ವರದಿ: ಸಂದೇಶ್.ಎಸ್.ಜೈನ್
ದಾಂಡೇಲಿ: ಜಗತ್ತನ್ನೆ ತಲ್ಲಣಗೊಳಿಸಿದ ಕೋವಿಡ್ ತನ್ನ ಕದಂಬ ಬಾಹುವಿನ ಮೂಲಕ ಆರ್ಥಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನೆ ತಂದೊಡ್ಡಿದೆ. ಉತ್ಪಾದನಾ ವಲಯಗಳು ಅತ್ಯಂತ ದುಸ್ಥಿತಿ ಅನುಭವಿಸಿದ್ದರೆ. ಇತ್ತ ಪ್ರವಾಸೋದ್ಯಮವು ನಲುಗಿ ಹೋಗಿದೆ.
ಕೋವಿಡ್ ಆರ್ಭಟಕ್ಕೆ ದಾಂಡೇಲಿ- ಜೋಯಿಡಾದ ಪ್ರವಾಸೋದ್ಯಮ ಚಟುವಟಿಕೆ ಕೂಡ ಯಾತನೆ ಅನುಭವಿಸಿತ್ತು. ದಾಂಡೇಲಿ-ಜೋಯಿಡಾದಲ್ಲಿ ಪ್ರವಾಸೋದ್ಯ ಮವನ್ನೆ ನಂಬಿ ಬದುಕು ಕಟ್ಟಿಕೊಂಡವರ ಬದುಕು ಮೂರಾ ಬಟ್ಟೆಯಾಗಿದೆ. ಪ್ರವಾಸೋದ್ಯಮಿಗಳು ಸಾಲಸೋಲ ಮಾಡಿದ್ದು, ಇದೀಗ ಸಾಲದ ಕಂತು ಪಾವತಿಸಲಾಗದೇ ತಲೆಮೇಲೆ ಕೈಹೊತ್ತು ಕೂತಿದ್ದಾರೆ.
ಇನ್ನು ಪ್ರವಾಸಿ ಏಜೆಂಟರು, ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಕೂಲಿ ಕಾರ್ಮಿಕರಾಗಿ ಜೀವನ ನಡೆಸುವವರಿಗೆ ಒಂದೊಂದು ದಿನ ಮುನ್ನಡೆಸುವುದು ಕಷ್ಟವಾಗಿದೆ. ಕೊರೊನಾ ಎರಡನೇ ಅಲೆ ಕಡಿಮೆಯಾಗುತ್ತಿದ್ದಂತೆ ಪ್ರವಾಸೋದ್ಯಮ ಚಟುವಟಿಕೆ ಮತ್ತೆ ಗರಿಗೆದರಲು ಪ್ರಾರಂಭವಾಯ್ತು. ಪ್ರವಾಸೋದ್ಯಮಕ್ಕೆ ಮೂಲ ಆಸರೆಯಾದ ರ್ಯಾಪ್ಟಿಂಗ್, ಜಲಕ್ರೀಡೆಗಳು ಆರಂಭಗೊಂಡವು. ಪರಿಣಾಮವಾಗಿ ಪ್ರವಾಸಿಗರು ಇತ್ತ ಕಡೆ ಮುಖ ಮಾಡಲು ಶುರುವಿಟ್ಟುಕೊಂಡರು. ಕಳೆಗುಂದಿದ ಪ್ರವಾಸೋದ್ಯಮ ಮತ್ತೆ ಪುಟಿದೇಳಲು ಆರಂಭವಾಯ್ತು. ಪ್ರವಾಸೋದ್ಯಮ ಚಟುವಟಿಕೆಗೆ ಜೀವಕಳೆ ಬರುತ್ತಿದ್ದಂತೆ ಮತ್ತೆ ಕೊರೊನಾ ಮೂರನೆ ಅಲೆಯ ಕಾಟ ಎಂಬಂತೆ ರ್ಯಾಪ್ಟಿಂಗ್, ಜಲಕ್ರೀಡೆ ಸ್ಥಗಿತಗೊಳಿಸಲಾಯಿತು. ಪರಿಣಾಮವಾಗಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿದೆ. ಮತ್ತೆ ಪ್ರವಾಸೋದ್ಯಮ ಚಟುವಟಿಕೆ ಹಿನ್ನಡೆ ಕಂಡುಕೊಳ್ಳಲು ಆರಂಭವಾಗಿದೆ.
