ಸೆ. 9, 2024ರಂದು ಸೂರ್ಯೋದಯಕ್ಕೆ ಮುಂಚೆಯೇ ಎದ್ದು, ತಯಾರಾಗಿ ಸದರನ್ ಟ್ರಾವೆಲ್ಸ್‌ನಿಂದ ಕಾಯ್ದಿರಿಸಿದ್ದ ಬಸ್‌ಗೆ ಕಾಯುತ್ತಿದ್ದ ನನಗೆ ಬಸ್‌ನ ಚಾಲಕ ಮಲ್ಲಿಕಾರ್ಜುನ್ ಕರೆ ಎಚ್ಚರಿಸಿತು. ಅಮ್ಮ ನಾನು ಬಂದಿದ್ದೇನೆ, ಇಲ್ಲೇ ಅಗರ್‌ವಾಲ್ ಸ್ವೀಟ್ಸ್ ಬಳಿ ಇದ್ದೀನಿ ಎಂದ. ಓ ಟೈಮ್ ಆಯ್ತು ಎನ್ನುತ್ತಾ ಯಾರಿಗೂ ಕಾಯದೇ ಬಸ್ ಬಳಿಗೆ ಹೊರಟೆ. ಹೇಳಿದಂತೆ ಒಬ್ಬೊಬ್ಬರಾಗಿ ಬಂದು ಸೇರಿ, ಅಂದುಕೊಂಡಂತೆ 6.20ಕ್ಕೆ ಬಸ್ ಅಲ್ಲಿಂದ ಹೊರಟಿತು.
ದಾರಿಯಲ್ಲಿ ವಿಜಯನಗರ, ನಾಯಂಡಹಳ್ಳಿ, ಕೆಂಗೇರಿಗಳಲ್ಲಿ ಕಾಯುತ್ತಿದ್ದ ಮಿಕ್ಕ ಗೆಳತಿಯರನ್ನು ಹತ್ತಿಸಿಕೊಂಡು ಅಡುಗೆಯವರು, ಅಡುಗೆ ಪದಾರ್ಥ ಎಲ್ಲರನ್ನೂ ಬಸ್ ಒಳಗೆ ಕರೆದು ಎಲ್ಲರೂ ಸೆಟ್ಲ ಆದೆವು. ಓಂ ಭೂರ್ಭು ವಸ್ವ: ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ದಿಯೋ ಯೋನ ಪ್ರಚೋದಯಾತ್ ಎಂದು ಮೂರು ಸಲ ಹೇಳುತ್ತಾ 32 ಜನರೂ ಪ್ರಯಾಣ ಆರಂಭಿಸಿದೆವು. ಜೈ ಹಿತೈಷಿ ಎಂದು ಹೇಳಲು ಮರೆಯಲಿಲ್ಲ.
ಮೊಟ್ಟಮೊದಲಿಗೆ ಕೆಂಗಲ್ ಹನುಮಂತರಾಯನ ಗುಡಿಗೆ ಹೋಗಿ “ಹಿತೈಷಿ’ ಹೆಸರಲ್ಲಿ ಅರ್ಚನೆ ಮಾಡಿಸಿ, ಉಪಹಾರಕ್ಕೆ ಕುಳಿತೆವು. ಅಲ್ಲಿ ಮಳೆಯಲ್ಲಿ ನೆನೆಯದಂತೆ ಕುಳಿತುಕೊಳ್ಳಲೂ ಸಹ ಕಲ್ಲಿನ ಆಸನಗಳು ಎಲ್ಲವೂ ಇತ್ತು. ರವೆ ಇಡ್ಲಿ, ಚಟ್ನಿ, ಕ್ಯಾರೆಟ್ ಹಲ್ವಾ ಎಲ್ಲರಿಗೂ ಸರಾಗವಾಗಿ ಒಳಗಿಳಿಯಿತು. ಬಿಸಿ ಕಾಫಿ ಹೀರಿದ ಅನಂತರ ಟೀ ಸ್ಟಾಲ್‌ನಲ್ಲಿ ಕಾಫಿ ಕುಡಿಯದವರು ಟೀ ಕುಡಿದು, ವಿವಿಧ ಭಂಗಿಯಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿ, ಎಲ್ಲರೂ ಬಸ್ ಏರಿದೆವು. ಇಲ್ಲಿಗೆ ಬರುವ ಮುಂಚಿನಿಂದಲೇ ಬಸ್‌ನಲ್ಲೇ ಆಡುವಂತಹ ಆಟಗಳನ್ನು ಆಯೋಜಿಸಿದ್ದರಿಂದ ವಿವಿಧ ಆಟಗಳನ್ನು ಗಗನಚುಕ್ಕಿ ಬರುವವರೆಗೂ ಆಡುತ್ತಲೇ ಹೋದೆವು. ಬಹುಮಾನ ಗೆದ್ದವರಿಗೆ ಖುಷಿ, ಬಾರದಿದ್ದವರ ಗೊಣಗಾಟ ನಡೆದೇ ಇತ್ತು.
