Advertisement
ಪ್ರಾಕೃತಿಕ ಸೊಬಗು: ಕಳೆದ 2-3 ದಿನದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಅಪಾರ ಸಸ್ಯ ಸಂಕುಲ ವನ್ನು ತನ್ನ ಮಡಲಿನಲ್ಲಿ ಇಟ್ಟುಕೊಂಡು ಕಂಗೊಳಿಸುತ್ತಿ ರುವ ನಂದಿಗಿರಿಧಾಮದ ಪ್ರಾಕೃತಿಕ ಸೊಬಗು ಸವಿಯಲು ಪ್ರವಾಸಿಗರು ಹಾತೊರೆಯುತ್ತಿ ದ್ದಾರೆ. ಸಮುದ್ರ ಮಟ್ಟದಿಂದ ಬರೋಬ್ಬರಿ 4,800ಕ್ಕೂ ಅಧಿಕ ಅಡಿಗಳಷ್ಟು ಎತ್ತರ ಇರುವ ನಂದಿಗಿರಿ ತಂಪಾದ ಗಾಳಿ, ಪ್ರಶಾಂತವಾದ ವಾತಾವರಣಕ್ಕೆ ಹೇಳಿ ಮಾಡಿಸಿದ ಸ್ಥಳ. ಒಂದು ರೀತಿಯಲ್ಲಿ ಪ್ರವಾಸಿಗರ, ಪ್ರೇಮಿಗಳ ಪಾಲಿಗೆ ಸ್ವರ್ಗವಿದ್ದಂತೆ. ಮಳೆಗಾಲ ಶುರುವಾಗುತ್ತಿದ್ದಂತೆ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಜಾಗತಿಕವಾಗಿ ವಿಶ್ವ ವಿಖ್ಯಾತ ನಂದಿಗಿರಿಧಾಮ ಅನೇಕ ಐತಿಹಾಸಿಕ ಸ್ಥಳಗಳ ಜತೆಗೆ ಅಪಾರ ಸಸ್ಯ ಕಾಶಿಯನ್ನೂ ಹೊಂದಿದೆ. ಬಡವರ ಪಾಲಿನ ಊಟಿಯೆಂದೇ ಪ್ರಸಿದ್ಧಿ ಪಡೆದ ನಂದಿಗಿರಿಧಾಮ ಮಳೆಗಾಲದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ.
Related Articles
Advertisement
ನಿನ್ನೆ 18,567 ಮಂದಿ, 3 ಸಾವಿರ ಬೈಕ್, 1,200 ಕಾರು: ಭಾನುವಾರ ಒಂದೇ ದಿನ ನಂದಿಗಿರಿಗೆ ಬರೋಬ್ಬರಿ 18,567 ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ 10 ರಿಂದ 12 ಸಾವಿರ ಮಂದಿ ಆಗಮಿಸುತ್ತಾರೆ. ಆದರೆ, ಮಳೆಗಾಲ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ನಿನ್ನೆ ಒಂದೇ ದಿನ ನಂದಿಗಿರಿಧಾಮಕ್ಕೆ ಒಟ್ಟು 3 ಸಾವಿರ ಬೈಕ್, 1,200 ಕಾರು ಬಂದಿದ್ದವೆಂದು ನಂದಿಗಿರಿಧಾಮದ ವಿಶೇಷ ಅಧಿಕಾರಿ ಮಂಜುನಾಥ “ಉದಯವಾಣಿ’ಗೆ ತಿಳಿಸಿದರು.
ಮಳೆಗಾಲದಲ್ಲಿ ಹರಿದು ಬರುವ ಆದಾಯ: ಮಳೆಗಾಲದಲ್ಲಿ ಸಹಜವಾಗಿಯೇ ನಂದಿಗಿರಿಧಾಮಕ್ಕೆ ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆಗೆ ಆದಾಯವೂ ಹೆಚ್ಚಾಗಿ ಬರಲಿದೆ. ದಿನನಿತ್ಯ ನೂರಾರು ಬೈಕ್, ಕಾರುಗಳಲ್ಲಿ ಪ್ರವಾಸಿಗರು ಬರುವುದರಿಂದ ಪಾರ್ಕಿಂಗ್ ಶುಲ್ಕದಿಂದ ಲಕ್ಷಾಂತರ ರೂ., ಆದಾಯ ಸಂಗ್ರಹವಾಗುತ್ತಿದೆ. ಹಾಗೆಯೇ ಪ್ರವಾಸಿಗರ ಪ್ರವೇಶಕ್ಕೂ ತಲಾ 20 ರೂ, ಶುಲ್ಕ ಇದ್ದರೆ ಕಾರು, ಬೈಕ್‌ಗೆ ದಿನಕ್ಕೆ 60 ರೂ, ಪಾರ್ಕಿಂಗ್ ಶುಲ್ಕ ಸಂಗ್ರಹವಾಗುತ್ತಿದೆ.
ವಾರಾಂತ್ಯದಲ್ಲಿ ಪ್ರವಾಸಿಗರ ಪ್ರವಾಹ: ಪ್ರತಿ ವಾರಾಂತ್ಯದಲ್ಲಿ ಪ್ರವಾಸಿಗರ ದಂಡು ನಂದಿಗಿರಿಧಾಮಕ್ಕೆ ಹರಿದು ಬರುತ್ತದೆ. ವಿಶೇಷ ವಾಗಿ ಐಟಿ, ಬಿಟಿ ಉದ್ಯೋಗಿಗಳು, ಶಾಲಾ, ಕಾಲೇಜು ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಕನಿಷ್ಠ 10 ರಿಂದ 15 ಸಾವಿರ ಮಂದಿ ಪ್ರವಾಸಿಗರು ನಂದಿಗಿರಿ ಧಾಮಕ್ಕೆ ವಾರಾಂತ್ಯದಲ್ಲಿ ಭೇಟಿ ನೀಡಿ ಗಿರಿ ಧಾಮದ ಸೌಂದರ್ಯ ಆಸ್ವಾಧಿಸಿ ಹೋಗುತ್ತಾರೆ.
ವ್ಯೂ ಪಾಯಿಂಟ್‌ಗಳಲ್ಲಿ ಕಿಕ್ಕಿರಿದ ಪ್ರವಾಸಿಗರು: ನಂದಿಗಿರಿಧಾಮ ಸೌಂದರ್ಯ ಸವಿಯಲು ಗಿರಿಧಾಮದಲ್ಲಿನ ವ್ಯೂ ಪಾಯಿಂಟ್‌ಗಳಿಗೆ ಪ್ರವಾಸಿಗರು ಕಿಕ್ಕಿರಿದು ಸೇರುತ್ತಿದ್ದಾರೆ. ಬೆಳಗ್ಗೆ ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗೂ ಈ ವ್ಯೂ ಪಾಯಿಂಟ್ ಗಳಲ್ಲಿ ತುಂಬಿರುತ್ತಾರೆ. ಈ ವೇಳೆ ಪ್ರವಾಸಿಗರು ಬೆಟ್ಟದ ಸೌಂದರ್ಯದ ಜತೆಗೆ ತಮ್ಮ ಮೊಬೈಲ್ ಗಳಲ್ಲಿ ಸೆಲ್ಫಿ ತೆಗೆದುಕೊಂಡು ಆನಂದಿಸುತ್ತಿದ್ದಾರೆ.
– ಕಾಗತಿ ನಾಗರಾಜಪ್ಪ