Advertisement

ಪ್ರವಾಸಿಗರ ಸ್ವರ್ಗ “ಗೋಲ್ಡ್‌ ಕೋಸ್ಟ್‌’,ಆಸ್ಟ್ರೇಲಿಯಾದ ಅದ್ಭುತ ದ್ವೀಪ

03:45 AM Jul 03, 2017 | Harsha Rao |

ಆಸ್ಟ್ರೇಲಿಯಾ ಎಂದಾಕ್ಷಣ ತಟ್ಟನೆ ಕಣ್ಣ ಮುಂದೆ ಬರುವುದು ಸುಂದರ, ಆಕರ್ಷಕ, ರಮಣೀಯ ಸಿಡ್ನಿ, ಮೆಲ್ಬೋರ್ನ್ ನಗರಗಳು. ಇದೀಗ ಆ ಸಾಲಿಗೆ ಕ್ವೀನ್ಸ್‌ಲ್ಯಾಂಡ್‌ ರಾಜ್ಯದ “ಗೋಲ್ಡ್‌ ಕೋಸ್ಟ್‌’ ಸೇರ್ಪಡೆಯಾಗಿದ್ದು, ಆಸ್ಟ್ರೇಲಿಯಾಗೆ ಭೇಟಿ ನೀಡುವ ಪ್ರವಾಸಿಗರನ್ನು ತನ್ನತ್ತ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತಿದೆ.

Advertisement

ಆಸ್ಟ್ರೇಲಿಯಾದ ಆರನೇ ಅತಿ ದೊಡ್ಡ ನಗರ ಗೋಲ್ಡ್‌ ಕೋಸ್ಟ್‌. ದೊಡ್ಡ ನಗರ ಎಂದರೆ ಕರ್ನಾಟಕದ ಬೆಂಗಳೂರು, ಬೆಳಗಾವಿ, ಆಂಧ್ರದ ಹೈದರಾಬಾದ್‌, ತಮಿಳುನಾಡಿನ ಚೆನ್ನೈ, ಮಹಾರಾಷ್ಟ್ರದ ಮುಂಬೈನಷ್ಟು ಎಂದು ಭಾವಿಸಬೇಕಿಲ್ಲ. ಆಸ್ಟ್ರೇಲಿಯಾದ ಇತರೆ ನಗರಗಳಿಗೆ ಹೋಲಿಸಿದೆ ಇದು ದೊಡ್ಡದೇ. 160 ಚದರ ಕಿ.ಮೀ. ವಿಸ್ತೀರ್ಣ, 6,38,090 ಜನಸಂಖ್ಯೆ ಹೊಂದಿರುವ ವ್ಯವಸ್ಥಿತ ನಿರ್ಮಾಣದ ಸುಂದರ ನಗರ ಗೋಲ್ಡ್‌ ಕೋಸ್ಟ್‌.

ಮುಂದಿನ ವರ್ಷ (2018) ಕಾಮನ್‌ವೆಲ್ತ್‌ ಕ್ರೀಡಾಕೂಟ  ನಡೆಯುವುದು ಇದೇ “ಗೋಲ್ಡ್‌ ಕೋಸ್ಟ್‌’ ನಗರದಲ್ಲಿ ಎಂಬುದು ಗಮನಾರ್ಹ ಸಂಗತಿ. 

