Advertisement

ಪ್ರವಾಸೋದ್ಯಮ ಅಭಿವೃದ್ಧಿ: ಬೇಕಲದಲ್ಲಿ ಬೀಚ್‌ ಸೈಕಲ್‌ ಫೆಸ್ಟ್‌

06:45 AM Apr 18, 2018 | |

ಕಾಸರಗೋಡು: ಇತಿಹಾಸ ಪ್ರಸಿದ್ಧ ಹಾಗೂ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಭೂಪಟದಲ್ಲಿ ಸ್ಥಾನವನ್ನು ಪಡೆದಿರುವ ಬೇಕಲ ಕೋಟೆಯನ್ನು ಕೇಂದ್ರವನ್ನಾಗಿರಿಸಿಕೊಂಡು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ವಿದೇಶಿ ಹಾಗೂ ಸ್ವದೇಶಿ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸುವ ಉದ್ದೇಶದಿಂದ ಬೇಕಲದಲ್ಲಿ ಬೀಚ್‌ ಸೈಕಲ್‌ ಫೆಸ್ಟ್‌ ನಡೆಸಲಾಗುವುದು. ಜಾಗತಿಕ ಪ್ರವಾಸೋದ್ಯಮ ವಲಯ ದಲ್ಲಿ  ಹೆಚ್ಚು  ಗಮನ ಸೆಳೆದ ಸೈಕಲ್‌ ಟೂರಿಸಂನ್ನು  ಕಾಸರಗೋಡು ಜಿಲ್ಲೆಯಲ್ಲಿ ಪ್ರಚುರಪಡಿಸಲು ಸಮಗ್ರ ಕಾರ್ಯ ಯೋಜನೆ ರೂಪಿಸುತ್ತಿದೆ  ಎಂದು ಬಿಆರ್‌ಡಿಸಿ (ಬೇಕಲ ರೆಸಾರ್ಟ್ಸ್ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌) ಆಡಳಿತ ನಿರ್ದೇಶಕ ಟಿ.ಕೆ. ಮನ್ಸೂರ್‌ ಹೇಳಿದ್ದಾರೆ.

Advertisement

ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಯೋಜನೆಯನ್ನು ಪೂರ್ಣರೂಪದಲ್ಲಿ ಕಾರ್ಯಗತಗೊಳಿಸ ಲಾಗುವುದು. ಮುಖ್ಯವಾಗಿ ಬೇಕಲ ಮತ್ತು ವಲಿಯಪರಂಬ ವಲಯಗಳಲ್ಲಿ  ಯೋಜನೆಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ.

ಯೋಜನೆಯ ಅಂಗವಾಗಿ 10 ಬೀಚ್‌ಗಳಲ್ಲಿ  ಸೈಕಲ್‌ ಹಬ್‌ಗಳನ್ನು  ಸ್ಥಾಪಿಸಲಾಗುವುದು. ಪ್ರತಿಯೊಂದು ಬೀಚ್‌ನ ಡಾಕಿಂಗ್‌ ಸ್ಟೇಶನ್‌ಗಳನ್ನು  ಹಾಗೂ ಪ್ರಯಾಣಿಕರನ್ನು  ಆಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ಲಿಂಕ್‌ ಮಾಡಲಾಗುವುದು. 
ಕುಟುಂಬಶ್ರೀ, ಇತರ ಸಂಘ ಸಂಸ್ಥೆಗಳು ಮುಂತಾದ ಏಜೆನ್ಸಿಗಳ ಮೂಲಕ ಯೋಜನೆಯ ದೈನಂದಿನ ನಿರ್ವಹಣೆ ಯನ್ನು ಕೈಗೊಳ್ಳಲಾಗುವುದು. ಇದಕ್ಕೆ ಅಗತ್ಯದ ತರಬೇತಿ ಯನ್ನು  ಬಿಆರ್‌ಡಿಸಿ ನೀಡಲಿದೆ. ಸೈಕಲ್‌ ಟೂರಿಸಂ ಗಿರುವ ಅರ್ಹತೆ ಪರಿಗಣಿಸಿ ವಲಿಯ ಪರಂಬದಲ್ಲೂ  ಯೋಜನೆಯನ್ನು  ಜಾರಿಗೊಳಿಸಲಾಗುವುದು. 24 ಕಿ.ಮೀ. ಉದ್ದದ ಅಗಲ ಕಿರಿದಾದ ವಲಿಯಪರಂಬ ದ್ವೀಪದ ಮೂಲಕ ಒಂದು ಬದಿಯಲ್ಲಿ  ಸಮುದ್ರ, ಇನ್ನೊಂದು ಬದಿಯಲ್ಲಿ  ಹಿನ್ನೀರು ನೋಡಿ ಕೊಂಡು ಸೈಕಲ್‌ ಸವಾರಿ ಪ್ರವಾಸಿಗರಿಗೆ ಹೊಸ ಅನುಭವ ಒದಗಿಸಲಿದೆ.

