Advertisement
ವಿಜಯಪುರ ಜಿಲ್ಲೆಗೆ ಪ್ರತಿ ವರ್ಷ ಹತ್ತಾರು ಲಕ್ಷ ಪ್ರವಾಸಿಗರು ಭೇಟಿ ನೀಡಿದರೂ ಅದರಲ್ಲಿ ಬಹುತೇಕರು ಬಡ-ಮಧ್ಯಮ ವರ್ಗದವರೇ ಸೇರಿರುತ್ತಾರೆ. ಶ್ರೀಮಂತ ಪ್ರವಾಸಿಗರಿಗೆ ಹಣ ಕೊಟ್ಟರೆ ವಸತಿ ಗೃಹಗಳು ಲಭ್ಯ ಇರುತ್ತವೆ. ಆದರೆ ಬಡ-ಮಧ್ಯಮ ವರ್ಗದ ಪ್ರವಾಸಿಗರು ತಂಗಲು ಕಡಿಮೆ ವೆಚ್ಚದ-ಉಚಿತ ವಾಸದ ವ್ಯವಸ್ಥೆ ಇಲ್ಲವೇ ಇಲ್ಲ.
Related Articles
Advertisement
ಜಿಲ್ಲೆಗೆ ಭೇಟಿ ನೀಡುವ ಬಡ ಪ್ರವಾಸಿಗರ ವಸತಿ ಸೌಲಭ್ಯದ ಯಾತ್ರಿ ನಿವಾಸ ಕಲ್ಪಿಸುವ ಮಾತಿರಲಿ, ಸ್ವಯಂ ಪ್ರವಾಸೋದ್ಯಮ ಇಲಾಖೆಯಲ್ಲೇ ಈ ಕುರಿತು ಸೂಕ್ತ ದಾಖಲೆಗಳ ನಿರ್ವಹಣೆ ಇಲ್ಲ. ಪ್ರವಾಸೋದ್ಯಮ ಇಲಾಖೆಯಲ್ಲಿ ಈ ಕುರಿತು ವಿಷಯ ನಿರ್ವಹಿಸುತ್ತಿರುವ ಹಾಗೂ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಮಾಹಿತಿ ನೀಡಬೇಕಾದ ಅಧಿಕಾರಿ ಮಾತ್ರ ಸದಾ ನಶೆಯಲ್ಲೇ ತೇಲುತ್ತಿರುತ್ತಾರೆ.
ಲಭ್ಯ ಮಾಹಿತಿ ಪ್ರಕಾರ ಸರ್ಕಾರ 2014-15ರಲ್ಲಿ ವಿಜಯಪುರ ಜಿಲ್ಲೆಗೆ 15 ಯಾತ್ರಿ ನಿವಾಸ ಮಂಜೂರು ಮಾಡಿದ್ದು, 14 ಯಾತ್ರಿ ನಿವಾಸಗಳ ನಿರ್ಮಾಣಕ್ಕೆ 6.12 ಕೋಟಿ ರೂ. ವೆಚ್ಚದ ಈ ಯೋಜನೆಗಳಿಗೆ ಸರ್ಕಾರ 5.12 ಕೋಟಿ ರೂ. ಬಿಡುಗಡೆ ಮಾಡಿದ್ದರೂ ಕಳೆದ 5 ವರ್ಷಗಳಲ್ಲಿ ಒಂದೇ ಒಂದು ಕಾಮಗಾರಿ ಪೂರ್ಣಗೊಂಡಿಲ್ಲ. 1 ಯಾತ್ರಿ ನಿವಾಸ ರದ್ದಾಗಲು ಜಿಲ್ಲೆಯಲ್ಲಿ ಆಸ್ತಿತ್ವದಲ್ಲೇ ಇಲ್ಲದ ಬೆಳವಡಿ ಹೆಸರಿನ ಊರು ಕೂಡ ಸೇರಿರುವುದು. ಅಷ್ಟರ ಮಟ್ಟಿಗೆ ಇಲಾಖೆ ದಕ್ಷತೆ ಎಷ್ಟಿದೆ ಎಂಬುದರ ಪ್ರದರ್ಶನವಾಗಿದೆ.
2015-16ರಲ್ಲಿ 13 ಯಾತ್ರಿ ನಿವಾಸಗಳು ಮಂಜೂರಾಗಿದ್ದು, 2 ಯಾತ್ರಿ ನಿವಾಸಗಳು ಭೂಮಿ ಅಲಭ್ಯತೆ ಹಾಗೂ ವಿವಾದದ ಕಾರಣಕ್ಕೆ ರದ್ದಾಗಿವೆ. ಇದರ ಹೊರತಾಗಿ ಇತರೆ 11 ಯಾತ್ರಿ ನಿವಾಸಗಳ ನಿರ್ಮಾಣಕ್ಕೆ ಬೇಕಿದ್ದ 5.45 ಕೋಟಿ ರೂ. ವೆಚ್ಚದ ಅಂದಾಜಿನಲ್ಲಿ ಸರ್ಕಾರ 3.67 ಕೋಟಿ ಹಣ ನೀಡಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಆ ಮೂಲಕ ಸರ್ಕಾರ ಬಡಯಾತ್ರಿಗಳ ಅನುಕೂಲಕ್ಕೆ ರೂಪಿಸಿರುವ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ.
