Advertisement

ಹೆಣ್ಣು ಮಕ್ಕಳ ಟೂರಿಂಗ್‌ ಟಾಕೀಸ್‌

11:15 PM Jul 11, 2019 | Team Udayavani |

ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸಲು ಭಯಪಡುವ ಕಾಲವೂ ಒಂದಿತ್ತು. ಆ ದಿನಗಳಲ್ಲೆಲ್ಲ ಟೂರಿಂಗ್‌ ಟಾಕೀಸ್‌ಗೆ ಹೋಗಿ ಸಿನೆಮಾ ನೋಡುವುದೇ ಒಂದು ಸಂಭ್ರಮ. ಅಂಥ ಟೂರಿಂಗ್‌ ಟಾಕೀಸ್‌ಗಳು ಸಂಪ್ರದಾಯದ ಮನೆತನದಲ್ಲಿ ಬಂಧಿಯಾಗಿದ್ದ ಹೆಣ್ಣಿಗೆ ಕೊಂಚ ಬಿಡುಗಡೆಯನ್ನೂ ಉಂಟು ಮಾಡುತ್ತಿತ್ತು. ಹೊರಗೆ ಹೋಗುವುದಕ್ಕೆ ಅದೊಂದು ನೆಪವಾಗುತ್ತಿತ್ತು. ಈಗ ಅವೆಲ್ಲ ದೊಡ್ಡ ಸಂಗತಿಗಳಲ್ಲ ಅಂತ ಅನ್ನಿ ಸಬಹುದು. ಆದರೆ, ಆ ದಿನಗಳಲ್ಲಿ ಸಿನೆಮಾ ನೋಡುವುದು ಸಣ್ಣ ಸಂಗತಿಯೇನೂ ಆಗಿರಲಿಲ್ಲ.

Advertisement

ಈಗ್ಗೆ ಐದಾರು ದಶಕಗಳ ಹಿಂದಿನ ಮಾತು. ನಾವೆಲ್ಲ ಚಿಕ್ಕವರು. ನಮಗಿನ್ನೂ ಸಂಸಾರದ ಜಂಜಾಟ ತಟ್ಟಿರಲೇ ಇಲ್ಲ. ಆಟವಾಡುವುದನ್ನು ಬಿಟ್ಟರೆ ಕಾಲಕಳೆಯಲು ಬೇರೇನೂ ಇರಲಿಲ್ಲ. ವರ್ಷಕ್ಕೊಮ್ಮೆ ನಮ್ಮ ಊರಿಗೆ ಬಂದು ಕ್ಯಾಂಪ್‌ ಹಾಕಿ, ಹತ್ತಾರು ನಾಟಕಗಳ ಪ್ರದರ್ಶನ ನೀಡಿ ಪಕ್ಕದ ಊರಿನಲ್ಲಿ ಕ್ಯಾಂಪ್‌ ಹಾಕುತ್ತಿದ್ದ ನಾಟಕ ಕಂಪೆನಿಗಳು. ಇದನ್ನು ಹೊರತುಪಡಿಸಿದರೆ ಮನರಂಜನೆಗಾಗಿ ಇದ್ದುದೆಂದರೆ ಸಿನಿಮಾ ಮಂದಿರಗಳು, ಟೂರಿಂಗ್‌ ಟಾಕೀಸ್‌ಗಳು. ಹೀಗಾಗಿ, ಬೇಸರವಾದರೆ ಎಲ್ಲರೂ ಥಿಯೇಟರಿನತ್ತ ಧಾವಿಸುತ್ತಿದ್ದರು.

ಆ ದಿನಗಳಲ್ಲಿ ಹೆಣ್ಣುಮಕ್ಕಳನ್ನು ಸ್ವತಂತ್ರವಾಗಿ ಎಲ್ಲಿಗೂ ಕಳುಹಿಸುತ್ತಿರಲಿಲ್ಲ. ಹಾಗಾಗಿ, ನನ್ನ ಅಮ್ಮ ಸಿನಿಮಾಕ್ಕೆ ಹೊರಟರೆಂದರೆ ಸಾಕು, ವಠಾರದ ಹೆಂಗಸರೆಲ್ಲÉ ಮಕ್ಕಳೊಂದಿಗೆ ಮದುವೆ ದಿಬ್ಬಣದಂತೆ ತಾಯಿಯನ್ನು ಹಿಂಬಾಲಿಸುತ್ತಿದ್ದರು. ಮಹಿಳೆಯರಿಗೆಂದೇ ಪ್ರತ್ಯೇಕ ಆಸನಗಳ ವ್ಯವಸ್ಥೆಯಿರುತ್ತಿತ್ತು. ಆದರೂ ಕೆಲವು ಕಿಡಿಗೇಡಿಗಳು ಅಡ್ಡವಿರುವ ಪರದೆಯನ್ನೆತ್ತಿ ಚುಡಾಯಿಸುತ್ತಿದ್ದರು. ನನ್ನ ಅಮ್ಮ ಜೋರಾಗಿ ಧ್ವನಿ ಎತ್ತಿ ಎರಡು ಮಾತನಾಡಿದರೆ ಸಾಕು, ಹುಡುಗರ ಸದ್ದಡಗುತ್ತಿತ್ತು.

