ಹೊಸದಿಲ್ಲಿ : ”ನನಗೆ ನೀವು ಕಠಿನ ಪ್ರಶ್ನೆಗಳನ್ನು ಕೇಳುತ್ತೀರಿ; ಆದರೆ ಪ್ರಧಾನಿ ನರೇಂದ್ರ ಮೋದಿ ಗೆ ‘ನಿಮಗೆ ಮಾವಿನ ಹಣ್ಣು ಇಷ್ಟವಾ?’ ಎಂಬ ರೀತಿಯ ಲಘು ಪ್ರಶ್ನೆಗಳನ್ನು ಕೇಳುತ್ತೀರಿ – ಏಕೆ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದು ಮಾಧ್ಯಮದವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಅನಂತರ ಪ್ರಧಾನಿ ಮೋದಿ ವಿರುದ್ಧ ವಾಕ್ಸಮರ ಆರಂಭಿಸಿದ ರಾಹುಲ್, “ಕೊನೆಗೂ ನೀವು (ಮೋದಿ) ರಫೇಲ್ ಫೈಟರ್ ಜೆಟ್ ಡೀಲ್ ಬಗ್ಗೆ ಬಹಿರಂಗ ಚರ್ಚೆಯ ನನ್ನ ಆಹ್ವಾನವನ್ನು ಸ್ವೀಕರಿಸಲೇ ಇಲ್ಲ” ಎಂದು ಜರೆದರು.
2019ರ ಲೋಕಸಭಾ ಚುನಾವಣೆಯ ಮೇ 19ರ 7ನೇ ಹಾಗೂ ಕೊನೇ ಹಂತದ ಚುನಾವಣೆಯ ಅಂತಿಮ ದಿನದ ಪ್ರಚಾರ ಕೊನೆಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಅವರು ರಫೇಲ್ ಕುರಿತ ಬಹಿರಂಗ ಚರ್ಚೆಯ ಚ್ಯಾಲೆಂಜನ್ನು ಏಕೆ ಸ್ವೀಕರಿಸಲಿಲ್ಲ’ ಎಂದು ಪ್ರಶ್ನಿಸಿದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜತೆಗೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಪ್ರಧಾನಿಯದ್ದು ‘ಅಭೂತಪೂರ್ವ’ ಕ್ರಮ ಎಂದು ರಾಹುಲ್ ಟೀಕಿಸಿದರು.
ಬಿಡುವಿಲ್ಲದ ಚುನಾವಣಾ ಪ್ರಚಾರಾಭಿಯಾನದಲ್ಲಿ ಅವಿರತವಾಗಿ ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗೆ ರಾಹುಲ್ ಧನ್ಯವಾದ ಹೇಳಿದರು.