ಮುಂಡಗೋಡ: ಕಳೆದ ನಾಲ್ಕೈದು ವರ್ಷಗಳಿಂದ ಅಂಗನವಾಡಿ ಕೇಂದ್ರದ ಕಟ್ಟಡದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದು ಒರಲಗಿ ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ತಾಲೂಕಿನ ಒರಲಗಿ ಗ್ರಾಪಂ ವ್ಯಾಪ್ತಿಯ ಒರಲಗಿ ಗ್ರಾಮದಲ್ಲಿ ಸುಸುಜ್ಜಿತ ಅಂಗನವಾಡಿ ಕೇಂದ್ರದ ಕಟ್ಟಡಕ್ಕಾಗಿ 2017-18ನೇ ಸಾಲಿನಲ್ಲಿ ಹಣ ಮಂಜೂರಾಗಿತ್ತು. ಅಂಗನವಾಡಿ ಕೇಂದ್ರ ನಡೆಸಲು ಸುಸುಜ್ಜಿತ ಕಟ್ಟಡ ಇಲ್ಲದೇ ಗ್ರಾಮದಲ್ಲಿ ಬಾಡಿಗೆ ಮನೆಯೊಂದರ ಕೋಣೆಯಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದಾರೆ. ಅಂಗನವಾಡಿಯಲ್ಲಿ ಒಟ್ಟು 21 ಮಕ್ಕಳು, ಕಾರ್ಯಕರ್ತೆ ಮತ್ತು ಸಹಾಯಕಿ ಇದ್ದಾರೆ.
ಇನ್ನೇನು ಕೆಲ ದಿನಗಳಲ್ಲಿಯೇ ಸುಸುಜ್ಜಿತ ನೂತನ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣವಾಗುತ್ತದೆ ಎಂದು ಪಾಲಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಗುತ್ತಿಗೆದಾರ ಮಾತ್ರ ಆಮೆಗತಿಯಲ್ಲಿ ಕಟ್ಟಡ ಕಾಮಗಾರಿ ಮಾಡುತ್ತಿರುವುದು ಅಲ್ಲದೆ ಆ ಜಾಗದಲ್ಲಿ ಗಿಡಗಂಟ್ಟಿಗಳು ಬೆಳೆದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮೂರು ಲಕ್ಷ ಅನುದಾನ ಮತ್ತು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಪಂ 5 ಲಕ್ಷ ರೂ. ಅನುದಾನ ಒಟ್ಟು 8 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ಪ್ರಾರಂಭವಾಗಿ ನಾಲ್ಕೈದು ವರ್ಷ ಕಳೆದರೂ ಕಟ್ಟಡ ಪೂರ್ಣಗೊಳ್ಳದೆ ಇರುವುದ್ದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಾಲ್ಕು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಸದ್ಯ ಕಟ್ಟಡದ ಕಾಮಗಾರಿ ಸ್ಥಿಗಿತಗೊಳಿಸಿದ್ದಾರೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಂದ ಕಟ್ಟಡ ಕಾಮಗಾರಿ ಬೇಗ ಮುಗಿಸಿಕೊಡುವಂತೆ ಗುತ್ತಿಗೆದಾರರಿಗೆ ಪತ್ರ ಕೂಡಾ ನೀಡಲಾಗಿದೆ. ಆದರೆ ಗುತ್ತಿಗೆದಾರ ಹಣ ಬಿಡುಗಡೆಯಾಗಿಲ್ಲ ಎನ್ನುತ್ತಾರೆ. ಗ್ರಾಮ ಪಂಚಾಯಿತಿಯವರಿಗೆ ಕೇಳಿದರೆ ಅನುದಾನ ಬಿಡುಗಡೆಯಾಗಿದೆ ಎಂದು ಹೇಳುತ್ತಾರೆ. ಇವರ ಸಮನ್ವಯ ಕೊರತೆಯಿಂದ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ.
*ರಮೇಶ ಒರಲಗಿ, ಗ್ರಾಮಸ್ಥ
ನರೇಗಾ ಯೋಜನೆಯಲ್ಲಿ ಐದು ಲಕ್ಷ ಹಾಗೂ ನಮ್ಮ ಇಲಾಖೆಯಿಂದ 3 ಲಕ್ಷ ರೂ. ಸೇರಿ ಒಟ್ಟು 8 ಲಕ್ಷ ವೆಚ್ಚದ ಕಟ್ಟಡ ಇದಾಗಿದೆ. ಈಗಾಗಲೇ ನಮ್ಮ ಇಲಾಖೆಯಿಂದ ಮೂರು ಲಕ್ಷ ಹಣ ಬಿಡುಗಡೆಯಾಗಿದೆ. ಸುಸುಜ್ಜಿತ ಕಟ್ಟಡದ ವ್ಯವಸ್ಥೆ ಇಲ್ಲದ ಸಮಸ್ಯೆಯಾಗಿದೆ. ಗ್ರಾಮಸ್ಥರ ಸಹಾಯದಿಂದ ಒಬ್ಬರ ಮನೆಯ ರೂಂನಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಕಾಮಗಾರಿ ಬೇಗ ಮುಗಿದರೆ ಅನುಕೂಲವಾಗುತ್ತದೆ.
*ದೀಪಾ ಬಂಗೇರ, ಪ್ರಭಾರ ಸಿಡಿಪಿಒ
ಕಟ್ಟಡ ಕಾಮಗಾರಿ ತಡವಾಗಿ ಆರಂಭವಾಗಿತ್ತು. ಈಗ ಕೊನೆಯ ಹಂತದಲ್ಲಿದೆ. ಈ ಬಗ್ಗೆ ಪಿಡಿಒ ಅವರಿಗೆ ತಿಳಿಸಲಾಗಿದೆ. 15 ದಿನಗಳ ಒಳಗೆ ಕಾಮಗಾರಿ ಮುಗಿಸುತ್ತೇವೆ ಎಂದು ತಿಳಿಸಿದ್ದಾರೆ.
*ಟಿ.ವೈ. ದಾಸನಕೊಪ್ಪ, ತಾ.ಪಂ. ಉದ್ಯೋಗ
ಖಾತ್ರಿ ಸಹಾಯಕ ನಿರ್ದೇಶಕ
ಮುನೇಶ ತಳವಾರ