Advertisement

ಪ್ರವಾಸೋದ್ಯಮ ವಲಯದಲ್ಲಿ ಆಶಾಭಾವ

11:03 AM Sep 29, 2020 | sudhir |

ಕೋವಿಡ್ ಲಾಕ್‌ಡೌನ್‌ ಸಡಿಲಿಕೆ ಅನಂತರ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ರಾಜ್ಯ  ಸರಕಾರ ಮುಂದಾಗಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಹತ್ತು ಲಕ್ಷ ಉದ್ಯೋಗ ಸೃಷ್ಟಿಯ ಗುರಿಯೊಂದಿಗೆ ನೂತನ ಪ್ರವಾಸೋದ್ಯಮ ನೀತಿ -2020-25 ಸಹ ಬಿಡುಗಡೆ ಮಾಡಲಾಗಿದ್ದು ಪ್ರವಾಸೋದ್ಯಮ ವಲಯದಲ್ಲಿ ಒಂದಷ್ಟು ನಿರೀಕ್ಷೆ ಮೂಡಿಸಿದೆ.

Advertisement

ಲಾಕ್‌ಡೌನ್‌ ಸಂದರ್ಭದಲ್ಲಿ ಅತಿ ಹೆಚ್ಚು ಬಾಧಿತವಾದ ವಲಯದಲ್ಲಿ ಪ್ರವಾಸೋದ್ಯಮವೂ ಒಂದು. ಹೊಟೇಲ್‌, ರೆಸಾರ್ಟ್‌, ಪ್ರವಾಸಿ ತಾಣಗಳು ಬಂದ್‌ ಆಗಿದ್ದರಿಂದ ಅದರಲ್ಲಿ ತೊಡಗಿಸಿಕೊಂಡಿದ್ದವರು ನಿರುದ್ಯೋಗ ಎದುರಿಸುವಂತಾಗಿತ್ತು. ಜತೆಗೆ ಆದಾಯ ಇಲ್ಲದೆ ಮುಂದಿನ ಭವಿಷ್ಯದ ಬಗ್ಗೆ ಕಳವಳಗೊಂಡಿದ್ದರು. ಆದರೆ ರಾಜ್ಯ ಸರಕಾರ ಅದರಲ್ಲೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ಅವರು ಕಾಳಜಿ ವಹಿಸಿ ನೂತನ ಪ್ರವಾಸೋದ್ಯಮ ನೀತಿ ಸಿದ್ಧಪಡಿಸಿ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪುನಶ್ಚೇತನಕ್ಕೆ ನೀಲ ನಕ್ಷೆ ರೂಪಿಸಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ಎಂದರೆ ಅದರ ಜತೆಗೆ ಮೂಲಸೌಕರ್ಯಗಳ ಅಭಿವೃದ್ಧಿಯೂ ಆಗಲಿದೆ. ರಾಜ್ಯದ ಪ್ರವಾಸಿ ತಾಣ ಗಳಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನೀತಿಯಲ್ಲಿ ಸೇರಿರುವುದನ್ನು ಗಮನಿಸಬಹುದು.

ಪ್ರವಾಸೋದ್ಯಮ ನೀತಿಯಲ್ಲಿ 18 ಬಗೆಯ ಪ್ರವಾಸೋದ್ಯಮಕ್ಕೆ ಉತ್ತೇಜನ, 270 ಆದ್ಯತಾ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವುದು, ಎಂಟು ಜಿಲ್ಲೆಗಳನ್ನು ಆದ್ಯತಾ ಪ್ರವಾಸಿ ತಾಣಗಳೆಂದು ಪರಿಗಣಿಸಿ ಅಭಿವೃದ್ಧಿಗೆ ಪ್ರೋತ್ಸಾಹ ಧನ ನೀಡುವ ಅಂಶಗಳಿವೆ. ಪ್ರಸ್ತುತ ಪ್ರವಾಸೋದ್ಯಮದಲ್ಲಿ ದೇಶದಲ್ಲಿ 3ನೇ ಸ್ಥಾನದಲ್ಲಿರುವ ಕರ್ನಾಟಕ ವಿಶ್ವದಲ್ಲಿ 11ನೇ ಸ್ಥಾನದಲ್ಲಿದೆ. ಇದೀಗ ವಿಶ್ವದಲ್ಲಿ ಮೊದಲ 5 ಸ್ಥಾನಗಳಲ್ಲಿ ಇರಬೇಕು ಎಂಬ ಗುರಿ ಇಟ್ಟುಕೊಂಡು ಹೊಸ ನೀತಿ ರೂಪಿಸಲಾಗಿದೆ.

