Advertisement

ಬರ ಪ್ರದೇಶಕ್ಕೆ ಬಲ ಪ್ರವಾಸ: ಶಕ್ತಿ ಪ್ರದರ್ಶನಕ್ಕೆ ಯಡಿಯೂರಪ್ಪ ಸಜ್ಜು

09:44 AM May 15, 2017 | Team Udayavani |

ಬೆಂಗಳೂರು: ಪಕ್ಷ ಸಂಘಟನೆ ಹಾಗೂ ಬರ ಅಧ್ಯಯನಕ್ಕಾಗಿ ಮೇ 18ರಿಂದ 36 ದಿನಗಳ ರಾಜ್ಯ ಪ್ರವಾಸಕ್ಕೆ ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆ ಮೂಲಕ ಪಕ್ಷದ ವರಿಷ್ಠರ ಮುಂದೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

Advertisement

ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ನೇಮಕ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತಮ್ಮ
ಸುಪರ್ದಿಗೆ ತೆಗೆದುಕೊಳ್ಳಲು ಮುಂದಾಗಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ತಮ್ಮ ಶಕ್ತಿ ತೋರಿಸುವುದು ಹಾಗೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಮೂಲಕ ತಿರುಗಿ ಬಿದ್ದಿರುವ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರಿಗೂ ತಿರುಗೇಟು ನೀಡುವುದು ರಾಜ ಪ್ರವಾಸದ ಉದ್ದೇಶ ಎಂದು ಮೂಲಗಳು ತಿಳಿಸಿವೆ.

36 ದಿನಗಳ ರಾಜ್ಯ ಪ್ರವಾಸಕ್ಕೆ ಯಡಿಯೂರಪ್ಪ ಅವರು ಸಿದ್ಧಪಡಿಸಿಕೊಂಡಿರುವ ಕಾರ್ಯಸೂಚಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳತ್ತ ಯಡಿಯೂರಪ್ಪ ಅವರು ಹೆಚ್ಚು ಗಮನಹರಿಸಲಿದ್ದು, ಈ ಕುರಿತಂತೆ ಈಗಾಗಲೇ ಆಯಾ ಜಿಲ್ಲಾ ಉಸ್ತುವಾರಿಗಳು ಮತ್ತು ಮುಖಂಡರಿಗೆ ಸೂಚಿಸಲಾಗಿದೆ. ಈ ಮೂಲಕ ತಾವು ಲಿಂಗಾಯತ ನಾಯಕರಾಗಿದ್ದರೂ, ನನ್ನೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇತರೆ ಸಮುದಾಯದ ಜನರೂ ಇದ್ದಾರೆ ಎಂಬುದನ್ನು
ಬಿಂಬಿಸುವ  ಪ್ರಯತ್ನ ಇದಾಗಿದೆ ಎಂದು ಹೇಳಲಾಗಿದೆ. 

ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ಸಂಘಟನೆ ಉಳಿಸಿ ಎಂಬ ಹೋರಾಟಕ್ಕೆಇಳಿದಿರುವ ಅಸಮಾಧಾನಿತ ಮುಖಂಡರು ಸುಮ್ಮನಾಗಿದ್ದಾರೆ. ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರೂ ಕೊಂಚ ತಣ್ಣಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಶಕ್ತಿಯನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಮೂಲಕ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲಿ ತಮ್ಮ ಮಾತು ಕೇಳಲೇ ಬೇಕಾದ ಅನಿವಾರ್ಯತೆ ಸೃಷ್ಟಿಸುವುದು ಯಡಿಯೂರಪ್ಪ ಅವರ ಯೋಚನೆ ಎನ್ನಲಾಗಿದೆ.

ದೇಶವ್ಯಾಪಿ ಪ್ರವಾಸ ಕೈಗೊಂಡಿರುವ ಅಮಿತ್‌ ಶಾ ಅವರು ಆಗಸ್ಟ್‌ ಮೊದಲ ವಾರ ಮೂರು ದಿನಗಳ ಅವಗೆ ರಾಜ್ಯಕ್ಕೆ ಬರಲಿದ್ದಾರೆ. ಇದಕ್ಕೆ ಮುನ್ನ ರಾಜ್ಯ ಪ್ರವಾಸ ಕೈಗೊಂಡು ಶಾ ಅವರಿಗೆ ತಮ್ಮ ರಾಜ್ಯ ಪ್ರವಾಸದ ವರದಿ ಒಪ್ಪಿಸಲಿದ್ದಾರೆ
ಎಂದು ಮೂಲಗಳು ಹೇಳಿವೆ.

