Advertisement

ಪುಟಿದೆದ್ದ ಟೂರಿಸಂ; ರಾಜ್ಯದ ಪ್ರಮುಖ ಪ್ರವಾಸಿ ತಾಣಗಳು ಈಗ ಭರ್ತಿ

01:07 AM Oct 26, 2022 | Team Udayavani |

ಬೆಂಗಳೂರು: ಎರಡು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದ ಪ್ರವಾಸೋದ್ಯಮ ಕರಾ ವಳಿಯೂ ಸೇರಿದಂತೆ ರಾಜ್ಯಾದ್ಯಂತ ಅಕ್ಟೋಬರ್‌ ತಿಂಗಳ ಹಬ್ಬಗಳ ಮಾಸದಲ್ಲಿ ಪುಟಿದೆದ್ದಿದೆ.

Advertisement

ದಸರಾ ಹಾಗೂ ದೀಪಾವಳಿ ಸಂದರ್ಭದಲ್ಲಿ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿದೆ. ಈ ಬಾರಿ ಮೈಸೂರು, ಕೊಡಗು, ಕರಾವಳಿ ಹಾಗೂ ಮಲೆನಾಡು ಭಾಗದತ್ತ ಪ್ರವಾಸಿಗರು ಹೆಚ್ಚಿನ ಮಟ್ಟಿಗೆ ಆಕರ್ಷಿತರಾಗಿದ್ದಾರೆ. ದೇಶದ ಶೇ. 12ರಷ್ಟು ಪ್ರವಾಸಿಗರನ್ನು ಸೆಳೆಯುವ ಕರ್ನಾಟಕ ದಲ್ಲಿ ಈ ಬಾರಿಯ ಹಬ್ಬದ ಋತು ಪ್ರವಾ ಸೋದ್ಯಮಕ್ಕೆ ಶಕ್ತಿ ತುಂಬಿದೆ.

ಸತತ ರಜೆ ಇದ್ದುದರ ಜತೆಗೆ ಎರಡು ವರ್ಷಗಳಿಂದ ಪ್ರವಾಸಕ್ಕೆ ನಿರ್ಬಂಧ ಇದ್ದ ಹಿನ್ನೆಲೆ ಯಲ್ಲಿ ಈ ವರ್ಷ ನಿರೀಕ್ಷೆಗೂ ಮೀರಿ ವಿವಿಧ ಪ್ರವಾಸಿತಾಣಗಳಲ್ಲಿ ಜನಸಂದಣಿ ಕಂಡು ಬಂದಿದೆ. ದಸರಾ ಸಂದರ್ಭದಲ್ಲಂತೂ ಕೆಎಸ್‌ಆರ್‌ಟಿಸಿ ಎರಡು ಸಾವಿರ ವಿಶೇಷ ಬಸ್‌ ಸೇವೆ ಒದಗಿಸಿ 22 ಕೋಟಿ ರೂ. ದಾಖಲೆಯ ಲಾಭ ಗಳಿಸಿತ್ತು. ದೀಪಾವಳಿ ಸಂದರ್ಭದಲ್ಲೂ 1,500 ಬಸ್‌ಗಳ ವಿಶೇಷ ಸೇವೆ ಒದಗಿಸಿದ್ದು, ಹೆಚ್ಚಿನ ವಹಿವಾಟಿನ ನಿರೀಕ್ಷೆಯಲ್ಲಿದೆ. ಪ್ರವಾಸೋದ್ಯಮ ಇಲಾಖೆಯ ಪ್ಯಾಕೇಜ್‌ಗಳಿಗೆ ಉತ್ತಮ ಸ್ಪಂದನೆ ದೊರೆತಿದೆ ಎನ್ನುತ್ತವೆ ಕೆಎಸ್‌ಟಿಡಿ ಮೂಲಗಳು.
ಮೈಸೂ ರಿನ ಅರಮನೆಗೆ ಅ. 1ರಿಂದ 24ರ ವರೆಗೆ ಸುಮಾರು 3.27 ಲಕ್ಷ ಪ್ರವಾ ಸಿ ಗರು ಭೇಟಿ ನೀಡಿ ದ್ದಾರೆ ಎಂದು ಮೈಸೂರು ಅರ ಮನೆ ಮಂಡಳಿ ಮೂಲ ಗಳು ತಿಳಿಸಿವೆ. ಮೈಸೂರಿನ ಹೊಟೇಲ್‌ ಉದ್ಯಮ ಚೇತರಿಕೆಗೊಂಡಿದ್ದು, ಮಾಸಿಕ 200 ಕೋ. ರೂ. ವಹಿವಾಟು ನಡೆಸಿದೆ.