ಮೂರೂವರೆ ವರ್ಷದ ಹುಡುಗ
ಒಳಗೆ ಪ್ರವೇಶಿಸಲು ಪ್ರವೇಶ ದರ ಕೇವಲ 50 ಪೈಸೆ. ಅಂದು ಅದೇ ದೊಡ್ಡ ಮೊತ್ತ. ಟಿಕೇಟಿನ ಹಣವನ್ನು ಉಳಿಸುವ ಸಲುವಾಗಿ ತಾಯಂದಿರು ತಮ್ಮ ದೊಡ್ಡ ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡು “ಇವನಿಗಿನ್ನೂ ಮೂರೂವರೆ ವರ್ಷ’ ಎಂದು ಹೇಳಿ ಒಳಗೆ ನುಗ್ಗುತ್ತಿದ್ದರು. ಒಮ್ಮೆ ಒಂದು ಹುಡುಗ “”ಏಕಮ್ಮಾ ಸುಳ್ಳು ಹೇಳ್ತಿ, ನಾನು ದೊಡ್ಡವನಾಗಿಲ್ವಾ, ನನೆY ಮಗ್ಗಿ ಎಲ್ಲಾ ಬರುತ್ತೆ. ಕೇಳು ಬೇಕಾದ್ರೆ ಎರಡೊಂದ್ಲಿ ಎರಡು” ಅಂತ ಮಗ್ಗಿ ಶುರು ಮಾಡಿದಾಗ ಗೇಟ್‌ ಕೀಪರ್‌ ನೆಗಾ ಡುತ್ತ ಒಳಗೆ ಕಳುಹಿಸಿದ ನೆನಪು ಇನ್ನೂ ಇದೆ.

ಆಸನಗಳಿಗೇನೂ ಕುಶನ್‌ಗಳಿರಲಿಲ್ಲ. ಕೇವಲ ಮರದ ಬೆಂಚುಗಳು. ಥಿಯೇಟರ್‌ ತುಂಬುತ್ತಿದ್ದಂತೆ ಮತ್ತೆ ಕೆಲವು ಬೆಂಚುಗಳು ಒಳಗೆ ನುಗ್ಗುತ್ತಿದ್ದವು. “ಸೇರಿಕೊಳ್ಳಿ, ಆ ಕಡೆ ಒತ್ಕೊಳಿ’ ಅಂತ ಅವನು ಬೊಬ್ಬೆ ಹಾಕುತ್ತಾ ಮತ್ತೆ ಕೆಲವರನ್ನು ನಮ್ಮ ಬೆಂಚ್‌ಗಳಿಗೆ ದೂಡುತ್ತಿದ್ದ. ದೀಪಗಳೆಲ್ಲಾ ನಂದಿಹೋಗಿ “ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಂ’ ಎಂದು ಶುರುವಾಗುತ್ತಿದ್ದಂತೆ ಕುತೂಹಲದಿಂದ ನಮ್ಮೆಲ್ಲರ ಕಣ್ಣುಗಳು ಬೆಳ್ಳಿಪರದೆಯ ಮೇಲೆ ನೆಟ್ಟಿರುತ್ತಿದ್ದವು. “ಅಲ್ಪವಿರಾಮ’ ಎಂದು ತೆರೆಯ ಮೇಲೆ ಬಂದಾಗಲೇ ನಮಗೆಲ್ಲಾ ಎಚ್ಚರ. ಆಗಲೇ ಅರ್ಧ ಸಿನಿಮಾ ಮುಗಿದೇ ಹೋಯಿತಲ್ಲ ಎಂದೂ ಬೇಸರ.

