Advertisement

ಬಾರತ-ಚೀನಾ ಗಡಿ ಗದ್ದಲ: ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರಕಾರಕ್ಕೆ ವಿರೋಧ ಪಕ್ಷಗಳ ಬೆಂಬಲ

09:22 PM Jun 19, 2020 | Hari Prasad |

ನವದಹಲಿ: ಭಾರತ ಹಾಗೂ ಚೀನಾ ನಡುವೆ ಲಢಾಕ್ ನ ಗಲ್ವಾನ್ ಪ್ರದೇಶದಲ್ಲಿ ಉಂಟಾಗಿರುವ ಗಡಿ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಸರ್ವಪಕ್ಷಗಳ ಸಭೆ ನಡೆಯಿತು.

Advertisement

ಸಭೆಯ ಪ್ರಾರಂಭದಲ್ಲಿ ಗಲ್ವಾನ್ ನಲ್ಲಿ ಚೀನೀ ಯೋಧರ ಅಮಾನುಷ ಹಲ್ಲೆಗೆ ಬಲಿಯಾಗಿ ಹುತಾತ್ಮರಾದ ಭಾರತೀಯ ಯೋಧರಿಗೆ ನಮನ ಸಲ್ಲಿಸಲಾಯಿತು.

ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಈ ಸಭೆಯ ಪ್ರಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪರಿಸ್ಥಿತಿಯ ವಿವರಗಳನ್ನು ವಿರೋಧ ಪಕ್ಷಗಳ ನಾಯಕರಿಗೆ ನೀಡಿದರು. ಜೂನ್ 15ರ ಘಟನೆಗೂ ಮೊದಲು ಹಾಗೂ ಬಳಿಕ ಪೂರ್ವ ಲಢಾಕ್ ಭಾಗದಲ್ಲಿ ಸೇನೆ ನಿಯೋಜನೆಯ ವಿವರಗಳನ್ನು ರಾಜನಾಥ್ ಸಿಂಗ್ ಅವರು ಇದೇ ಸಂದರ್ಭದಲ್ಲಿ ಸಭೆಯಲ್ಲಿ ನೀಡಿದರು.

ಲಢಾಕ್ ಭಾಗದಲ್ಲಿ ಭಾರತ ಹಾಗೂ ಚೀನಾ ಸಂಘರ್ಷದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಇನ್ನಷ್ಟು ಪಾರದರ್ಶಕತೆಯಿಂದ ದೇಶದ ಜನತೆಗೆ ಮಾಹಿತಿಯನ್ನು ನೀಡಬೇಕು ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ಸರಕಾರವನ್ನು ಆಗ್ರಹಿಸಿದರು. ಮತ್ತು ನೆರೆ ರಾಷ್ಟ್ರಗಳೊಂದಿಗೆ ಭಾರತದ ಬಾಂಧವ್ಯ ಹಾಗೂ ಒಪ್ಪಂದದ ವಿಚಾರಗಳನ್ನು ಕೇಂದ್ರ ಸರಕಾರವು ಇತರೇ ಪಕ್ಷಗಳ ನಾಯಕರೊಂದಿಗೆ ಆಗಾಗ ಹಂಚಿಕೊಳ್ಳುವಂತೆಯೂ ಮಮತಾ ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.


ಗಲ್ವಾನ್ ಕಣಿವೆ ದುರ್ಘಟನೆಗೆ ನಮ್ಮ ಗುಪ್ತಚರ ಸಂಸ್ಥೆಯ ವೈಫಲ್ಯ ಕಾರಣವೇ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸರಕಾರವನ್ನು ಪ್ರಶ್ನಿಸಿದರು. ವಾಸ್ತವ ನಿಯಂತ್ರಣ ರೇಖೆಯ ಗೊಂದಲವನ್ನು ಸೂಕ್ತವಾಗಿ ಬಗೆಹರಿಸುವಲ್ಲಿ ದ್ವಿಪಕ್ಷೀಯ ಮಾತುಕತೆಗಳನ್ನು ಫಲಪ್ರದವಾಗಿಸುವ ನಿಟ್ಟಿನಲ್ಲಿ ನಾವು ವಿಫಲರಾಗಿದ್ದೇವೆ, ಅಮೂಲ್ಯ ಸಮಯವನ್ನು ಹಾಳುಮಾಡಿಕೊಂಡಿದ್ದೇ 20 ಅಮೂಲ್ಯ ಜೀವಗಳನ್ನು ನಾವು ಕಳೆದುಕೊಳ್ಳಲು ಕಾರಣವಾಯಿತು’ ಎಂದು ಸೋನಿಯಾ ಗಾಂಧಿ ಅವರು ಸಭೆಯಲ್ಲಿ ಹೇಳಿದರು.

