ಬೆಂಗಳೂರು: ವಿಶ್ವ ಪ್ರವಾಸೋದ್ಯಮ ದಿನ ಅಂಗವಾಗಿ ಸೆ. 27ರಂದು ರಾಜ್ಯಾದ್ಯಂತ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಪ್ರವಾಸೋದ್ಯಮ ಮತ್ತು ಉದ್ಯೋಗದಲ್ಲಿ ಸರ್ವರಿಗೂ ಉಜ್ವಲ ಭವಿಷ್ಯ’ ಘೋಷವಾಕ್ಯದಡಿ ಈ ಬಾರಿಯ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದೆ.
ಭಾರತದ ಪ್ರವಾಸೋದ್ಯಮ ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಕರ್ನಾಟಕ ರಾಜ್ಯವು 319 ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಕಾರ್ಯ ಮಾಡಲಿದೆ ಎಂದು ತಿಳಿಸಿದರು. ವಿಶ್ವ ಪ್ರವಾಸೋದ್ಯಮ ದಿನ ಸಂಬಂಧ ಪ್ರತಿ ಜಿಲ್ಲೆಗೆ 30 ಸಾವಿರ ರೂ. ಬಿಡುಗಡೆ ಮಾಡಲಾಗಿದ್ದು ಬೆಂಗಳೂರಿನಲ್ಲಿ ಎಂ.ಎಸ್.ರಾಮಯ್ಯ ಕಾಲೇಜಿನ ಸಹಯೋಗದಡಿ ಚರ್ಚಾಕೂಟ, ರಸಪ್ರಶ್ನೆ, ಛಾಯಾಚಿತ್ರ ಸ್ಪರ್ಧೆಹಮ್ಮಿಕೊಳ್ಳಲಾಗಿದೆ.
ಅಂದು ಬೆಂಗಳೂರಿನ ಬಸವನಗುಡಿಯಿಂದ ಅರಮನೆ ಮೈದಾನದವರೆಗಿನ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗುವುದು. ಅರಮನೆ ಮೈದಾನದ ವರೆಗೆ ಸೈಕಲ್ ಜಾಥಾ ಇರಲಿದೆ. ಈ ವೇಳೆ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಾಗುವುದು ಎಂದರು.
ಪ್ರವಾಸೋದ್ಯಮಕ್ಕೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಹೊರ ರಾಜ್ಯಗಳ ವಾಹನಗಳ ಪ್ರವೇಶ ತೆರಿಗೆ ಕಡಿತಗೊಳಿಸುವ ಪ್ರಸ್ತಾವವಿದೆ. ಒಂದು ದೇಶ-ಒಂದು ತೆರಿಗೆ ವಿಧಾನ ಅಳವಡಿಸಿಕೊಂಡರೆ ಇದಕ್ಕೆ ಪರಿಹಾರ ಸಾಧ್ಯ. ಹೀಗೆ ಹೇಳಿದರೆ ಕೆಲವರು ಸಿಟ್ಟಾಗುತ್ತಾರೆ. ಸರ್ವಾಧಿ ಕಾರ ಧೋರಣೆ ಎಂದು ಹೇಳುತ್ತಾರೆ. ಆದರೆ, ಇದರ ಬಗ್ಗೆ ಚರ್ಚೆಯಾಗಬೇಕು.
-ಸಿ.ಟಿ.ರವಿ, ಸಚಿವ