ಅಷ್ಟರಲ್ಲಿ ಗಗನಚುಕ್ಕಿ ಮುಟ್ಟಿ ಅಲ್ಲಿಂದ ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ನಡೆದು, ಬಹಳ ಹತ್ತಿರದಲ್ಲೇ ಕಾಣುತ್ತಿದ್ದ ನೀರಿನ ಭೋರ್ಗರೆತ ನೋಡಿ ಖುಷಿಪಟ್ಟೆವು. ಬಿಳಿ ನೊರೆಯಂತೆ ಧುಮುಕುವ ನೀರು ನೋಡಲೇ ಚೆಂದ.
ಅಲ್ಲಿಯೂ ಗ್ರೂಪ್ ಹಾಗೂ ವಿವಿಧ ಭಂಗಿಯಲ್ಲಿ ಫೋಟೋ ತೆಗೆದಿದ್ದು ಆಯಿತು. ಈ ಫೋಟೋ ಹುಚ್ಚು ನನಗಂತೂ ಬಹಳವೇ ಇದೆ. ಇರಲಿ, ಮುಂದೊಂದು ದಿನ ಇದೆಲ್ಲ ಒಳ್ಳೆಯ ನೆನಪು ಕೊಡುತ್ತದೆ ಅಲ್ವಾ. ಮತ್ತೆ ಮರಳಿ ಬಸ್‌ಗೆ ಬಂದೆವು. ನಗು ಮಾತು ಚಟಾಕಿಗಳ ಮಧ್ಯೆ ಮಧ್ಯರಂಗ ಬಂದಿದ್ದು ತಿಳಿಯಲೇ ಇಲ್ಲ. ಅಲ್ಲಿ ಈಶ್ವರ ಹಾಗೂ ಶ್ರೀಚಕ್ರ ದೇವಿಯ ದರ್ಶನ ಮಾಡಿ, “ಹಿತೈಷಿ’ ಹೆಸರಿನಲ್ಲಿ ಅರ್ಚನೆ ಮಾಡಿಸಿ ಸಂತೃಪ್ತಿಗೊಂಡೆವು. ಏನೋ ಹುರುಪು, ದೇವಿಯ ದರ್ಶನದಿಂದ ಪುಳಕಿತಗೊಂಡ ಮನ ಸ್ನೇಹಿತೆಯರ ಜತೆ, ಶ್ರೀಚಕ್ರ ರಾಜ ಸಿಂಹಾಸನೇಶ್ವರಿ, ಶ್ರೀ ಲಲಿತಾಂಬಿಕೆ …… ಹಾಡಿಗೆ ಬಂದ ಹಾಗೆ ಹೆಜ್ಜೆ ಹಾಕಿದ್ದೂ ಆಯಿತು. ಎಲ್ಲರ ಚಪ್ಪಾಳೆಯನ್ನು ಗಿಟ್ಟಿಸಿಕೊಂಡವು.