ಇಪ್ಪತ್ತು ದಿನ ಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕೆಆರ್‌ಎಸ್‌ ಜಲಾಶಯ ಹಾಗೂ ಬೃಂದಾವನಕ್ಕೆ ಭೇಟಿ ನೀಡಿದ್ದಾರೆ. ಜಿಲ್ಲೆಯ ರಂಗನತಿಟ್ಟು, ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಜನ ಧಾವಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಭಾಗದಲ್ಲಿ ಈ ವರ್ಷ ನೀಲಕುರುಂಜಿ ಹೂವು ಬಿಟ್ಟಿರುವುದು ಪ್ರವಾಸಿಗರ ಆಕರ್ಷಣೆಗೆ ಬೋನಸ್‌ ಎನಿಸಿದೆ.

ಕರಾವಳಿಯಲ್ಲೂ ಹೆಚ್ಚಳ
ಕರಾವಳಿಯಲ್ಲೂ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಪಣಂಬೂರು, ತಣ್ಣೀರು ಬಾವಿ, ಮಲ್ಪೆ, ಸೋಮೇಶ್ವರ ಹೀಗೆ ವಿವಿಧ ಬೀಚ್‌ಗಳಿಗೆ ದಿನಕ್ಕೆ 5-10 ಸಾವಿರ ಮಂದಿ ಭೇಟಿ ನೀಡುತ್ತಿದ್ದಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ 15 ಸಾವಿರಕ್ಕೆ ತಲುಪುತ್ತಿದೆ. ಕಡಲು ಶಾಂತವಾಗಿದ್ದು, ನೀರಿಗೆ ಇಳಿಯಲು ಅವಕಾಶ ಇರು ವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

Advertisement

ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಸದ್ಯ ದಿನವೊಂದಕ್ಕೆ 3-4 ಸಾವಿರ ಮಂದಿ ಭೇಟಿ ನೀಡುತ್ತಿದ್ದು, ವಾರಾಂತ್ಯದಲ್ಲಿ ಈ ಸಂಖ್ಯೆ 5 ಸಾವಿರದವರೆಗೆ ಏರಿಕೆಯಾಗುತ್ತದೆ. ಇದ ರೊಂದಿಗೆ ಆದಾಯವೂ 3-4 ಪಟ್ಟು ಹೆಚ್ಚಾಗಿದೆ ಎಂದು ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಜಯಪ್ರಕಾಶ್‌ ಭಂಡಾರಿ ತಿಳಿಸಿದ್ದಾರೆ.

ವಸತಿ ವ್ಯವಸ್ಥೆ ಇರುವ ಹೊಟೇಲ್‌ಗ‌ಳಲ್ಲಿ ಕೊಠಡಿಗಳು ದೀಪಾವಳಿ ರಜೆ ಹಿನ್ನೆಲೆಯಲ್ಲಿ ಭರ್ತಿಯಾಗಿವೆ. ಕೋವಿಡ್‌ನ‌ 2 ವರ್ಷಗಳ ಬಳಿಕ ಹಿಂದಿನ ಸ್ಥಿತಿಗೆ ತಲುಪಿದೆ. ಬಹುತೇಕ ಕಾರ್ಪೊರೆಟ್‌ ಕಂಪೆನಿಗಳು ಕೋಣೆಗಳನ್ನು ಕಾದಿರಿಸುತ್ತಿವೆ. ಜತೆಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರೂ ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಮಂಗಳೂರಿನ ಶೇ. 90 ಹೊಟೇಲ್‌ಗ‌ಳಲ್ಲಿ ರೂಮ್‌ಗಳು ಭರ್ತಿಯಾಗಿವೆ.

ದೀಪಾವಳಿಗೆ ಶನಿವಾರ, ರವಿವಾರ ವಾರಾಂತ್ಯ  ರಜೆಯೂ ಸೇರಿದ ಕಾರಣ ಪ್ರವಾಸಿ ತಾಣ ಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
-ಜನಾರ್ಧನ್‌, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ

ಅಕ್ಟೋಬರ್‌ನಲ್ಲಿ ಪ್ರವಾಸಿತಾಣಗಳಲ್ಲಿ ಜನರ ಸಂಖ್ಯೆ ಹೆಚ್ಚಿದ್ದರಿಂದ ಹೋಟೆಲ್‌, ರೆಸಾರ್ಟ್‌ ಗಳಲ್ಲಿ ಉತ್ತಮ ವಹಿವಾಟು ನಡೆದಿದೆ.
-ಚಂದ್ರಶೇಖರ ಹೆಬ್ಬಾರ್‌
ರಾಜ್ಯ ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next