ಮುಂಚೂಣಿಯಲ್ಲಿದ್ದುಕೊಂಡು ಕೋವಿಡ್ 19 ವೈರಸ್ ವಿರುದ್ಧ ಹೋರಾಡುತ್ತಿರುವವರ ನಡುವೆಯೇ, ವೈದ್ಯಕೀಯೇತರ ವಲಯಗಳಲ್ಲಿರುವ ಜನಸಾಮಾನ್ಯರೂ ಈ ಸಂಕಷ್ಟದ ಸಂದರ್ಭದಲ್ಲಿ ದೇಶಕ್ಕಾಗಿ ತಮ್ಮಿಂದಾದ ಮಟ್ಟಿಗೆ ಸೇವೆ ಸಲ್ಲಿಸುತ್ತಿದ್ದಾರೆ.
ಅಂಥವರ ಪರಿಶ್ರಮಕ್ಕೆ ಬಹುತೇಕ ದೇಶಗಳಲ್ಲಿ ಮೆಚ್ಚುಗೆ ವ್ಯಕ್ತವಾದ ಸುದ್ದಿಗಳು ಬರುತ್ತಲೇ ಇವೆ. ಅದಕ್ಕೆ ಹೊಸ ಸೇರ್ಪಡೆಯೆಂಬಂತೆ, ಸ್ಪೇನ್‌ನ ಆಸ್ಪತ್ರೆಯೊಂದರ ವೈದ್ಯಕೀಯ ಸಿಬ್ಬಂದಿಯೇ ಎದ್ದು ನಿಂತು ಕಾರು ಚಾಲಕನೊಬ್ಬನಿಗೆ ಕರತಾಡನದ ಮೂಲಕ ಶ್ಲಾಘನೆ ವ್ಯಕ್ತಪಡಿಸಿ, ಸನ್ಮಾನಿಸಿದ ಘಟನೆ ನಡೆದಿದೆ.
ಈ ಟ್ಯಾಕ್ಸಿ ಚಾಲಕ ಆ ದೇಶಕ್ಕೆ ಕೋವಿಡ್ 19 ವೈರಸ್ ಪ್ರವೇಶವಾದಾಗಿನಿಂದ ಸೋಂಕಿತರನ್ನು ತನ್ನದೇ ಕಾರಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರುವ, ಅಲ್ಲಿಂದ ಮನೆಗೆ ಕರೆದೊಯ್ಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಹಗಲು ರಾತ್ರಿಯೆನ್ನದೆ ಈ ಕೆಲಸ ಮಾಡುತ್ತಿರುವ ಆ ಚಾಲಕ, ರೋಗಿಗಳಿಂದ ಒಂದು ಪೈಸೆಯನ್ನೂ ಪಡೆಯದೆ ಉಚಿತವಾಗಿ ಸೇವೆ ನೀಡುತ್ತಿದ್ದಾರೆ.
ಇತ್ತೀಚೆಗೆ ಆ ಚಾಲಕನಿಗೆ ಕರೆ ಮಾಡಿ ಒಬ್ಬ ರೋಗಿಯನ್ನು ಮನೆಗೆ ಬಿಟ್ಟು ಬರುವುದಿದೆ ಎಂದು ಹೇಳಲಾಯಿತು. ಅವರು ಕೂಡಲೇ ಟ್ಯಾಕ್ಸಿ ತಂದು, ಆಸ್ಪತ್ರೆಯ ಆವರಣದೊಳಕ್ಕೆ ಪ್ರವೇಶಿಸುತ್ತಿದ್ದಂತೆ ವೈದ್ಯರು, ದಾದಿಯರು ಸೇರಿದಂತೆ ಅಲ್ಲಿದ್ದವರೆಲ್ಲರೂ ಕರತಾಡನ ಮಾಡುತ್ತಾ ಚಾಲಕನನ್ನು ಸ್ವಾಗತಿಸಿದ್ದಾರೆ.
ಜತೆಗೆ ಆ ಚಾಲಕನ ಬದ್ಧತೆಯನ್ನು ಶ್ಲಾಘಿಸಿ, ಹಣದ ಕವರ್ ಒಂದನ್ನು ಉಡುಗೊರೆಯಾಗಿಯೂ ನೀಡುತ್ತಾರೆ. ಇದೆಲ್ಲವನ್ನೂ ನೋಡುತ್ತಾ ಚಾಲಕ ಕಣ್ಣೀರು ಹಾಕುವ ವೀಡಿಯೋ ಈಗ ವೈರಲ್ ಆಗಿದೆ.