ಅಲ್ಲಿಂದ ಮುಂದೆ ಭರಚುಕ್ಕಿಗೆ ಪ್ರಯಾಣ ಮಾಡಿದೆವು. ಭರಚುಕ್ಕಿಯಲ್ಲೂ ತುಂಬಾ ನೀರಿದ್ದು, ನೋಡಲು ನಯನ ಮನೋಹರವಾಗಿತ್ತು. ಆಕರ್ಷಕ ಫೋಟೋಗಳನ್ನು ತೆಗೆದಿದ್ದೂ ಆಯಿತು. ಅಲ್ಲಿ ಸೆಕ್ಯೂರಿಟಿ ಇದ್ದು, ಒಳಗೆ ಏನನ್ನೂ ತಿನ್ನುವಂತಿಲ್ಲ. ಹಾಗಾಗಿ ಹೊರಗಡೆ ಬಂದು ಒಂದು ಜಾಗದಲ್ಲಿ ಲಂಚ್ ಮಾಡಿದೆವು. ತವಾ ವಾಂಗಿಬಾತ್, ಮೊಸರನ್ನ, ಮದ್ದೂರು ವಡೆ, ಅತಿರಸದೊಂದಿಗೆ ಎಲ್ಲರೂ ಖುಷಿ ಪಡುತ್ತಾ ಊಟ ಮಾಡಿದೆವು. ವರುಣನೂ ಸಹ ತುಂತುರು-ತುಂತುರಾಗಿ ಬಂದು ನಮ್ಮೊಡನೇ ಖುಷಿಯನ್ನು ಹಂಚಿಕೊಂಡ.
ಅಲ್ಲಿಂದ ಮುಂದಕ್ಕೆ ಸೋಮನಾಥಪುರಕ್ಕೆ ಹೊರಟೆವು. ಅಲ್ಲಿ ಪುರಾತತ್ವ ಇಲಾಖೆಯವರು ಒಬ್ಬರಿಗೆ ರೂ.20ರಂತೆ ಟಿಕೆಟ್ ಪಡೆದು ಎಲ್ಲರೂ ಒಳಗೆ ಹೊರಟೆವು. ಆಹಾ…ಎಂತಹ ದೇವಾಲಯ, ಅನ್ಯಾಯವಾಗಿ ಎಲ್ಲವೂ ಭಿನ್ನವಾಗಿದೆ. ನಮಗೇ ಬೇಸರವಾದರೆ ಅದನ್ನು ನಿರ್ಮಿಸಿದವರು ಇನ್ನೆಷ್ಟು ಸಂಕಟ ಪಟ್ಟಿರಬಹುದು. ಒಂದೊಂದು ಕೆತ್ತನೆಯೂ, ಆ ಕುಸುರಿ ಕಲೆಯೂ ಮುಗ್ಧವಾಗಿ ನಮ್ಮನ್ನು ಸೆಳೆಯುತ್ತದೆ. ಅಲ್ಲಿ ಫೋಟೋ ತೆಗೆಯಲು ಬಹಳ ಒಳ್ಳೆಯ ಜಾಗ. ಹೆಚ್ಚು-ಕಡಿಮೆ ಬೇಲೂರಿನಂತೆ ಇದ್ದರೂ ಹೊಯ್ಸಳರ ಕಾಲದ್ದೇ ಆದರೆ ಇಲ್ಲಿ ದೈವಪೂಜೆಯಿಲ್ಲ. ದೇವರನ್ನೆಲ್ಲ ಒಡೆದು ಹಾಳು ಮಾಡಿರುವುದರಿಂದ ಪೂಜೆ ನಡೆಯುತ್ತಿಲ್ಲ. ಆದರೂ ಸಹ ಪ್ರವಾಸಿಗರು ಆ ಶಿಲ್ಪಕಲಾ ವೈಭವವನ್ನು ಆ ದೇವಾಲಯವನ್ನು ನೋಡಲು ಬಂದೇ ಬರುತ್ತಾರೆ. ಬಹಳ ಸ್ವಚ್ಚ ವಾಗಿ ದೇವಾಲಯದ ಪ್ರಾಂಗಣವನ್ನು ಇಟ್ಟಿದ್ದಾರೆ. ನೂರಾರು ಫೋಟೋಗಳನ್ನು ವಿವಿಧ ಭಂಗಿಗಳಲ್ಲಿ ತೆಗೆದುಕೊಂಡ ನಾವು ನಾವೇ ಶಿಲಾಬಾಲಿಕೆಯರೇನೋ ಎಂಬಂತೆ ಭ್ರಮಿಸಿದೆವು.
