Advertisement

ಶ್ರೀರಂಗಪಟ್ಟಣದಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆ

08:19 PM Nov 12, 2020 | Suhan S |

 

Advertisement

ಶ್ರೀರಂಗಪಟ್ಟಣ: ಕೋವಿಡ್ ಲಾಕ್‌ಡೌನ್‌ನಿಂದ ಬಂದ್‌ ಮಾಡಲಾಗಿದ್ದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದೆ. ಅಲ್ಲದೆ, ದೇವಾಲಯಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಶ್ರೀರಂಗಪಟ್ಟಣ ಪ್ರವಾಸಿ ತಾಣಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ.

ಕೋವಿಡ್‌-19 ಹಿನ್ನೆಲೆ ಎಲ್ಲ ಪ್ರವಾಸಿ ತಾಣಗಳು ಹಾಗೂ ದೇವಾಲಯಗಳಿಗೆ ನಿರ್ಬಂಧ ಹೇರಿದ್ದರಿಂದ ಶ್ರೀರಂಗಪಟ್ಟಣ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿತ್ತು. ದೇವಾಲಯಗಳು ಭಕ್ತರಿಲ್ಲದೆ ಭಣಗುಡುತ್ತಿದ್ದವು. ಆದರೆ, ಕಳೆದ ಒಂದೂವರೆ ತಿಂಗಳಿಂದ ಎಲ್ಲ ನಿರ್ಬಂಧಗಳನ್ನು ಸರ್ಕಾರ ಸಡಿಲಗೊಳಿಸಿದ್ದರಿಂದ ಪ್ರತಿದಿನ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಹೊರ ರಾಜ್ಯಗಳ ಪ್ರವಾಸಿಗರ ದಂಡು: ಕೋವಿಡ್ ರಾಜ್ಯ ಮತ್ತು ಜಿಲ್ಲೆಯಲ್ಲಿ ಇಳಿಕೆಯಾಗುತ್ತಿದ್ದು, ಸಾರ್ವ ಜನಿಕರು ಹಾಗೂ ಪ್ರವಾಸಿಗರು ಓಡಾಟ ಆರಂಭಿಸಿದ್ದಾರೆ. ಶನಿವಾರ ಮತ್ತು ಭಾನುವಾರ ಸೇರಿದಂತೆ ರಜಾ ದಿನಗಳಲ್ಲಿ ಕೆಆರ್‌ ಎಸ್‌ ಬೃಂದಾವನ, ಪಕ್ಷಿಧಾಮ, ಕಾವೇರಿ ಸಂಗಮ ಸೇರಿದಂತೆ ಇಲ್ಲಿನ ವಿವಿಧ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮಾಡಲು ವಿವಿಧ ಜಿಲ್ಲೆ, ರಾಜ್ಯಗಳಿಂದ ಪ್ರವಾಸಿಗರು ಹಾಗೂ ಭಕ್ತರು ಆಗಮಿಸುತ್ತಿದ್ದಾರೆ. ಪ್ರಸಿದ್ಧ ಶ್ರೀರಂಗನಾಥ ಹಾಗೂ ನಿಮಿಷಾಂಬ ದೇವಾಲಯಗಳಿಗೂ ಬೆಂಗಳೂರು ಸೇರಿದಂತೆ ಇತರೆ ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದು, ದೇವರ ದರ್ಶನ ಪಡೆದು ನಂತರ ಇತರ ಪ್ರವಾಸಿ ತಾಣಗಳಿಗೆ ಲಗ್ಗೆ ಇಡುತ್ತಿದ್ದಾರೆ.

ಮುನ್ನೆಚ್ಚರಿಕೆ ಕ್ರಮ: ದೇವಾಲಯಗಳಿಗೆ ಆಗಮಿಸುವ ಭಕ್ತರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ದೇವಾಲಯಗಳಲ್ಲಿ ಸೂಚನೆಗಳನ್ನು ನೀಡಲಾಗುತ್ತಿದೆ. ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸೂಚನಾ ಫ‌ಲಕಗಳನ್ನು ಅಳವಡಿಸಿ ಭಕ್ತರು ಹಾಗೂ ಪ್ರವಾಸಿಗರು ಪಾಲಿಸುವಂತೆ ಸೂಚಿಸಲಾಗುತ್ತಿದೆ.

Advertisement

ವಾಹನ ದಟ್ಟಣೆ: ವಾರದ ರಜಾ ದಿನಗಳಾದ ಶನಿವಾರ ಹಾಗೂ ಭಾನುವಾರ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಉಂಟಾಗುತ್ತದೆ. ಶ್ರೀರಂಗಪಟ್ಟಣದ ಬಾಬುರಾಯನ ಕೊಪ್ಪಲು ವೃತ್ತ, ಕಿರಂಗೂರು ವೃತ್ತ, ಕುವೆಂಪು ವೃತ್ತ, ಗಂಜಾಂ ವೃತ್ತ, ಆರ್‌ ಎಂಸಿ ಗೇಟ್‌ ಹಾಗೂ ಪಶ್ಚಿಮವಾಹಿನಿ ವೃತ್ತದ ಅಲ್ಲಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದ ಪಾದಚಾರಿಗಳು ರಸ್ತೆ ದಾಟಲು ಹರಸಾಹಸಪಡಬೇಕಾಗಿದೆ. ಆದರೆ, ವಾಹನಗಳ ನಿಯಂತ್ರಣಕ್ಕೆ ಸಂಚಾರ ಪೊಲೀಸರು ಮುಂದಾಗದಿರುವುದು ಸವಾರರು, ಪ್ರಯಾಣಿಕರು ಹಾಗೂ ಸಾರ್ವಜನಿಕರ ಅಸಮಾಧಾನಕ್ಕೆಕಾರಣವಾಗಿದೆ.

ಅನ್‌ಲಾಕ್‌ ನಂತರ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಶ್ರೀರಂಗನಾಥ ದೇವಾಲಯಕ್ಕೆ ದೇವರ ದರ್ಶನ ವೇಳೆ ತಿಳಿದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್‌ ಬಳಸಲಾಗುತ್ತಿದೆ. ಮಾಸ್ಕ್ಕಡ್ಡಾಯ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಲಾಗುತ್ತಿದೆ. ನಂಜೇಗೌಡ, ಇಒ, ಶ್ರೀರಂಗನಾಥ ದೇವಾಲಯ, ಶ್ರೀರಂಗಪಟ್ಟಣ

 

ಗಂಜಾಂ ಮಂಜು

Advertisement

Udayavani is now on Telegram. Click here to join our channel and stay updated with the latest news.

Next