ಒಂದು ವಿಶ್ವದರ್ಜೆಯ ನಗರ ಹೇಗಿರಬಹುದು ಎಂಬುದಕ್ಕೆ ಗೋಲ್ಡ್‌ ಕೋಸ್ಟ್‌ ಅತ್ಯುತ್ತಮ ಉದಾಹರಣೆ. ಭಾರತದ ಬಹುತೇಕ ಮಹಾನಗರಗಳಲ್ಲಿ ಸಂಚಾರ ದಟ್ಟಣೆಯೇ ಅತಿ ದೊಡ್ಡ ಸವಾಲು. ಜತೆಗೆ ಸುಸಜ್ಜಿತ ನಗರ ರೈಲು, ಬಸ್‌ ಸಾರಿಗೆ ವ್ಯವಸ್ಥೆಗೆ ಸಾವಿರಾರು ಎಕರೆ ಪ್ರದೇಶದ ಸ್ವಾಧೀನ, ಮೇಲ್ಸೇತುವೆ, ಸುರಂಗ ಮಾರ್ಗ ಗೊಡವೆಯೇ ಜಾಸ್ತಿ.
ಆದರೆ, ಗೋಲ್ಡ್‌ ಕೋಸ್ಟ್‌ ನಗರದಲ್ಲಿ ರಸ್ತೆಯ ಮೇಲೆಯೇ ಹಳಿ ಅಳವಡಿಸಿ ನಗರದ ಪ್ರಮುಖ ಸ್ಥಳ ಸಂಪರ್ಕಿಸುವ 13 ಕಿ.ಮೀ. ಹಗುರ ರೈಲು ಸೇವೆ ಗಮನ ಸಳೆಯುತ್ತದೆ. ಆಸ್ಟ್ರೇಲಿಯಾ, ಇನ್ನೊಂದು ಸುಂದರ ನಗರ ಬ್ರಿಸ್ಬೇನ್‌, ಗೋಲ್ಡ್‌ ಕೋಸ್ಟ್‌ಗೆ ಅತಿ ಸಮೀಪದಲ್ಲಿದೆ.  ಗೋಲ್ಡ್‌ ಕೋಸ್ಟ್‌- ಬ್ರಿಸ್ಬೇನ್‌ ನಡುವೆಯೂ ರೈಲು ಸೇವೆಯಿದೆ.

ವಿಶ್ವದ ಅತ್ಯುತ್ತಮ ಬೀಚ್‌ಗಳಲ್ಲಿ ಒಂದಾದ ಸಫ‌Åಸ್‌ ಪ್ಯಾರಡೈಸ್‌ ಬೀಚ್‌ ಗೋಲ್ಡ್‌ ಕೋಸ್ಟ್‌ ನಗರದ ಹೃದಯ ಭಾಗದಲ್ಲಿದೆ. ಕಡಲ ಕಿನಾರೆಯಲ್ಲಿ ಶಾಪಿಂಗ್‌ ಮಳಿಗೆಗಳು ಇವೆ. ಅಲ್ಲಿ ಒಂದು ಸುತ್ತು ಹಾಕಿದರೆ ಆಸ್ಟ್ರೇಲಿಯಾದ ಕಲೆ, ಸಂಸ್ಕೃತಿ, ಉಡುಪು-ಊಟ ಹೀಗೆ ವೈವಿದ್ಯಮಯ ಆಚರಣೆಗಳ ಸಮಗ್ರ ದರ್ಶನವಾಗಲಿದೆ.

Advertisement

ಗೋವಾದಲ್ಲಿರುವ ಕಲಂಗೋಟ್‌ ಬೀಚ್‌ನಂತೆ ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲೂ ಆ ಹೆಸರಿನ ಕೊಲಂಘಟ್‌ ಬೀಚ್‌ ಇದೆ.  ಎರಡೂ ಕಡಲ ಕಿನಾರೆಗಳಲ್ಲೂ ವಿಶ್ವದರ್ಜೆಯ ಹೋಟೆಲ್‌, ತಂಗುದಾಣ, ಪ್ರವಾಸಿಗರಿಗೆ ಥ್ರಿಲ್‌ ನೀಡುವ ಸಾಹಸ ಜಲಕ್ರೀಡೆ, ಜೆಟ್‌ ಬೋಟಿಂಗ್‌ ಸಹ ಇದೆ. ಜೆಟ್‌ ಬೋಟಿಂಗ್‌ ಸಂದರ್ಭದಲ್ಲಿ ಆಸ್ಟ್ರೇಲಿಯಾ ಎಂದಾಕ್ಷಣ ನೆನಪಾಗುವ “ಕಾಂಗರೂವನ್ನು’ ಸಹ ನೋಡಬಹುದು.