Advertisement

ಗಲ್ವಾನ್ ಘಟನೆಯ ಸಂದರ್ಭದಲ್ಲಿ ನಮ್ಮ ಯೋಧರು ತಮ್ಮ ಶಸ್ತ್ರಾಸ್ತ್ರಗಳನ್ನು ಒಯ್ದಿದ್ದರೇ, ಇಲ್ಲವೇ? ಮತ್ತು ಇಂತಹ ಸೂಕ್ಷ್ಮ ವಿಚಾರಗಳ ಕುರಿತಾಗಿ ನಾವು ಗಮನ ಹರಿಸುವ ಅಗತ್ಯತೆಯನ್ನು ಎನ್.ಸಿ.ಪಿ. ನಾಯಕ ಶರದ್ ಪವಾರ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.

ಭಾರತವು ಪಂಚಶೀಲ ತತ್ವಕ್ಕೆ ಬದ್ಧವಾಗಿದ್ದುಕೊಂಡೇ ಚೀನಾದೊಂದಿಗೆ ವ್ಯವಹರಿಸಬೇಕು ಎಂದು ಸಿಪಿಐ (ಎಂ) ನಾಯಕ ಸೀತಾರಾಮ್ ಯಚೂರಿ ಅವರು ಸರ್ವಪಕ್ಷಗಳ ಸಭೆಯಲ್ಲಿ ಅಭಿಪ್ರಾಯಪಟ್ಟರು. ಇನ್ನೊಂದೆಡೆ ಸಿಪಿಐ ನಾಯಕ ಡಿ ರಾಜಾ ಅವರು ಮಾತನಾಡಿ, ಭಾರತವನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿರುವ ಅಮೆರಿಕಾದ ಜಾಲಕ್ಕೆ ಸಿಲುಕದಂತೆ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದರು.


ದೇಶಭಕ್ತಿಯ ವಿಚಾರಕ್ಕೆ ಬಂದಾಗ ನಾವೆಲ್ಲಾ ಒಗ್ಗಟ್ಟನ್ನು ಪ್ರದರ್ಶಿದ ಉದಾಹರಣೆಗಳು ಸಾಕಷ್ಟಿವೆ, ಅದೇ ರೀತಿಯಲ್ಲಿ ಈ ವಿಚಾರದಲ್ಲೂ ನಾವು ಕೇಂದ್ರ ಸರಕಾರದ ನಿರ್ಧಾರಗಳನ್ನು ಬೆಂಬಲಿಸುತ್ತೇವೆ ಎಂದು ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರು ಹೇಳಿದರು. ಮಾತ್ರವಲ್ಲದೇ ಚೀನಾ ವಿಚಾರದಲ್ಲಿ ಪ್ರಧಾನ ಮಂತ್ರಿಯವರ ಇತ್ತೀಚೆಗಿನ ಹೇಳಿಕೆಯನ್ನು ಸ್ಟಾಲಿನ್ ಅವರು ಸ್ವಾಗತಿಸಿದರು.