Advertisement

“ಖಾರಾಪುರಿ, ಮಸಾಲಾಪುರಿ, ಹಾಡಿನ ಪುಸ್ತಕ’ ಅಂತ ಹುಡುಗರು ಮಾರಿಕೊಂಡು ಬಂದು ನಮ್ಮ ಗಮನವನ್ನು ಅತ್ತ ಸೆಳೆಯುತ್ತಿದ್ದರು. ಅಂದು ಪ್ರದರ್ಶನವಾಗುತ್ತಿದ್ದ ಸಿನಿಮಾದ ಹಾಡಿನ ಪುಸ್ತಕಗಳನ್ನು ನಾಲ್ಕಾಣೆ ಕೊಟ್ಟು ಎಲ್ಲರೂ ಕೊಂಡುಕೊಳ್ಳುತ್ತಿದ್ದೆವು. “”ಖಾರಾಪುರಿ ಬೇಡ ಆಮೇಲೆ ಎಲ್ಲರೂ ಖಾರ ಖಾರ ಅಂತ ಅಳ್ತೀರಿ, ನೀರಿಗೆ ಎಲ್ಲಿಗೆ ಹೋಗೋದು” ಅಂತ ತಾಯಂದಿರು ಹೇಳಿದರೂ ಕೇಳದೆ ಖಾರಾಪುರಿ ತಿಂದು ಕಣ್ಣಿನಲ್ಲಿ ನೀರು, ಮೂಗಿನಲ್ಲಿ ಸಿಂಬಳ ಸೀಟುತ್ತ ಅಳುವಾಗ ಅಮ್ಮಂದಿರಿಂದ ಬೆನ್ನಿಗೆ ಒಂದೊಂದು ಗುದ್ದು ಬೀಳುತ್ತಿತ್ತು. ಹೊರಗಡೆ ಕರೆದುಕೊಂಡು ಹೋಗಿ ನೀರು ಕುಡಿಸಿಕೊಂಡು ಬರುತ್ತಿದ್ದರು. ಈಗಿನ ಹಾಗೆ ಯಾರಿಗೂ ಬಾಟಲಿ ನೀರಿನ ಬಗ್ಗೆ ಗೊತ್ತೇ ಇರಲಿಲ್ಲ. ಮಧ್ಯದಲ್ಲೇನಾದರೂ ವಿದ್ಯುತ್‌ ಕೈಕೊಟ್ಟರೆ ಸಾಕು ಮುಂದಿನ ಆಸನಗಳಲ್ಲಿ (ಮೂರನೇ ದರ್ಜೆ) ಕುಳಿತ ಯುವಕರ ಶಿಳ್ಳೆ , ಹಾಡು ಕೇಳುವುದಕ್ಕೇ ಒಂದು ಮಜಾ. ತಕ್ಷಣ ಥಿಯೇಟರಿನ ಕೆಲಸದವರು ಮೋಂಬತ್ತಿ ಹಚ್ಚಿಕೊಂಡು ಬಂದು ಇಡುತ್ತಿದ್ದರು. ವಿದ್ಯುತ್‌ ಬಂದರೆ ಸರಿ. ಇಲ್ಲದಿದ್ದರೆ ಪಾಸ್‌ ಕೊಟ್ಟು ಕಳುಹಿಸುತ್ತಿದ್ದರು. ಮರುದಿನ ಬಂದು ನೋಡಬಹುದಾಗಿತ್ತು. ಒಂದು ವೇಳೆ ಸಿನಿಮಾ ಮುಗಿಯುವ ಹಂತದಲ್ಲಿದ್ದರೆ ಪಾಸೂ ಇಲ್ಲ ಗೀಸೂ ಇಲ್ಲ. ಸಪ್ಪೆ ಮುಖ ಹಾಕಿಕೊಂಡು ಮನೆಯ ಕಡೆ ಹೋಗಬೇಕಾಗಿತ್ತು.