ಸಫ‌Åರ್ಸ್‌ ಪ್ಯಾರಡೈಸ್‌ ಶಾಪಿಂಗ್‌ ಮಾಲ್‌, ಗೋಲ್ಡ್‌ ಕೋಸ್ಟ್‌ ನಗರದ ಮತ್ತೂಂದು  ಆಕರ್ಷಣೀಯ ತಾಣ. ಇದು ನಗರದ ಕಮರ್ಷಿಯಲ್‌ ಹಬ್‌ ಸಹ ಹೌದು.  ಇದರ ಸಮೀಪವೇ ಇರುವ ವಿಶ್ವದ 25 ಅತಿ ಎತ್ತರದ  “ಸ್ಕೈಪಾಯಿಂಟ್‌ ಕ್ಲಿಂಬ್‌’ ಕಟ್ಟಡವೂ ಇದೆ. 77 ಅಂತಸ್ತುಗಳನ್ನು ಲಿಪ್ಟ್ನಲ್ಲಿ 47 ಸೆಕೆಂಡ್‌ಗಳಲ್ಲಿ ತಲುಪಬಹುದಾದ, ಸಮುದ್ರ ಮಟ್ಟಕ್ಕಿಂತ 270 ಮೀಟರ್‌ ಮೇಲಿರುವ ಒಟ್ಟಾರೆ 322.5 ಮೀಟರ್‌ನ  ಈ ಕಟ್ಟಡ ನ್ಯೂಯಾರ್ಕ್‌ನ ಕ್ರಿಸ್ಲರ್‌ ಕಟ್ಟಡಕ್ಕಿಂತಲೂ ಎತ್ತರದ್ದು.

ಈ ಕಟ್ಟಡದ ಮೇಲೆ ನಿಂತರೆ ಇಡೀ ಗೋಲ್ಡ್‌ ಕೋಸ್ಟ್‌ ನಗರವಷ್ಟೇ ಅಲ್ಲ, ಪಕ್ಕದ ಬ್ರಿಸ್ಬೇನ್‌ ನಗರವೂ ಕಾಣುತ್ತದೆ. ಇದರ ಮೇಲೆ ಹತ್ತುವುದೇ ಒಂದು ರೋಮಾಂಚನ.  ಬೆಳಗಿನ ಉಪಹಾರದೊಂದಿಗೆ ಸ್ಕೈ ಪಾಯಿಂಟ್‌ ಕ್ಲಿಂಬ್‌ ಕಟ್ಟಡದ ಮೇಲೆ ಏರುವ ಹಾಗೂ ಸೆಲ್ಫಿ ಸಮೇತ ಛಾಯಾಚಿತ್ರ ತೆಗೆದುಕೊಳ್ಳುವ ಅವಕಾಶವೂ ಇಲ್ಲುಂಟು.

ಅದ್ಭುತ ಜಗತ್ತು
ಪ್ರವಾಸಿಗರನ್ನು ಆಕರ್ಷಿಸಲು ಏನೆಲ್ಲಾ ಮಾಡಬಹುದು ಎಂಬುದಕ್ಕೂ ಗೋಲ್ಡ್‌ ಕೋಸ್ಟ್‌ನಗರ ಸಾಕ್ಷಿ. ಬೆಳ್ಳಂ ಬೆಳಗ್ಗೆ ವೈನ್‌ ಯಾರ್ಡ್‌ನಲ್ಲಿ ಉಪಹಾರದ ಜತೆಗೆ ಬಾನಿನಲ್ಲಿ ಹಕ್ಕಿಗಳಂತೆ ಹಾರಾಟ ಮಾಡಿಸುವ “ಹಾಟ್‌ ಏರ್‌ ಬಲೂನ್‌’, ಅದ್ಭುತ ಲೋಕದ ಪಯಣ ಮಾಡಿಸುವ “ಇನ್ಫಿನಿಟಿ’,  ನ್ಯಾಷನಲ್‌ ಪಾರ್ಕ್‌ ಅರಣ್ಯದಲ್ಲಿ 100 ಕಿ.ಮೀ. ಸ್ಪೀಡ್‌ನ‌ಲ್ಲಿ, ಕೆಲವೇ ಸೆಕೆಂಡ್‌ಗಳಲ್ಲಿ ಒಂದು ತುದಿಯಿಂದ ಮತ್ತೂಂದು ತುದಿಗೆ ತಲುಪಿಸುವ “ಕೇಬಲ್‌ ರೋಪ್‌ ಅಡ್ವೆಂಚರ್‌’, ಹೆಲಿಕಾಪ್ಟರ್‌ನಲ್ಲಿ ನಗರ ಪ್ರದಕ್ಷಿಣೆ, ರೇಸ್‌ಕೋರ್ಸ್‌ನಲ್ಲಿ ಕುದುರೆ ಸವಾರಿ ಎಲ್ಲವೂ ಇಲ್ಲುಂಟು. 

