Advertisement

ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿ: ಆದ್ಯತಾ ವಲಯವಾಗಿ ದ. ಕ., ಉಡುಪಿ ಜಿಲ್ಲೆ

02:26 AM Oct 10, 2020 | mahesh |

ಮಂಗಳೂರು: ಕರ್ನಾಟಕದಲ್ಲಿ ಕರಾವಳಿ ಭಾಗವು ಪ್ರವಾಸೋದ್ಯಮದಲ್ಲಿ ವಿಪುಲ ಅವಕಾಶಗಳಿಗೆ ತೆರೆದಿಕೊಂಡಿರುವ ತಾಣ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಆದ್ಯತಾ ಪ್ರವಾಸಿ ವಲಯದ ಸ್ಥಾನ ಮಾನವನ್ನು ನೀಡುವ
ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ತೀರ್ಮಾನಿಸಿದೆ.

Advertisement

ರಾಜ್ಯದಲ್ಲಿ ಹೊಸದಾಗಿ ರೂಪಿಸಲಾಗಿರುವ ಪ್ರವಾಸೋದ್ಯಮ ನೀತಿಯಲ್ಲಿ ದ. ಕನ್ನಡ, ಉಡುಪಿ, ಚಾಮರಾಜ ನಗರ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಹಾಗೂ ಉತ್ತರ ಕನ್ನಡ ಸೇರಿದಂತೆ ಒಟ್ಟು 8 ಜಿಲ್ಲೆಗಳನ್ನು ಸಂಪೂರ್ಣವಾಗಿ ಪ್ರವಾಸೋದ್ಯಮ ಆದ್ಯತಾ ಜಿಲ್ಲೆಗಳೆಂದು ಘೋಷಿಸಲಾಗಿದೆ. ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 22 ಜಿಲ್ಲೆಗಳಲ್ಲಿ ಆಯ್ದ ತಾಣಗಳನ್ನಷ್ಟೇ ಪ್ರವಾಸಿ ಆದ್ಯತಾ ತಾಣಗಳನ್ನಾಗಿ ಪರಿಗಣಿಸಲಾಗಿದೆ.

ಪ್ರವಾಸೋದ್ಯಮ ಇಲಾಖೆಯ ಪಟ್ಟಿಯಂತೆ ದ.ಕ. ಜಿಲ್ಲೆಯ ಮಂಗಳೂರಿನಲ್ಲಿ 26, ಬೆಳ್ತಂಗಡಿ 8, ಸುಳ್ಯ 4, ಬಂಟ್ವಾಳ 5, ಪುತ್ತೂರು 7, ಮೂಡುಬಿದಿರೆಯಲ್ಲಿ 2 ಸೇರಿದಂತೆ ಒಟ್ಟು 52 ಪ್ರವಾಸಿ ತಾಣಗಳಿವೆ. ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಉಡುಪಿ ತಾಲೂಕಿನಲ್ಲಿ 22, ಬ್ರಹ್ಮಾವರ 11, ಕಾಪು 6, ಕಾರ್ಕಳ 11, ಕುಂದಾಪುರ 12, ಬೈಂದೂರಿನಲ್ಲಿ 12, ಹೆಬ್ರಿಯಲ್ಲಿ 7 ತಾಣಗಳ ಸಹಿತ ಒಟ್ಟು 84 ಪ್ರವಾಸಿ ತಾಣಗಳಿವೆ.