ಚೀನಾದ ಮುಂದೆ ನಾವು ತಲೆ ಬಾಗುವುದಿಲ್ಲ ಎಂಬ ದಿಟ್ಟ ನಿಲುವನ್ನು ಮಮತಾ ಬ್ಯಾನರ್ಜಿ ಅವರು ಸರ್ವ ಪಕ್ಷಗಳ ಸಭೆಯಲ್ಲಿ ಪ್ರಸ್ತಾಪಿಸಿದರು. ಚೀನಾ ಒಂದು ಸರ್ವಾಧಿಕಾರ ವ್ಯವಸ್ಥೆಯಿರುವ ರಾಷ್ಟ್ರವಾಗಿದೆ. ಅವರಿಗೆ ತೋಚಿದಂತೆ ಅವರು ಮಾಡುತ್ತಾರೆ. ಆದರೆ ನಾವೆಲ್ಲರೂ ಈ ಸಂದರ್ಭದಲ್ಲಿ ಜೊತೆಯಾಗಿ ಕೆಲಸ ಮಾಡುವುದು ಅಗತ್ಯವಾಗಿದೆ ಎಂದು ಮಮತಾ ಬ್ಯಾನರ್ಜಿ ಅವರು ಈ ಸಭೆಯಲ್ಲಿ ಅಭಿಪ್ರಾಯಪಟ್ಟರು.

ಪ್ಲಾಸ್ಟಿಕ್ ಯುಕ್ತ ಹಾಗೂ ಕಡಿಮೆ ಸಮಯ ಬಾಳಿಕೆ ಬರುವ ಉತ್ಪನ್ನಗಳನ್ನು ಚೀನಾ ನಮ್ಮಲ್ಲಿ ಗುಡ್ಡೆ ಹಾಕುತ್ತಿದೆ, ಇದೂ ಸಮಸ್ಯೆಯ ಒಂದು ಮೂಲವಾಗಿದೆ. ಮತ್ತು ಈ ಸಂದರ್ಭದಲ್ಲಿ ಕೇಂದ್ರ ತೆಗೆದುಕೊಳ್ಳುವ ನಿರ್ಧಾರಗಳನ್ನು ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಜೆಡಿ (ಯು) ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಭೆಯಲ್ಲಿ ಅಭಿಪ್ರಾಯಪಟ್ಟರು.

‘ನಾವೆಲ್ಲರೂ ಒಂದು, ಈ ಭಾವನೆ ನಮ್ಮಲ್ಲಿದೆ. ನಾವು ನಿಮ್ಮ ಜೊತೆಗಿದ್ದೇವೆ. ನಮ್ಮ ಸೇನೆ ಹಾಗೂ ಅವರ ಕುಟುಂಬದ ಜೊತೆ ನಾವು ನಿಲ್ಲೋಣ’ ಎಂದು ಶಿವಸೇನಾ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನುಡಿದರು. ‘ಭಾರತ ಶಾಂತಿಯನ್ನು ಬಯಸುತ್ತದೆ ಹಾಗೆಂದು ನಾವೇನೂ ದುರ್ಬಲರಲ್ಲ. ವಂಚನೆ ಎಂಬುದು ಚೀನಾದ ರಕ್ತದಲ್ಲೇ ಇದೆ. ಈ ಸಂದರ್ಭದಲ್ಲಿ ನಮ್ಮ ಜೊತೆ ಮಾತುಕತೆ ನಡೆಸುತ್ತಿರುವುದಕ್ಕೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಭಾರತ ಸಶಕ್ತವಾಗಿದೆ, ಅಸಹಾಕವಾಗಿಲ್ಲ’ ಎಂದು ಠಾಕ್ರೆ ಇದೇ ಸಂದರ್ಭದಲ್ಲಿ ಹೇಳಿದರು.

‘ದೇಶವೇ ಒಂದಾಗಿದೆ. ಚೀನಾ ಮತ್ತು ಪಾಕಿಸ್ಥಾನದ ಉದ್ದೇಶ ಸರಿಯಾಗಿಲ್ಲ. ಭಾರತ ಚೀನಾ ಪಾಲಿನ ಕಸದ ತೊಟ್ಟಿಯಲ್ಲ’ ಎಂದು ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ ಸಭೆಯಲ್ಲಿ ಅಭಿಪ್ರಾಯಪಟ್ಟರು. ಮತ್ತು ಚೀನಾ ಉತ್ಪನ್ನಗಳ ಮೇಲೆ 300 ಪ್ರತಿಶತ ಶುಲ್ಕ ವಿಧಿಸುವಂತೆ ಯಾದವ್ ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next