ನಮ್ಮ ತಾಯಿ ಯಾವಾಗಲೂ ಅರ್ಧ ಗಂಟೆಯ ಮೊದಲೇ ಹೋಗಿ ಹಿಂದಿನ ಬೆಂಚುಗಳನ್ನೇ ಆಕ್ರಮಿಸಿಕೊಳ್ಳುತ್ತಿದ್ದರು. ಸಿನಿಮಾ ಮುಕ್ಕಾಲು ಮುಗಿಯುತ್ತಿದ್ದಂತೆ ಪುಟ್ಟ ಮಕ್ಕಳೆಲ್ಲ ನಿದ್ರೆಯ ಆಳಕ್ಕಿಳಿದಿರುತ್ತಿದ್ದರು. ಎಬ್ಬಿಸಿದರೂ ಏಳದ ಅವರನ್ನು ಅಕ್ಕಂದಿರು ಕಂಕುಳಲ್ಲಿ ಹೊತ್ತುಕೊಂಡು ಬೈಯುತ್ತ ಮನೆಗೆ ಬರುತ್ತಿದ್ದರು. ಮನೆಗೆ ಬಂದ ಮೇಲೂ ಊಟ ಮಾಡಲು ಹಠಮಾಡಿದಾಗ ತಂದೆಯಿಂದ ಬೈಗುಳ. “”ಇನ್ನು ಮುಂದೆ ಸಿನಿಮಾದ ಸುದ್ದಿ ಎತ್ತಿದರೆ ಜಾಗ್ರತೆ. ಬಂದ ಮೇಲಿನ ಈ ರಾಮಾಯಣ ಯಾರಿಗೆ ಬೇಕು, ದುಡ್ಡೋ ದಂಡ, ಜೊತೆಗೆ ಉಪವಾಸ ಬೇರೆ”. ಈ ಕೋಪ-ಅವಾಂತರವೆಲ್ಲ ಅಂದಿನ ಒಂದು ದಿನಕ್ಕೆ ಮಾತ್ರ ಮೀಸಲು. ಮತ್ತೂಮ್ಮೆ ಒಳ್ಳೆಯ ಸಿನಿಮಾ ಬಂದರೆ ಮತ್ತೆ ದಿಬ್ಬಣ ಹೊರಡುತ್ತಿದ್ದೆವು.

ಆಗೊಮ್ಮೆ ಈಗೊಮ್ಮೆ ಟೆಂಟ್‌ ಸಿನಿಮಾಗಳು ಬರುತ್ತಿದ್ದವು. ಮಳೆಗಾಲದಲ್ಲಿ ಮಳೆಯ ನೀರು ಸೋರುತ್ತಿದ್ದರೆ ಕುರ್ಚಿಯನ್ನು ಆಚೆಈಚೆ ಸರಿಸಿ ನೋಡಿ ಬರುತ್ತಿದ್ದೆವು. ಒಮ್ಮೆ ಜೋರಾಗಿ ಬೀಸಿದ ಗಾಳಿ, ಮಳೆಗೆ ಟೆಂಟಿನ ಮೇಲ್ಛಾವಣಿಯೆಲ್ಲ ಹಾರಿಹೋಗಿ ಅರ್ಧದಲ್ಲೇ ಸಿನಿಮಾ ನಿಂತು ಮಳೆಯಲ್ಲಿ ತೋಯ್ದು ತೊಪ್ಪೆಯಾಗಿ ಬಂದ ಅನುಭವ ಇನ್ನೂ ಹಸಿರಾಗಿಯೇ ಇದೆ. ಇಷ್ಟಾದರೂ ಸಿನಿಮಾ ಮಾತ್ರ ಅರ್ಧಕ್ಕೇ ನಿಂತು ಹೋಯ್ತಲ್ಲ ಎಂಬ ದುಃಖ.

ಅಂದಿನ ದಿನಗಳಲ್ಲಿ ಜನರು ಎಷ್ಟು ಮುಗ್ಧರಾಗಿದ್ದರೆಂದರೆ ದೇವರ ಸಿನಿಮಾಗಳಲ್ಲಿನ ದೇವರ ಪಾತ್ರಧಾರಿಗಳ ಕಟ್‌ಔಟ್‌ಗಳಿಗೆ ದೀರ್ಘ‌ ದಂಡ ನಮಸ್ಕಾರ ಮಾಡುತ್ತಿದ್ದರು. ಸುತ್ತಮುತ್ತಲಿನ ಹಳ್ಳಿಗಳಿಂದ ಗಾಡಿ ಕಟ್ಟಿಸಿಕೊಂಡು ಗಾಡಿಯ ತುಂಬಾ ಜನರನ್ನು ತುಂಬಿಸಿಕೊಂಡು ಬರುತ್ತಿದ್ದರು. ಅವರು ಮನೆಗೆ ಹಿಂದಿರುಗುವಾಗ ಕನಿಷ್ಠ ಹನ್ನೆರಡು ಗಂಟೆಯಾದರೂ ಆಗುತ್ತಿತ್ತು. ಆದರೂ ಅವರು ಸಿನಿಮಾಗಳನ್ನು ಮಿಸ್‌ ಮಾಡಿಕೊಳ್ಳುತ್ತಿರಲಿಲ್ಲ. ಇವಿಷ್ಟೂ ಸಿನಿಮಾಗಳ ಕಥೆಯಾದರೆ, ಇನ್ನೊಂದು ಮನರಂಜನೆಯ ವಸ್ತು ಎಂದರೆ ಅದೇ ರೇಡಿಯೋ.