ಅಲ್ಲಿಂದ ಮುಂದಕ್ಕೆ ಮದ್ದೂರಿಗೆ ಪ್ರಯಾಣ. ಸೀದಾ ಹೊಳೆ ಆಂಜನೇಯ ದೇವಸ್ಥಾನಕ್ಕೆ ಬಂದೆವು. ಅಲ್ಲಿ ಆಂಜನೇಯ ಬಹಳ ಶಕ್ತಿ ಇರುವ ದೈವ. ವಿಶೇಷವಾದ ಮೂರ್ತಿ. ಆ ಮೂರ್ತಿಯು ನಿಧಾನವಾಗಿ ಬೆಳೆಯುತ್ತಾ ಇದೆ ಎನ್ನುತ್ತಾರೆ ಅಲ್ಲಿನ ಅರ್ಚಕರು. ಇದರ ಬಗ್ಗೆ ನೀವು ಯೂಟ್ಯೂಬ್‌ನಲ್ಲಿ ವಿವರವಾಗಿ ತಿಳಿಯಬಹುದು. ಈಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ದೇವಾಲಯವು ಅಭಿವೃದ್ಧಿಗೊಳ್ಳುತ್ತಿದೆ. ಇಲ್ಲಿಯ ವಿಶೇಷವೆಂದರೆ ಒಂದೂ ಕಾಲು ರೂ.ಗಳನ್ನು ಕೈಯಲ್ಲಿ ಹಿಡಿದು, ಗುಡಿಯ ಸುತ್ತಾ ಪ್ರದಕ್ಷಿಣೆ ಮಾಡಿ, ಏನಾದರೂ ಬೇಡಿಕೊಂಡರೆ ಖಂಡಿತವಾಗಿಯೂ ನೆರವೇರುವುದು ಎಂಬ ನಂಬಿಕೆ ಇದೆ.
ಅದಕ್ಕಾಗಿಯೇ ಜನ ಅಲ್ಲಿಗೆ ಬಂದು ತಮ್ಮತಮ್ಮ ಬೇಡಿಕೆಗಳನ್ನು ಆಂಜನೇಯನ ಮುಂದಿಟ್ಟು, ಈಡೇರಿಸು ಎಂದು ಕೇಳಿಕೊಳ್ಳುತ್ತಾರೆ. ಕೆಲಸ ನೆರವೇರಿದ ಮೇಲೆ ಮತ್ತೆ ದೇವಾಲಯಕ್ಕೆ ಹೋಗಿ ನಿಮ್ಮ ಇಚ್ಛೆಯನುಸಾರ ದೇವರಿಗೆ ಸೇವೆ ಸಲ್ಲಿಸಬಹುದು. ಅರ್ಚಕರು ಹೇಳಿದ ಮಾತು ಕೇಳಿ ನಾವೆಲ್ಲರೂ ಒಂದೂ ಕಾಲು ರೂ. ಹಿಡಿದು ಪ್ರಾರ್ಥಿಸಿ ಪ್ರದಕ್ಷಿಣೆ ಮಾಡಿ ಅಲ್ಲಿಂದ ಹೊರಟೆವು.
