ಸಿಡ್ನಿ: ಬಹು ನಿರೀಕ್ಷಿತ ಭಾರತ- ಇಂಗ್ಲೆಂಡ್ ವನಿತಾ ಟಿ20 ಸೆಮಿ ಫೈನಲ್ ಪಂದ್ಯಕ್ಕೆ ಮಳೆಕಾಟ ಎದುರಾಗಿದೆ. ಸಿಡ್ನಿ ಅಂಗಳದಲ್ಲಿ ಮಳೆ ಸುರಿಯುತ್ತಿದ್ದು, ಟಾಸ್ ವಿಳಂಬವಾಗಿದೆ.
ಮಹಿಳಾ ಕ್ರಿಕೆಟ್ ನ ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ಸಜ್ಜಾಗಿದ್ದವು. ಆದರೆ ಸಿಡ್ನಿಯಲ್ಲಿ ಮಳೆಯಾಗುತ್ತಿದ್ದು, ಪಂದ್ಯ ವಿಳಂಬವಾಗಿದೆ.
ಲೀಗ್ ಹಂತದ ಎಲ್ಲಾ ನಾಲ್ಕು ಪಂದ್ಯ ಗೆದ್ದಿರುವ ಅಜೇಯ ಭಾರತ ಒಂದು ಕಡೆಯಾದರೆ, ಮೊದಲ ಪಂದ್ಯ ಸೋತರೂ ನಂತರದ ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ಮತ್ತೊಂದೆಡೆ. ವಿಶ್ವದ ನಂ 1 ಆಟಗಾರ್ತಿ ಶಫಾಲಿ ವರ್ಮಾ ಮತ್ತು ನಂ 1 ಬೌಲರ್ ಇಂಗ್ಲೆಂಡ್ ನ ಸೋಫಿ ಎಕ್ಲೆಸ್ಟೋನ್ ನಡುವಿನ ಕಾದಾಟವನ್ನು ನೋಡಲು ಜನರು ಕಾದು ಕುಳಿತಿದ್ದರು. ಆದರೆ ವರುಣರಾಯನ ಆರ್ಭಟಕ್ಕೆ ಪಂದ್ಯ ವಿಳಂಬವಾಗಿದೆ.
ಪಂದ್ಯ ರದ್ದಾದರೆ?
ಸೆಮಿ ಫೈನಲ್ ಗೆ ಯಾವುದೇ ಹೆಚ್ಚುವರಿ ದಿನವನ್ನು ಕಾಯ್ದಿರಿಸಲಾಗಿಲ್ಲ. ಹಾಗಾಗಿ ಮಳೆಯಿಂದಾಗಿ ಇಂದು ಪಂದ್ಯ ರದ್ದಾದರೆ ಭಾರತ ಫೈನಲ್ ಗೆ ಎಂಟ್ರಿಯಾಗಲಿದೆ. ಲೀಗ್ ಹಂತದಲ್ಲಿ ಹೆಚ್ಚು ಪಂದ್ಯ ಗೆದ್ದಿರುವುದು ಇದಕ್ಕೆ ಕಾರಣ.
ಟಿ20 ವಿಶ್ವಕಪ್ ಪಂದ್ಯ ಕನಿಷ್ಠ ತಲಾ 10 ಓವರ್ ಆದರೂ ನಡೆಯಬೇಕು ಎಂಬ ನಿಯಮವಿದೆ. ಒಂದು ವೇಳೆ ಸಾಧ್ಯವಾಗದೇ ಇದ್ದರೆ ಭಾರತ ಫೈನಲ್ ಪ್ರವೇಶ ಮಾಡಲಿದೆ.