ಈಗ ಚಿತ್ರ ಗೀತೆಗಳ ಪ್ರಸಾರ
ರೇಡಿಯೋಗಳೂ ಅಪರೂಪವಾಗಿದ್ದ ದಿನಗಳು ಅವು. ಎಲ್ಲೋ ಅಲ್ಲೊಂದು ಇಲ್ಲೊಂದು ಮನೆಯಲ್ಲಿ ಇಟ್ಟುಕೊಂಡಿದ್ದರು. ನಮ್ಮ ಮನೆಗೂ ಒಂದು ರೇಡಿಯೋ ತಂದಾಗ ಕೋಟಿ ರೂಪಾಯಿ ಲಾಟರಿ ಹೊಡೆದಷ್ಟು ಸಂತಸವಾಗಿತ್ತು. ಸಿಲೋನ್‌ನಿಂದ ಪ್ರಸಾರವಾಗುತ್ತಿದ್ದ “ಬಿನಾಕ’ ಕಾರ್ಯಕ್ರಮವನ್ನು ತಪªದೆ ಕೇಳುತ್ತಿದ್ದೆವು. ಅದೇ ಸ್ಟೇಷನ್‌ನಿಂದ ಪ್ರತಿದಿನ ಮಧ್ಯಾಹ್ನ ಕನ್ನಡ ಚಿತ್ರಗೀತೆಗಳನ್ನು ಪ್ರಸಾರಮಾಡುತ್ತಿದ್ದರು. ಶಾಲೆಗೆ ರಜಾದಿನ. ಅಂದು ಕಾರ್ಯಕ್ರಮ ಕೇಳುತ್ತಾ ಕುಳಿತಿದ್ದೇವೆ. “”ಭಕ್ತಿಗೀತೆಗಳ ಪ್ರಸಾರ. ಭಕ್ತ ಕುಂಬಾರ ಚಿತ್ರದಿಂದ ಒಂದು ಭಕ್ತಿಗೀತೆ” ಎಂದು ನಿರೂಪಕಿ ಬಿತ್ತರಿಸಿದಳು. ಬಂದ ಹಾಡು ಯಾವುದು ಗೊತ್ತೇ “ಜೋಡಿ ಬೇಡೋ ಕಾಲವಮ್ಮ , ತುಂಬಿ ಬಂದ ಪ್ರಾಯವಮ್ಮ , ಹೆಣ್ಣು ಗಂಡಾ, ಗಂಡು ಹೆಣ್ಣಾ ಹುಡುಕಿ ಕೂಡೋ ಸಮಯವಮ್ಮ’. ಕನ್ನಡ ಬರದ ಅಲ್ಲಿನ ನಿರೂಪಕಿಗೆ ಭಕ್ತಿಪ್ರಧಾನ ಚಿತ್ರದ ಹಾಡುಗಳೆಲ್ಲವೂ ಭಕ್ತಿಗೀತೆಗಳೇ ಆಗಿದ್ದುದು ಎಲ್ಲರನ್ನೂ ನಗೆಗಡಲಿನಲ್ಲಿ ಮುಳುಗಿಸಿತ್ತು. ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದೆವು.

ಇಂದು ಬೇಕಾದಷ್ಟು ಸೌಲಭ್ಯಗಳು ಇವೆ. ಆಧುನಿಕ ತಂತ್ರಜ್ಞಾನದಿಂದ ಮನೆಯಲ್ಲೇ ಎಲ್ಲವನ್ನೂ ವೀಕ್ಷಿಸುವ ದೂರದರ್ಶನ, ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗ್ಳು ಕೈಗೆಟಕುವ ಬೆಲೆಗಳಲ್ಲಿ ದೊರಕುತ್ತಿವೆ. ಯಾವ ಸಿನಿಮಾಗಳನ್ನೇ ಆಗಲಿ, ಯಾವ ಹಾಡನ್ನೇ ಆಗಲಿ ಬೇಕಾದ ಹಾಗೆ, ಬೇಕಾದ ಜಾಗದಲ್ಲಿ, ಸಮಯದಲ್ಲಿ ಸುಖಾಸೀನಗಳಲ್ಲಿ ಕುಳಿತು, ಕುರುಕಲು ತಿಂಡಿಗಳನ್ನು ತಿನ್ನುತ್ತಾ ನೋಡಬಹುದಾದ ಅನುಕೂಲತೆಗಳಿವೆ.

