Advertisement

ಪ್ರಮೋಶನ್‌ ಗಾಗಿ ವಿಶೇಷ ಟೀಸರ್‌: ತೋತಾಪುರಿ ತಂಡದ ಹೊಸ ಐಡಿಯಾ

09:11 AM Aug 16, 2021 | Team Udayavani |

ನವರಸ ನಾಯಕ ಜಗ್ಗೇಶ್‌ ಅಭಿನಯದ “ತೋತಾಪುರಿ’ ಸಿನಿಮಾ ಪ್ರಾರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷೆ ಆರಂಭವಾಗಿದೆ.

Advertisement

ಯಾಕೆಂದರೆ “ನೀರ್‌ದೋಸೆ’ ಹಿಟ್‌ಕೊಟ್ಟ ಬಳಿಕ ನಿರ್ದೇಶಕ ವಿಜಯ ಪ್ರಸಾದ್‌ ಹಾಗೂ ಜಗ್ಗೇಶ್‌ ಈ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ. ಅಲ್ಲದೇ ಚಿತ್ರದಲ್ಲಿ ಜಗ್ಗೇಶ್‌ ಹಾಗೂ ಇತರಕಲಾವಿದರ ಗೆಟಪ್‌ ತುಂಬಾ ವಿಭಿನ್ನವಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿದೆ.

ಏಕಕಾಲಕ್ಕೆ ಎರಡೂ ಭಾಗದ ಚಿತ್ರ ಚಿತ್ರೀಕರಣ ಮುಗಿಸಿರುವ ಖ್ಯಾತಿ ಈ ಚಿತ್ರತಂಡಕ್ಕಿದೆ. ಭಾರತ ಚಿತ್ರರಂಗದಲ್ಲಿ ಇದು ದಾಖಲೆಯೂ ಹೌದು. ಹೀಗೆ ನಾನಾಕಾರಣಗಳಿಂದಾಗಿ ಕುತೂಹಲಕ್ಕೆ ಕಾರಣವಾಗಿರುವ ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.

ವಿಶೇಷವೆಂದರೆ, ಜಗ್ಗೇಶ್‌ ಈವರೆಗೂ ನಟಿಸಿರುವ ಚಿತ್ರಗಳಲ್ಲಿ ಇದು ಬಿಗ್‌ ಬಜೆಟ್‌ ಸಿನಿಮಾ ಎಂಬುದು ಒಂದೆಡೆಯಾದರೆ, ಇದೇ ಮೊದಲ ಬಾರಿಗೆ ಭಾಗ-1 ಭಾಗ-2ರಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈಗ ಈ ಚಿತ್ರ ಮತ್ತೂಂದು ವಿಷಯದಿಂದ ಸುದ್ದಿಯಲ್ಲಿದೆ. ಅದು ಟೀಸರ್‌ ವೊಂದರ ಮೂಲಕ. ಸಾಮಾನ್ಯವಾಗಿ ಸಿನಿಮಾ ಪ್ರಮೋಶನ್‌ಗಾಗಿ ಲಿರಿಕಲ್‌ ವಿಡಿಯೋ ಅಥವಾ ಸಿನಿಮಾದ ಟೀಸರ್‌ ಬಿಡುಗಡೆ ಮಾಡುತ್ತಾರೆ. ಆದರೆ, “ತೋತಾಪುರಿ’ ಚಿತ್ರತಂಡ ಮಾತ್ರ ವಿಶೇಷವಾಗಿ ಸಿನಿಮಾದ ಪ್ರಮೋಶನ್‌ ಬಗ್ಗೆ ಹೇಳಲೆಂದೇ ವಿಶೇಷವಾದ ಟೀಸರ್‌ವೊಂದನ್ನು ಶೂಟ್‌ ಮಾಡಿದೆ. ಈ ಮೂಲಕ ಹೊಸತನಕ್ಕೆ ನಾಂದಿಯಾಡಿದೆ.