ಜಿಲ್ಲೆಯಲ್ಲಿ  ಕಾರ್ಯಗತ ಸುಲಭ 
ಕೇರಳದಲ್ಲಿ ಅತ್ಯಧಿಕ ನದಿಗಳಿರುವ ಕಾಸರಗೋಡು ಜಿಲ್ಲೆಯ ಗ್ರಾಮ ಮತ್ತು  ನಗರಗಳಲ್ಲಿ ವಿಸ್ತರಿಸಿರುವ ಹೊಳೆ ತೀರಗಳು, ಬೀಚ್‌ಗಳು, ಕೋಟೆಗಳು, ಆರಾಧನಾಲಯಗಳೆಲ್ಲ ಸೈಕಲ್‌ ಟೂರಿಸಂಗೆ ಯೋಗವಾದ ಸ್ಥಳವಾಗಿವೆ. ಹೊಳೆ, ಬೆಟ್ಟ, ಸಮುದ್ರ ತೀರಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯಲ್ಲಿ  ಈ ಯೋಜನೆ ಕಾರ್ಯಗತಗೊಳಿಸಲು ಸುಲಭ ವಾಗುವುದು. ಸೈಕಲ್‌  ಟೂರಿಸಂ ಜಾರಿಯಲ್ಲಿ ಆಸಕ್ತಿಯಿರುವ ಸ್ಥಳೀಯಾ ಡಳಿತ ಸಂಸ್ಥೆಗಳು ಬಿಆರ್‌ಡಿಸಿಯನ್ನು  ಸಂಪರ್ಕಿ ಸಲು ಅಧಿಕಾರಿಗಳು ತಿಳಿಸಿದ್ದಾರೆ.

ಸೈಕಲ್‌ನಲ್ಲಿ  ದೂರ ಸವಾರಿ ಮಾಡು ವುದಕ್ಕಿಂತ ಹೆಚ್ಚಾಗಿ ನಾಡಿನ ಸಂಸ್ಕೃತಿ, ಜೀವನ ವಿಧಾನಗಳನ್ನೆಲ್ಲಾ  ಹತ್ತಿರದಿಂದ ಅರಿತು ಕಥೆಗಳು, ಅನುಭವ ಗಳನ್ನು  ಹುಡುಕಲು ಸಾಧ್ಯವಾಗಲಿದೆ. ನಮ್ಮ ಪ್ರಕೃತಿ ಮತ್ತು   ಸುತ್ತುಮುತ್ತಲಿನ ಪ್ರದೇಶಗಳಿಗೆ ಸೈಕಲ್‌ ಟೂರಿಸಂ ಹೆಚ್ಚು  ಯೋಗ್ಯವಾದುದಾಗಿದೆ.ಸೈಕಲ್‌ ನಲ್ಲಿ “ಬೀಚ್‌  ಸೈಕಲ್‌ ಫೆಸ್ಟ್‌’ ಪ್ರಚುರಪಡಿಸಲಾಗುವುದು. ವಿದೇಶೀ ಯರನ್ನು ಪಾಲ್ಗೊಳ್ಳಿಸಿ ವಿಪುಲ ವಾದ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾ ನಿಸಲಾಗಿದೆ ಎಂದು ಬಿಆರ್‌ಡಿಸಿ ಆಡಳಿತ ನಿರ್ದೇಶಕ ಟಿ.ಕೆ.ಮನ್ಸೂರ್‌ ಹೇಳಿದ್ದಾರೆ.

Advertisement

ಮೊದಲ ಹಂತದಲ್ಲಿ ಬೇಕಲ ಬೀಚ್‌ ಪಾರ್ಕ್‌ನಲ್ಲಿ  400 ಮೀಟರ್‌ ಉದ್ದದ ಫುಟ್‌ಪಾತ್‌ ನಿರ್ಮಿಸಲಾಗುವುದು. ಈ ಮೂಲಕ ಪ್ರವಾಸಿಗರು ಹಾಗೂ ಸಂದರ್ಶಕರು ಗಾಳಿಗೆ ಮೈಯೊಡ್ಡಿ  ಕಡಲಿನ ಸೌಂದರ್ಯವನ್ನು  ಆಸ್ವಾದಿಸುತ್ತಾ  ನಡೆಯಬಹುದು. ಫುಟ್‌ಪಾತ್‌ನ ಇಕ್ಕೆಲಗಳಲ್ಲಿ  ಪ್ರಸಿದ್ಧ  ಚಿತ್ರಕಲಾವಿದರ, ಶಿಲ್ಪಿಗಳ ಕಲಾರಚನೆಗಳನ್ನು  ಶಾಶ್ವತವಾಗಿ ಪ್ರದರ್ಶಿಸಲಾಗುವುದು. ಪ್ರಾದೇಶಿಕ ಕಲಾರೂಪಗಳಿಗೆ ಪ್ರಾಧಾನ್ಯ ನೀಡುವ ಕಾರ್ಯಕ್ರಮಗಳನ್ನೂ ನಡೆಸಲಾಗುವುದು. ಪ್ರಾದೇಶಿಕ ಕಲಾವಿದರಿಗೆ ಅತ್ಯುತ್ತಮ ಅವಕಾಶಗಳನ್ನು  ನೀಡುವ ಯೋಜನೆ ಕೂಡ ಇದರಲ್ಲಿದೆ. ಕಲೆಯ ಆಶಯವನ್ನು  ಗುರಿಯಾಗಿರಿಸಿ ಬೀಚ್‌ಗಳನ್ನು  ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ಆಯಿಸ್ಟರ್ಸ್‌ ಬೀಚ್‌, ಕೈಟ್ಸ್‌ ಬೀಚ್‌, ಸ್ಯಾಂಡ್‌ ಆರ್ಟ್ಸ್ ಬೀಚ್‌ ಮೊದಲಾದ ಹೆಸರುಗಳಲ್ಲಿ  ಬೀಚ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದರೊಂದಿಗೆ ಅನುಭವಾತ್ಮಕ ಪ್ರವಾಸೋದ್ಯಮ ಬೀಚ್‌ಗಳು ಎಂಬ ಯೋಜನೆಯೊಂದಿಗೆ ಸೈಕಲ್‌ ಟೂರಿಸಂನ್ನು  ಜೋಡಿಸಲು ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next