಯಿಂದ ಹುಬ್ಬಳ್ಳಿಯಲ್ಲಿ ಈ ಬಾರಿಯ ರಂಗಪಂಚಮಿ ಕಳೆಗುಂದಿತ್ತು. ಬಹುತೇಕರು ಶುಕ್ರವಾರ ಮನೆಯಿಂದ ಹೊರಗೆ ಬಾರದೆ ರಂಗು ರಂಗಿನ ಹಬ್ಬದಿಂದ ದೂರ ಉಳಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಹುಬ್ಬಳ್ಳಿಯಲ್ಲಿ ರಂಗಪಂಚಮಿಯಲ್ಲಿ ಶೇ.50ರಷ್ಟು ಜನ ಕೂಡ ಕಾಣಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.30ರಷ್ಟು ಮಾತ್ರ ವ್ಯಾಪಾರವಾಗಿದೆ ಎಂಬುದು ವ್ಯಾಪಾರಿಗಳ ಅಳಲು.