Advertisement

ನರಗುಂದ ಬೆಟ್ಟಕ್ಕೆ ಪ್ರವಾಸಿ ತಾಣ ಮೆರುಗು

01:21 PM Mar 02, 2021 | Team Udayavani |

ನರಗುಂದ: ಪಟ್ಟಣದ ಐತಿಹಾಸಿಕ ಬೆಟ್ಟ ಇನ್ನು ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳಲಿದೆ. ಹೌದು. ನರಗುಂದ ಸಂಸ್ಥಾನದ ಅರಸ ಬಾಬಾಸಾಹೇಬ ಭಾವೆ ಇತಿಹಾಸದ ಪಳೆಯುಳಿಕೆ ಎಂದೇ ಗುರುತಿಸಿಕೊಂಡು, ಮಲಗಿದ ಸಿಂಹದಂತೆ ಕಾಣುವ ಈ ಬೆಟ್ಟವು ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತನೆ ಹೊಂದಲಿದೆ.

Advertisement

274 ಎಕರೆ ವಿಸ್ತೀರ್ಣ ಹೊಂದಿರುವ ಈ ಬೆಟ್ಟವನ್ನು ಪ್ರವಾಸಿ ತಾಣವಾಗಿಸಲು 20 ಕೋಟಿ ರೂ.ವೆಚ್ಚದ ಯೋಜನೆಯನ್ನು ಅರಣ್ಯ ಇಲಾಖೆಗೆ ಕೈಗೆತ್ತಿಕೊಂಡಿದೆ. ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಕಳೆದ 6 ತಿಂಗಳಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಇನ್ನೊಂದು ತಿಂಗಳಿಗೆ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿದೆ.

ಮನರಂಜನೆಗೆ ವ್ಯವಸ್ಥೆ: ಸಸ್ಯೋದ್ಯಾನದಲ್ಲಿ ಮಕ್ಕಳಿಗೆ ಮನರಂಜನೆಗಾಗಿ ಚುಕ್‌ಬುಕ್‌ ಜಾಲಿಕಾಯಿ, ಜೋಕಾಲಿ, ಜಿಗ್‌ಜಾಗ್‌, ಜಾರುಗುಂಡಿ, ವ್ಯಾಯಾಮ, ಸ್ಪ್ರಿಂಗ್‌ ಬೈಕ್‌, ತಿರುಗುವ ತೊಟ್ಟಿಲು ನಿರ್ಮಿಸಲಾಗಿದೆ. ಸಾರ್ವಜನಿಕರ ವಿಶ್ರಾಂತಿಗಾಗಿ ಗ್ರಾನೈಟ್‌ನ 20, ಸಿಮೆಂಟ್‌ನ 5 ಬೆಂಚ್‌ಗಳನ್ನು ಇಲ್ಲಿ ಹಾಕಲಾಗಿದೆ. ಸುಂದರವಾದ 2 ವಿಶ್ರಾಂತಿ ಕುಟೀರಗಳನ್ನು ನಿರ್ಮಿಸಲಾಗಿದ್ದು, ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಕಟ್ಟಿಗೆಯಿಂದ ತಲಾ 1 ಜೋಕಾಲಿ, ಚುಕ್‌ಬುಕ್‌ ಜಲಿಕಾಯಿ, ಜಿಗ್‌ಜಾಗ್‌, ಬೆಂಚ್‌ಗಳನ್ನು ನಿರ್ಮಿಸುತ್ತಿರುವುದು ಸಸ್ಯೋದ್ಯಾನಕ್ಕೆ ಹೊಸ ಕಳೆ ತಂದುಕೊಟ್ಟಿದೆ.