ಮುಂದೆ ಮದ್ದೂರಿನ ನರಸಿಂಹ ದೇವಾಲಯಕ್ಕೆ ಹೊರಟೆವು. ಅಲ್ಲಿ ನರಸಿಂಹಸ್ವಾಮಿಯು ತನ್ನ ತೊಡೆಯ ಮೇಲೆ ಹಿರಣ್ಯಕಶಿಪುವನ್ನು ಮಲಗಿಸಿ, ಹೊಟ್ಟೆ ಬಗೆದು, ಕರುಳಿನ ಮಾಲೆಯನ್ನು ತನ್ನ ಕೊರಳಿಗೆ ಧರಿಸಿ, ಹಾಗೂ 3 ಕಣ್ಣು ಇದ್ದು, ಉಗ್ರ ನರಸಿಂಹ ಎಂದು ಪ್ರಖ್ಯಾತನಾಗಿರುವ ದೈವ. ಅಲ್ಲಿಯೂ ಪೂಜೆ ಮುಗಿಸಿ ಮುಂದೆ ಮದ್ದೂರಮ್ಮನ ಗುಡಿಗೆ ಬಂದೆವು. ಆ ದೇವಿಯಂತೂ ಬಹಳ ಮುದ್ದಾಗಿದೆ. ನಗು ಮುಖ ಹೊತ್ತಿರುವ ದೇವಿಯನ್ನು ನೋಡಲೇ ಚೆಂದ. ಇಲ್ಲಿ ಪ್ರಾಣಿ ಬಲಿ ಕೊಡುವ ಸಂಪ್ರದಾಯ ವಿಶೇಷವಾಗಿದ್ದು, ಬಂದ ಭಕ್ತರಿಗೆ ಮನ:ಪೂರ್ವಕವಾಗಿ ದೇವಿ ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ಇದೆ. ಮದ್ದೂರಮ್ಮ ದೇವಿಯ ಜತೆಯಲ್ಲಿ ಆಕೆಯ ಅಕ್ಕ-ತಂಗಿಯರೂ ನೆಲೆಸಿದ್ದಾರೆ. ಅಲ್ಲಿ ಅರ್ಚನೆಯನ್ನು ಮಾಡುವುದಿಲ್ಲ. ಸರ-ಬಳೆ ಮುಂತಾದುವುಗಳನ್ನು ದೇವಿಗೆ ಧರಿಸಿರುತ್ತಾರೆ.
ಅದನ್ನೇ ಪ್ರಸಾದವೆಂದು ಕೊಡುತ್ತಾರೆ. ಆದರೆ ಅದಕ್ಕೆ ನಾವು ಹಣ ಕೊಡಬೇಕು. ಇಷ್ಟೆಲ್ಲ ಪೂಜೆ ಮಾಡುವ ವೇಳೆಯಲ್ಲಿ ನಮ್ಮ ಅಡುಗೆಯವರು ಅಲ್ಲಿಯೇ ಬಿಸಿಬಿಸಿ ಈರುಳ್ಳಿ ಪಕೋಡ ಹಾಗೂ ಬಿಸಿ ಕಾಫಿ-ಟೀ ತಯಾರಿಸಿದ್ದರು. ಎಲ್ಲರೂ ರುಚಿಯಾಗಿದ್ದ ಪಕೋಡದ 2-3 ಪ್ಲೇಟ್‌ಗಳನ್ನು ಖಾಲಿ ಮಾಡಿದೆವು.
ಅಲ್ಲಿಂದ ವಾಪಸ್ಸು ಹೊರಟು ಬಸ್‌ಗೆ ಬಂದೆವು. ಬೆಳಗ್ಗೆ ಬಹುಮಾನ ಗೆದ್ದವರಿಗೆಲ್ಲ ಬಸ್ಸಿನಲ್ಲೇ ಬಹುಮಾನ ನೀಡಿದೆವು. ಅಲ್ಲಿಯೇ ತಂಬೋಲ ಆಡಲು ಶುರುಮಾಡಿದೆವು. ಬೆಳಗ್ಗೆಯಿಂದ ಒಂದೂ ಬಹುಮಾನ ಬರದಿದ್ದ ನನಗೆ ತಂಬೋಲದಲ್ಲಿ ಬಂಪರ್ ಹೊಡೆಯಿತು. ಓ… ಎಂದು