ಇದು ಒಂದು ಸಲದ ಕಥೆ ಅಲ್ಲ. ನಾವು ಪ್ರತೀಸಲ ಪ್ರವಾಸದ ಪ್ಲ್ರಾನ್ ಮಾಡಿದಾಗಲೂ ಇದೇ ಪುನರಾವರ್ತಿತವಾಗುತ್ತಿತ್ತು. ಕಪ್ಪತ್ತಗುಡ್ಡ, ಬಿಂಕದಕಟ್ಟಿ, ದಾಂಡೇಲಿ, ಕಾರವಾರ, ಯಲ್ಲಾಪುರ, ಸವದತ್ತಿ, ಹಂಪಿಯಂತಹ ಸ್ಥಳಗಳಿಗೆ ಹೋಗಬೇಕಂಬ ಬಹಳ ದಿನಗಳಿಂದ ಮಾಡಿದ್ದ ಪ್ಲ್ರಾನ್ ಇಲ್ಲಿಯವರೆಗೂ ಈಡೇರಿರಲಿಲ್ಲ. ಹಾಗೆಂದು ಒಂದಿಬ್ಬರು ಸರಿದರೂ ಅಂತ ಹೇಳಿ, ನಾವೇನೂ ದೂರವಾಗುವವರಲ್ಲ. ಇದಕ್ಕೆ ನಾವೊಂದು ಯೋಜನೆ ಹಾಕಿಕೊಂಡು ಕಪ್ಪತ್ತಗುಡ್ಡಕ್ಕೆ ಪ್ರವಾಸ ಹೊರೆಟೆವು.
ಇತ್ತೀಚೆಗೆ ಅಚಾನಕ್ ಆಗಿ ಒಂದು ರಾತ್ರಿ ಕಪ್ಪತ್ತಗುಡ್ಡಕ್ಕೆ ಪ್ರವಾಸ ಹೋಗೋಣ ಎಂದು ಮನವಿ ಕೇಳಿಬಂತು. ರಾತ್ರಿ ಹನ್ನೊಂದು ಆದರೂ ಪ್ರವಾಸ ಹೊರಡುವುದು ಕನ್ಫೂಶನ್‌ನಲ್ಲಿದ್ದೆವು. ಇಂತಹ ನಿರ್ಧಾರ ಮಾಡಿ ಬಿಟ್ಟಿದ್ದು ಇದೇ ಮೊದಲ ಬಾರಿ ಅಲ್ಲ ಎಂಬ ನಿರಾಸೆ ಕೂಡ ಇತ್ತು. ಕೊನೆಗೆ ನಿಮ್ಮ ನಿರ್ಧಾರಕ್ಕೆ ನಾನು ಸೈ ಎಂದು ನಿದ್ದೆ ಮಾಡಲು ಹೊರಟೆ. ಆಗ ತತ್‌ಕ್ಷಣವೇ ನಾಳೆ ಬೆಳಗ್ಗೆ ಕಪ್ಪತ್ತಗುಡ್ಡಕ್ಕೆ ಪ್ರವಾಸ ಹೊರಡುವುದು ಎಂದು ಆ ಕಡೆಯಿಂದ ಒಂದು ಸಂದೇಶ ಬಂತು. ನಾನು ಸರಿ ಹೊರಡೋಣ ಎಂದು ಕೈ ಎತ್ತಿದೆ. ಆದ್ರೂ ನನಗೆ ಗುಂಡ್ಯಾನ ಮೇಲೆ ಒಂದು ಡೌಟ್ ಇಟ್ಟುಕೊಂಡೆ ನಿದ್ದೆಗೆ ಜಾರಿದೆ. ಅಂದು ದೈಹಿಕವಾಗಿ ಶ್ರಮ ಪಟ್ಟಿದ್ದರಿಂದ ಹಾಯಾಗಿ ನಿದ್ದೆ ಬಂತು. ಆದರೆ ಮುಂಜಾನೆ 6.30ಕ್ಕೆ ಗೆಳೆಯನಿಂದ ಕಾಲ್. ನೀನು ಬೇಗ ರೆಡಿಯಾಗಿ ಬೇಗ ಬಾ ಎಂದು. ನಾನಿನ್ನು ಹಾಸಿಗೆ ಯಲ್ಲಿದ್ದೆ. ಪ್ರವಾಸಕ್ಕೆ ಹೊರಡುವುದು ಖಚಿತ ಎಂದು ತಿಳಿದು ಸಿದ್ಧನಾಗಲು ಹೊರಟೆ. ದೂರವಾಗಿದ್ದ ಗೆಳೆಯರ ಮುಖಗಳು ಕಣ್ಣಿಗೆ ಕಂಡ ಕ್ಷಣ ಮುಖ ಅರಳತೊಡಗಿದವು. ಕಪ್ಪತ್ತಗುಡ್ಡ ಮುಟ್ಟಿದ ತತ್‌ಕ್ಷಣ ಕಾಡಿನ ಹಾದಿಯಲ್ಲಿ ಸುತ್ತಾಟ. ಆರಂಭದಲ್ಲಿ ಗುಡ್ಡದ ಮೇಲೆ ಹತ್ತುವಾಗ ಕಾಲು ನೋವಿನಿಂದ ಬಳಲಿ ಕುಳಿತವರು ಒಂದೆಡೆಯಾದರೆ. ಗುಡ್ಡದ ಮೇಲೆ ಮೆಲ್ಲ ಹೆಜ್ಜೆ ಇಡುತ್ತಾ ಒಂದಿಷ್ಟು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ನಾವು ಮತ್ತೂಂದು ಕಡೆ ಹೊರಟೆವು.
ಒಂದೊಂದು ಸಾರಿ ಗುಡ್ಡದ ಮೇಲೆ ಹೋಗುವಾಗ ಕೆಳಗಡೆ ಬೀಳ್ತೀವಿ ಅನ್ನೋ ಭಯ ನಮ್ಮನ್ನು ಕಾಡತೊಡಗಿತ್ತು. ಆ ಸುಂದರ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು, ಸಾಧ್ಯವಾದಷ್ಟು ಪ್ರಕೃತಿಯ ಆ ಸೊಬಗನ್ನು ನಮ್ಮ ಕಣ್ಣಗಳಲ್ಲಿ ಸೆರೆಹಿಡಿದು ಅನುಭವಿಸಿದೆವು.
ಹಚ್ಚ ಹಸುರು- ತಂಪಾದ ಗಾಳಿ : ದೃಷ್ಟಿ ನೆಟ್ಟಷ್ಟೂ ದೂರ ಹಚ್ಚ ಹಸುರು. ಬಿಸಿಲಿನ ವಾತಾವರಣದಲ್ಲಿ ತಂಪಾದ ಗಾಳಿ. ಮರ- ಗಿಡಗಳೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಸೂರ್ಯ. ಸುಳಿವು ಕೊಟ್ಟಂತೆ ಆತನ ರಶ್ಮಿಗಳು ಆಗಾಗ ಗೋಚರಿಸುತ್ತಿರುವುದಕ್ಕೆ ಸಾಕ್ಷಿಯಾಗಿತ್ತು. ಸೂರ್ಯನ ಶಾಖಕ್ಕೆ ನಮ್ಮ ಮೈಯೆಲ್ಲ ಬೆವರು ಹನಿಗಳಿಂದ ಒದ್ದೆ ಆಗಿದ್ದ ಶರ್ಟ್‌ಗಳು ಆದರೂ ನಿಲ್ಲದೇ ದಾರಿಯುದ್ದಕ್ಕೂ ಹಲ್ಲು ಕಿಸಿಯುತ್ತಾ ಹೆಜ್ಜೆ ಹಾಕತೊಡಗಿದೆವು.
