ಗಂಗಾವತಿ: ಅಳಿವಿನಂಚಿನ ಜೀವಿಗಳ ಪಟ್ಟಿಯಲ್ಲಿರುವ ಸುಮಾರು 60 ವಯಸ್ಸಿನ ಮತ್ತು ಮೂರುವರೆ ಕೆಜಿ ತೂಕದ ಆಮೆಯೊಂದನ್ನು ಮಕ್ಕಳು ಸಂರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿ ಪರಿಸರ ಕಾಳಜಿಯ ಅಪರೂಪದ ಘಟನೆ ಜಯನಗರದ ಸತ್ಯನಾರಾಯಣ ಪೇಟೆಯಲ್ಲಿ ಜರುಗಿದೆ.
ಮಕ್ಕಳು ಆಟವಾಡಿಕೊಂಡಿರುವ ಸಂದರ್ಭದಲ್ಲಿ ನಸುಸಂಜೆಯ ಕತ್ತಲಲ್ಲಿ ಆಮೆಯೊಂದು ನಡೆದುಕೊಂಡು ಬಂದಿದೆ. ಇದನ್ನು ಗಮನಿಸಿದ ಎಸ್‌ಕೆಎನ್‌ಜಿ ಕಾಲೇಜಿನ ವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿ ಚೇತನ ಮುದ್ಗಲ್ ಹಾಗೂ ಇತರೆ ಮಕ್ಕಳು ರಕ್ಷಣೆ ಮಾಡಿದ್ದಾರೆ.
ಮಕ್ಕಳಾದ ಮಾನಸ, ಶ್ರೇಯಸ್, ಸಂಹಿತಾ ನೇತೃತ್ವದಲ್ಲಿನ ತಂಡ, ಆಮೆಯನ್ನು ಹಿಡಿದು ಟಬ್‌ನಲ್ಲಿ ನೀರು ತುಂಬಿಸಿ ಆಹಾರ ನೀಡಿ ಆರೈಕೆ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಪ್ರಾದೇಶಿಕ ಅಧಿಕಾರಿ ಶಿವರಾಜ ಮೇಟಿ ಅವರಿಗೆ ದೂರವಾಣಿ ಕರೆ ಮಾಡಿ ಆಮೆಯ ಬಗ್ಗೆ ಮಾಹಿತಿ ನೀಡಿದ್ದು ಕೂಡಲೆ ಸ್ಪಂದಿಸಿದ ಶಿವರಾಜ ಮೇಟಿ, ತಮ್ಮ ಸಿಬ್ಬಂದಿಯನ್ನು ಸ್ಥಳಕ್ಕೆ ಕಳಿಸಿ ಆಮೆಯನ್ನು ವಶಕ್ಕೆ ಪಡೆದುಕೊಂಡು ಸಮೀಪದ ದೇವಘಾಟದ ತುಂಗಭದ್ರಾ ನದಿಯ ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.
ಮಕ್ಕಳು ರಕ್ಷಣೆ ಮಾಡಿರುವ ಈ ಆಮೆ ಬ್ಲಾಕ್ ಮಾರ್ಶ್ ಟರ್ಟಲ್ ಎಂಬ ಜಾತಿಗೆ ಸೇರಿದ್ದು ಅಂತರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಸಂಸ್ಥೆ (ಐಯುಸಿಎನ್) ಹೊರಡಿಸಿರುವ ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಈ ಆಮೆ ಕೆಂಪು ಪಟ್ಟಿಯಲ್ಲಿದೆ. ಸುಮಾರು ಮೂರರಿಂದ ನಾಲ್ಕು ಕೆಜಿ ಭಾರವಿದ್ದು, ಸುಮಾರು 60 ವರ್ಷ ವಯಸ್ಸಾಗಿದೆ. 12ರಿಂದ 15 ಇಂಚು ಉದ್ದ, 16 ಇಂಚು ಅಗಲವಿದೆ. ಕಳೆದ ಕೆಲ ದಿನಗಳಿಂದ ಸತತ ಮಳೆಯಾಗುತ್ತಿರುವ ಕಾರಣಕ್ಕೆ ಸಮೀಪದ ಕೆರೆ, ದೊಡ್ಡ ಕಾಲುವೆಗಳಿಂದ ಆಮೆ ಬಂದಿರುವ ಸಾಧ್ಯತೆ ಇದೆ. ಇಂತಹ ಗ್ರಾಣಿಗಳು ಕಂಡ ತಕ್ಷಣ ಸಾರ್ವಜನಿಕರು ತಕ್ಷಣ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಸಂರಕ್ಷಿಸಬೇಕು.
-ಶಿವರಾಜ್ ಮೇಟಿ ತಾಲೂಕು ಅರಣ್ಯಾಧಿಕಾರಿ.