2016-17ರಲ್ಲಿ 20 ಯಾತ್ರಿ ನಿವಾಸಗಳು ಮಂಜೂರಾಗಿದ್ದರೂ ನಿಡಗುಂದಿ, ಯಲ್ಲಮ್ಮನ ಬೂದಿಹಾಳ ಹಾಗೂ ನಾಲತವಾಡ ಗ್ರಾಮಗಳಲ್ಲಿನ 3 ಯಾತ್ರಿ ನಿವಾಸಗಳು ರದ್ದಾಗಿವೆ. ಉಳಿದಂತೆ 10.45 ಕೋಟಿ ರೂ. ವೆಚ್ಚದ ಈ ಯಾತ್ರಿ ನಿವಾಸಗಳ ನಿರ್ಮಾಣಕ್ಕೆ ಸರ್ಕಾರ 4.30 ಕೋಟಿ ರೂ. ಮಂಜೂರು ಮಾಡಿದೆ. ಇಷ್ಟಿದ್ದರೂ ಅಧಿಕಾರಿಗಳು ಪ್ರಗತಿಯಲ್ಲಿದೆ ಎಂದು ಷರಾ ಬರೆದು, ಅಲ್ಲಿಗೆ ತಮ್ಮ ಕರ್ತವ್ಯ ಮುಕ್ತಾಯ ಕಂಡಿದೆ ಎಂದು ಪೂರ್ಣವಿರಾಮ ಹಾಕಿದ್ದಾರೆ.
2017-18ರಲ್ಲಿ 34 ಯಾತ್ರಿ ನಿವಾಸಗಳು ಮಂಜೂರಾಗಿದ್ದು, 9.85 ಕೋಟಿ ರೂ. ವೆಚ್ಚದ ಸದರಿ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗೆ ಸರ್ಕಾರ 4.36 ಕೋಟಿ ರೂ. ಮಂಜೂರು ಮಾಡಿದೆ. ಇಷ್ಟಿದ್ದರೂ ಭೂಮಿ ಹಸ್ತಾಂತರ ಹಂತದಲ್ಲಿ 21, ಕಾಮಗಾರಿ ಸ್ಥಳ ಬದಲಾವಣೆ ನೆಪದಲ್ಲಿ ಶಾಸಕರ ಮರ್ಜಿ ಕಾಯುತ್ತಿರುವ 5 ಪ್ರಕರಣಗಳು, 8 ಕಡೆಗಳಲ್ಲಿ ಜಮೀನು ಹಸ್ತಾಂತರದ ನೆಪದಲ್ಲಿ ಯೋಜನೆ ಕನಿಷ್ಠ ಚಾಲನೆಯನ್ನೂ ಪಡೆದಿಲ್ಲ.
ಹೀಗೆ ಪ್ರವಾಸಿಗರ ಸ್ವರ್ಗವಾಗಬೇಕಿರುವ ವಿಜಯಪುರ ಜಿಲ್ಲೆ ಹತ್ತು ಹಲವು ಕಾರಣಗಳಿಗೆ ಯೋಜನೆಗಳಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ, ಕರ್ತವ್ಯದ ವಿಮುಖತೆ, ಯಾಂತ್ರೀಕೃತ ವರ್ತನೆಗಳ ಕಾರಣಗಳಿಂದಾಗಿ ಯಾತ್ರಿ ನಿವಾಸ ನಿರ್ಮಾಣವೂ ಸಾಧ್ಯವಾಗಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ರಾಜಕೀಯ ಹೊರತಾಗಿ ಜಿಲ್ಲೆಯ ಪ್ರವಾಸೋಸದ್ಯಮ ಬಲಪಡಿಸುವಲ್ಲಿ ಪ್ರಮುಖವಾಗಿರುವ ಹಾಗೂ ಬಡ ಪ್ರವಾಸಿಗರನ್ನು ಸೆಳೆಯುವಲ್ಲಿ ಸಹಕಾರಿ ಆಗಲಿರುವ ಪ್ರವಾಸಿ ವಾಸ್ತವ್ಯದ ಯಾತ್ರಿ ನಿವಾಸ ಯೋಜನೆಗಳ ಕುರಿತು ಗಮನ ಹರಿಸಬೇಕಿದೆ.
•ಜಿ.ಎಸ್. ಕಮತರ