ಮೊನ್ನೆ ಒಂದಿನ ಸ್ನೇಹಿತರೆಲ್ಲರೂ ಸೇರಿ ಒಂದು ದಿನದ ಪ್ರವಾಸ ಕೈಗೊಳ್ಳುವ ನಿರ್ಧಾರದೊಂದಿಗೆ ಒಂದು ಕಪ್ ಟೀನೊಂದಿಗೆ ಪ್ರೇಕ್ಷಣೀಯ ಸ್ಥಳಗಳ ಹುಡುಕಾಟ ಆರಂಭಿಸಿದೆವು. ಒಬ್ಬ ಅಂಬೂಲಿ ಪಾಲ್ಸ್ ಹೋಗೋಣ ಎಂದರೆ ಇನ್ನೊಬ್ಬ ಗೋವಾ, ಇವೆರಡರ ಮಧ್ಯೆ ಮತ್ತೂಬ್ಬನದು ಜೋಗ ಜಲಪಾತ ಹೀಗೆ ಮಳೆಗಾಲದ ಸುಂದರ ನಿಸರ್ಗ ರಮಣೀಯ ತಾಣಗಳ ಯಾದಿ ಆರಂಭವಾಯಿತು. ಇನ್ನೆನು ನಾಳೆ ಮುಂಜಾನೆ ಹೊರಡಬೆಕೆನ್ನುವಷ್ಟರಲ್ಲಿ ನಮ್ಮ ಪ್ರವಾಸದ ತಾಣವನ್ನು ಕೊಂಚ ಬದಲಾಯಿಸಿಕೊಂಡು ಸುತ್ತಲೂ ಮಂಜುಕವಿದ ವಾತಾವರಣ, ಜಿಟಿಜಿಟಿ ಮಳೆಹನಿಯ ನಿನಾದ, ಜತೆಗೆ ಎತ್ತ ನೋಡಿದರತ್ತ ಹಸಿರು ಹಾಸಿಗೆಯಿಂದ ಆವೃತ್ತವಾದ ಸ್ಥಳದತ್ತ ನಮ್ಮ ಪಯಣ ಸಾಗಿತ್ತು.
ಈಗ ನಿಮ್ಮಲ್ಲೂ ಅದು ಯಾವ ಸ್ಥಳ ಅಂತ ಕುತೂಹಲ ಮೂಡಿರಬೇಕಲ್ಲವೇ? ಹೌದು ಅದ್ಯಾವುದೆಂದರೆ ಹಚ್ಚ-ಹಸುರಿನ ಬಾನೆತ್ತರದಿ ಬೆಳದಿಹ ಗಿಡಮರಗಳ ಮಧ್ಯೆ ಕಾಣ ಸೀಗುವ, ಮಳೆಗಾಲದ ಸುಂದರ ತಾಣ ಯಾಣ. ಮುಂಜಾನೆಯ ಚುಮು-ಚುಮು ಚಳಿಯ ನಡುವೆ ಹುಬ್ಬಳ್ಳಿಯಿಂದ ಹೊರಟು ಇಬ್ಬರು ಸ್ನೇಹಿತರನ್ನು ಧಾರವಾಡದಿಂದ ಕರೆದುಕೊಂಡು ಆರಂಭಕ್ಕೆ ಒಂದು ಚಿತ್ರಪಟವಿರಲಿ ಎಂದು ಮಬ್ಟಾದ ಬೀದಿದೀಪದ ಕೆಳಗೆ ಸೆಲ್ಪಿ ತೆಗೆದುಕೊಳ್ಳುತ್ತಾ ನಮ್ಮ ಪ್ರವಾಸ ಆರಂಭವಾಯಿತು.
ಕಾರಿನ ಹೊರಗೆ ತುಂತುರು ಹನಿಯ ನಿನಾದ, ಒಳಗಡೆ ಕೊರೆವ ಚಳಿ ಇವುಗಳ ಮಧ್ಯೆ ನಮ್ಮ ಹಾಡು-ಹರಟೆ ಶುರುವಾಗಿತ್ತು. ಮಾರ್ಗಮದ್ಯ ಸೀಗುವ ಯಲ್ಲಾಪುರದಲ್ಲಿ ಬಿಸಿಬಿಸಿ ಇಡ್ಲಿ-ವಡೆ ತಿಂದು ಮತ್ತೆ ಪ್ರಯಾಣ ಮುಂದುವರಿಸಿದೆವು. ಇನ್ನೇನು ಯಾಣದ ಮುಖ್ಯ ರಸ್ತೆಯಿಂದ ಒಳಗಡೆ ಸಾಗುತ್ತಲೇ ಎರಡೂ ಬದಿಗೂ ಹಸಿರು ಹುಲ್ಲಿನ ಹಾಸಿಗೆ ಭೂಮಿ ತಾಯಿಯನ್ನು ಆವರಿಸಿಕೊಂಡಿತ್ತು. ಸುತ್ತಮುತ್ತಲಿನ ನಿಸರ್ಗ ಸವಿಯುತ್ತಾ ಖುಷಿಗೆ ನೆಲೆಯೇ ಇಲ್ಲದಂತಾಗಿತ್ತು.