ಗೋಲ್ಡ್‌ ಕೋಸ್ಟ್‌ನಲ್ಲಿ ಕುಟುಂಬ ಸಮೇತ ನೋಡಲೇಬೇಕಾದ, ಮಕ್ಕಳಿಂದ ಹಿರಿಯರವರೆಗೆ ಮನರಂಜನೆ ನೀಡುವ, ಇಡೀ ದಿನ ಸುತ್ತಾಡಿದರೂ ಮತ್ತೆ ಮತ್ತೆ ನೋಡಬೇಕು ಎನಿಸುವ ತಾಣ “ಸೀ ವರ್ಲ್ಡ್ ರೆಸಾರ್ಟ್‌’ ನ ಥೀಮ್‌ ಪಾರ್ಕ್‌.   ಇಲ್ಲಿ ಪೋಲಾರ್‌ ಬೇರ್‌, ಪೆಂಗ್ವಿನ್‌, ನಕ್ಷತ್ರ ಮೀನು, ಡಾಲ್ಫಿನ್‌, ಶಾರ್ಕ್ಸ್  ಆಸ್ಟ್ರೇಲಿಯಾದ ಹಾಗೂ ಜಗತ್ತಿನ ಎಲ್ಲ ಜಾತಿಯ ಅಪರೂಪದ ಪ್ರಾಣಿ, ಪಕ್ಷಿಗಳನ್ನೂ ಕಾಣಬಹುದು. 

ಡಾಲ್ಫಿನ್‌ ಶೋ ಇಲ್ಲಿನ ಪ್ರಮುಖ ಆಕರ್ಷಣೆ. ತರಬೇತುದಾರರು ಹೇಳಿದಂತೆ ಕೇಳುವ, ನೀರಿನಲ್ಲಿ ನರ್ತನ, ಜಂಪಿಂಗ್‌, ಸಾಹಸ ಪ್ರದರ್ಶಿಸುವ ಡಾಲ್ಫಿನ್‌ಗಳ ಲೋಕ ಪ್ರವಾಸಿಗರನ್ನೇ ಮೂಕವಿಸ್ಮಿತರನ್ನಾಗಿಸುತ್ತದೆ. 

“ಡ್ರಾಕುಲಾ ನೈಟ್‌ ಶೋ’ ಗೋಲ್ಡ್‌ ಕೋಸ್ಟ್‌ನ ರಂಗೀನ್‌ ರಾತ್ರಿ ಎಂದೇ ಹೇಳಬಹುದು. ಮಧುಚಂದ್ರಕ್ಕಾಗಿ ಆಸ್ಪ್ರೆàಲಿಯಾಕ್ಕೆ ಹೋದವರು ಇಲ್ಲಿಗೆ ಹೋಗದೆ ಬರುವುದಿಲ್ಲ. ನೃತ್ಯ, ಹಾಡು, ಹಾಸ್ಯ, ಭರ್ಜರಿ ಪಾನೀಯದ ಜತೆಗೆ ಆಸ್ಟ್ರೇಲಿಯಾದ ವೈವಿದ್ಯಮಯ ತಿಂಡಿ, ತಿನಿಸು ಸಮೇತ ಪ್ಯಾಕೇಜ್‌. ಸುಮಾರು ಎರಡು ಗಂಟೆಗಳ  ಡ್ರಾಕುಲಾ ನೈಸ್‌ ಶೋ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತದೆ.

