Advertisement

Tour Circle: ಕೈಬೀಸಿ ಕರೆಯುವ ಬೇಕಲಕೋಟೆ

05:00 PM Aug 06, 2024 | Team Udayavani |

ಕೇರಳ ರಾಜ್ಯದ ಸ್ವರ್ಣ ಕಿರೀಟದಂತೆ, ಗಜರಾಜನಂತೆ, ಸಪ್ತ ಭಾಷೆಯ ಸಂಗಮ ನಾಡು, ತುಳು, ಮಲಯಾಳಂ, ಕನ್ನಡ, ಮರಾಠಿ, ಬ್ಯಾರಿ, ಕೊಂಕಣಿ, ಉರ್ದು ಭಾಷೆಗಳ ಪೊರೆಯುವ ತೊಟ್ಟಿಲು ಈ ಕಾಸರಗೋಡು. ಚರಿತ್ರೆಯ ಪುಟಗಳನ್ನು ಒಮ್ಮೆ ಇಣುಕಿ ನೋಡಿದರೆ ಇಲ್ಲಿ ಇಕ್ಕೇರಿ ನಾಯಕರು ಕಟ್ಟಿದ ಭವ್ಯವಾದ ಬೇಕಲ ಕೋಟೆ ಮತ್ತು ಅದರ ಅಕ್ಕಪಕ್ಕದ ನೆಲೆಗಳು ಪುಳಕಿಸುವಂತದ್ದು.

Advertisement

ಸರ್ವ ಧರ್ಮದ ಶಾಂತಿಯ ತೋಟವಾಗಿರುವ, ದೈವಗಳ ಆರಾಧನೆಯ ಬೀಡಾಗಿರುವ ಕಾಸರಗೋಡು ದೇವಾಲಯ, ಮಂದಿರ, ಪಳ್ಳಿಗಳಿಗೆ ಹೆಸರುವಾಸಿ. ಉದಾಹರಣೆಗೆ ಮಧೂರು, ಅಡೂರು, ಅನಂತಪುರ, ಮಾಲಿಕ್‌ ದಿನಾರ್‌ ಹೀಗೆ ಅನೇಕ ಆರಾಧನಾಲಯಗಳು ಇಲ್ಲಿವೆ. ಇದರಿಂದಾಗಿಯೇ ಕಾಸರಗೋಡಿಗೆ ವಾಸ್ತುಶಿಲ್ಪದ ತೊಟ್ಟಿಲ ತೂಗುವ ನಾಡೆಂಬ ಹೆಸರು ಕೂಡ ಬಂದಿದೆ.

ಬೇಕಲಕೋಟೆ ಮತ್ತು ನನ್ನ ಅನುಬಂಧ ಕಿರಿ ವಯಸ್ಸಿನಿಂದಲೇ ಶುರುವಾಗಿದ್ದು, ಇಂದಿಗೂ ಈ ಒಡನಾಟ ಹಸನಾಗಿದೆ. ಕಾಸರಗೋಡು ಮೂಲದವನೇ ಆದ ನನಗೆ ಈ ಕೋಟೆಯ ಸವಿಯ ನೆನೆಯುವುದೆಂದರೆ ಹರುಷ. ದಕ್ಷಿಣದಿ ಅರಬ್ಬಿ ಸಮುದ್ರದ ಅಲೆಗಳ ಝೇಂಕಾರದ ಸದ್ದು ಕಿವಿಗೆ ಇಂಪು, ತಂಗಾಳಿಯ ತಂಪು, ಗರಿಗೆದರಿದ ಕಿರು ಓಲೆಯ ಮಡಲಿನ ತೆಂಗಿನ ಸಾಲು, ಕೊನೆಯಿಲ್ಲದ ನೀಲಾಕಾಶದ ಒಡಲು, ಹಾರಾಡುವ ಹಕ್ಕಿಗಳ ಸಾಲು ಹೀಗೆ ಇಲ್ಲಿನ ಸೌದರ್ಯವನ್ನು ಬಣ್ಣಿಸಲು ಶಬ್ದಗಳು ಸಾಲವು.

40 ಎಕರೆಯ ಕೋಟೆ

ಸೂರ್ಯಾಸ್ತಮಾನದ ಸುಂದರ ದೃಶ್ಯವನ್ನು ಕಣ್ಣಲ್ಲಿ ಸೆರೆ ಹಿಡಿದು ಅದನ್ನು ನೆನಪಿನ ಬುತ್ತಿಯಲ್ಲಿ ಭದ್ರಮಾಡಿ ಇಟ್ಟುಕೊಳ್ಳುವಂತಹ ತಾಣ ಯಾವುದಾದರೂ ಇದ್ದರೆ ಅದು ಕಾಸರಗೋಡು ಜಿಲ್ಲೆಯಲ್ಲಿರುವ ಬೇಕಲಕೋಟೆ. ಬೇಕಲಕೋಟೆಯ ಐತಿಹ್ಯ ನೋಡುವುದಾದರೆ ಸೇನಾ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಲು ಹಾಗೂ ರಕ್ಷಣಾ ಕಾರ್ಯದ ಉದ್ದೇಶದಿಂದ ಕೆಳದಿಯ ನಾಯಕರು ಕಟ್ಟಿದ ಸುಂದರ ಕೋಟೆಯಿದು.