ಅಲ್ಲಿಂದ ಸ್ನೇಹಿತರೆಲ್ಲರೂ ಸೇರಿಕೊಂಡು ಅಂಕು-ಡೊಕಿನ ಕಲ್ಲು ಮುಳ್ಳಿನ ದಾರಿ, ಅಕ್ಕ-ಪಕ್ಕ ಗಿಡಗಂಟಿಗಳ ಮಧ್ಯೆ ಯಾಣ ಹತ್ತಲು ಆರಂಭಿಸಿದೆವು. ಅಲ್ಲೊಂದು ಇಲ್ಲೊಂದು ಸಿಗುವ ಕುರ್ಚಿಯ ಮೇಲೆ, ರಸ್ತೆಯ ಮಧ್ಯೆ ಸೆಲ್ಪಿ ತೆಗೆದುಕೊಳ್ಳುತ್ತಾ ಚಿಕ್ಕಗುಡ್ಡವ ಏರುತ್ತಲೇ ರಮಣೀಯ ನಿಸರ್ಗದ ನಡುವೆಯಿದ್ದ ಗುಡಿಯಲ್ಲಿ ಭೈರವೇಶ್ವರನ ದರ್ಶನವನ್ನು ಪಡೆದು ಸ್ವಲ್ಪಹೊತ್ತು ಅಲ್ಲೇ ವಿಶ್ರಮಿಸಿಕೊಂಡೆವು. ಮುಂದೆ ದೇಗುಲದ ಹಿಂಬದಿಯ ಬಾಗಿಲಿನಿಂದ ಸೀಗುವ ಮೆಟ್ಟಿಲುಗಳ ಮೂಲಕ ಗುಹೆಯತ್ತ ಸಾಗಿದೆವು. ಹೊರಗಡೆಯಿಂದ ನೊಡಿದರೆ ಕೇವಲ ಒಂದು ಬಂಡೆ ಕಲ್ಲಿನತೆ ಕಾಣುವ ಗುಹೆ ಸ್ವಲ್ಪ ಒಳನಡೆಯುತ್ತಲೇ ಸೂರ್ಯರಶ್ಮಿಯ ಕಿರಣಗಳು ಇಕ್ಕಲಗಳ ಮಧ್ಯೆ ನುಸುಳಿ ನಮಗೆ ದರ್ಶನ ನೀಡಿದಂತಿತ್ತು. ಗುಹೆಯ ಒಂದು ಭಾಗದಿಂದ ಒಳನಡೆದು ಮತ್ತೂಂದು ಭಾಗದ ಕಾಲುದಾರಿಯಿಂದ ಹೊರಗಡೆ ಬಂದೆವು.
