ಪಣಜಿ: ಮಹದಾಯಿ ವಿಚಾರವಾಗಿ ಗೋವಾ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯದ ಕುರಿತು ವಿಷಯ ಪ್ರಸ್ತಾಪಿಸುವುದಾಗಿ ಗೋವಾ ಪ್ರತಿ ಪಕ್ಷದ ಶಾಸಕ ವಿಜಯ್ ಸರ್ದೇಸಾಯಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಗೋವಾ ಅಧಿವೇಶನದಲ್ಲಿ ಮಹದಾಯಿ ಕುರಿತು ಆಡಳಿತ ಪಕ್ಷವನ್ನು ಸುತ್ತುವರೆಯಲು ಪ್ರತಿಪಕ್ಷಗಳು ಸಕಲ ಸಿದ್ಧತೆ ನಡೆಸಿವೆ. ಗೋವಾ ಬಿಜೆಪಿ ಸರ್ಕಾರದ ನಿಲುವಿನ ಕುರಿತು ಪ್ರತಿಪಕ್ಷಗಳು ಆರೋಪದ ಸುರಿಮಳೆಗೈದಿವೆ.
ಮಹದಾಯಿ ವಿಷಯದ ಕುರಿತು ಗೋವಾ ಫೊರ್ವರ್ಡ್ ಪಕ್ಷದ ನಾಯಕ ವಿಜಯ್ ಸರ್ದೆಸಾಯಿ ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಮಹದಾಯಿ ವಿಚಾರವಾಗಿ ಗೋವಾ ವಿಧಾನಸಭೆಯಲ್ಲಿ ಸದನ ಸಮಿತಿ ರಚನೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಆದರೆ ಈ ಸಮಿತಿ ಒಂದೇ ಒಂದು ಸಭೆ ನಡೆಸಿದೆ ಎಂದು ಹೇಳಿದರು.
ಕೇಂದ್ರದಿಂದ ನೇಮಕಗೊಂಡ ಮಹದಾಯಿ ಪ್ರವಾಹ ಪ್ರಾಧಿಕಾರದ ಅಧಿಕಾರಿಗಳು ಈಗ ಮಳೆಗಾಲದಲ್ಲಿ ಮಹದಾಯಿ ನದಿ ಪ್ರದೇಶವನ್ನು ಪರಿಶೀಲಿಸಲು ಬರುತ್ತಿದ್ದಾರೆ. ವಾಸ್ತವವಾಗಿ ಇದನ್ನು ಬೇಸಿಗೆ ಸಮಯದಲ್ಲಿ ಮಾಡಬೇಕಿತ್ತು ಎಂಬುದು ನನ್ನ ಅಭಿಪ್ರಾಯವಾಗಿದೆ. ಆಗ ಮಾತ್ರ ಕರ್ನಾಟಕವು ಮಹದಾಯಿ ನೀರನ್ನು ಹರಿಸಿದೆಯೇ ಎಂಬುದು ಬಹಿರಂಗವಾಗುತ್ತಿತ್ತು ಎಂದರು.
ಮಹದಾಯಿ ನಿರ್ವಹಣೆ ಮಾಡಲು ಈ ಸರ್ಕಾರಕ್ಕೆ ಇಚ್ಛಾಶಕ್ತಿಯಿಲ್ಲ. ಇದರಿಂದಾಗಿ ನಾವು ಈ ಹೋರಾಟದಲ್ಲಿ ಸೋಲುತ್ತೇವೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಹದಾಯಿ ನದಿ ನೀರನ್ನು ಮಾರಾಟ ಮಾಡಲು ಹೊರಟಿದೆ. ಈ ಸರ್ಕಾರದ ಸುಳ್ಳುಗಳನ್ನು ಮುಂದುವರೆಸಲು ಬಿಡುವುದಿಲ್ಲ. ಈ ಕುರಿತು ಗೋವಾ ವಿಧಾನಸಭೆಯಲ್ಲಿ ಧ್ವನಿಯೆತ್ತುತ್ತೇವೆ ಎಂದು ಹೇಳಿದರು.
