Advertisement

ಕೋಟ-ಪಡುಕರೆ ಬೀಚ್‌: ಪ್ರವಾಸಿ ತಾಣವಾಗಲು ವಿಪುಲ ಅವಕಾಶ 

01:30 AM Jan 17, 2019 | Harsha Rao |

ಕೋಟ: ಉಡುಪಿ ಜಿಲ್ಲೆಯಲ್ಲಿ ಕೆಲವೇ ಕೆಲವು ಸಮುದ್ರ ಕಿನಾರೆಗಳು ಹೊರತುಪಡಿಸಿದರೆ ಬೇರೆ ಸ್ಥಳಗಳು ಪ್ರವಾಸಿ ತಾಣವಾಗಿ ಅಷ್ಟೊಂದು ಅಭಿವೃದ್ಧಿ ಹೊಂದಿಲ್ಲ. ಆದರೆ ಅಗತ್ಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದರೆ ಕೆಲವು  ಬೀಚ್‌ಗಳು ಉತ್ತಮ ಪ್ರವಾಸಿ ತಾಣವಾಗಿ ಬೆಳೆಯುವುದರಲ್ಲಿ ಅನುಮಾನವಿಲ್ಲ. ಅಂತಹ ಕಡಲ ತೀರಗಳಲ್ಲಿ  ಕೋಟ ಹಾಗೂ ಕೋಟತಟ್ಟು  ಎರಡು ಗ್ರಾ.ಪಂ.ಗೆ ಹೊಂದಿಕೊಂಡಿರುವ  ಮಣೂರು-ಪಡುಕರೆ ಸಮುದ್ರ ತೀರ ಕೂಡ ಒಂದು.

Advertisement

ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 2 ಕಿ.ಮೀ.
ಮಣೂರು-ಪಡುಕರೆಯ ಕಡಲ ತೀರ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 2 ಕಿ.ಮೀ. ದೂರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿಗೆ ಅತೀ ಹತ್ತಿರದಲ್ಲಿರುವ ಬೀಚ್‌ಗಳಲ್ಲಿ ಇದೂ  ಒಂದು. ಉತ್ತಮ ನೈಸರ್ಗಿಕ ಪ್ರವಾಸಿ ತಾಣವಾಗಿದ್ದು, ಬೀಚ್‌ ತನಕ  ರಸ್ತೆ ವ್ಯವಸ್ಥೆ ಇದೆ. ಇಲ್ಲಿನ ಕರಾವಳಿ ಸಂಪರ್ಕ ರಸ್ತೆ ಉತ್ತರಾಭಿಮುಖವಾಗಿ ಕೊರವಾಡಿ, ಬೀಜಾಡಿ, ಕೋಟೇಶ್ವರ ಕಿನಾರ ಹಾಗೂ ಕೋಡಿಯ ವರೆಗೆ ಸಮುದ್ರ ತೀರವಾಗಿ ಸಂಪರ್ಕವನ್ನು ಬೆಸೆದರೆ, ದಕ್ಷಿಣಾಭಿಮುಖವಾಗಿ ಪಾರಂಪಪಳ್ಳಿ, ಕೋಡಿ, ಸಾಸ್ತಾನವನ್ನು ಸಂಪರ್ಕಿಸುತ್ತದೆ.

ಕೊಂಡಿಯಂತಿರುವ ಧಾರ್ಮಿಕ- ಸಾಹಿತ್ಯಿಕ ತಾಣಗಳು
ಕೋಟ ಅಮೃತೇಶ್ವರೀ ದೇವಸ್ಥಾನ ಹಾಗೂ ಕೋಟ ಕಾರಂತ ಕಲಾಭವನ ಮತ್ತು ಈ ಕಡಲ ಕಿನಾರೆ ಮೂರು ಕೂಡ  ಅತೀ ಹತ್ತಿರದಲ್ಲಿ ಒದಕ್ಕೊಂದು ಕೂಡಿಯಂತಿದೆ.  ಹೀಗಾಗಿ ಈ ಮೂರು ಸ್ಥಳಗಳನ್ನು ಒಟ್ಟಾಗಿ ನೋಡಬಹುದು.

