Advertisement
ದಕ್ಷಿಣ ಕನ್ನಡ ಜಿಲ್ಲೆ ಧಾರ್ಮಿಕ ಕ್ಷೇತ್ರಗಳಿಗೆ ಹೆಸರುವಾಸಿ. ಹೀಗಿರುವಾಗ ಸಾಮಾನ್ಯ ದಿನಗಳಲ್ಲಿ ದೇಶ-ವಿದೇಶಗಳಿಂದ ಸಾವಿರಾರು ಮಂದಿ ಪ್ರವಾಸಿಗರು ನಗರಕ್ಕೆ ಆಗಮಿಸುತ್ತಾರೆ. ಅವರಿಗೆ ಅನುಕೂಲವಾಗುವ ಉದ್ದೇಶದಿಂದ ಮಂಗಳೂರಿನಲ್ಲಿಯೂ ಪ್ರವಾಸಿ ಬಸ್ ಆರಂಭಿಸಬೇಕು ಎಂಬ ಬೇಡಿಕೆ ಕೇಳಿ ಬಂದಿತ್ತು. ಈ ಉದ್ದೇಶದಿಂದ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಕೇಂದ್ರ ಕಚೇರಿಗೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದೆ. ಪ್ರಸ್ತಾವನೆಗೆ ಪೂರಕವಾಗುವಂತೆ ಕೆಎಸ್‌ಟಿಡಿಸಿಯು ಪೂರಕ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.
Related Articles
Advertisement
ದ.ಕ. ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಾಣಿಕ್ಯ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ಸುತ್ತಾಟಕ್ಕೆಂದು ಪ್ರವಾಸಿ ಬಸ್ ಆರಂಭಿಸಿದರೆ ಅನೇಕ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲಾಗಿದ್ದು, ಒಪ್ಪಿಗೆ ಸೂಚಿಸುವ ನಿರೀಕ್ಷೆ ಇದೆ. ಇನ್ನು, ನಗರದ ಬೀಚ್, ಸರ್ಫಿಂಗ್, ನದಿ ಸಹಿತ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ ನೀಡುತ್ತೇವೆ ಎಂದಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ :
ಒಂದು ದಿನದ ಪ್ರವಾಸಿ ಬಸ್ ಬೆಂಗಳೂರಿನಲ್ಲಿ ಕೆಲವು ವರ್ಷಗಳಿಂದ ಸಂಚರಿಸುತ್ತಿದೆ. ಬೆಳಗ್ಗೆ 7.30ಕ್ಕೆ ಸಂಚಾರ ಆರಂಭವಾದರೆ, ವಿಧಾನಸೌಧ, ಇಸ್ಕಾನ್, ಬನ್ನೇರುಘಟ್ಟ, ತಾರಾಲಯ, ಕಬ್ಬನ್‌ಪಾರ್ಕ್ ಸಹಿತ ವಿವಿಧ ಪ್ರವಾಸಿ ತಾಣಗಳ ಸುತ್ತಾಟದ ಬಳಿಕ ಸಂಜೆ 6.30ಗೆ ಪ್ರವಾಸ ಕೊನೆಗೊಳ್ಳುತ್ತದೆ. ಇದಕ್ಕೆಂದು ದಿನದ ಪ್ಯಾಕೇಜ್ ಎಂಬಂತೆ 495 ರೂ. ನಿಗದಿಪಡಿಸಿದ್ದು, ಇದೇ ರೀತಿಯಲ್ಲಿ ಮಂಗಳೂರಿನಲ್ಲಿಯೂ ಪ್ರವಾಸಿ ಬಸ್ ಸೇವೆ ಆರಂಭವಾದರೆ ಇಲ್ಲಿನ ಪ್ರವಾಸೋದ್ಯಮ ಕ್ಷೇತ್ರ ಬೆಳವಣಿಗೆಗೆ ಅನುಕೂಲವಾಗಬಹುದು.
ದ.ಕ.ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಉತ್ತೇಜನಕ್ಕೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಪ್ರವಾಸಿ ಬಸ್ ಪರಿಚಯಿಸಲು ಯೋಚಿಸಲಾಗಿದೆ. ಕೆಲವೊಂದು ಪ್ರಮುಖ ರೂಟ್‌ಗಳ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಸದ್ಯ ಕೊರೊನಾ ಇರುವ ಕಾರಣ ಈ ಯೋಜನೆ ವಿಳಂಬವಾಗಿದೆ. ಕೊರೊನಾ ಆತಂಕ ಕಡಿಮೆಯಾದ ಬಳಿಕ ಪ್ರವಾಸಿ ಬಸ್ ಸೇವೆ ಆರಂಭಿಸಲಾಗುವುದು. –ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ
-ನವೀನ್ ಭಟ್, ಇಳಂತಿಲ