ಮಹದಾಯಿ ವಿಚಾರವಾಗಿ ಬರುವ ವಿಧಾನಸಭಾ ಅಧಿವೇಶನದಲ್ಲಿ ಗೋವಾ ಸರ್ಕಾರವನ್ನು ಪ್ರಶ್ನಿಸಲಿದ್ದೇವೆ ಎಂದು ಪ್ರತಿಪಕ್ಷದ ನಾಯಕ ಯೂರಿ ಅಲೆಮಾಂವ್ ಹೇಳಿದ್ದಾರೆ. ಕಳಸಾ-ಬಂಡೂರಿ ಯೋಜನೆಯ ಡಿಪಿಆರ್ ಹಿಂಪಡೆಯುವಂತೆ ಆಘ್ರಹಿಸಿ ಗೋವಾ ಮುಖ್ಯಮಂತ್ರಿ ಸಾವಂತ್ ಸರ್ಕಾರ ಇನ್ನೂ ಕೂಡ ಪ್ರಧಾನಿ ನರೇಂದ್ರ ಮೋದಿಯವರ ಬಳಿಗೆ ಸರ್ವಪಕ್ಷಗಳ ನಿಯೋಗ ಕಳುಹಿಸದಿರುವುದು ದುರಂತ. ಮಹದಾಯಿ ವಿಷಯದಲ್ಲಿ ಗೋವಾದ ಹಿತಾಸಕ್ತಿ ಕಾಪಾಡಲು ಸಕ್ರೀಯ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಕರ್ನಾಟಕದ ಬಿಜೆಪಿಗೆ ರಾಜಕೀಯ ಲಾಭ ಮಾಡಿಕೊಡಲು ಗೋವಾದ ಬಿಜೆಪಿ ಸರ್ಕಾರ ಈಗಾಗಲೇ ಗೋವಾದ ಜೀವದಾಯಿನಿ ಮಹದಾಯಿ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಮಹದಾಯಿ ವಿಷಯದಲ್ಲಿ ಬಿಜೆಪಿ-ಕಾಂಗ್ರೆಸ್ ಅಸಡ್ಡೆ
ಶಾಸಕ ವೀರೇಶ್ ಬೋರಕರ್ ಪ್ರತಿಕ್ರಿಯೆ ನೀಡಿ, ಮಹದಾಯಿ ನಮ್ಮ ಕೈ ತಪ್ಪುತ್ತಿದೆ. ಮಹದಾಯಿ ಉಳಿಸಲು ರಾಜ್ಯ ಸರ್ಕಾರದಿಂದ ಯಾವುದೇ ಪ್ರಯತ್ನ ನಡೆಯುತ್ತಿಲ್ಲ. ಜಲಸಂಪನ್ಮೂಲ ಸಚಿವ ಸುಭಾಷ ಶಿರೋಡ್ಕರ್ ಅಧ್ಯಕ್ಷತೆಯಲ್ಲಿ ವಿಧಾನಸಭೆಯಲ್ಲಿ ಸದನ ಸಮಿತಿ ನೇಮಿಸಲಾಯಿತು. ಆದರೆ ಜಲಸಂಪನ್ಮೂಲ ಸಚಿವರಿಂದಲೇ ಈ ಕರಿತು ಸ್ಪಷ್ಟತೆಯಿಲ್ಲ. ಕಳಸ ಬಂಡೂರಿ ಯೋಜನೆಗೆ ಕರ್ನಾಟಕ ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಮಹದಾಯಿ ಉಳಿಸುವ ಬಗ್ಗೆ ಗಂಭೀರವಾಗಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೇಸ್ ಸರ್ಕಾರದ ನಿಯೋಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಕಳಸ ಬಂಡೂರಿ ಯೋಜನೆಗೆ ಅನುಮೋದನೆ ಕೋರಿದೆ ಎಂದರು.