Advertisement

ಪ್ರವಾಸೋದ್ಯಮಕ್ಕೆ ಮರುಜೀವ

05:30 PM Oct 07, 2020 | Suhan S |

ಚಿಕ್ಕಮಗಳೂರು: ಜಿಲ್ಲೆ ಕಾಫಿಗೆ ಮಾತ್ರ ಪ್ರಸಿದ್ಧಿಯಾಗಿಲ್ಲ. ಪ್ರಕೃತಿ ಸೌಂದರ್ಯವನ್ನು ತನ್ನ ಮಡಿಲಲ್ಲಿ ತುಂಬಿಕೊಂಡಿರುವ ಪ್ರವಾಸಿ ಕೇಂದ್ರ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಹೆಸರು ವಾಸಿಯಾಗಿದ್ದು, ದೇಶ-ವಿದೇಶದಿಂದ ಸಾವಿರಾರು ಪ್ರವಾಸಿಗರು ಸರ್ವ ಋತುವಿನಲ್ಲೂ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ, ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆಗುಂದಿದ್ದ ಪ್ರವಾಸೋದ್ಯಮ ಸದ್ಯ ಚೇತರಿಸಿಕೊಳ್ಳುತ್ತಿದೆ.

Advertisement

ರಾಜ್ಯ ಮತ್ತು ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಮೇ ತಿಂಗಳಲ್ಲಿ ಪ್ರವಾಸಿ ತಾಣಗಳ ಭೇಟಿಗೆ ನಿರ್ಬಂಧಿಸಲಾಗಿತ್ತು. ಇದರಿಂದ ಮುಳ್ಳಯ್ಯನಗಿರಿ, ದತ್ತಪೀಠ, ಕೆಮ್ಮಣ್ಣುಗುಂಡಿ ಗಿರಿಧಾಮ, ಕಲ್ಲತ್ತಗಿರಿ ಜಲಪಾತ, ಹೆಬ್ಬೆ ಜಲಪಾತ, ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಶಾರದಾಂಬೆ ದೇವಾಲಯ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಕಳಶೇಶ್ವರ ದೇವಾಲಯಗಳಲ್ಲಿ ಭಕ್ತರಿಲ್ಲದೆ ಮತ್ತು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಲ್ಲದೆ ಕಳೆಗುಂದಿದ್ದವು. ಆಗಸ್ಟ್‌ ತಿಂಗಳಲ್ಲಿ ಪ್ರವಾಸಿ ತಾಣಗಳಿಗಿದ್ದ ನಿರ್ಬಂಧವನ್ನು ಸಡಿಲಗೊಳಿಸಿದ್ದು, ಕಮರಿ ಹೋಗಿದ್ದ ಪ್ರವಾಸಿ ತಾಣಗಳು ಮತ್ತೆ ಚಿಗುರೊಡೆಯುತ್ತಿವೆ.

ಆಗಸ್ಟ್‌ ತಿಂಗಳಲ್ಲಿ ಶೃಂಗೇರಿ ದೇವಾಲಯಕ್ಕೆ ದೇಶ ಹಾಗೂ ರಾಜ್ಯದ ವಿವಿಧ ಭಾಗಗಳಿಂದ 65,100ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ 50,054ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಕಳಶೇಶ್ವರದೇವಾಲಯಕ್ಕೆ 2,100, ಚಿಕ್ಕಮಗಳೂರು ನಗರಕ್ಕೆ 3,243ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದು 1,20,488ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. ಸೆಪ್ಪೆಂಬರ್‌ ತಿಂಗಳಲ್ಲಿ ಶೃಂಗೇರಿ ದೇವಾಲಯಕ್ಕೆ ದೇಶ ಹಾಗೂ ರಾಜ್ಯದ ವಿವಿಧ ಭಾಗದಿಂದ 84,300ಕ್ಕೂ ಹೆಚ್ಚು ಜನರು, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ 68,530, ಕಳಶೇಶ್ವರ ದೇವಾಲಯಕ್ಕೆ 15,000, ದತ್ತಪೀಠ ಮತ್ತು ಮುಳ್ಳಯ್ಯನಗಿರಿ ಪ್ರದೇಶಕ್ಕೆ 15,300ಕ್ಕೂ ಹೆಚ್ಚು ಜನರು, ಚಿಕ್ಕಮಗಳೂರು ನಗರಕ್ಕೆ 4,272ಕ್ಕೂ ಹೆಚ್ಚು ಜನರು, ಕೆಮ್ಮಣ್ಣಗುಂಡಿ ಗಿರಿಧಾಮಕ್ಕೆ 7,542ಕ್ಕೂ ಹೆಚ್ಚು ಪ್ರವಾಸಿಗರು ಸೇರಿದಂತೆ 1,94,944ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ದಿನದಿಂದ ದಿನಕ್ಕೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಕಳೆಗುಂದಿದ್ದ ಪ್ರವಾಸಿ ಕೇಂದ್ರಗಳು ಮತ್ತೆ ಮರುಜೀವ ಪಡೆದುಕೊಳ್ಳುತ್ತಿವೆ.