ಈ ಭಾಗದಲ್ಲಿ ರ್ಯಾಪ್ಟಿಂಗ್, ಜಲಕ್ರೀಡೆಯೆ ಪ್ರವಾಸೋದ್ಯಮಕ್ಕೆ ಮೂಲ ಆಧಾರ. ಅದಕ್ಕಾಗಿಯೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅದೇ ಇಲ್ಲ ಅಂದ್ಮೇಲೆ ಪ್ರವಾಸಿಗರು ಬರುವುದಾದರೂ ಹೇಗೆ ಎಂಬ ಚಿಂತೆ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ತೊಡಗಿಕೊಂಡವರದ್ದಾಗಿದೆ. ಅಂದ ಹಾಗೆ ಬೆಂಗಳೂರಿನ ವಂಡರ್ ಲಾದಲ್ಲಿ ಜಲಕ್ರೀಡೆಗೆ ಅನುಮತಿ ನೀಡಲಾಗಿದೆ. ಇನ್ನೂ ಮುಂದುವರಿದು ಹೇಳುವುದಾದರೇ ಶಾಲೆಗಳ ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಈವರೆಗೆ ಈ ಭಾಗದಲ್ಲಿ ಪ್ರವಾಸೋದ್ಯಮದಿಂದ ಒಂದೇ ಒಂದು ಕೊರೊನಾ ಸೋಂಕು ದೃಢವಾಗದಿದ್ದರೂ ಕೊರೊನಾ ನೆಪ ಹೇಳಿ ರ್ಯಾಪ್ಟಿಂಗ್, ಜಲಕ್ರೀಡೆ ಪುನಾರಂಭಿಸಲು ಈವರೆಗೆ ಅವಕಾಶ ನೀಡಿಲ್ಲ.
ಕೊರೊನಾ ಮೊದಲನೆ ಅಲೆ ಮತ್ತು ಎರಡನೆ ಅಲೆ ಮಧ್ಯದಲ್ಲಿ ಸುಮಾರು ಮೂರರಿಂದ ನಾಲ್ಕು ತಿಂಗಳು ದೇಶದಾದ್ಯಂತ ವಾಣಿಜ್ಯ ಚಟುವಟಿಕೆಗಳು ಗರಿಗೆದರಿತ್ತು. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಯಿಯವರೇ ಇತ್ತೀಚೆಗೆ ನೀಡಿದ ಹೇಳಿಕೆ ಪ್ರಕಾರ ನಮ್ಮ ರಾಜ್ಯವು ಎರಡನೇ ಕೊರೊನಾ ಅಲೆಯ ಅಂತಿಮ ಘಟ್ಟದಲ್ಲಿದೆ ಎಂದು ಈಗಾಗಲೆ ಹೇಳಿದ್ದಾರೆ.
ಮೂರನೇ ಅಲೆಯ ಬಗ್ಗೆ ಇನ್ನೂ ಅನಿಶ್ಚಿತತೆ ಇದ್ದರೂ ಪ್ರವಾಸೋದ್ಯಮ ಚಟುವಟಿಕೆಗೆ ಮಾತ್ರವೆ ನಿರ್ಬಂಧ ಹೇರಿರುವುದು ಎಷ್ಟು ಸರಿ?. ಈಗಿರುವ ಕೊರೊನಾ ಪ್ರಕರಣಗಳ ಇಳಿಕೆಯಿದ್ದರೂ ರ್ಯಾಪ್ಟಿಂಗ್, ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ನೀಡದಿರುವುದರಿಂದ ಪ್ರವಾಸೋದ್ಯಮವನ್ನೆ ನಂಬಿರುವ ದಾಂಡೇಲಿ-ಜೊಯಿಡಾ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳಿಗೆ ಮತ್ತೇ ಸಂಕಷ್ಟ ಎದುರಾಗಿದೆ. ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ನಡೆಸುವ ರ್ಯಾಪ್ಟಿಂಗ್ ಜಲಕ್ರೀಡೆಗೆ ಕೂಡಲೆ ಅನುಮತಿ ನೀಡಬೇಕೆಂಬ ಮನವಿ ಪ್ರವಾಸೋದ್ಯಮಿಗಳ ಜೊತೆ ಪ್ರವಾಸೋದ್ಯಮವನ್ನೆ ನಂಬಿರುವ ಕೂಲಿಕಾರ್ಮಿಕರದ್ದಾಗಿದೆ. ಪ್ರವಾಸೋದ್ಯಮಿಗಳು ಮತ್ತು ಈ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಟ್ಟ ನಂಬಿಕೆಯನ್ನು ಉಳಿಸುವ ಜವಾಬ್ದಾರಿ ಶಿವರಾಮ ಹೆಬ್ಟಾರ ಅವರ ಮೇಲಿದೆ.