ಹಸಿರು ತೋರಣ: ಗುಡ್ಡದ ಬದಿಗೆ 40 ಎಕರೆ ಪ್ರದೇಶ ವ್ಯಾಪ್ತಿಯ ಸಸ್ಯೋದ್ಯಾನದಲ್ಲಿ ಚೆರ್ರಿ, ಹಲಸು, ತಪಸಿ, ಪೇರಲ, ಬೇವು, ಎಂಟ್ರಿ, ಆಲ, ಅರಳೆ, ಬಸರಿ, ನೇರಳೆ, ಹುಣಸೆ, ಮಾವು, ಬಾದಾಮಿ ಸೇರಿ ವಿವಿಧ ಜಾತಿ 2 ಸಾವಿರಸಸಿಗಳು ಆಳೆತ್ತರಕ್ಕೆ ಬೆಳೆದು ನಿಂತಿದ್ದು, ಹಸಿರು ತೋರಣದಂತೆ ಗೋಚರಿಸುತ್ತಿದೆ. 2 ಕೊಳವೆ ಬಾವಿ ನೀರಿನ ವ್ಯವಸ್ಥೆಯಿದೆ. ಸಸ್ಯೋದ್ಯಾನ ಒಳಗಿನ ರಸ್ತೆಗಳ ಬದಿಗೆ ಹಸಿರು ಹುಲ್ಲುಹಾಸು ನಿರ್ಮಿಸಲಾಗಿದ್ದು, ಒಂದೆಡೆ ಸುಂದರವಾಗಿ ಕಲ್ಲಿನ ಪಿಚ್ಚಿಂಗ್‌ ಮಾಡಲಾಗಿದೆ. ಉದ್ಯಾನವನವನ್ನೇ ಕಾಣದ ಬಂಡಾಯ ನಾಡು ನರಗುಂದ ಜನರಿಗೆ ಸಸ್ಯೋದ್ಯಾನ ಸಂತಸ ಇಮ್ಮಡಿಗೊಳಿಸಿದೆ

ಸೀತಾಪೇರಲಕ್ಕೆ ಮರುಜೀವ :

Advertisement

ಸಿದ್ದೇಶ್ವರ ಬೆಟ್ಟದಲ್ಲಿರುವ ಸಾವಿರಾರು ಸೀತಾಪೇರಲ ಗಿಡಗಳಿಗೆ ಇದೀಗ ಅರಣ್ಯ ಇಲಾಖೆ ಮರುಜೀವ ನೀಡಿದ್ದು, ಈಗಾಗಲೇ 2 ಸಾವಿರ ಸಸಿಗಳನ್ನು ನೆಟ್ಟಿದ್ದು, ಬೆಟ್ಟದ ಸುತ್ತ 50 ಸಾವಿರ ಸೀತಾಪೇರಲ ಸಸಿ ನೆಡುವ ಗುರಿ ಹೊಂದಿದೆ.

ಜಾಲಿಕಂಟಿ ತೆರವು :

ಸೀತಾಪೇರಲ ವೈಭವದಿಂದ ಕಂಗೊಳಿಸಿದ್ದ ಬೆಟ್ಟದಲ್ಲಿ ಇಂದಿಗೂ ಕೆಲ ಸಸ್ಯಗಳು ಉಳಿದಿವೆ. ಇದೀಗ ಬೆಟ್ಟದ ಸುತ್ತಲೂ ಜಾಲಿಕಂಟಿ ತೆರವುಗೊಳಿಸಿ ತಂತಿಬೇಲಿ ಹಾಕಿ ರಕ್ಷಣೆಯ ಯೋಜನೆ ರೂಪಿಸಲಾಗಿದೆ. ಕೆಲವೆಡೆ ಜಾಲಿಕಂಟಿ ತೆರವು ಮಾಡಿ ಸೀತಾಪೇರಲ ಸಸಿ ನೆಡಲಾಗಿದೆ.

ನರಗುಂದ ಗುಡ್ಡದ 50 ಹೆಕ್ಟೇರ್‌ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸಚಿವ ಸಿ.ಸಿ.ಪಾಟೀಲ ಅವರು 20 ಕೋಟಿ ರೂ. ವೆಚ್ಚದಲ್ಲಿ ಗುಡ್ಡದ ಸಮಗ್ರ ಅಭಿವೃದ್ಧಿಗೆ 2019ರಲ್ಲಿ ಸೂಚನೆ ನೀಡಿದ್ದರು. 1.5 ಕೋಟಿ ರೂ. ವೆಚ್ಚದಲ್ಲಿ ಸಸ್ಯೋದ್ಯಾನ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಇನ್ನೊಂದು ತಿಂಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸಲಾಗುವುದು. – ಎ.ವಿ.ಸೂರ್ಯಸೇನ,ಡಿಸಿಎಫ್‌, ಗದಗ

 

ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next