ಅಲ್ಲಿನ ಸೌಂದರ್ಯ ವನ್ನು ಎಂದಿಗೂ ಮರೆಯು ವಂತಿಲ್ಲ. ಅಲ್ಲಿಂದ ಹೊರಬಂದು ನಿಸರ್ಗ ಸವಿದು ಖುಷಿಯಾದ ನಾವು ಅಲ್ಲಿಂದ ಹತ್ತು ಕಿಲೋ ಮೀಟರ್ ದೂರದಲ್ಲಿರುವ ವಿಭೂತಿ ಪಾಲ್ಸ್‌ನತ್ತ ಪ್ರಯಾಣ ಮುಂದುವರೆಸಿದೆವು. ಅಲ್ಲಿ ನಮಗೆ ಮತ್ತೂಂದು ಅಚ್ಚರಿಯೇ ಕಾದಿತ್ತು. ಎಡ ಬಲ ಪ್ರಪಾತ, ಕಿರುದಾದ ದಾರಿ ಮುಂದೆ ಯಾವ ಕಾರು ಗಾಡಿ ಬರುತ್ತವೆ ಅನ್ನುವ ಭಯ, ಇವೆಲ್ಲದರ ನಡುವೆ ನಮ್ಮ ಸಾರಥಿಯ ಮೇಲೆ ನಂಬಿಕೆ ಇಟ್ಟು ಮುಂದೆ ಸಾಗಿದೆವು. ಪಾಲ್ಸ್‌ಗೆ ತಲುಪುತ್ತಲೇ ಮತ್ತೂಂದು ಚಾಲೆಂಜ್. ಬರಿಗಾಲಲ್ಲಿ ನಡೆದರೂ ಜಾರುವಂತಿದ್ದ ಕೆಸರಿನ ಚಿಕ್ಕದಾರಿ ಸ್ವಲ್ಪ ಮುಂದೆ ಸಾಗುತ್ತ ಮಧ್ಯೆಯೇ ಬಲಗಡೆ ಹರಿಯುವ ಝರಿ, ಪಾಲ್ಸ್ ಅನ್ನು ತಲುಪಿದ ನಮಗೆ ಮೇಲಿಂದ ಬೋರ್ಗರೆಯುತ್ತಾ ಹರಿಯುವ ಜಲಪಾತದ ದೃಶ್ಯವನ್ನು ನೋಡುತ್ತ ಒಂದು ಕ್ಷಣ ಮಂತ್ರಮುಗªರಾಗಿ ನಿಂತದ್ದು ಸುಳ್ಳಲ್ಲ.
ಮಳೆಗಾಲವಾದ್ದರಿಂದ ನೀರಿನಲ್ಲಿ ಆಟವಾಡಿಲ್ಲವಾದರೂ ಕೆಳಗಿಳಿದು ಸೆಲ್ಪಿ ತೆಗೆದುಕೊಂಡು ಹೊರಬಂದೆವು. ಅಷ್ಟರಲ್ಲಾಗಲೇ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಹೊಟ್ಟೆ ಚುರುಕ್ ಅನ್ನಲು ಶುರುಮಾಡಿತ್ತು, ಮನೆಯಿಂದ ತೆಗೆದುಕೊಂಡು ಬಂದಿದ್ದ ಮಂಡಕ್ಕಿಯ ಪೊಟ್ಟಣ ಕ್ಷಣ ಮಾತ್ರದಲ್ಲೇ ಖಾಲಿಯಾಯಿತು. ಅಲ್ಲಿಂದ ಹೊರಟು ಮಾರ್ಗ ಮಧ್ಯೆ ಸಿಕ್ಕ ಶ್ರೀಕೃಷ್ಣ ಭವನದಲ್ಲಿ ಊಟ ಮುಗಿಸಿಕೊಂಡು ಗೋಕರ್ಣ ತಲುಪುವಾಗ ಸಂಜೆ ಗಂಟೆ ನಾಲ್ಕರ ಗಡಿ ದಾಟಿತ್ತು.
ಕೆಲವು ಹೊತ್ತು ಸಮುದ್ರದಲ್ಲಿ ರಭಸವಾಗಿ ಬರುವ ಅಲೆಗಳಿಗೆ ಎದುರಾಗಿ ನಿಂತು ಮನಬಂದತೆ ಕುಣಿಯುತ್ತ ಒಬ್ಬರಿಗೊಬ್ಬರು ನೀರೆರಚುತ್ತಾ ಖುಷಿ-ಖುಷಿಯಾಗಿ ನೀರಲ್ಲಿ ಆಟವಾಡಿದೆವು. ಸಂಜೆ ಸೂರ್ಯಾಸದ ಹೊತ್ತಿಗೆ ಅಲ್ಲಿ ಪಕ್ಕದಲ್ಲಿದ್ದ ಗಣೇಶನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದುಕೊಂಡು ಬಂದೆವು. ಮೂರು ಸ್ಥಳಗಳ ನೋಡುತ್ತಲೇ ಎಲ್ಲರೂ ಸುಸ್ತಾಗಿದ್ದರು. ಮತ್ತು ರಾತ್ರಿ ಬೇಗ ಊರು ತಲುಪಬೇಕಿದ್ದರಿಂದ ನಾವೆಲ್ಲರೂ ಮುಂಜಾನೆಯಿದ ಅನುಭವಿಸಿದ ಸುಂದರ ಕ್ಷಣಗಳನ್ನು ಮೇಲಕು ಹಾಕಿಕೊಳ್ಳುತ್ತಾ ಹುಬ್ಬಳ್ಳಿ ಕಡೆಗೆ ಹೊರಟೆವು.
- ಅಕ್ಷಯಕುಮಾರ ಜೋಶಿ, ಹುಬ್ಬಳಿ