ಬೆಂಗಳೂರು: ಸ್ವಯಂ ಘೋಷಿತ ಆಸ್ತಿ ಪದ್ಧತಿ (ಎಸ್‌ಎಎಸ್)ಅಡಿಯಲ್ಲಿ ತಪ್ಪು ಮಾಹಿತಿ ನೀಡಿದವರ ಪತ್ತೆಗೆ ಬಿಬಿಎಂಪಿ ಕೈಗೊಂಡಿದ್ದ ಟೋಟಲ್ ಸ್ಟೇಷನ್ ಸರ್ವೇ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸರ್ವೇಯ ಮಾಹಿತಿ ಹಾಗೂ ಮಾಲೀಕರು ಘೋಷಿಸಿಕೊಂಡ ಮಾಹಿತಿ ತಾಳೆ ಕೆಲಸ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಬೃಹತ್ ಕಟ್ಟಡಗಳು, ಮಾಲ್‌ಗಳು ಹಾಗೂ ಟೆಕ್‌ಪಾರ್ಕ್‌ಗಳು ಪಾಲಿಕೆಗೆ ತಪ್ಪು ಮಾಹಿತಿ ನೀಡಿರುವ ಕುರಿತ ದೂರಗಳನ್ನು ಆಧರಿಸಿ ಸರ್ವೇ ನಡೆಸಲಾಗಿದೆ. ಇದೀಗ ಮೊದಲ ಹಂತದಲ್ಲಿ 51 ಬಹೃತ್ ಕಟ್ಟಡಗಳ ಸರ್ವೇ ಪೂರ್ಣಗೊಳಿಸಿರುವ ಅಧಿಕಾರಿಗಳು, ಆಸ್ತಿ ಮಾಲೀಕರು 2008ರಲ್ಲಿ ಎಸ್‌ಎಎಸ್ ಅಡಿಯಲ್ಲಿ ಘೋಷಿಸಿಕೊಂಡ ಮಾಹಿತಿಯೊಂದಿಗೆ ಸರ್ವೇ ಮಾಹಿತಿ ತಾಳೆ ಹಾಕುವ ಕೆಲಸವೊಂದೆ ಬಾಕಿಯಿದೆ.
ಮೊದಲ ಹಂತದ 55 ಕಟ್ಟಡಗಳ ಪೈಕಿ 51 ಕಟ್ಟಡಗಳ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, 4 ಕಟ್ಟಡಗಳ ಸರ್ವೇ ಕಾರ್ಯ ಚಾಲನೆಯಲ್ಲಿದೆ. ಸುಳ್ಳು ಮಾಹಿತಿ ನೀಡಿರುವ ಕಟ್ಟಡಗಳ ಮೇಲೆ ಯಾವೆಲ್ಲ ಕ್ರಮ ಕೈಗೊಳ್ಳಬೇಕು, ಈವರೆಗೆ ನಡೆಸಲಾಗಿರುವ ಟೋಟಲ್ ಸ್ಟೇಷನ್ ಸರ್ವೇಯ ಪ್ರಗತಿ ಹಾಗೂ 2ನೇ ಹಂತದಲ್ಲಿ ಯಾವೆಲ್ಲ ಕಟ್ಟಡಗಳನ್ನು ಸರ್ವೇಗೊಳಪಡಿಸಬೇಕು ಎಂಬುದರ ಬಗ್ಗೆ ನಿರ್ಧರಿಸಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಒಂದೊಮ್ಮೆ ಮಾಲೀಕರು ಪಾಲಿಕೆಗೆ ತಪ್ಪು ಮಾಹಿತಿ ನೀಡಿ ವಂಚಿಸಿರುವುದು ಸರ್ವೇಯಿಂದ ಬೆಳಕಿಗೆ ಬಂದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪಾಲಿಕೆ ತೀರ್ಮಾನಿಸಿದೆ. ಮಾಲೀಕರು ಎಷ್ಟು ವರ್ಷಗಳಿಂದ ತೆರಿಗೆ ವಂಚಿಸಿದ್ದರೊ ಅಷ್ಟು ವರ್ಷಗಳಿಗೆ ದುಪ್ಪಟ್ಟು ತೆರಿಗೆ, ದಂಡ ಹಾಗೂ ಬಡ್ಡಿಯೊಂದಿಗೆ ವಸೂಲಿ ಮಾಡುವುದಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಎಚ್ಚರಿಕೆ ನೀಡಿದೆ.
ಪಾಲಿಕೆಯಿಂದ ಹಮ್ಮಿಕೊಳ್ಳಲಾಗಿದ್ದ ಟೋಟಲ್ ಸ್ಟೇಷನ್ ಸರ್ವೇ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ವಲಯಗಳಿಂದ ಮಾಹಿತಿ ಕ್ರೋಢೀಕರಣ ಮಾಡಲಾಗುತ್ತಿದೆ. ಮಾಲೀಕರು 2008ರಲ್ಲಿ ನೀಡಿದ ಮಾಹಿತಿ ಹಾಗೂ ಸರ್ವೇಯ ಮಾಹಿತಿ ತಾಳೆ ಹಾಕುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಲಿದ್ದು, ತಪ್ಪು ಮಾಹಿತಿ ನೀಡಿದವರಿಂದ ದುಪ್ಪಟ್ಟು ತೆರಿಗೆ, ಬಡ್ಡಿ ಹಾಗೂ ದಂಡ ವಸೂಲಿ ಮಾಡಲಾಗುವುದು.
-ಎಂ.ಕೆ.ಗುಣಶೇಖರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