ಜೋರಾಗಿ ಕೂಗಿಕೊಂಡೆ. ಗೆಳೆಯರ ಗುಂಪು ಯಾವಾಗಲೂ ಸಮಾನ ವಯಸ್ಕರದ್ದೇ ಆಗಿದ್ದರೆ ಅದರ ಮಜಾನೇ ಬೇರೆ. ಮನೆ, ಕೆಲಸ, ಮಕ್ಕಳು ಎಲ್ಲ ಮರೆತು ಪ್ರವಾಸವನ್ನು, ಅದರ ಸಾರವನ್ನು, ಸಂತೋಷವನ್ನು ಬಹಳವಾಗಿ ಅನುಭವಿಸಿದೆವು. ಇನ್ನೂ ಬೆಂಗಳೂರಿಗೆ ಹತ್ತಿರ ಬರುತ್ತಿದ್ದಂತೆ ಬೇರೆ-ಬೇರೆ ಏರಿಯಾಗಳಿಂದ ಬಂದಿದ್ದ ಗೆಳತಿಯರನ್ನೆಲ್ಲ ಅವರವರ ಮನೆಯ ಮುಖ್ಯರಸ್ತೆಯಲ್ಲಿ ಇಳಿಸಿ, ಎಲ್ಲರಿಗೂ ಬೈ-ಬೈ ಹೇಳಿ ಇಳಿಯುವಾಗಿ ರಾತ್ರಿಯ ಡಿನ್ನರ್ ಪ್ಯಾಕೆಟ್ ಅನ್ನು ಅಂದರೆ ಚಪಾತಿ ಹಾಗೂ ದಪ್ಪ ಮೆಣಸಿನಕಾಯಿ ಗೊಜ್ಜು ಡಬ್ಬದ ಜತೆ ಕೊಟ್ಟು ಎಲ್ಲರ ಕೈಗಳಲ್ಲಿ ಬ್ಯಾಗ್‌ಗಳಿಂದ ಅಲಂಕರಿಸಿದೆವು.
ನಾವು ನಾಲ್ಕಾರು ಜನ ಕೊನೆಯಲ್ಲಿ ಇಳಿದಾಗ ಸಮಯ ರಾತ್ರಿ 11:00 ಗಂಟೆಯಾಗಿತ್ತು. ಪ್ರವಾಸದ ಹುರುಪು, ಸ್ನೇಹಿತೆಯರ ಒಡನಾಟ, ರುಚಿಯಾದ ಭೋಜನ, ದೇವರ ದರ್ಶನ, ಪ್ರಕೃತಿಯ ಸೊಬಗು – ಎಲ್ಲ ನಮ್ಮನ್ನು ಹತ್ತಾರು ವರ್ಷ ಚಿಕ್ಕವರನ್ನಾಗಿಸಿತ್ತು. ಒಟ್ಟು ಪ್ರಯಾಣವು ಬೆಂಗಳೂರಿನಿಂದ ಹೊರಟು ಬೆಂಗಳೂರು ಸೇರುವ ವೇಳೆಗೆ 370 ಕಿ.ಮೀ. ಆಗಿತ್ತು. ಆಗಾಗ್ಗೆ ಇಂತಹ ಪ್ರವಾಸಗಳು ಜೀವನೋತ್ಸಾಹಕ್ಕೆ ಮುನ್ನುಡಿ ಹಾಡುವುದಂತೂ ನಿಜ. ದಿನ ಕಳೆದಂತೆ ಈ ನೆನಪುಗಳ ಅನುಭವದ ಮಾತಾಗಿ ಮುದ ನೀಡುವುದಂತೂ ಸಹ ಅಷ್ಟೇ ಸತ್ಯ. ಅಂದು ತೆಗೆದ ಫೋಟೋಗಳು ಹತ್ತಾರು ವರ್ಷಗಳ ಬಳಿಕ ನೋಡಿ ನಲಿಯಲು ಒಂದು ಸಾಧನ. ಶುಭರಾತ್ರಿಯೊಂದಿಗೆ ಎಲ್ಲರಿಗೂ ಬೈ-ಬೈ ಹೇಳಿ ಮನೆ ಸೇರಿದಾಗಿ ರಾತ್ರಿ 11:20 ಆಗಿತ್ತು. ಒಂದು ದಿನದ ಪ್ರವಾಸದಲ್ಲಿ ಆಡಿ, ಹಾಡಿ, ನಲಿದ ಮನ ನಿದ್ದೆಗೆ ಜಾರಿತ್ತು.