ವಿಧಾನಪರಿಷತ್ತು: ಬೆಂಗಳೂರಿನ ರಸ್ತೆಗಳಲ್ಲಿ ಅಳವಡಿಸಲಾಗಿರುವ ಅನಧಿಕೃತ ಮತ್ತು ಅಕ್ರಮ ಕೇಬಲ್‌ಗಳನ್ನು ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಪಿ.ಆರ್.ರಮೇಶ್ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿಗಳು, ಬೆಂಗಳೂರಿನ ಹಲವು ಕಡೆ ಹತ್ತಾರು ಕಿ.ಮೀ ಉದ್ದ ಅನಧಿಕೃತ ಕೇಬಲ್‌ಗಳನ್ನು ಹಾಕಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇವುಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಲಾಗಿದೆ ಎಂದರು.
ಟೆಲಿಕಾಂ, ಇಂಟರ್‌ನೆಟ್ ಸರ್ವೀಸ್ ಹಾಗೂ ಇತರೆ ಸೇವಾ ಸಂಸ್ಥೆಗಳು ಕೆಬಲ್‌ಗಳನ್ನು ಅಳವಡಿಸುತ್ತವೆ. ಈಗಾಗಲೇ 8,860 ಕಿ.ಮೀ ವಿಸ್ತೀರ್ಣದಷ್ಟು ಕೇಬಲ್ ಅಳವಡಿಕೆಗೆ ಬಿಬಿಎಂಪಿ ಅನುಮತಿ ಕೊಟ್ಟಿದ್ದು, ಸಂಸ್ಥೆಗಳಿಂದ 620 ಕೋಟಿ ರೂ. ಶುಲ್ಕ ವಸೂಲು ಮಾಡಿದೆ. ಈ ಮಧ್ಯೆ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ತೊಂದರೆ ಆಗುತ್ತಿರುವುದರಿಂದ ಅನಧಿಕೃತ ಕೇಬಲ್‌ಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ದಂಡ ಹೆಚ್ಚಳ: ಅನಧಿಕೃತವಾಗಿ ಕೆಬಲ್ ಅಳವಡಿಸಿದ ಸಂಸ್ಥೆಗಳಿಗೆ ವಿಧಿಸುವ ದಂಡವನ್ನು 25 ಲಕ್ಷ ರೂ. ಹಾಗೂ ರಸ್ತೆ ಅಗೆಯುವ ಖಾಸಗಿ ವ್ಯಕ್ತಿಗಳಿಗೆ ದಂಡದ ಮೊತ್ತವನ್ನು 10 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ನಗರದಲ್ಲಿ 11 ಟೆಲಿಕಾಂ, 2 ನಾನ್ ಟೆಲಿಕಾಂ ಹಾಗೂ 7 ಇಂಟರ್‌ನೆಟ್ ಸೇವೆ ಒದಗಿಸುವ ನೋಂದಾಯಿತ ಗುತ್ತಿಗೆದಾರರು ಇದ್ದಾರೆ.
ಇವರು ತಪ್ಪು ಮಾಡಿದರೆ ಸುಲಭವಾಗಿ ಕ್ರಮ ಜರುಗಿಸಬಹುದು. ಆದರೆ, ಅನಧಿಕೃತವಾಗಿ ಅಳವಡಿಸಿದ ಕೇಬಲ್‌ಗಳ ವಾರಸುದಾರರು ಯಾರು ಎಂಬುದೇ ಗೊತ್ತಾಗುವುದಿಲ್ಲ. ಏನೇ ಇದ್ದರೂ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.