ಆದ್ಯತಾ ವಲಯದ ಪ್ರಯೋಜನ
ಹೊಸ ನೀತಿಯಂತೆ ಸರಕಾರದ ಪ್ರವಾಸೋದ್ಯಮ ಉತ್ತೇಜನಗಳು ಹಾಗೂ ಯೋಜನೆಗಳು ಉಳಿದ ಜಿಲ್ಲೆಗಳಲ್ಲಿ ನಿರ್ದಿಷ್ಟ ಆದ್ಯತಾ ತಾಣಗಳಿಗೆ ಮಾತ್ರ ಸೀಮಿತವಾಗಿ ಇರುತ್ತದೆ. ಆದರೆ ಆದ್ಯತಾ ಜಿಲ್ಲೆಗಳ ಎಲ್ಲ ಪ್ರವಾಸಿ ತಾಣಗಳಿಗೂ ಈ ಯೋಜನೆಗಳು ಅನ್ವಯಿಸುತ್ತದೆ. ಸಾಹಸ ಪ್ರವಾಸೋದ್ಯಮ, ಕಾರವಾನ್‌, ಸ್ವಾಸ್ಥ ಕೇಂದ್ರಗಳು, ಹೊಟೇಲ್‌, ಹೌಸ್‌ ಬೋಟು ಯೋಜನೆಗಳಿಗೆ ಆದ್ಯತಾ ವಲಯಗಳಿಗೆ ಆದ್ಯತೆ ಇರುತ್ತದೆ. ಸಾಹಸ ಪ್ರವಾಸೋದ್ಯಮ, ಕಾರವಾನ್‌, ಸಾಸ್ಥ ಕೇಂದ್ರಗಳು ಯೋಜನೆಗಳಿಗೆ 2 ಕೋ.ರೂ.ಗರಿಷ್ಠ ವೆಚ್ಚಕ್ಕೆ ಸೀಮಿತವಾಗಿ ಶೇ.15ರಷ್ಟು ಸಹಾಯಧನವಿರುತ್ತದೆ. ಹೊಟೇಲ್‌ಗೆ ಗರಿಷ್ಠ ವೆಚ್ಚ 5 ಕೋ.ರೂ. ಹಾಗೂ ಬೋಟ್‌ಹೌಸ್‌ಗೆ ಗರಿಷ್ಠ ವೆಚ್ಚ 25 ಲಕ್ಷ ಸೀಮಿತವಾಗಿರುತ್ತದೆ.

ಅತ್ಯುತ್ತಮ ಪ್ರವಾಸ ತಾಣಗಳ ಹಿರಿಮೆ
ಯುನೆಸ್ಕೋದ ವಿಶ್ವ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯದ ಮೂರು ತಾಣಗಳಿದ್ದರೆ 600 ಕ್ಕೂ ಅಧಿಕ ಭಾರತೀಯ ಪುರಾತತ್ವ ಇಲಾಖೆಯ ಸಂರಕ್ಷಿತ ಸ್ಮಾರಕಗಳು, 840ಕ್ಕೂ ಅಧಿಕ ರಾಜ್ಯ ಸಂರಕ್ಷಿತ ಸ್ಮಾರಕಗಳಿವೆ. ಇದಲ್ಲದೆ ಅಸಂಖ್ಯ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವದ ತಾಣಗಳಿವೆ. 17 ಸುಂದರಗಿರಿಧಾಮಗಳು, 40 ಭವ್ಯ ಜಲಪಾತಗಳಿವೆ. ದಕ್ಷಿಣ ಕನ್ನಡ, ಉಡುಪಿ,ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡತೆ 320 ಕಿ.ಮೀ.ಉದ್ದದ ನೈಸರ್ಗಿಕ ಕರಾವಳಿ ತೀರಪ್ರದೇಶವಿದ್ದು, ರಾಷ್ಟ್ರದ ಕೆಲವೇ ಕೆಲವು ಅತ್ಯುತ್ತಮ ಕಡಲ ತೀರಗಳಲ್ಲಿ ಒಂದಾಗಿದೆ. 5 ರಾಷ್ಟ್ರೀಯ ಉದ್ಯಾನವನಗಳು, 30ಕ್ಕೂ ಅಧಿಕ ವನ್ಯಜೀವಿ ಅಭಯಾರಣ್ಯಗಳು ಹಾಗೂ ಹುಲಿ ಅಭಯಾರಣ್ಯಗಳು, 550ಕ್ಕೂ ಅಧಿಕ ಪ್ರಬೇಧದ ಪಕ್ಷಿಗಳು, 100ಕ್ಕೂ ಅಧಿಕ ಪ್ರಬೇಧದ ಸಸ್ತನಿಗಳು ಕರ್ನಾಟಕದಲ್ಲಿವೆ.

Advertisement

ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ
ರಾಜ್ಯದ ನೂತನ ಪ್ರವಾಸೋದ್ಯಮ ನೀತಿಯಲ್ಲಿ ಇಡೀ ಜಿಲ್ಲೆಯನ್ನು ಪ್ರವಾಸಿ ಆದ್ಯತಾ ವಲಯವಾಗಿ ಪರಿಗಣಿಸಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಾಗಲಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ಸೌಲಭ್ಯಗಳು ಲಭ್ಯವಾಗಲಿದೆ.      – ಸೋಮಶೇಖರ ಬಿ., ಚಂದ್ರಶೇಖರ ನಾಯಕ್‌ ,  ಉಭಯ ಜಿಲ್ಲಾ ಪ್ರವಾಸೋದ್ಯಮ ಸಹಾಯಕ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next