Advertisement

ಶಾ ನಿಲುವು ಬದಲಾದದ್ದೇ ಕಾರಣ: ಕಳೆದ ಲೋಕಸಭೆ ಚುನಾವಣೆ ಮತ್ತು ನಂತರ ನಡೆದ ವಿಧಾನಸಭಾ
ಚುನಾವಣೆಗಳಲ್ಲಿ ಉತ್ತರದಾಯಿ ಆಡಳಿತಕ್ಕಾಗಿ ನಾಗರೀಕರು (ಸಿಟಿಜನ್ಸ್‌ ಫಾರ್‌ ಅಕೌಂಟೆಬಲ್‌ ಗವರ್ನೆನ್ಸ್‌- ಸಿಎಜಿ) ಎಂಬ ನೀತಿಯಡಿ ಸ್ಥಳೀಯವಾಗಿ ಕಾರ್ಯಕರ್ತರು ಮತ್ತು ಜನರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನೀತಿಯನ್ನು ಬಿಜೆಪಿ ಅನುಸರಿಸಿ ಯಶಸ್ಸು ಸಾಧಿಸಿತ್ತು. ಆದರೆ, ದಕ್ಷಿಣ ಭಾರತದ ರಾಜಕೀಯ ಪರಿಸ್ಥಿತಿ ಉತ್ತರ ಭಾರತಕ್ಕಿಂತ ಭಿನ್ನವಾಗಿರುವುದರಿಂದ ಮತ್ತು ಕರ್ನಾಟಕವೊಂದೇ ಬಿಜೆಪಿಗೆ ನೆಲೆಯಾಗಿರುವುದರಿಂದ ಸ್ಥಳೀಯ
ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂಬುದು ಅಮಿತ್‌ ಶಾ ಅವರ ನಿಲುವಾಗಿತ್ತು. ಈ ಕುರಿತಂತೆ ಶಾ ಅವರು ಆರು ತಿಂಗಳ ಹಿಂದೆಯೇ ರಾಜ್ಯ ಘಟಕಕ್ಕೆ ಸೂಚನೆ ನೀಡಿ ಸ್ಥಳೀಯವಾಗಿ ಅಭ್ಯರ್ಥಿಗಳನ್ನು ಸಿದ್ಧಪಡಿಸಿ ಕೊಳ್ಳುವಂತೆ ಸೂಚನೆಯನ್ನೂ ನೀಡಿದ್ದರು.

ಈ ಸಮಸ್ಯೆ ಬಗೆಹರಿಸಲು ವರಿಷ್ಠರು ಸಾಕಷ್ಟು ಪ್ರಯತ್ನಿಸಿದರೂ ಅದು ಪೂರ್ಣ ಫ‌ಲ ನೀಡದ ಕಾರಣ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅಮಿತ್‌ ಶಾ ಅವರು ತಮ್ಮ ನಿಲುವು ಬದಲಿಸಲು ಮುಂದಾಗಿದ್ದಾರೆ. ಪಕ್ಷದಲ್ಲಿರುವ ಆಂತರಿಕ
ಭಿನ್ನಮತ ಮೇಲ್ನೋಟಕ್ಕೆ ಕಾಣಿಸಿಕೊಳ್ಳದಿದ್ದರೂ ಒಳಗೊಳಗೇ ಕುದಿಯುತ್ತಿರುವುದರಿಂದ ಅಭ್ಯರ್ಥಿಗಳ ಆಯ್ಕೆಯಲ್ಲೂ ಮೂಲ ಕಾರ್ಯಕರ್ತರು ಮತ್ತು ಇತರರು ಎಂಬ ಗೊಂದಲ ಸೃಷ್ಟಿಯಾಗಬಹುದು. ಸಂಘಟನೆ ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ತೊಡಗದೆ ಅಭ್ಯರ್ಥಿ ಗೆಲುವಿನ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ರಾಜ್ಯದಲ್ಲೂ ಸಿಎಜಿ ನೀತಿಯಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ರೀತಿಯಾದರೆ ತಮಗೆ ಬೇಕಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಕಷ್ಟಸಾಧ್ಯ. ತಮ್ಮ ಮಾತು ನಂಬಿಕೊಂಡಿರುವ ಅನೇಕರು ಅವಕಾಶ ವಂಚಿತರಾಗಬೇಕಾಗುತ್ತದೆ. ಅದರ ಬದಲು ತಾವು ರಾಜ್ಯದಲ್ಲಿ ಪ್ರಬಲ ನಾಯಕ ಎಂಬುದು ಶಾ ಅವರಿಗೆ
ಮನವರಿಕೆಯಾದರೆ ಟಿಕೆಟ್‌ ಹಂಚಿಕೆ ವೇಳೆ ತಮ್ಮ ಮಾತು ನಡೆಯುತ್ತದೆ. ಭರವಸೆ ನೀಡಿದ ಕೆಲವರಿಗಾದರೂ ಟಿಕೆಟ್‌ ಕೊಡಿಸಲು ಸಾಧ್ಯವಾಗುತ್ತದೆ.

ಮುಂದೆ ಅಧಿಕಾರಕ್ಕೆ ಬಂದರೆ ತಾನು ಇನ್ನಷ್ಟು ಪ್ರಬಲನಾಗುತ್ತೇನೆ ಎಂಬುದು ಯಡಿಯೂರಪ್ಪ ಅವರ ರಾಜ್ಯ ಪ್ರವಾಸದ ಕಾರ್ಯಸೂಚಿಯ ಹಿಂದಿರುವ ಸತ್ಯ ಎಂಬ ಮಾತು ಬಿಜೆಪಿ ವಲಯಲ್ಲಿ ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next