ಪರಂಪರೆ, ವನ್ಯಜೀವಿ, ಆಧ್ಯಾತ್ಮಿಕತೆ, ಸಂಸ್ಕೃತಿ, ಸಾಹಸ ಕಾರ್ಯ, ಕರಾವಳಿ, ಪ್ರಕೃತಿ, ಆರೋಗ್ಯ, ಕೃಷಿ ಹೀಗೆ ವಲಯವಾರು ಪ್ರವಾಸಿ ತಾಣಗಳ ಅಭಿವೃದ್ಧಿಗೆ ನಿರ್ಧರಿಸಲಾಗಿದೆ. ಐದು ವರ್ಷಗಳ ಅವಧಿಯಲ್ಲಿ 500 ಕೋಟಿ ರೂ.ಗಳ ಸಹಾಯಧನ ಪ್ರೋತ್ಸಾಹ ಹಾಗೂ ರಿಯಾಯಿತಿ ನೀಡಿ ಐದು ಸಾವಿರ ರೂ.ಗಳ ನೇರ ಬಂಡವಾಳ ಆಕರ್ಷಿಸಲು ಉದ್ದೇಶಿಸಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಉದ್ಯೋಗ ಭೀತಿ ಎದುರಿಸುತ್ತಿರುವವರಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರಕಾರ ರೂಪಿಸಿರುವ ಕಾರ್ಯಕ್ರಮಗಳು ಆಶಾಭಾವ ಮೂಡಿಸಿವೆ. ಮತ್ತೂಂದು ಪ್ರಮುಖ ವಿಚಾರ ಎಂದರೆ ಪ್ರವಾಸೋದ್ಯಮಕ್ಕಾಗಿ ಭೂ ಭ್ಯಾಂಕ್‌ ರಚನೆ ಹಾಗೂ ನಿರ್ವಹಣೆಗೆ ಜಿಲ್ಲಾ ಮಟ್ಟದ ಸಮಿತಿ ರಚಿಸುವ ತೀರ್ಮಾನವು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು.

Advertisement

ನೂತನ ಪ್ರವಾಸೋದ್ಯಮ ನೀತಿಯು ಸಮುದಾಯದ ಪಾಲ್ಗೊಳ್ಳುವಿಕೆಗೆ ಒತ್ತು ನೀಡಿದೆ. ಸ್ಥಳೀಯರಿಗೆ ಕೌಶಲ ತರಬೇತಿ ನೀಡುವ ಕೌಶಲ ಕೋಶವನ್ನು ಸಹ ಪ್ರವಾಸೋದ್ಯಮ ಇಲಾಖೆ ಸ್ಥಾಪಿಸಿದೆ. ಆಧುನಿಕ ತಂತ್ರಜ್ಞಾನ ಗಳನ್ನು ವ್ಯಾಪಕವಾಗಿ ಬಳಸಿಕೊಂಡು ದೇಶ- ವಿದೇಶಗಳ ಪ್ರವಾಸಿಗರನ್ನು ಸೆಳೆಯಲು ಕಾರ್ಯಯೋಜನೆ ರೂಪಿಸಲಾಗಿದೆ. ರಾಜ್ಯದ ಶ್ರೀಮಂತಿಕೆ ಹಾಗೂ ಸಾಂಸ್ಕೃತಿಕ ವೈಭವ, ಪರಂಪರೆ ಪರಿಚಯಿಸಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇವೆಲ್ಲವೂ ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ಬಂದರೆ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುವುದಲ್ಲಿ ಸಂದೇಹವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next