ಇದನ್ನೂ ಓದಿ:ಶಸ್ತ್ರಧಾರಿ ಸೈನಿಕರ ಜೊತೆ ‘ಅಪ್ಪು’ |’ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’ ಎಂದ ‘ಜೇಮ್ಸ್’

Advertisement

ಇತ್ತೀಚೆಗೆ ಈ ಟೀಸರ್‌ ಶೂಟ್‌ ಆಗಿದ್ದು, ಜಗ್ಗೇಶ್‌ ಹಾಗೂ ತಂಡ ಖುಷಿಯಾಗಿದೆ. ಈಗಾಗಲೇ ಚಾಪ್ಟರ್‌-1 ಮತ್ತು ಚಾಪ್ಟರ್‌-2 ಶೂಟಿಂಗ್‌ ಮುಗಿಸಿರುವ ಚಿತ್ರತಂಡ, ಟೈಟಲ್‌ಗೆ ಟ್ಯಾಗ್‌ಲೈನ್‌ ಸಹ ಗಮನ ಸೆಳೆಯುವಂತೆ ಇಟ್ಟಿದೆ “ತೋತಾಪುರಿ’ ತಂಡ. ಭಾಗ ಒಂದಕ್ಕೆ “ತೊಟ್‌ಕೀಳ್ಬೇಕಷ್ಟೇ…’ ಎಂದು ಅಡಿಬರಹವಿದ್ದರೆ, ಎರಡನೇ ಭಾಗಕ್ಕೆ “ತೊಟ್‌ಕಿತ್ತಾಯ್ತು’ ಎಂದು ನಮೂದಿಸಿದೆ.

ನಿರ್ದೇಶಕ ವಿಜಯ ಪ್ರಸಾದ್‌ ತುಂಟತನ, ಚೇಷ್ಟೆ ಇಷ್ಟಪಟ್ಟವರಿಗೆ ಇಲ್ಲಿ ಅವುಗಳನ್ನು ದುಪ್ಪಟ್ಟು ಅನುಭವಿಸುವಂತೆ ಕಟ್ಟಿಕೊಟ್ಟಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿ. ಜಗ್ಗೇಶ್‌ ಸೇರಿದಂತೆ ಚಿತ್ರದಲ್ಲಿ80ಕ್ಕೂ ಅಧಿಕ ಕಲಾವಿದರ ದಂಡೇ ಚಿತ್ರದಲ್ಲಿದೆ. ಅದಿತಿ ಪ್ರಭುದೇವ, ಧನಂಜಯ್, ಸುಮನ್‌ ರಂಗನಾಥ್‌, ದತ್ತಣ್ಣ, ವೀಣಾ ಸುಂದರ್‌, ಹೇಮಾದತ್‌ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.

ತಾಂತ್ರಿಕತೆಯ ವಿಚಾರದಲ್ಲೂ ಈ ಚಿತ್ರ ಸದ್ದು ಮಾಡುತ್ತಿದೆ. ಹಿಟ್‌ ಸಿನಿಮಾಗಳನ್ನು ನೀಡಿರುವ “ಸುರೇಶ್‌ ಆರ್ಟ್ಸ್’ ಬ್ಯಾನರ್‌ ನ ಕೆ.ಎ.ಸುರೇಶ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜಗ್ಗೇಶ್‌ ನಟನೆಯ ಎದ್ದೇಳು ಮಂಜುನಾಥ, ನೀರ್‌ದೋಸೆ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದ ಅನೂಪ್‌ ಸೀಳಿನ್‌ “ತೋತಾಪುರಿ’ ಹಾಡುಗಳಿಗೆ ಬ್ಯಾಂಡು ಬಜಾಯಿಸಿದ್ದಾರೆ. ಹಿನ್ನೆಲೆ ಸಂಗೀತಕ್ಕೂ ಅವರದೇ ತಾಳ-ಮೇಳ. ನಿರಂಜನ್‌ ಬಾಬು ಕ್ಯಾಮೆರಾ, ಸುರೇಶ್‌ ಅರಸ್‌ ಸಂಕಲನ ಈ ಚಿತ್ರಕ್ಕಿದೆ.

ಇನ್ನು ಈ ಚಿತ್ರಕ್ಕೆ ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಕೇರಳ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರಮಂದಿರಗಳಿಗೆ ಶೇ100 ಪ್ರವೇಶಾತಿ ಸಿಕ್ಕಕೂಡಲೇ ಸಿನಿಮಾ ಬಿಡುಗಡೆ ಮಾಡಲು ತಂಡ ಸಜ್ಜಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next