ಗೋಲ್ಡ್‌ಕೋಸ್ಟ್‌ ನಗರದ ಪ್ರಮುಖ ಆದಾಯ ಪ್ರವಾಸೋದ್ಯಮದಿಂದಲೇ. 2.5 ಶತಕೋಟಿ ಡಾಲರ್‌ ವಾರ್ಷಿಕ ಆದಾಯ ಹೊಂದಿದೆ. ಕ್ವೀನ್ಸ್‌ಲ್ಯಾಂಡ್‌ನ‌ ಜನಪ್ರಿಯ ಪ್ರವಾಸಿ ತಾಣ ಗೋಲ್ಡ್‌ ಕೋಸ್ಟ್‌. ಜತೆಗೆ ಆಸ್ಟ್ರೇಲಿಯಾದಲ್ಲಿ  ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಐದನೇ ತಾಣವೂ ಗೋಲ್ಡ್‌ಕೋಸ್ಟ್‌.

ಸಿನಿಮಾ ಹಬ್‌
ಕ್ವೀನ್ಸ್‌ಲ್ಯಾಂಡ್‌ನ‌ ಗೋಲ್ಡ್‌ ಕೋಸ್ಟ್‌ ನಗರಿ ಸಿನಿಮಾ ನಿರ್ಮಾಣದ ಹಬ್‌ ಸಹ ಹೌದು. ಸಿಡ್ನಿ , ಮೆಲ್ಬೋರ್ನ್ ನಂತರ ಅತಿ ಹೆಚ್ಚು ಸಿನಿಮಾ ಚಿತ್ರೀಕರಣ ಆಗುವುದು ಇಲ್ಲೇ. ಸಿನಿಮಾ ಚಿತ್ರೀಕರಣದ ನಂತರದ ಗ್ರಾಫಿಕ್ಸ್‌, ಎಡಿಟಿಂಗ್‌, ಜೋಡಣೆ ವ್ಯವಸ್ಥೆಯೂ ಇಲ್ಲಿದ್ದು, ರಾಜ್ಯ ಸರ್ಕಾರವು ಇದಕ್ಕೆ ಹೆಚ್ಚು ಪ್ರೋತ್ಸಾಹ ನೀಡಿ ಪ್ರತ್ಯೇಕ ನೀತಿ ರೂಪಿಸಿದೆ. ಭಾರತೀಯ ಚಿತ್ರಗಳು ಸಹ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರೀಕರಣಗೊಳ್ಳುತ್ತವೆ.

10 ದಶಲಕ್ಷ ಪ್ರವಾಸಿಗರು ವಾರ್ಷಿಕವಾಗಿ ಗೋಲ್ಡ್‌ ಕೋಸ್ಟ್‌ಗೆ ಭೇಟಿ ನೀಡುತ್ತಿದ್ದು ,  ಆ  ಪೈಕಿ ಭಾರತೀಯರ ಸಂಖ್ಯೆಯೂ ಹೆಚ್ಚಾಗಿದೆ. ಭಾರತೀಯರು ಆಸ್ಟ್ರೇಲಿಯಾಗೆ ಭೇಟಿ ನೀಡಿದಾಗ ಅತಿ ಹೆಚ್ಚು ಭೇಟಿ ನೀಡುವ ಸ್ಥಳ ಗೋಲ್ಡ್‌ ಕೋಸ್ಟ್‌. 

ಆಸ್ಟ್ರೇಲಿಯಾಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದ್ದು 2017 ಮಾರ್ಚ್‌ ಅಂತ್ಯಕ್ಕೆ 2,67,500 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.15.4 ರಷ್ಟು ಹೆಚ್ಚಳ. 