ಅಂದು ಮನೆಮಂದಿಯೆಲ್ಲ ಒಟ್ಟಿಗೇ ಹೋಗಿ ನೋಡುತ್ತಿದ್ದ ಪೌರಾಣಿಕ, ಚಾರಿತ್ರಿಕ, ಸಾಮಾಜಿಕ ಮೌಲ್ಯದ ಸಿನಿಮಾಗಳನ್ನು ನಾವು ಇಂದು ಕಾಣುತ್ತಿಲ್ಲ. ಬೆಂಚುಗಳಲ್ಲಿ ಕುಳಿತು, ಕೆಲವು ಸಲ ತಿಗಣೆಗಳಿಂದ ಕಚ್ಚಿಸಿಕೊಂಡರೂ ಎಲ್ಲರೂ ಒಟ್ಟಿಗೆ ಹೋಗಿ ಸಿನಿಮಾ ನೋಡಿ ಬರುತ್ತಿದ್ದ ಗಮ್ಮತ್ತು ಇಂದು ಸಿಗುತ್ತಿಲ್ಲ. ಖಾರಾಪುರಿ ತಿಂದು ಕಣ್ಣು ಮೂಗಿನಲ್ಲಿ ನೀರು ಬರಿಸಿಕೊಂಡು, ಕಪ್ಪು ಬಿಳುಪಿನ ಚಿತ್ರವಾದರೂ ಆ ಪಾತ್ರಗಳೊಂದಿಗೆ ಲೀನವಾಗುತ್ತ ಅವರು ಅತ್ತಾಗ ನಾವೂ ಅತ್ತು, ನಕ್ಕಾಗ ನಾವು ನಗಾಡಿದ ನೆನಪುಗಳು ಇನ್ನೂ ಮನಸ್ಸಿನಿಂದ ಮಾಸಿಹೋಗಿಲ್ಲ. ಚಿತ್ರದ ಸಿಡಿಗಳನ್ನು ತರಿಸಿ ಹಾಕಿಕೊಂಡು ನೋಡುವ ಅನುಕೂಲತೆಗಳಿದ್ದರೂ, ಈಗ ಸಿನಿಮಾ ನೋಡುವ ಆಸಕ್ತಿಯೇ ಉಳಿದಿಲ್ಲ. ದೂರದಲ್ಲಿದ್ದರೂ ಥಿಯೇಟರುಗಳಿಗೆ ನಡೆದುಕೊಂಡೇ ಅಕ್ಕಪಕ್ಕದವರೊಂದಿಗೆ ಹೋಗುತ್ತಿದ್ದ ದೃಶ್ಯ ಕಣ್ಮುಂದೆ ಕಾಡುತ್ತಿದೆ.

ಥಿಯೇಟರುಗಳಿಗೆ ಕಾಲಿಟ್ಟು ಹತ್ತು-ಹದಿನೈದು ವರ್ಷಗಳೇ ಕಳೆದುಹೋಗಿರಬಹುದು. ಇನ್ನೆಂದೂ ಆ ದಿನಗಳನ್ನು ನಾವು ಕಾಣುವುದಿಲ್ಲವೆಂಬ ಕಟುಸತ್ಯವಂತೂ ನಮ್ಮ ಮುಂದಿದೆ. ಹಳೆಯದನ್ನು ಬಿಡಲಾಗದೆ, ಹೊಸ ಪರಿಸ್ಥಿತಿಗೆ ಒಗ್ಗಿಕೊಳ್ಳಲಾರದ ಹಳೆಯ ಮನಸ್ಸುಗಳು, ಹಿರಿಯ ಜೀವಗಳು ಹಿಂದಿನ ಆ ದಿನಗಳನ್ನು ಮತ್ತೂಮ್ಮೆ ಬಯಸಿದರೆ ತಪ್ಪೇನು?

ಪುಷ್ಪಾ ಎನ್‌. ಕೆ. ರಾವ್‌

Advertisement

Udayavani is now on Telegram. Click here to join our channel and stay updated with the latest news.

Next