ಬೆಟ್ಟಗಳೆಂದರೆ ಅದು ಹೈವೇ ರೋಡ್ ಅಲ್ಲ ಅದು ನಮ್ಮ ಶಕ್ತಿ, ಯುಕ್ತಿಯನ್ನು ಪರೀಕ್ಷೆ ಮಾಡುವಷ್ಟು ದೊಡ್ಡದು. ಅದೆಷ್ಟೋ ಮೇಲೆ ಏರಿದರೂ ಆಯಾಸವಾಗಲಿಲ್ಲ,. ಬಾಯಾರಿಕೆ ಅಷ್ಟೇ. ಪದೇ ಪದೆ ನೀರು ಕೇಳುತ್ತಿತ್ತು. ನೀರು ಕಡಿಮೆ ಇರುವುದು ಎದ್ದು ಕಂಡಿತು. ಯಾಕೆಂದರೆ ನಾವು ಬರುವ ದಾರಿಯಲ್ಲಿ ಯಾರೋ ಒಬ್ಬ ಬೈಕ್ ಸ್ಪೀಡ್ ತಗೊಂಡು ಬಿದ್ದಿದ್ದ ಅವನ ಕೈಕಾಲು ಮುಖವೆಲ್ಲ ಗಾಯವಾಗಿ ರಕ್ತ ಬರುತ್ತಿತ್ತು. ಗೊತ್ತಿಲ್ಲದ ವ್ಯಕ್ತಿ ಆದ್ರೂ ಮಾನವೀಯತೆ ದೃಷ್ಟಿಯಿಂದ ನಾವು ಅವನಿಗೆ ನೀರು ಕೊಟ್ಟು, ಬಾಟಲ್ ಖಾಲಿ ಮಾಡ್ಕೊಂಡು ಮುಂದೆ ಪ್ರಯಾಣ ಬೆಳೆಸಿದೆವು.
ಲಾಕ್‌ಡೌನ್‌ನಿಂದ ಬೇಸತ್ತ ಮನಸ್ಸಿಗೆ ಅಲ್ಲಿನ ಹಸುರು ವಾತಾವರಣ ಮುದ ನೀಡಿತು. ಹಾಗೇ ಬಹಳ ದಿನಗಳ ಬಳಿಕ ಭೇಟಿ ಆಗೀವಿ ಎಂದು ಗುಡ್ಡ ತಿರುಗಿ ದೇವರ ದರ್ಶನ ಪಡೆದವು.
ವನ್ಯಜೀವಿಧಾಮ :
ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಪಡೆದಿರುವ ಕಪ್ಪತ್ತಗುಡ್ಡದಲ್ಲಿ ಹಲವಾರು ವನ್ಯಜೀವಿಗಳನ್ನು ಕಾಣಬಹುದಾಗಿದೆ. ರಾಜ್ಯ ಸರಕಾರವೂ ಕೂಡ ವನ್ಯಜೀವಿ ಧಾಮ ಎಂದು ಈಗಾಗಲೇ ಘೋಷಣೆ ಮಾಡಿದೆ. ಇದು ಹಚ್ಚ ಹಸುರಿನ ಗುಡ್ಡವಾಗಿದ್ದು, ಹಲವು ಆಯುರ್ವೇದದ ಔಷಧ ಗಿಡಮೂಲಿಕೆ ಸಸಿ, ಮರಗಳನ್ನು ಹೊಂದಿದೆ. ಅಲ್ಲದೇ ನೈಸರ್ಗಿಕ ಸಂಪನ್ಮೂಲಗಳನ್ನು ಹೇರಳವಾಗಿ ತನ್ನ ಉಡಿಯಲ್ಲಿ ಇಟ್ಟುಕೊಂಡಿದೆ. ಸುಮಾರು ಇಲ್ಲಿ 300ಕ್ಕೂ ಹೆಚ್ಚು ಔಷಧೀಯ ಗಿಡಗಳನ್ನು ಕಾಣಬಹುದಾಗಿದೆ.
63 ಕಿ.ಮೀ. ವಿಸ್ತಾರ :
ಕಪ್ಪತ್ತಗುಡ್ಡವೂ ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 63 ಕಿ.ಮೀ. ವಿಸ್ತಾರವನ್ನು ಹೊಂದಿದೆ. ಗದಗ ಜಿಲ್ಲೆಯ ಬಿಂಕದಕಟ್ಟೆಯಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರು ಕ್ಷೇತ್ರದವರೆಗೆ ಹಸುರನ್ನು ಹೊದ್ದು ಮೈ ಚಾಚಿಕೊಂಡಿದೆ.
ಪ್ರಕಾಶಗೌಡ ಪಾಟೀಲ
ಕರ್ನಾಟಕ ವಿ.ವಿ. ಧಾರವಾಡ