Advertisement

ಇದು ಕೇರಳ ರಾಜ್ಯದ ಅತೀ ದೊಡ್ಡ ಕೋಟೆಯೂ ಹೌದು. ಸರಿ ಸುಮಾರು 40 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕೋಟೆ ಹರಡಿಕೊಂಡಿದೆ. ಬತ್ತೇರಿ, ಉದ್ದನೆಯ ಸಮುದ್ರ ಕಿನಾರೆಗೆ ಮುಖಮಾಡಿರುವ ಹಾದಿ, ರಕ್ಷಣೆಗಾಗಿ ಕೋಟೆಯಲ್ಲಿ ಕಾಣುವಂತಹ ಕಿಂಡಿ, ಸಾಗರ ವೀಕ್ಷಣಾ ಗೋಪುರವನ್ನು ನಾವಿಲ್ಲಿ ಕಾಣಬಹುದು.

ಹಿರಿಯ ವೆಂಕಟಪ್ಪನಾಯಕ ಕೋಟೆಯ ನಿರ್ಮಾಣಕ್ಕೆ ಶಿಲನ್ಯಾಸ ಹಾಕಿದರು. ಶಿವಪ್ಪ ನಾಯಕ ನಿರ್ಮಾಣಕಾರ್ಯವನ್ನು ಪೂರ್ಣಗೊ ಳಿಸಿದರು. ಕಾಲಾನಂತರದಲ್ಲಿ ಈ ಕೋಟೆ ಟಿಪ್ಪುವಿನ ವಶವಾಯಿತು. ಟಿಪ್ಪು ಮರಣದ ಬಳಿಕ ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪೆನಿಯ ವಶವಾ ಯಿತು. ಕೋಟೆಯಲ್ಲಿ ಯಾವುದೇ ಅರಮನೆಗಳು ಇದ್ದ ಕುರುಹುಗಳಿಲ್ಲ. ಈ ಕೋಟೆ ಶಸ್ತಾಸ್ತಗಳ ರಕ್ಷಣೆ ಹೆಸರುವಾಸಿಯಾಗಿತ್ತೆಂದು ಇತಿಹಾಸಕಾರರು ಹೇಳುತ್ತಾರೆ. ಕೋಟೆಯ ಮುಖ್ಯದ್ವಾರದ ಬಳಿ ಮುಖ್ಯಪ್ರಾಣ ದೇವಾಲಯವಿದೆ. ಬೇಕಲ ಕೋಟೆಯಂತೆ ಕಾಸರಗೋಡು ಜಿಲ್ಲೆಯಲ್ಲಿ ಕುಂಬ್ಳೆ ಕೋಟೆ, ಚಂದ್ರಗಿರಿ ಕೋಟೆ, ಹೊಸದುರ್ಗ ಕೋಟೆ ಎಂಬ ಕೋಟೆಗಳಿವೆ.

ಬೇಕಲ ಕೋಟೆಯು ಕಾಸರಗೋಡು-ಕನ್ನೂರು ಮುಖ್ಯ ರಸ್ತೆಯಲ್ಲಿದ್ದು, ಕೋಟೆಗೆ ಕಾಸರಗೋಡಿನಿಂದ 15 ಕಿ.ಮೀ., ಮಂಗಳೂರು ನಗರದಿಂದ 68 ಕಿ.ಮೀ., ಹಾಗೂ ಬೆಂಗಳೂರಿನಿಂದ ಸುಮಾರು 369 ಕಿ.ಮೀ. ದೂರದಲ್ಲಿದೆ. ಕೋಟೆಯ ಸಮೀಪದಲ್ಲೇ ಬೇಕಲ್‌ ಫೋರ್ಟ್‌ ರೈಲು ನಿಲ್ದಾಣವಿದ್ದು, ಪ್ರವಾಸಿಗರಿಗೆ ಅನುಕೂಲವಾಗಿದೆ. ಇದಲ್ಲದೆ ಕೋಟೆಯ ಬಳಿ ಬೇಕಲ ಬೀಚ್‌ ಮತ್ತು ರೆಡ್‌ ಮೂನ್‌ ಬೀಚ್‌ ಎಂಬ ಅವಳಿ ಬೀಚ್‌ಗಳಿದ್ದು, ಒಟ್ಟಿನಲ್ಲಿ ಉತ್ತಮವಾದ ಪ್ರವಾಸಿ ತಾಣವಾಗಿದೆ.

 -ಗಿರೀಶ್‌ ಪಿ.ಎಂ.

ವಿವಿ ಕಾಲೇಜು ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next