ಗರಿಗೆದರಿದ ವ್ಯಾಪಾರ ವಹಿವಾಟು,ವಾಣಿಜೋದ್ಯಮ: ಕೋವಿಡ್‌-19 ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗಿದ್ದ ನಿರ್ಬಂಧದಿಂದ ಪ್ರವಾಸಿ ತಾಣಗಳಲ್ಲಿನ ವ್ಯಾಪಾರ- ವಹಿವಾಟು ವಾಣಿಜ್ಯೋದ್ಯಮ ಸ್ಥಗಿತಗೊಂಡಿತ್ತು. ಇದನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಸಾವಿರಾರು ಕುಟುಂಬಗಳು ಆರ್ಥಿಕ ಹೊಡೆತಕ್ಕೆ ನಲುಗಿ ಹೋಗಿದ್ದವು. ಸದ್ಯ ಆಗಸ್ಟ್‌ ನಂತರ ಕೋವಿಡ್‌-19 ಮಾರ್ಗಸೂಚಿ ಪಾಲನೆಯೊಂದಿಗೆ ಪ್ರವಾಸಿ ತಾಣಗಳ ಭೇಟಿಗೆ ಜಿಲ್ಲಾಡಳಿತ ಅವಕಾಶ ನೀಡಿದ್ದು, ಸದ್ಯ ಪ್ರವಾಸೋದ್ಯಮ ಚೇತರಿಕೆಯೊಂದಿಗೆ ವ್ಯಾಪಾರ- ವಹಿವಾಟು ಗರಿಗೆದರಿದೆ. ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳು ಆರ್ಥಿಕವಾಗಿ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿವೆ. ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳಲ್ಲಿ ವ್ಯಾಪಾರ- ವಹಿವಾಟು ಚೇತರಿಕೆ ಕಂಡು ಬರುತ್ತಿದೆ.

ವಾರಾಂತ್ಯದಲ್ಲಿ ಹರಿದು ಬರುತ್ತಿರುವ ಪ್ರವಾಸಿಗರ ದಂಡು: ಪ್ರತೀದಿನ ಜಿಲ್ಲೆಯ ಪ್ರಕೃತಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಬರುತ್ತಾರೆ. ಅದರಲ್ಲೂ ವಾರಾಂತ್ಯವಾದ ಶನಿವಾರ ಮತ್ತು ಭಾನುವಾರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ.

Advertisement

“ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ. ಪ್ರವಾಸೋದ್ಯಮ ಅವಲಂಬಿಸಿಕೊಂಡಿರುವ ವ್ಯಾಪಾರ- ವಹಿವಾಟು, ವಸತಿ, ಹೊಟೇಲ್‌ ಉದ್ಯಮಗಳು ಚೇತರಿಸಿಕೊಳ್ಳುತ್ತಿವೆ. –ಉಮೇಶ್‌, ಪ್ರವಾಸೋದ್ಯಮ ಇಲಾಖೆ ಅಧಿಕಾರಿ

 

-ಸಂದೀಪ ಜಿ.ಎನ್‌.ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next