ಹೊಸದಿಲ್ಲಿ: ಭಾರತೀಯ ಕ್ರೀಡಾ ಪ್ರಾಧಿಕಾರದ ಮಿಷನ್ ಒಲಿಂಪಿಕ್ಸ್ ಸೆಲ್, ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಿಒಪಿ) ಯೋಜನೆಗೆ ಆಯ್ಕೆಯಾಗಿರುವ ಕ್ರೀಡಾಪಟುಗಳ ಕಿರುಪಟ್ಟಿಯನ್ನು ಬುಧವಾರ ಪ್ರಕಟಿಸಿದೆ.
ಕರ್ನಾಟಕದ ಖ್ಯಾತ ಈಜು ತಾರೆ ಶ್ರೀಹರಿ ನಟರಾಜ್ ಸೇರಿದಂತೆ ಅನೇಕ ಕ್ರೀಡಾಪಟುಗಳನ್ನು ಟಿಒಪಿ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಕಳೆದ 3 ವರ್ಷದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡಿರುವ ಪ್ರದರ್ಶನದ ಆಧಾರದಲ್ಲಿ ಕಿರುಪಟ್ಟಿ ರೂಪಿಸಲಾಗಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ತರುವ ಭರವಸೆಯ ಹೊಂದಿರುವ ಕ್ರೀಡಾಪಟುಗಳ ಸಂಪೂರ್ಣ ವೆಚ್ಚವನ್ನು ಟಿಒಪಿ ಅಡಿಯಲ್ಲಿ ಸರಕಾರ ಭರಿಸಲಿದೆ.
ಒಟ್ಟಾರೆ 5 ವರ್ಷ ಟಿಒಪಿ ಸೌಲಭ್ಯವನ್ನು ಆಯ್ಕೆಯಾದವರು ಪಡೆದುಕೊಳ್ಳಬಹುದು. ಒಂದು ವೇಳೆ ಈ ಅವಧಿಯಲ್ಲಿ ಕಳಪೆ ಪ್ರದರ್ಶನ ನೀಡಿದರೆ ಟಿಒಪಿ ಯೋಜನೆಯಿಂದ ಹೊರ ಬೀಳುವ ಸಾಧ್ಯತೆ ಇದೆ.
ಈಜುಪಟುಗಳಾದ ಶ್ರೀಹರಿ ನಟರಾಜ್, ಅದ್ವೆ„ತ್, ಕುಶಾಗ್ರ ರಾವತ್, ಆರ್ಯನ್ ನೆಹ್ರಾ, ಕೆನಿಶಾ ಗುಪ್ತ ಹಾಗೂ ಆರ್ಯನ್ ಮಖೀಜಾ 2024ರ ಒಲಿಂಪಿಕ್ಸ್ ತನಕ ಉಚಿತ ತರಬೇತಿಯನ್ನು ಪಡೆಯಲಿದ್ದಾರೆ. ಇನ್ನು ಖ್ಯಾತ ಈಜುಪಟುಗಳಾದ ಸಾಜನ್ ಪ್ರಖಾಶ್ ಹಾಗೂ ವೀರ್‌ಧವಳ್ ಖಾಡೆ ಅವರನ್ನು ಟಿಒಪಿ ಪಟ್ಟಿಯಲ್ಲಿ ಇರಿಸಿಕೊಳ್ಳಲಾಗಿದೆ. 2019ರಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನೀಡುವ ಪ್ರದರ್ಶನದ ಆಧಾರದಲ್ಲಿ ಅವರ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಜತೆಗೆ ಯುವ ಈಜುಪಟುಗಳಾದ ಮಾನಾ ಪಟೇಲ್, ನೀಲ್ ರಾಯ್, ಎಸ್.ಪಿ. ಲಿಖೀತ್, ಖುಷಿ ದಿನೇಶ್ ಹಾಗೂ ಎಂ. ಲೋಹಿತ್ ಕೂಡ ವೀಕ್ಷಣಾ ಪಟ್ಟಿಯಲ್ಲಿದ್ದು ಶ್ರೇಷ್ಠ ನಿರ್ವಹಣೆ ನೀಡಿದರೆ ಇವರಲ್ಲಿ ಯಾರಿಗಾದರೂ ಅವಕಾಶ ಸಿಗಬಹುದು.
ಮನೋಜ್ ಸರ್ಕಾರ್, ಪ್ರಮೋದ್ ಭಾಗÌತ್, ಸುಕಾಂತ್ ಕದಮ್, ತರುಣ್ ಹಾಗೂ ಸುಹಾಸ್ ಯತಿರಾಜ್ ಸೇರಿದಂತೆ ಒಟ್ಟಾರೆ 5 ಮಂದಿ ಪ್ಯಾರಾಲಿಂಪಿಯನ್ ಬ್ಯಾಡ್ಮಿಂಟನ್ ತಾರೆಯರಿಗೆ ಟಿಒಪಿಯಡಿ ಸ್ಥಾನ ಕಲ್ಪಿಸಲಾಗಿದೆ.