ಈಗಾಗಲೇ ಪ್ರವಾಸಿಗರ ಆಕರ್ಷಣೆಯ ತಾಣ
ಇಲ್ಲಿನ ಕಡಲ ಕಿನಾರೆ ತುಂಬಾ ವಿಸ್ತಾರವಾಗಿದ್ದು, ಹೆಚ್ಚು ಆಳವಿಲ್ಲದ ಕಾರಣ ಪ್ರವಾಸಿಗರಿಗೆ ಕಡಲಿಗಿಳಿಯಲು ಸಾಕಷ್ಟು  ಅನುಕೂಲವಿದೆ. ಹೀಗಾಗಿ ಈಗಾಗಲೇ ಹೆಚ್ಚು-ಹೆಚ್ಚು ಪ್ರವಾಸಿಗರನ್ನು ಈ ಪ್ರದೇಶ ಆಕರ್ಷಿಸುತ್ತಿದೆ. ರವಿವಾರ ಹಾಗೂ ಇತರ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು  ತಮ್ಮ ಕುಟುಂಬ ಸದಸ್ಯರೊಂದಿಗೆ  ಇಲ್ಲಿಗೆ ಭೇಟಿ ನೀಡಿ ಖುಷಿ ಅನುಭವಿಸುತ್ತಿದ್ದಾರೆ.

ಅಭಿವೃದ್ಧಿಗೆ ಅಗತ್ಯವಿರುವ ಸೌಕರ್ಯಗಳು
ರಸ್ತೆ ಅಭಿವೃದ್ಧಿ, ವಿದ್ಯುತ್‌ ದೀಪದ ವ್ಯವಸ್ಥೆ, ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಪುಟ್ಟ ಮಕ್ಕಳಿಗೆ ಆಟವಾಡಲು ಪಾರ್ಕ್‌,  ಪಾರ್ಕಿಂಗ್‌ ವ್ಯವಸ್ಥೆ, ತಿಂಡಿ-ತಿನಿಸುಗಳ ಸ್ಟಾಲ್‌ ಇದೇ ರೀತಿ  ಪ್ರವಾಸಿಗರನ್ನು ಆಕರ್ಷಿಸಲು ಅನುಕೂಲವಾಗುವಂತೆ ಮೂಲ ಸೌಕರ್ಯವನ್ನು ವ್ಯವಸ್ಥೆಗೊಳಿಸಿದಲ್ಲಿ ಸಾಕಷ್ಟು ಅನುಕೂಲವಾಗಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. 

Advertisement

ಪ್ರಸ್ತಾವನೆ ಸಲ್ಲಿಸಲಾಗಿದೆ
ಮಣೂರು-ಪಡುಕರೆಯ ಕಡಲ ತೀರವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಮೂರ್‍ನಾಲ್ಕು ವರ್ಷಗಳ ಹಿಂದೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆಗ ಸಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತು. ಆದರೆ ಅನಂತರ ಯಾವುದೇ ಕೆಲಸಗಳಾಗಲಿಲ್ಲ. ಇದೀಗ ಸ್ಥಳೀಯ ಗೀತಾನಂದ ಫೌಂಡೇಶನ್‌ವರು ಇಲ್ಲಿಗೆ ಕಲ್ಲು ಬೆಂಚ್‌ ಅಳವಡಿಸುವುದಾಗಿ ತಿಳಿಸಿದ್ದಾರೆ. ಜಿ.ಪಂ. ಅನುದಾನದಲ್ಲಿ ಸ್ವಲ್ಪ ದೂರ ರಸ್ತೆ ಆಗಿದೆ. ಈ ಕುರಿತು ಸರಕಾರಕ್ಕೆ ಮತ್ತೂಮ್ಮೆ ಮನವಿ ಸಲ್ಲಿಸಲಿದ್ದೇವೆ.
-ಭುಜಂಗ ಗುರಿಕಾರ, ಸ್ಥಳೀಯ ವಾರ್ಡ್‌ ಸದಸ್ಯರು, ಗ್ರಾ.ಪಂ. ಕೋಟ

Advertisement

Udayavani is now on Telegram. Click here to join our channel and stay updated with the latest news.

Next