ಟೈಗರ್‌ ಏರ್‌ -ಸ್ಕೂಟ್‌ 
– ಏಷ್ಯಾದಲ್ಲಿ ಕಡಿಮೆ ದರದ ವಿಮಾನಯಾನ ಸೇವೆಗೆ ಹೆಸರಾಗಿರುವ ಟೈಗರ್‌ ಏರ್‌ ಹಾಗೂ ಸ್ಕೂಟ್‌ ಜತೆಗೂಡಿ ಆಸ್ಟ್ರೇಲಿಯಾಗೆ ಪ್ಯಾಕೇಜ್‌ಗಳನ್ನು ರೂಪಿಸಿದೆ. ಭಾರತದ ಪ್ರಮುಖ ನಗರಗಳಿಂದ ಸಿಂಗಪುರ್‌ ಹಾಗೂ ಅಲ್ಲಿಂದ ಆಸ್ಟ್ರೇಲಿಯಾಗೆ ತೆರಳಲು ವಿಮಾನ ಸೇವೆ ಕಲ್ಪಿಸಿವೆೆ. ಟೈಗರ್‌ ಏರ್‌ ಸಂಸ್ಥೆಯು 23 ಏರ್‌ಬಸ್‌-320 ಹೊಂದಿದ್ದು, 12 ದೇಶಗಳ 41 ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, 2015-16 ನೇ ಸಾಲಿನಲ್ಲಿ  5.1 ದಶಲಕ್ಷ ಪ್ರವಾಸಿಗರು ಸಂಚರಿಸಿದ್ದಾರೆ. ಸ್ಕೂಟ್‌ ಸಂಸ್ಥೆಯು 14 ಬೋಯಿಂಗ್‌-787 ವಿಮಾನ ಹಿಂದಿದ್ದು, 9 ದೇಶಗಳ 23 ನಗರಗಳಲ್ಲಿ ಸಂಪರ್ಕ ವ್ಯವಸ್ಥೆ ಕಲ್ಪಿಸಿದ್ದು, 2015-16 ನೇ ಸಾಲಿನಲ್ಲಿ 29 ದಶಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಪ್ರವಾಸಿ ತಾಣಗಳಲ್ಲಿ ವಸತಿ, ಕಾರು, ಇತರೆ ವ್ಯವಸ್ಥೆಗಳನ್ನೂ ಟೈಗರ್‌ ಏರ್‌ ವೆಬ್‌ಸೈಟ್‌ ಮೂಲಕವೇ ಪ್ರವಾಸಿಗರು ಕಾಯ್ದಿರಿಸುವ ವ್ಯವಸ್ಥೆ ಸಹ ಎರಡೂ ಸಂಸ್ಥೆಗಳಲ್ಲಿ ಕಲ್ಪಿಸಲಾಗಿದೆ. ಎರಡೂ ಸಂಸ್ಥೆಗಳಲ್ಲಿ  ಮೂರು ಅಥವಾ ಎರಡು ತಿಂಗಳ ಮುಂಚಿತವಾಗಿ ಕಾಯ್ದಿರಿಸಿದರೆ ಪ್ರಯಾಣ ಶುಲ್ಕದಲ್ಲಿ ಶೇ.45 ರಿಂದ 50 ರಷ್ಟು ರಿಯಾಯಿತಿ ಸಹ ನೀಡುತ್ತಿವೆ.  
ಅತ್ಯುತ್ತಮ ಕಡಿಮೆ ದರದ ವಿಮಾನಯಾನ ಸೇವಾ ಸಂಸ್ಥೆ  ಪ್ರಶಸ್ತಿ (ಏಷ್ಯಾಓನ್‌ ಪೀಪಲ್ಸ್‌ ಚಾಯ್ಸ ಅವಾರ್ಡ್‌) ಸೇರಿದಂತೆ ಹಲವು ಪ್ರಶಸ್ತಿಗಳು ಈ ಸಂಸ್ಥೆಗಳಿಗೆ ಲಭಿಸಿದೆ. 

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next