ಮಂಗಳೂರು/ ಉಡುಪಿ: ವಾರಾಂತ್ಯ ರಜೆ ಮತ್ತು ಶಾಲೆಗಳಿಗೆ ಬೇಸಗೆ ರಜೆಯ ಹಿನ್ನೆಲೆಯಲ್ಲಿ ಕರಾವಳಿಯ ದೇವಸ್ಥಾನಗಳು, ಸಮುದ್ರ ತೀರಗಳ ಸಹಿತ ಪ್ರವಾಸಿ ತಾಣಗಳು ರವಿವಾರ ಪ್ರವಾಸಿಗರಿಂದ ತುಂಬಿದ್ದವು. ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದೇವಸ್ಥಾನ, ಉಡುಪಿಯ ಶ್ರೀ ಕೃಷ್ಣ ಮಠ ಮೊದಲಾದೆಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬಂದರು.
ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ರವಿವಾರ 20 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿದ್ದು, ಭಾರೀ ನೂಕುನುಗ್ಗಲು ಕಂಡುಬಂತು.
ದೇಗುಲದ ಹೊರಪೌಳಿಯಲ್ಲಿ ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ತುಂಬಿದ್ದರು. ಅವರನ್ನು ನಿಯಂತ್ರಿಸಲು ದೇಗುಲದ ಸಿಬಂದಿ ಹಾಗೂ ಪೊಲೀಸರು ಹರಸಾಹಸಪಡಬೇಕಾಯಿತು.
ತುಂಬಿದ ವಸತಿಗೃಹಗಳು
ದೂರದ ಊರುಗಳಿಂದ ಬಂದಿದ್ದ ಭಕ್ತರು ವಾಸ್ತವ್ಯಕ್ಕೂ ಪರದಾಡುವಂತಾಗಿತ್ತು. ದೇಗುಲದ ಹಾಗೂ ಖಾಸಗಿಯ ವಸತಿಗೃಹಗಳ ಎದುರು ಕೊಠಡಿ ಪಡೆಯಲು ಮುಗಿಬೀಳುತ್ತಿರುವುದು ಕಂಡುಬಂತು. ಅನ್ನಪ್ರಸಾದ ವಿತರಣೆ ಸ್ಥಳದಲ್ಲೂ ನೂಕುನುಗ್ಗಲು ಇದ್ದು, ಅಪರಾಹ್ನ 3 ಗಂಟೆ ತನಕವೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
Related Articles
ಸಂಚಾರ ದಟ್ಟಣೆ
ವಾಹನ ನಿಲುಗಡೆಯ ಪ್ರದೇಶ ಸಹಿತ ರಸ್ತೆಯುದ್ದಕ್ಕೂ ನೂರಾರು ಸಂಖ್ಯೆಯಲ್ಲಿ ವಾಹನಗಳನ್ನು ನಿಲುಗಡೆ ಗೊಳಿಸಲಾಗಿತ್ತು. ಒಟ್ಟಿನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಕೊಡಚಾದ್ರಿಗೆ ಸಾಗಲು ಜೀಪಿಗಾಗಿ ಪರದಾಟ
ಶ್ರೀ ಶಂಕರಾಚಾರ್ಯರ ತಪೋಭೂಮಿಯಾದ ಕೊಡಚಾದ್ರಿ ಬೆಟ್ಟಕ್ಕೆ ಸಾಗುವ ಜೀಪುಗಳಿಗಾಗಿ ಸರದಿಯಲ್ಲಿ ನಿಂತಿದ್ದ ಭಕ್ತರ ಸಂಖ್ಯೆಯೂ ಅಪಾರ ಇತ್ತು. ಅವರನ್ನು ಕರೆದೊಯ್ಯುವುದೇ ಜೀಪುಗಳ ಚಾಲಕರಿಗೆ ಸವಾಲಾಗಿತ್ತು. ಹಲವು ಮಂದಿ ಕೊಡಚಾದ್ರಿಗೆ ಹೋಗಲು ಸಾಧ್ಯವಾಗದೆ ನಿರಾಶೆಯಿಂದ ಮರಳಿದರು.
ಪಣಂಬೂರು, ಚಿತ್ರಾಪುರ, ಮಲ್ಪೆ ಬೀಚ್‌ಗಳಲ್ಲಿÉ ಜನಸಾಗರ
ಪಣಂಬೂರು/ಮಲ್ಪೆ: ಪಣಂಬೂರು ಮತ್ತು ಮಲ್ಪೆ, ಸಮುದ್ರ ತೀರಗಳಲ್ಲಿ ರವಿವಾರ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ದೇವಸ್ಥಾನ, ಮಠ ಮಂದಿರಗಳಿಗೆ ಭೇಟಿ ನೀಡಿದ ಜನ ಪಣಂಬೂರಿನಲ್ಲಿ ಸಂಜೆ ಬಿರು ಸೆಕೆಯಿಂದ ಮುಕ್ತಿ ಪಡೆಯಲು ಸಮುದ್ರದಲ್ಲಿ ಸ್ನಾನಗೈದು ಸಂಭ್ರಮ ಪಟ್ಟರು.
ಚಿತ್ರಾಪುರ ಬೀಚ್‌ನಲ್ಲಿ ಇಂಟಕ್ ಸಂಘಟನೆ, ವಿವಿಧ ಸಂಘಗಳ ಸಹಯೋಗದಲ್ಲಿ ಬೀಚ್ ಫೇಸ್ಟ್ ಹಮ್ಮಿಕೊಂಡ ಕಾರಣ ಮಾಹಿತಿ ತಿಳಿದ ಪ್ರವಾಸಿಗರ ದಂಡು ಇತ್ತ ಹರಿದು ಬಂದು ಕಬಡ್ಡಿ, ಹಗ್ಗಜಗ್ಗಾಟ, ಗಾಳಿಪಟ ಪ್ರದರ್ಶನ ಕಂಡು ಸಂಭ್ರಮಿಸಿದರು.